ಲೇಖನ

ಅವಧೂತ ಶಿರೋಮಣಿ ಶ್ರೀ ವಿಷ್ಣುತೀರ್ಥರ ಆರಾಧನೆ

ಪ್ರತಿ ವರ್ಷ ಮುನವಳ್ಳಿಯಲ್ಲಿ ಅವಧೂತ ಶಿರೋಮಣಿ ಶ್ರೀ ವಿಷ್ಣುತೀರ್ಥರ ಆರಾಧನೆ ಶಿವರಾತ್ರಿಯಂದು ಜರುಗುತ್ತ ಬಂದಿದೆ. ಮಾರ್ಚ 12 ರಂದು ವಿಷ್ಣುರ್ತೀಥರು ಅನುಷ್ಠಾನಗೈದ ಆಶ್ರಮ ಕಟ್ಟೆಯಲ್ಲಿ ಪೂಜಾ ಕಾರ್ಯಕ್ರಮಗಳು ಜರುಗುತ್ತಿದ್ದು ತನ್ನಿಮಿತ್ತ ವಿಷ್ಣುತೀರ್ಥರ ಕುರಿತು ಮಾಹಿತಿ ಬರಹ.

ಮುನವಳ್ಳಿ ಸವದತ್ತಿ ತಾಲೂಕಿನ ಪುರಸಭೆ ಹೊಂದಿದ ಐತಿಹಾಸಿಕ ತಾಣ..ಮುನಿಗಳ ಹಳ್ಳಿ ಎಂದೇ ಇತಿಹಾಸದಲ್ಲಿ ಖ್ಯಾತವಾದ ಇಲ್ಲಿ ಅವಧೂತ ಶಿಖಾಮಣಿ ವಿಷ್ಣುತೀರ್ಥರು ತಮ್ಮ ತಪೋನುಷ್ಠಾನಗೈದಿರುವರು. ಅವರ ಸ್ಮರಣೆಯ ನಿಮಿತ್ತ ವಿವಿಧ ಕಾರ್ಯಕ್ರಮಗಳು ಜರುಗುತ್ತಿದ್ದು.ಶ್ರೀ ಶ್ರೀ 108 ವಿಷ್ಣುತೀರ್ಥರು ವೈರಾಗ್ಯದ ಉತ್ತುಂಗ ಶಿಖರಕ್ಕೇರಿ ತಮ್ಮ ಅಪಾರ ಸಂಪತ್ತನ್ನು ಸಂಪೂರ್ಣವಾಗಿ ದಾನ ಮಾಡಿ ವಾನಪ್ರಸ್ಥರ ನಿಯಮದಂತೆ 12 ವರ್ಷ ಅಡವಿಯಲ್ಲಿಯೇ ವಾಸ ಮಾಡಿ ಅಸಂಖ್ಯ ಶಿಷ್ಯವೃಂದವನ್ನು ತಯಾರು ಮಾಡಿ ಅಡವಿ ಆಚಾರ್ಯರೆಂದು ಪ್ರಖ್ಯಾತರಾದರು.

ವಿಷ್ಣುತೀರ್ಥರ ತಂದೆ ಬಾಳಾಚಾರ್ಯರು ತಾಯಿ ಭಾಗೀರಥಿಬಾಯಿ. ಸಿದ್ದಾಪುರವು ಸವಣೂರಿನಿಂದ 15 ಮೈಲು ದೂರದಲ್ಲಿರುವ ಚಿಕ್ಕ ಗ್ರಾಮ ಈ ಊರಿನಲ್ಲಿ ಒಂದು ವಿಶೇಷವೆಂದರೆ ತುಳಸೀ ಗಿಡಗಳು.ಈ ಗ್ರಾಮದಲ್ಲಿ ಶಾಲಿವಾಹನ ಶಕೆ 1678 ಕ್ರಿ.ಶ 1756 ರ ಈಶ್ವರ ನಾಮ ಸಂವತ್ಸರ ಶ್ರಾವಣ ಕೃಷ್ಣ ಅಷ್ಟಮಿ ಚಂದ್ರೋದಯ ಸಮಯದಲ್ಲಿ ಜನ್ಮ ತಳೆದ ಅಡವಿ ಆಚಾರ್ಯರು ಬಾಲ್ಯದಲ್ಲಿಯೇ ಪ್ರಕಾಂಡ ಪಾಂಡಿತ್ಯ ಲಕ್ಷಣವುಳ್ಳವರಾಗಿದ್ದರು.

