ಗೆಳತಿ ಓ ಗೆಳತಿ
ಅಪ್ಪಿಕೋ ಎನ್ನ ಅಪ್ಪಿಕೋ
ಅಪ್ಪಿಕೋ ಎನ್ನ ಅಪ್ಪಿಕೋ
ಬಾಳೆಲ್ಲ ಎನ್ನ ತಬ್ಬಿಕೋ
ಗೆಳತಿ ಓ.. ಗೆಳತಿ
ಈ ಗೀತೆ ಕೇಳ್ತಾ ಇದ್ದರೆ ಅಪ್ಪುಗೆಯ ಪರಿಣಾಮ ಗೊತ್ತಾಗುತ್ತದೆ
ಅಪ್ಪುಗೆಯು ಕೇವಲ ದೈಹಿಕ ಕ್ರಿಯೆಯಲ್ಲ; ಅದು ಆಳವಾದ ಭಾವನೆಗಳನ್ನು ವ್ಯಕ್ತಪಡಿಸಲು ಇರುವ ಒಂದು ಮಾರ್ಗವಾಗಿದೆ. ಸಾಮಾನ್ಯವಾಗಿ ಜನರು ವಿವಿಧ ಕಾರಣಗಳಿಗಾಗಿ ಪರಸ್ಪರ ತಬ್ಬಿಕೊಳ್ಳುತ್ತಾರೆ. ಯಾರನ್ನಾದರೂ ಸ್ವಾಗತಿಸಲು, ಬೇಕಾದ ವ್ಯಕ್ತಿಯ ಯಶಸ್ಸನ್ನು ಸಂಭ್ರಮಿಸಲು, ಯಾರನ್ನಾದರೂ ಸಮಾಧಾನಪಡಿಸಲು ಅಥವಾ ಅವರ ಪ್ರೀತಿಯನ್ನು ತೋರಿಸಲು. ಹೀಗೆ ಅಪ್ಪುಗೆ ಒಂದು ರೀತಿಯ ಪ್ರೀತಿ ವ್ಯಕ್ತಪಡಿಸುವ ಪರಿಯಾಗಿದೆ.
ಹಗ್, ಅಪ್ಪುಗೆ, ಆಲಿಂಗನ… ಪದಗಳಷ್ಟೇ ಅಲ್ಲ, ಇದರ ಪದರುಗಳೂ ಅಷ್ಟೇ ನವಿರು. ನೋವು, ಸಂಕಟ, ದುಃಖ, ಅವಮಾನ, ಎದೆಗುದಿ, ಕಳವಳ, ತಳಮಳಗಳನ್ನೆಲ್ಲ ಒಂದು ತೋಳಿನಿಂದ ಬದಿಗೆ ಸರಿಸುವ; ಇನ್ನೊಂದು ತೋಳಿನಿಂದ ಒಲವು, ಪ್ರೀತಿ, ಅನುರಾಗ, ಅಕ್ಕರೆ, ವಾತ್ಸಲ್ಯ, ಸಮಾಧಾನ, ಕಕ್ಕುಲಾತಿ, ಅಂತಃಕರಣದ ಮೂಲಕ ಚೈತನ್ಯವನ್ನು ನರನಾಡಿಗಳಿಗೆ ರವಾನಿಸುವ ಅಪೂರ್ವ ಸಂಗಮವೇ ಅಪ್ಪುಗೆ.
ನೊಂದ ಗೆಳತಿಗೆ, ಸಂಕಟದಲ್ಲಿರುವ ಪ್ರೇಯಸಿಗೆ, ಸೋತ ಗೆಳೆಯನಿಗೆ,ಒಂದು ಅಪ್ಪುಗೆ ಸಾವಿರ ಮಾತುಗಳಿಗೆ ಸಮ. ಒಂದೇ ಗಳಿಗೆಯಲ್ಲಿ ನೂರು ಭಾವಗಳನ್ನು ಮೀಟಬಲ್ಲ ಆ ಒಂದು ಆಲಿಂಗನ ವಿಸ್ಮಯದ ರೀತಿಯಲ್ಲಿ ದೇಹ–ಮನಸುಗಳಿಗೆ ಮುಲಾಮು ಸವರಬಲ್ಲದು.
ಎಲ್ಲಾ ಸಂದರ್ಭಕ್ಕೂ, ಎಲ್ಲಾ ಕಾಲಕ್ಕೂ ಸಲ್ಲುವ ಗುಣ ಅಪ್ಪುಗೆಗಿದೆ…ಅಲ್ಲವೇ.?
