ಎಲ್ಲೆಂದರಲ್ಲಿ ಕಸ, ಗಬ್ಬು ನಾತ ಹೊಡೆಯುತ್ತಿರುವ ಶೌಚಾಲಯಗಳು
ಮೂಡಲಗಿ – ತಾಲೂಕಿನ ಯಾದವಾಡ ಗ್ರಾಮದ ಬಸ್ ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ಕಸ ಕಡ್ಡಿಯಿಂದ ತುಂಬಿಕೊಂಡು ಅನಾರೋಗ್ಯಕರ ವಾತಾವರಣ ಉಂಟಾಗಿದ್ದು ಇಲ್ಲಿನ ಸಾರಿಗೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ.
ಯಾದವಾಡವು ಕೈಗಾರಿಕೆಗಳಿಂದ ಸುತ್ತುವರೆದಿದ್ದು ಇಲ್ಲಿಗೆ ಬರುವ ಹಾಗೂ ಹೋಗುವ ಪ್ರಯಾಣಿಕರು ಬಸ್ ನಿಲ್ದಾಣದ ಅವ್ಯವಸ್ಥೆಗೆ ಬೇಸತ್ತು ಹಿಡಿಶಾಪ ಹಾಕುತ್ತಿದ್ದಾರೆ. ಬಸ್ ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ಕಸ ತುಂಬಿಕೊಂಡಿದ್ದು ಪ್ರಯಾಣಿಕರಿಗೆ, ಮಕ್ಕಳಿಗೆ ಅನಾರೋಗ್ಯ ವನ್ನು ಬೇಕಾಬಿಟ್ಟಿಯಾಗಿ ದಯಪಾಲಿಸುತ್ತಿದೆ.
ಇಲ್ಲಿನ ಇನ್ನೊಂದು ಸಮಸ್ಯೆಯೆಂದರೆ ಸಮಯಕ್ಕೆ ಸರಿಯಾಗಿ ಬಸ್ ಬರುವುದಿಲ್ಲ ಎಂಬುದು. ಸಮೀಪದ ಸಂಗನಕೇರಿಯಿಂದ ಸಾಕಷ್ಟು ವಿದ್ಯಾರ್ಥಿಗಳು ಬಸ್ ಅವಲಂಬಿಸಿದ್ದಾರೆ ಆದರೆ ಬಸ್ ಗಳು ಸಮಯಕ್ಕೆ ಸರಿಯಾಗಿ ಬರುವುದೇ ಇಲ್ಲ. ಹೀಗಾಗಿ ವಿದ್ಯಾರ್ಥಿಗಳು ಟಂಟಂ ಸೇರಿದಂತೆ ಖಾಸಗಿ ವಾಹನಗಳ ಮೂಲಕ ಬರಬೇಕಾಗುತ್ತದೆ. ಕೆಲವೊಮ್ಮೆ ಟ್ರಕ್ ಏರಬೇಕಾದ ಅಪಾಯಕಾರಿ ಕಾರ್ಯಕ್ಕೂ ಇಳಿಯಬೇಕಾಗುತ್ತದೆ. ಈ ವಿಷಯ ಸಾರಿಗೆ ಇಲಾಖೆಯ ಗಮನಕ್ಕೂ ಇರಲಿಕ್ಕೆ ಸಾಕು.
ಇನ್ನು ಯಾದವಾಡ ಬಸ್ ನಿಲ್ದಾಣದ ಶೌಚಾಲಯಗಳಂತೂ ಗಬ್ಬು ನಾರುತ್ತಿವೆ. ಹೆಣ್ಣು ಮಕ್ಕಳಂತೂ ಶೌಚಾಲಯದಲ್ಲಿ ಕಾಲಿಡಲು ಆಗದಂತ ಪರಿಸ್ಥಿತಿ ಇದೆ. ಪ್ರಧಾನಿ ಮೋದಿಯವರು ಸ್ವಚ್ಛಭಾರತ ಮಿಷನ್ ಯೋಜನೆಯಡಿ ಎಲ್ಲಾ ಕಡೆ ಸ್ವಚ್ಛತೆಯ ಬಗ್ಗೆ ಹೇಳುತ್ತಾರೆ ಆದರೆ ಸರ್ಕಾರಿ ಅಧಿಕಾರಿಗಳು ಈ ಬಗ್ಗೆ ದಿವ್ಯ ನಿರ್ಲಕ್ಷ್ಯ ತಾಳಿದ್ದಾರೆ. ಇಲ್ಲಿನ ಶೌಚಾಲಯದ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು ಸಾರಿಗೆ ಇಲಾಖೆಯ ಅಧಿಕಾರಿಗಳು ಆದಷ್ಟು ಬೇಗನೆ ಶೌಚಾಲಯಕ್ಕೆ ಒಂದು ರೂಪ ಕೊಡಬೇಕಾಗಿದೆ
ಇಲ್ಲಿನ ಬಸ್ ನಿಲ್ದಾಣದಲ್ಲಿ ನಿಯಂತ್ರಣಾಧಿಕಾರಿ ಗೈರು ಹಾಜರಾಗಿದ್ದು ನಿಲ್ದಾಣವನ್ನು ದಿನಂಪ್ರತಿ ಸ್ವಚ್ಛ ಮಾಡಬೇಕಾದ ಕೆಲಸಕ್ಕೆ ಕೊಕ್ಕೆ ಬಿದ್ದಿದೆ. ಈ ಬಗ್ಗೆ ಗೋಕಾಕದ ಡಿಪೋ ಮ್ಯಾನೇಜರ್ ಸುನಿಲ ಹೊನವಾಡ ಅವರನ್ನು ಪತ್ರಿಕೆ ಸಂಪರ್ಕಿಸಿದಾಗ….