ತಂದೆ ತಾಯಿಗಳೊಂದಿಗೆ ಮಂತ್ರಾಲಯಕ್ಕೆ ಆಗಮಿಸಿದಾಗ ಅಲ್ಲಿ ಲೋಕಪ್ರಸಿದ್ದರಾದ ಐಜಿ ವೆಂಕಟರಾಮಾಚಾರ್ಯರ ಭೇಟಿ ಇವರಿಗೆ ಗುರುಗಳನ್ನು ಕರುಣಿಸಿತು.

ಆಂಧ್ರಪ್ರದೇಶದ ವೇಣಿಸೋಮಪುರದಲ್ಲಿ ಅದು ಗುರುಗಳ ಮೂಲಕ ಪ್ರಾಪ್ತವಾಯಿತು.ನಂತರ ವಿವಾಹದ ಬದುಕು ನಡೆದಿರುವಾಗಲೇ ಒಂದು ದಿನ ಇವರ ಮನೆ ಬಾಗಿಲಲ್ಲಿ ಬಿಕ್ಷೆಗಾಗಿ ಬಂದ ದಾಸಯ್ಯನೊಬ್ಬ ಪುರಂದರದಾಸರ ಈ ಪದವನ್ನು ಸುಶ್ರ್ಯಾವ್ಯವಾಗಿ ಹಾಡತೊಡಗಿದ.

ಮಂಚ ಬಾರದು ಮಡದಿ ಬಾರಳು ಕಂಡು ಕನ್ನಡಿ
ಬಾರದು, ಸಂಚಿತಾರ್ಥದ ದ್ರವ್ಯ ಬಾರದು ಮುಂಚೆ
ಮಾಡಿದೋ ಧರ್ಮವ

ಗಾಳಿಯಲ್ಲಿ ತೇಲುತ್ತ ಬಂದ ಮಧುರವಾದ ಗಾನವು ಆಚಾರ್ಯರ ಕಿವಿಯ ಮೇಲೆ ಬಿತ್ತು ಕುತೂಹಲಿಗಳಾದ ಆಚಾರ್ಯರು ಆಸಕ್ತಿಯಿಂದ ಪದವನ್ನು ಆಲಿಸಿದರು.ಮಂಚದಿಂದ ಕೆಳಗಿಳಿದ ಆಚಾರ್ಯರು ಹೊರಗೆ ಬಂದು ಆ ದಾಸಯ್ಯನನ್ನು ಕರೆದು ಮತ್ತೆ ಹಾಡಿಸಿ ಕೇಳಿ ಅವನಿಗೆ ತೃಪ್ತಿಯಾಗುವಂತೆ ಧಾನ್ಯ ವಸ್ತ್ರಗಳನ್ನು ನೀಡಿ ಕಳಿಸಿದರು.

ತಾವು ಸರ್ವಸ್ವವನ್ನು ದಾನ ಮಾಡಿ ವಿರಕ್ತರಾಗಿ ಹೊರಡುವುದಾಗಿ ಹೆಂಡತಿಗೆ ಹೇಳಿದರು.ತಮ್ಮದೆನ್ನುವ ಸರ್ವಸ್ವವನ್ನು ಕೃಷ್ಣಾರ್ಪಣವೆಂದು ದಾನ ಮಾಡಿ ಏಕೈಕ ಪುತ್ರ ಹಾಗೂ ಹೆಂಡತಿಯೊಡನೆ ಪೊಡವಿಗೊಡೆಯನನ್ನು ನೆನೆಯುತ್ತ ಅಡವಿಯತ್ತ ನಡೆದರು.

ಮಳಖೇಡಕ್ಕೆ ಹೋಗಿ ಸೇವೆಯನ್ನು ಮಾಡಬೇಕೆಂದು ಪ್ರಯಾಣ ಮಾಡಿದರು. ಎರಡು ಸಾರೆ ಪ್ರಯತ್ನಿಸಿದರೂ ದಾರಿಯಲ್ಲಿ ದೊಡ್ಡ ಸರ್ಪವು ಅಡ್ಡಗಟ್ಟಿದ್ದರಿಂದ ಅಪಶಕುನವೆಂದು ಭಾವಿಸಿ ರಾತ್ರಿ ಮಲಗಿದರು. ಆ ರಾತ್ರಿ ಈ ರೀತಿ ಸ್ವಪ್ನವಾಯಿತು. ವೃಥಾ ಪರ್ಯಟನದಿಂದ ಏನು ಪ್ರಯೋಜನ? ಎಂದು ಕೇಳಿದಂತಾಗಿ

ಸ್ವಾಧ್ಯಾಯಾನ್ ಮಾ ಪ್ರಮದಃ
ಸ್ವಾಧ್ಯಾಯ ಪ್ರವಚನ ಏವೇತಿ
ನಾಕೋ ಮೌದ್ಗಲ್ಯಃ ತದ್ಧಿ ತಪಃ ತದ್ಧಿ ತಪಃ
ಎಂದು ಹೇಳಿದಂತಾಯಿತು.

