ಯುವಕರು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು – ಜಿಲ್ಲಾಧಿಕಾರಿ ಮಹ್ಮದ ರೋಷನ್ ಕರೆ

0
47

ಮಂಗಳಾ ಮೆಟಗುಡ್ಡ ಅವರ ‘ ನುಡಿಸಿರಿ ‘ ಕೃತಿ ಲೋಕಾರ್ಪಣೆ

ಬೆಳಗಾವಿ – ತರುಣರು ನಾಡಿನ ಸಂಸ್ಕೃತಿಯನ್ನು ತಿಳಿದುಕೊಳ್ಳಲು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು.ಕರ್ನಾಟಕ ಸಾಹಿತ್ಯಕವಾಗಿ ತುಂಬಾ ದೀರ್ಘ ಇತಿಹಾಸವನ್ನು ಹೊಂದಿರುವ ಸಂಪದ್ಭರಿತ ನಾಡಾಗಿದೆ. ಅದರಲ್ಲಿಯೂ ಕೂಡ ಕನ್ನಡ ಭಾಷೆ ಮಾತನಾಡಲು ಬಲು ಸೊಗಸಾಗಿದೆ.ಎಂದು ಜಿಲ್ಲಾಧಿಕಾರಿ ಮಹ್ಮದ ರೋಷನ್ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಇಂದು ಕನ್ನಡ ಭವನದಲ್ಲಿ ನಡೆದ “ನುಡಿಸಿರಿ” ಎಂಬ ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲೆಯ ಸಾಹಿತ್ಯಕ ಇತಿಹಾಸವನ್ನು ತಿಳಿಸುವ ಈ “ನುಡಿಸಿರಿ” ಎಂಬ ಆಕರ ಗ್ರಂಥವನ್ನು ಸಂಪಾದನೆ ಮಾಡಿದ್ದು ತುಂಬಾ ಹೆಮ್ಮೆಯ ವಿಷಯ ಎಂದು ಸಂತಸವನ್ನು ವ್ಯಕ್ತಪಡಿಸಿ, ಕನ್ನಡಿಗರೆಲ್ಲರ ಪ್ರೋತ್ಸಾಹದಿಂದ ಪ್ರತಿವರ್ಷ ನಡೆಯುತ್ತಿರುವ ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳು ಅತ್ಯಂತ ಯಶಸ್ವಿಯಾಗಿ ಜರುಗುತ್ತಲಿವೆ. ಇದು ಎಲ್ಲರೂ ಹೆಮ್ಮೆ ಪಡುವ ಸಂಗತಿಯಾಗಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಾದ ಶ್ರೀಮತಿ ಮಂಗಲಾ ಶ್ರೀಶೈಲ ಮೆಟಗುಡ್ಡ ಅವರು ನನ್ನ ಬಹು ದಿನದ ಕನಸು ಸರ್ವಾಧ್ಯಕ್ಷರ ಚಿಂತನೆಗಳನ್ನು ಒಂದೆಡೆ ಸೇರಿಸಿ ನಮ್ಮ ಜಿಲ್ಲೆಯ ಸಾಹಿತ್ಯಕ ದರ್ಶನ ಒಂದು ಗ್ರಂಥ ರೂಪದಲ್ಲಿ ಪ್ರಕಟಿತ ಆಗಬೇಕು ಎನ್ನುವುದಾಗಿತ್ತು ಅದು ಇಂದು ಕೈಗೂಡಿದೆ,ಅದಕ್ಕಾಗಿ ಶ್ರಮಿಸಿದ ಎಲ್ಲರಿಗೂ ವಂದನೆಗಳನ್ನು ಹೇಳಿದರು.

