ಮೂಡಲಗಿ: ತಾಲೂಕಿನ ಸುಕ್ಷೇತ್ರ ಹುಣಶ್ಯಾಳ ಪಿ.ಜಿ ಗ್ರಾಮದ ಶ್ರೀ ಸಿದ್ಧಲಿಂಗ ಕೈವಲ್ಯಾಶ್ರಮದ ಪೀಠಾಧಿಪತಿಗಳಾದ ಶ್ರೀ ನಿಜಗುಣದೇವರ ಗುರುಗಳಾದ ಸಿದ್ಧಿಪುರುಷ ಮಧುರಖಂಡಿಯ ಕಮರಿಮಠಾಧೀಶ ಶ್ರೀ ಸಿದ್ಧಲಿಂಗ ಯತಿರಾಜರ ಮತ್ತು ಮಾತೋಶ್ರೀ ಚಂಪಮ್ಮತಾಯಿಯವರ ಪುಣ್ಯಾರಾಧನೆ ಕಾರ್ಯಕ್ರಮವು ನ. 29 ರಂದು ಮುಂಜಾನೆ 9 ಗಂಟೆಗೆ ಹುಣಶ್ಯಾಳ ಪಿ.ಜಿ ಮಠದಲ್ಲಿ ಜರುಗಲಿದೆ.
ಲಚ್ಯಾಣದ ಶ್ರೀ ಸಿದ್ಧಲಿಂಗ ಮಹಾರಾಜರ ಕೃಪೆಯನ್ನು ಹೊಂದಿ ದೇವಿಯ ಅನುಗ್ರಹದಿಂದ ವಾಕ್ ಸಿದ್ಧಿ ಹಾಗೂ ಪವಾಡ ಪುರುಷರಾಗಿದ್ದ ಸಿದ್ಧಲಿಂಗ ಮಹಾರಾಜರು ಅನ್ನದಾಸೋಹ, ಜ್ಞಾನದಾಸೋಹ ನಡೆಸುತ್ತ ಮುಗಳಖೋಡದ ಸದ್ಗುರು ಶ್ರೀ ಯಲ್ಲಾಲಿಂಗ ಮಹಾರಾಜರ ಜೊತೆ ಇಡೀ ಭಾರತ ದೇಶವನ್ನು ಕಾಲ್ನಡಿಗೆಯಲ್ಲಿ ಸಂಚರಿಸಿ ತೀರ್ಥಯಾತ್ರೆ ಮಾಡಿ ಭಕ್ತರಪಾಲಿಗೆ ಕಾಮಧೇನು ಕಲ್ಪವೃಕ್ಷ ಆಗಿದ್ದರು.
ನ.29 ರಂದು ಜರುಗುವ ಕಾರ್ಯಕ್ರಮದ ಸಾನ್ನಿಧ್ಯವನ್ನು ಶ್ರೀ ನಿಜಗುಣ ದೇವರು ವಹಿಸಲಿದ್ದು, ಅಧ್ಯಕ್ಷತೆಯನ್ನು ಶ್ರೀ ಗಾಳೇಶ್ವರಮಠ ತೊಂಡಿಕಟ್ಟಿಯ ಶ್ರೀ ಅಭಿನವ ವೆಂಕಟೇಶ ಮಹಾರಾಜರು ವಹಿಸುವರು. ಯರಝರ್ವಿಯ ಪೂಜ್ಯ ಶ್ರೀ ಚಿದಾನಂದ ಮಹಾಸ್ವಾಮಿಜಿ, ಶಿರೋಳದ ಯಮುನಾನಂದ ಸ್ವಾಮಿಗಳು ಆಗಮಿಸುವರು. ಬೆಳಿಗ್ಗೆ ಗದ್ದುಗೆಗೆ ಮಹಾರುದ್ರಾಭಿಷೇಕ ಸುಮಂಗಲಿಯರ ಕಳಸ ಆರತಿ, ವಾದ್ಯ ವೈಭವದೊಂದಿಗೆ ಪಲ್ಲಕ್ಕಿಯಲ್ಲಿ ಶ್ರೀಗಳ ಭಾವಚಿತ್ರದ ಭವ್ಯ ಮೆರವಣಿಗೆ, ಶಿವಾನುಭವ, ಬಸಪ್ಪ ಸೋಮನಟ್ಟಿ ಇವರಿಂದ ಅನ್ನದಾಸೋಹ ಜರುಗಲಿದೆ. ಶ್ರೀ ಸಿದ್ದಲಿಂಗೇಶ್ವರ ಭಜನಾ ಮಂಡಳಿ ಇವರಿಂದ ಸಂಗೀತ ಸೇವೆ, ಮಲ್ಲಪ್ಪ ಲಕ್ಷ್ಮೇಶ್ವರ ಇವರಿಂದ ಚಿಂತನ ಸೇವೆ ಜರುಗಲಿದೆ.