ಯಾದವಾಡ ನಿಯಂತ್ರಣಾಧಿಕಾರಿ ಗೌಡರ ಅವರಿಗೆ ಅನಾರೋಗ್ಯವಿರುವ ಕಾರಣ ಅವರು ದೀರ್ಘ ರಜೆಯ ಮೇಲಿದ್ದಾರೆ ಹೀಗಾಗಿ ನಿಲ್ದಾಣದ ಸ್ವಚ್ಛತೆಯಲ್ಲಿ ಅವ್ಯವಸ್ಥೆಯಾಗಿದೆ. ಈಗ ಗೋಕಾಕದಿಂದಲೇ ಒಬ್ಬ ಸಿಬ್ಬಂದಿಯನ್ನು ಯಾದವಾಡಕ್ಕೆ ಹಾಕಿ ಎಲ್ಲವನ್ನೂ ಸರಿಪಡಿಸುತ್ತೇವೆ. ಸಾರಿಗೆ ಇಲಾಖೆ ಸಿಬ್ಬಂದಿ ಕೊರತೆಯ ಸಮಸ್ಯೆಯನ್ನು ಎದುರಿಸುತ್ತಿದೆ. ಆದರೂ ಎಲ್ಲ ನಿಟ್ಟಿನಲ್ಲಿ ನಾವು ಪ್ರಯತ್ನ ಪಡುತ್ತಿದ್ದೇವೆ ಎಂದರು
ಸಾರಿಗೆ ಇಲಾಖೆಯು ಈಗ ಗಂಭೀರ ಸಿಬ್ಬಂದಿ ಕೊರತೆ ಎದುರಿಸುತ್ತಿದೆ. ಸರ್ಕಾರ ಕಂಡಕ್ಟರ್ ಗಳಿಗೆ ಬಡ್ತಿ ನೀಡುತ್ತಿಲ್ಲ ಎನ್ನಲಾಗುತ್ತಿದೆ. ನಿಲ್ದಾಣಗಳಿಗೆ ಹೆಚ್ಚುವರಿ ಸಿಬ್ಬಂದಿ ಲಭ್ಯವಿಲ್ಲದ ಕಾರಣ ಯಾದವಾಡದ ಬಸ್ ನಿಲ್ದಾಣದಲ್ಲಿ ಯಾರೂ ಇಲ್ಲದ ಹಾಗಾಗಿದೆ.
ಯಾದವಾಡ ಬಸ್ ನಿಲ್ದಾಣಕ್ಕೆ ಸಾಕಷ್ಟು ಬಸ್ ಬರುತ್ತವೆ ಆದರೆ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ನಿಲ್ದಾಣ ಅಧ್ವಾನಗೊಂಡಿದೆ. ಇಲ್ಲಿ ಕಸ ಹೊಡೆಯಲು ಒಬ್ಬ ಇದ್ದಾನೆ ಆದರೆ ಆತ ಸರಿಯಾಗಿ ಬರುವುದಿಲ್ಲ. ಮೂತ್ರಕ್ಕೆ ಹೋಗಬೇಕಾದರೂ ಮೂಗು ಮುಚ್ಚಿಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ. ಈ ಬಗ್ಗೆ ಸಾಕಷ್ಟು ಸಲ ಇಲಾಖೆಯವರಿಗೆ ಹೇಳಿದ್ದರೂ ಯಾರೂ ಕಿವಿಗೊಡುತ್ತಿಲ್ಲ. ಬೇಜವಾಬ್ದಾರಿತನ ಬಹಳ ಇದೆ – ಬಸವರಾಜ ಹಿಡಕಲ್, ನಾಗರಿಕರು, ಯಾದವಾಡ
ದಿನಂಪ್ರತಿ ಬೆಳೆಯುತ್ತಿರುವ ಯಾದವಾಡ ಗ್ರಾಮದ ಬಸ್ ನಿಲ್ದಾಣದ ಆವರಣ ಆದಷ್ಟು ಬೇಗ ಸ್ವಚ್ಛಗೊಂಡು, ಶೌಚಾಲಯಗಳು ಸ್ವಚ್ಛಗೊಂಡು ಪ್ರಯಾಣಿಕರಿಗೆ ಅನುಕೂಲವಾಗಲಿ ಎಂಬುದೇ ಪತ್ರಿಕೆಯ ಆಶಯವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸ್ಪಂದಿಸುವರೇ ? ಕಾದು ನೋಡಬೇಕು.
ವರದಿ : ಉಮೇಶ ಬೆಳಕೂಡ, ಮೂಡಲಗಿ