ನಾವು ಎಲ್ಲ ಏನೆಲ್ಲ ಮಾಡುವುದು ಕೇವಲ ಖುಷಿಗಾಗಿ. ಖುಷಿಯನ್ನು ಎಲ್ಲಂದರಲ್ಲಿ ಹುಡುಕುತ್ತೇವೆ. ಗೆಳೆಯರು, ಬಂಧುಗಳು, ಕುಟುಂಬದ ಸದಸ್ಯರು…
ಊ ಹೂಂ ಯಾರು ಒಬ್ಬರು ನಮಗೆ ಆತ್ಮೀಯವಾಗಿ ಸ್ಪಂದಿಸುವ ಮನೋಭಾವ ಹೊಂದಿದವರಾಗಿದ್ದಾಗ ಅವರ ಸ್ಪರ್ಶ ಸುಖ ನಮಗೆ ಏನೋ ಒಂದು ರೀತಿಯ ಅನುಭವ ನೀಡಬಲ್ಲದು.
ಅನುಸಂಧಾನ, ಅನುರಾಗ, ಅನ್ಯೋನ್ಯತೆಗೆ ವಯಸ್ಸು ಅಡ್ಡಿಯಾಗಬಾರದು. ದೇಹಕ್ಕೆ ವಯಸ್ಸಾಗುತ್ತೆ, ಮನಸಿಗೆ ವಯಸ್ಸಾಗುವುದಿಲ್ಲ. ಒಬ್ಬರ ಜೊತೆಗೆ ಬೆಸೆದ ಪ್ರೀತಿ ಅನುರಾಗ ಅವರನ್ನು ಬಿಟ್ಟಿರಲಾಗದಷ್ಟು ಅನ್ಯೋನ್ಯತೆಯು ಆಗಿ ಬಿಡುತ್ತದೆ. ನಮಗೆ ನೋವಾದಾಗ ಅವರ ಸಾಮಿಪ್ಯ.ಒಡನಾಟ ನಮಗೆ ಬೇಕೆನಿಸುತ್ತದೆ.
ಯಾವಾಗ ನಮಗೆ ಆತ್ಮೀಯರಾದವರು ನಮ್ಮನ್ನು ಕಂಡು ನಮ್ಮ ನೋವಿಗೆ ಸ್ಪಂದಿಸುವ ಮನೋಭಾವ ಹೊಂದುವರೋ,ಅವರ ಅಪ್ಪುಗೆ ನಮ್ಮನ್ನು ಬಿಟ್ಟಿರಲಾಗದಷ್ಟು ಬೆಸೆದಿರುವುದು.
ಈ ಎಲ್ಲಾ ಅಂಶಗಳನ್ನು ನೋಡಿದಾಗ ಅಪ್ಪುಗೆಯ ಪರಿಣಾಮ ಏನು ಅಂತ ಗೊತ್ತಾಗುತ್ತದೆ.
ಗೆಳತಿಗೆ ತನ್ನ ನಲ್ಲ ಹೇಳುವ ಈ ಮಾತುಗಳನ್ನು ಕೇಳಿದಾಗ ಅವರ ಮಧ್ಯೆ ಇರುವ ಪ್ರೀತಿ ಎಂತಹದು ಎಂದು ಗೋಚರಿಸುತ್ತದೆ
ಜಗದ ಗೊಂದಲ ಬೇಡ ನಿನಗೆ
ಎದೆಯ ಹಾ..ಡು ನೀನು ನನಗೆ
ಜಗದ ಗೊಂದಲ ಬೇಡ ನಿನಗೆ
ಎದೆಯ ಹಾಡು ನೀನು ನನಗೆ
ನಿನ್ನ ಮಾತೆ ಜೇನು ನನಗೆ
ನಿನ್ನ ಜೊತೆಯೇ.. ಸಾಕು ನನಗೆ
ನಿನ್ನ ಜೊತೆಯೇ ಸಾಕು ನನಗೆ
ಮೇಲು ಕೀಳಿನ ಬೇಲಿ ಜಿಗಿದು
ಪ್ರೇಮ ಲೋಕದಿ ನಿನ್ನ ಬಿಗಿದು
ಮೇಲು ಕೀಳಿನ ಬೇ..ಲಿ ಜಿಗಿದು
ಪ್ರೇಮ ಲೋಕದಿ ನಿನ್ನ ಬಿಗಿದು
ನೂರು ಮುತ್ತನು ಒತ್ತಿ ನಿನಗೆ
ನಾನು ಆಗುವೆ ಕಣ್ಣು ನಿನಗೆ
ನಾನು ಆಗುವೆ ಕಣ್ಣು ನಿನಗೆ
ಹೀಗೆ ಜೀವನದಲ್ಲಿ ಎಲ್ಲವೂ ತೊರೆದು ನಾವುಗಳು ಒಂದಾಗಿ ಬಾಳೋಣ ಎನ್ನುವಲ್ಲಿ ಅಪ್ಪುಗೆಯ ಮಹತ್ವದ ಅರಿವಾಗುತ್ತದೆ
ನಂದಿನಿ ಸನಬಾಳ್
ಶಿಕ್ಷಕಿ
ಕಲಬುರಗಿ