ಮುಂದೆ ವಾನಪ್ರಸ್ಥಾಶ್ರಮ ಸ್ವೀಕಾರ ಮಾಡಿ ಮಲಾಪಹಾರಿಣೀ ತೀರದಲ್ಲಿರುವ ಮುನವಳ್ಳಿ ಗ್ರಾಮದಲ್ಲಿ ವಾಸ ಮಾಡಿಕೊಂಡು ಶಿಷ್ಯರಿಗೆ ಪಾಠ ಪ್ರವಚನ ಮಾಡಿಸುತ್ತಿದ್ದರು.

ಮೊದಲು ಕೆಲವು ದಿನ ಇವರ ಶಿಷ್ಯರಾದ ಮೊರಬ ಮನೆತನದ ಮೂಲ ಪುರುಷರಾದ ರಾಮಾಚಾರ್ಯ ಮೊರಬರು ಇವರನ್ನು ತಮ್ಮಲ್ಲಿಟ್ಟುಕೊಂಡಿದ್ದರೆಂದು ತಿಳಿದು ಬರುತ್ತದೆ. ಇವರು ಮುಂದೆ ಮುನವಳ್ಳಿಗೆ ಪ್ರಯಾಣ ಬೆಳೆಸಿದರು.

ಮುನವಳ್ಳಿಯಲ್ಲಿ ನಿತ್ಯ ಕರ್ಮಾನುಷ್ಠಾನ ಮಾಡುತ್ತ ಪ್ರತಿ ದಿನ ಸಮಧ್ವ ವಿಜಯ ಪೂರ್ತಿ ಪಾರಾಯಣದಿಂದ ಸಂಚಾರ ಮಾಡಿ ಮಧುಕರೀ ವೃತ್ತಿಯಿಂದ ಶಿಷ್ಯರನ್ನು ಪೋಷಿಸಿ 12 ಆವರ್ತಿ ಶ್ರೀಮನ್ಯಾಯ ಸುಧಾ ಪಾಠ ಪ್ರವಚನ ಜರುಗಿಸಿ ಮಂಗಳ ಮಾಡಿ ಶ್ರೀ ಹರಿಗೆ ಸಮರ್ಪಣೆ ಮಾಡಿದರು . ಇವರಲ್ಲಿ ಶಿಷ್ಯ ಸಂಪತ್ತು ಹೆಚ್ಚಾಗಿತ್ತು. ಇವರ ಮುಖ್ಯ ಶಿಷ್ಯರು—ರಾಮಾಚಾರ್ಯ ಮೊರಬ, ಬಾಳಾಚಾರ್ಯ ಟೊಣಪಿ, ವೆಂಕಟಾಚಾರ್ಯ ಕೌಲಗಿ, ಅಣ್ಣಾಚಾರ್ಯ ಅಣ್ಣಿಗೇರಿ ಮುಂತಾದವರು.
ಇಲ್ಲಿ ಮಲಪ್ರಭಾ ನದಿ ತೀರದಲ್ಲಿ ತಮ್ಮ ಹಲವು ಗ್ರಂಥಗಳನ್ನು ರಚಿಸಿರುವರು. ಇಂದಿಗೂ ಅವರು ನೆಲೆಸಿದ ಸ್ಥಳವನ್ನು ಆಶ್ರಮಕಟ್ಟೆ ಎಂದು ಕರೆಯುತ್ತ ಪ್ರತಿವರ್ಷ ಅವರ ಆರಾಧನೆಯನ್ನು ಜರುಗಿಸುತ್ತ ಬಂದಿರುವರು.ಮುನವಳ್ಳಿ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಪ್ರಸಿದ್ದ ಐತಿಹಾಸಿಕ ತಾಣ. ಇಲ್ಲಿ ಅನೇಕ ಮುನಿಗಳು ವಾಸ ಇದ್ದುದರಿಂದ ಮುನಿಗಳ ಹಳ್ಳಿ ಮುನಿಂದ್ರವಳ್ಳಿ ಮುನವಳ್ಳಿ ಎಂದು ಇದು ಪುರಾಣ ಕಾಲದಿಂದಲೂ ಕರೆಯಲ್ಪಟ್ಟಿದೆ. ವಿಷ್ಣುತೀರ್ಥರ ಆರಾಧನೆ ತನ್ನಿಮಿತ್ತ ಮುನವಳ್ಳಿಯಲ್ಲಿ ಅವರು ನೆಲೆಸಿದ ಸಂದರ್ಭದ ಘಟನೆಗಳನ್ನು ಇಲ್ಲಿ ಪ್ರಸ್ತುತ ಪಡಿಸಲಾಗಿದೆ.

