ಮೂಡಲಗಿ: (ಗೋಸಬಾಳ) ದೇಶದಲ್ಲಿರುವ ಬಡವರು, ರೈತರು, ಮಹಿಳೆಯರು ಮತ್ತು ಯುವಕರನ್ನು ಸಶಕ್ತಗೊಳಿಸುವ ಮೂಲಕ ವಿಕಸಿತ ಭಾರತದ ಸಂಕಲ್ಪ ಮಾಡಲಾಗಿದ್ದು, ದೇಶದ 81 ಕೋಟಿ ಜನ ಕೇಂದ್ರ ಸರ್ಕಾರದ ಯೋಜನೆಗಳ ಲಾಭ ಪಡೆದುಕೊಳ್ಳುತ್ತಿದ್ದಾರೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ಶುಕ್ರವಾರ ಡಿ-22 ರಂದು ಅರಭಾವಿ ಮತಕ್ಷೇತ್ರದ ಗೋಸಬಾಳ ಗ್ರಾಮದಲ್ಲಿ ನಡೆದ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, 12 ಕೋಟಿ ರೈತರಿಗೆ ಕಿಸಾನ್ ಸಮಾನ ಯೋಜನೆಯಡಿ ಪ್ರತಿ ವರ್ಷ 6 ಸಾವಿರ ರೂಪಾಯಿಗಳನ್ನು ನೀಡುತ್ತಿದೆ. ದೇಶದ 10 ಕೋಟಿ ಮಹಿಳೆಯರಿಗೆ ಉಚಿತ ಗ್ಯಾಸ ಸಿಲಿಂಡರ್, 12 ಕೋಟಿ ಬಡವರ ಮನೆಗಳಿಗೆ ಶೌಚಾಲಯ ನಿರ್ಮಾಣ, 55 ಕೋಟಿ ಜನರಿಗೆ ಆಯುಷ್ಮಾನ ಭಾರತ ಯೋಜನೆಯಡಿ ರೂ.5 ಲಕ್ಷದವರೆಗೆ ಉಚಿತ ಚಿಕಿತ್ಸೆ, ದೇಶದ 81 ಕೋಟಿ ಜನರಿಗೆ ಉಚಿತ ಪಡಿತರ ನೀಡಲಾಗಿದೆ. ಮುಂದಿನ 5 ವರ್ಷಗಳವರೆಗೂ ಉಚಿತ ಪಡಿತರ ನೀಡಲಿದ್ದೇವೆ. ಮಾತೃ ವಂದನಾ ಯೋಜನೆಯಡಿ ಗರ್ಭಿಣಿ ಮಹಿಳೆಯರಿಗೆ ರೂ.5000 ನೀಡುತ್ತಿರುವುದು ಮೋದಿ ಸರ್ಕಾರ ಎಂದು ತಿಳಿಸಿದರು.
ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದೇಶದ ಅರ್ಥ ವ್ಯವಸ್ಥೆ ಸುಧಾರಿಸಿದೆ. ಮುಂದಿನ ಕೆಲವೆ ವರ್ಷಗಳಲ್ಲಿ ಅಮೇರಿಕಾ, ಚೀನಾಗಳನ್ನು ಹಿಂದಿಕ್ಕಲಿದೆ ಎಂದು ಈರಣ್ಣ ಕಡಾಡಿ ವಿಶ್ವಾಸ ವ್ಯಕ್ತಪಡಿಸಿದರು.
ವಿಕಸಿತ ಭಾರತ ಸಂಕಲ್ಪ ಯಾತ್ರೆಯು ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲೂ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ ಎಂದರು.
ಕೆನರಾ ಬ್ಯಾಂಕ ಮ್ಯಾನೇಜರ ಉಮೇಶ ಸೇಟೆ, ಪಂಚಾಯತ ಅಭಿವೃದ್ಧಿ ಅಧಿಕಾರಿ ಸಂಜುಕುಮಾರ ಜೊತಾವರ, ಆರೋಗ್ಯ ಇಲಾಖೆ ಸಿಬ್ಬಂದಿ ಮಂಜುನಾಥ, ಅಂಚೆ ಇಲಾಖೆ ರೇನುಖಾ ಸಿದ್ದಾಪೂರ, ಗ್ಯಾಸ ವಿತರಕರಾದ ಗಂಗಾಧರ ಬೋವಿ, ಪ್ರಮುಖರಾದ ಗಂಗಯ್ಯ ಹಿರೇಮಠ, ಬಸವರಾಜ ಇಟ್ನಾಳ, ಪಾವಡೇಪ್ಪ ಗೌಡರ, ಮಾಯವ್ವ ಶಿಂಗಾಡಿ ಸೇರಿದಂತೆ ರೈತರು, ಮಹಿಳೆಯರು, ಕಾರ್ಯಕರ್ತರು ಉಪಸ್ಥಿತರಿದ್ದರು.