ಸಿಂದಗಿ; ಕನ್ನಡ ನಾಡು ಸಾಹಿತ್ಯ, ಸಂಸ್ಕೃತಿಯ ನೆಲೆಬೀಡು, ಸಂತ ಶರಣರ ನಾಡು ಎಂದು ಹೆಸರುವಾಸಿಯಾಗಿದೆ. ಅಂತಹ ಶರಣರ, ಸಂತರ, ಕವಿಪುಂಗವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗುತ್ತಿರುವ ಯುವಜನತೆ ಸಾಹಿತ್ಯ, ಸಂಸ್ಕೃತಿಯ ರಾಯಭಾರಿಗಳಾಗಬೇಕೆಂದು ಸರ್ಕಾರಿ ಪ್ರೌಢಶಾಲೆಯ ಕನ್ನಡ ಶಿಕ್ಷಕರು ಹಾಗೂ ಪ್ರಸಕ್ತ ಸಾಲಿನ ಜಿಲ್ಲಾ ಅತ್ಯುತ್ತಮ ತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಎಸ್.ಎಂ. ಜೇವರ್ಗಿ ಹೇಳಿದರು.
ಪಟ್ಟಣದ ಪಿ.ಇ.ಎಸ್. ಗಂಗಾಧರ ಎನ್. ಬಿರಾದಾರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯ ಹಾಗೂ ಶ್ರೀಮತಿ ಪ್ರೇಮಾ ಭೀ. ಕರ್ಜಗಿ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿರುವ ಕನ್ನಡ ರಾಜ್ಯೋತ್ಸವ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು ಕವಿರಾಜಮಾರ್ಗ ಕವಿಯಾದ ಶ್ರೀವಿಜಯನ ನುಡಿಯಂತೆ ಕನ್ನಡನಾಡು ಕಾವೇರಿಯಿಂದ ಗೋಧಾವರಿಯವರೆಗೆ ಸಮೃದ್ಧವಾಗಿದೆ. ಇಂತಹ ನಾಡಿನಲ್ಲಿ ಜನಿಸಿದ ನಾವು ಶೂರರು, ಧೀರರು, ಓದಲು ಬಾರದೆಯಿದ್ದರೂ ಸಾಹಿತ್ಯ ರಚನೆಯನ್ನು ಮಾಡುವ ಶಕ್ತಿಯುಳ್ಳವರು. ಇಂತಹ ನಾಡಿನಲ್ಲಿ ಜನಿಸಿದ ನಾವೇ ಪುಣ್ಯವಂತರು ಎಂದರು.
ಸಮಾರಂಭದ ಅಧ್ಯಕ್ಷತೆ ಸಂಸ್ಥೆಯ ಕಾರ್ಯದರ್ಶಿ ಬಿ.ಪಿ. ಕರ್ಜಗಿ ವಹಿಸಿದ್ದರು. ಸಂಸ್ಥೆಯ ಆಡಳಿತಾಧಿಕಾರಿ ಆಯ್.ಬಿ. ಬಿರಾದಾರ, ಮಾರ್ಗದರ್ಶಕ ಸಾಹಿತಿ ಕೆ.ಎಚ್. ಸೋಮಾಪೂರ, ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಜಿ.ಎಸ್. ಕಡಣಿ, ಪ.ಪೂ ಮಹಾವಿದ್ಯಾಲಯದ ಪ್ರಾಚಾರ್ಯ ಆರ್.ಬಿ. ಗೋಡಕರ, ವಿಶ್ರಾಂತ ಉಪನ್ಯಾಸಕ ಪಿ.ಎಂ. ಮಡಿವಾಳರ ಉಪಸ್ಥಿತರಿದ್ದರು. ಉಪನ್ಯಾಸಕ ಮಹಾಂತೇಶ ದಂಡವತ ನಿರೂಪಿಸಿ ವಂದಿಸಿದರು.