ಮುನವಳ್ಳಿಯಲ್ಲಿ ವಿಷ್ಣುತೀರ್ಥರು

ಮುನವಳ್ಳಿಯ ಮಲಪ್ರಭಾ ನದಿ ದಡದಲ್ಲಿ ಅಂದರೆ ವಿಠ್ಠಲಮಂದಿರ ಮಾರ್ಗವಾಗಿ ಕೋಟೆಯನ್ನು ದಾಟಿ ತೆಗ್ಗಿಹಾಳ ಕಡೆಗೆ ಸಾಗುವ ಮಾರ್ಗದಲ್ಲಿ ಆಲಕಟ್ಟಿ ಮಸೀದೆ ಓಣಿಯ ಬಳಿ ಒಂದು ರಸ್ತೆ ಮಲಪ್ರಭಾ ನದಿಯತ್ತ ಸಾಗುವ ಮಾರ್ಗಮಧ್ಯದಲ್ಲಿ ಶ್ರೀ ವಿಷ್ಣು ತೀರ್ಥರ ಸ್ಮರಣೆಯ ಆಶ್ರಮಕಟ್ಟೆ(ಅಶ್ವತ್ಥ ಕಟ್ಟೆ) ಇದೆ. ಇದೂ ಕೂಡ ಮುನವಳ್ಳಿಯ ಪವಿತ್ರ ಕ್ಷೇತ್ರ. ಈ ಕುರಿತು ಉಲ್ಲೇಖವನ್ನು “ಅವಧೂತ ಶಿರೋಮಣಿ ಶ್ರೀ ವಿಷ್ಣುತೀರ್ಥರು” ಎಂಬ ಗ್ರಂಥದಲ್ಲಿಯ ಪುಟ ಸಂಖ್ಯೆ 50 ರಿಂದ 59 ರ ವರೆಗೆ ಮುನವಳ್ಳಿಯಲ್ಲಿ ಮುನಿಚರಿತರು ಎಂಬ ಭಾಗದಲ್ಲಿ ವಿಷ್ಣುತೀರ್ಥರು ಮುನವಳ್ಳಿಯಲ್ಲಿ ತಂಗಿದ ದಿನಗಳಲ್ಲಿ ಜರುಗಿದ ವಿವಿಧ ಘಟನೆಗಳನ್ನು ದೃಷ್ಟಾಂತಗಳನ್ನು ಉಲ್ಲೇಖಿಸಿರುವರು.