ಪುಸ್ತಕ ಪರಿಚಯ ಮಾಡಿದ ಫಕೀರನಾಯಕ ಗಡ್ಡಿಗೌಡರ ಮಾತನಾಡಿ ನುಡಿಸಿರಿ ಎಂಬ ಈ ಪುಸ್ತಕ ಬೆಳಗಾವಿ ಜಿಲ್ಲೆಯ ಕನ್ನಡಿಗರೆಲ್ಲರ ಸಾಹಿತ್ಯದ ಐಸಿರಿಯಾಗಿದೆ.ಈ ಬೃಹತ್ ಗ್ರಂಥರೂಪದ ಪುಸ್ತಕವನ್ನು ಪ್ರಕಟಿಸಿದ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರು ಅಭಿನಂದನಾರ್ಹರು. ಒಟ್ಟು ೫೦ ಸಮ್ಮೇಳನಗಳ ಸರ್ವಾಧ್ಯಕ್ಷರ ಚಿಂತನೆಗಳನ್ನು ಒಳಗೊಂಡ ಈ ಪುಸ್ತಕ ಸಂಶೋಧನಾ ಗ್ರಂಥವಾಗಿ ರೂಪಗೊಂಡಿದೆ.ಕನ್ನಡ ಭಾಷೆ ಅನ್ನದ ಭಾಷೆಯಾಗಬೇಕು ಎನ್ನುವ ಗುರಿ ನಮ್ಮದಾಗಬೇಕು ಎಂದರು.

ಅತಿಥಿಗಳಾಗಿ ಮಾತನಾಡಿದ ಹಿರಿಯ ಸಾಹಿತಿ ಯ.ರು.ಪಾಟೀಲ ಮಾತನಾಡಿ ಸಮ್ಮೇಳನಗಳ ನಿರ್ಣಯಗಳು ಅನುಷ್ಠಾನಕ್ಕೆ ಬರುವಲ್ಲಿ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಪಾತ್ರ ಬಹಳ ಮುಖ್ಯವಾದದ್ದು, ಅದಕ್ಕಾಗಿ ನಾವೆಲ್ಲ ಒಟ್ಟಾಗಿ ಹೋರಾಟ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದರು.

ಅಧ್ಯಕ್ಷತೆಯನ್ನು ವಹಿಸಿದ ಕೇಂದ್ರ ಕನ್ನಡ ಕ್ರಿಯಾ ಸಮಿತಿಯ ಅಧ್ಯಕ್ಷರಾದ ಶ್ರೀ ಮನು ಬಳಿಗಾರ ಅವರು ಅಧ್ಯಕ್ಷಿಯ ನುಡಿಗಳನ್ನು ಆಡುತ್ತಾ, ಬಹಳ ಜನ ತಮ್ಮ ಜವಾಬ್ದಾರಿಯನ್ನು ಮರೆತು ಕೇವಲ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರೆ ಪ್ರಯೋಜನವಾಗುವುದಿಲ್ಲ.ಸಾರ್ವಜನಿಕರ ಸಹಭಾಗಿತ್ವದ ಅವಶ್ಯಕತೆ ಕೂಡ ಮಹತ್ವದ್ದಾಗಿದೆ,ಅಲ್ಲದೆ ಪಾಲಕರು ಇಂಗ್ಲಿಷಿನ ವ್ಯಾಮೋಹವನ್ನು ಬಿಟ್ಟು ಕನ್ನಡ ಭಾಷೆಯ ಬಗ್ಗೆ ಅಭಿಮಾನ ಮತ್ತು ಪ್ರೋತ್ಸಾಹಕ್ಕೆ ತಮ್ಮ ಮಕ್ಕಳನ್ನು ಅಣಿಗೊಳಿಸಬೇಕು ಎಂದರು.

ಶ್ರೀಮತಿ ಹೇಮಾ ಸೋನೊಳ್ಳಿ ನಿರೂಪಿಸಿದರು, ಶ್ರೀ ಎಂ ವಾಯ.ಮೆಣಸಿನಕಾಯಿ ಸರ್ವರನ್ನು ಸ್ವಾಗತಿಸಿದರು, ಶ್ರೀ ವೀರಭದ್ರ ಅಂಗಡಿಯವರು ವಂದನಾರ್ಪಣೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಗ್ರಂಥ ದಾಸೋಹಿಗಳನ್ನು ಸನ್ಮಾನಿಸಲಾಯಿತು.ಬೆಳಗಾವಿ ಜಿಲ್ಲೆಯ ಹಿರಿಯ ಸಾಹಿತಿಗಳು, ಕಲಾವಿದರು,ತಾಲೂಕಾ ಅಧ್ಯಕ್ಷರು ಮತ್ತು ಎಲ್ಲ ಪದಾಧಿಕಾರಿಗಳು,ಮಹಿಳಾ ಸಾಹಿತಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here