ಈ ಗ್ರಂಥವನ್ನು ಪಂಡಿತ ಶ್ರೀಕರಾಚಾರ್ಯ ಅಡವಿಯವರು ರಚಿಸಿದ್ದು ಶ್ರೀ ವ್ಯಾಸತತ್ವಜ್ಞ ಪ್ರತಿಷ್ಠಾನ ಮಾದನೂರ ಇವರು ಪ್ರಕಟಿಸಿದ್ದು 2012 ರಲ್ಲಿ ಬಿಡುಗಡೆಗೊಳಿಸಲಾಗಿದೆ. ಈ ಗ್ರಂಥದಲ್ಲಿ ಮುನವಳ್ಳಿಯಲ್ಲಿ ಮುನಿಚರಿತರು ಅಧ್ಯಾಯದಲ್ಲಿ ನ ಭಾಗವನ್ನು ಇಲ್ಲಿ ನೀಡಲಾಗಿದೆ.
ಶೂರ್ಪ ಗ್ರಾಮದಿಂದ ಹೊರಟ ಆಚಾರ್ಯರು ಮಾರ್ಗ ಮಧ್ಯದಲ್ಲಿ ಸಿಕ್ಕುವ ಗ್ರಾಮಗಳ ದೇಗುಲಗಳಲ್ಲಿ ತಂಗುತ್ತ ತಮ್ಮ ಉಪದೇಶಾಮೃತದಿಂದ ಗ್ರಾಮಸ್ಥರ ಧರ್ಮ ಶ್ರದ್ಧೆಯನ್ನು ಹೆಚ್ಚಿಸುತ್ತ ಮುಂದೆ ನಡೆದರು. ಜನ ಸಮ್ಮರ್ದದಿಂದ ಯಾವಾಗಲೂ ದೂರವಿರುತ್ತಿದ್ದ ಆಚಾರ್ಯರು “ಮಂದಿ ಇಲ್ಲದೇ ಇದ್ದ ಸ್ಥಳವೇ ಛಂದ ನಮಗೆಂದಿಗಾದರು ಮಂದಿ ಇದ್ದಲ್ಯಸುರರೇ ಇರುತಿಹರು” ಎಂದು ನಿರ್ಜನವಾದ ಅರಣ್ಯ ಪ್ರದೇಶಗಳಲ್ಲೇ ವಾಸಿಸುತ್ತಿದ್ದರು ಹೀಗೆ ಗ್ರಾಮದಿಂದ ಗ್ರಾಮಕ್ಕೆ ಸಂಚರಿಸುತ್ತ ಬರುತ್ತಿರಲು ಧಾರವಾಡ ಪ್ರಾಂತದ ಸವದತ್ತಿ ಸಮೀಪದ “ಮುನಿವಳ್ಳಿಯ” ಸಮೀಪ ಉತ್ತರ ವಾಹಿನಿಯಾಗಿ ಹರಿಯುತ್ತಿರುವ ಮಲಾಪಹಾರಿ(ಮಲಪ್ರಭಾ) ನದಿ ತೀರದ ಪ್ರಶಾಂತ ವಾತಾವರಣ ಅವರಿಗೆ ಬಹಳ ಮೆಚ್ಚಿಕೆಯಾಯಿತು.

“ಶುದ್ಧ ಚಲ್ವಿಕೆಯಿಂದ ಜನರಿಗೆ ಮುದ್ದು ಬರುತಿರುವಂಥ ಪರಮ ಪ್ರಸಿದ್ಧ ಮುನಿವಳ್ಳಿ” ತಮ್ಮ ಸಾಧನೆಗೆ ತಕ್ಕುದಾದ ಏಕಾಂತ ಸ್ಥಳವೆಂದು ಅವರಿಗೆ ತೋರಿತು. “ಪಲ್ಲೀತಿ ಪ್ರಥಿತತರಾಂ ತತೋ ಮುನೀನಾಂ ಪ್ರಾಪಾಲಂ ವಿಜನವನಂ ಸ ಕಾಮಯಾನಃ” ಹಲವಾರು ಮುನಿಪುಂಗವರ ಸಾಧನ ಕ್ಷೇತ್ರವೂ, ಗೌತಮ ಋಷಿಗಳ ತಪಸ್ಸಿನ ಭೂಮಿಯೂ ಆದಂತಹ ಆ ಪವಿತ್ರ ಪ್ರದೇಶದಲ್ಲಿ ಅನುಷ್ಠಾನ ಪರವಾಗಿ ನೆಲೆಸಲು ಬಯಸಿದರು. “ಅಲ್ಲೇ ಬದರಿಯಲ್ಲಿ ಇರುವೋದೆಲ್ಲ ಇರುತಿಹುದು. ಅಲ್ಲೆ ವಾಸ ಮಾಡಿದನು ಮನದಲ್ಲಿ ಸಂಭ್ರಮಪಡುತ | ಗುರುಗಳೇ ಇಲ್ಲೆ ಈ ಸ್ಥಳ ನಮಗೆ ನಿರ್ಮಿಸಿಕೊಟ್ಟರೆಂತ್ಯೆಂದು ಭಾವಿಸಿ ಅಲ್ಲೇ ಬದರೀಶನನ್ನು ಸ್ಮರಿಸುತ್ತ ಶಿಷ್ಯಪರಿವಾರದೊಂದಿಗೆ ಅಲ್ಲಿಯೇ ಪರ್ಣಕುಟೀರವೊಂದನ್ನು ನಿರ್ಮಿಸಿಕೊಂಡು ವಾಸಿಸತೊಡಗಿದರು.

ಸೇವಿಸಿದವರ ಪಾಪಗಳನ್ನು ಕಳೆಯುವುದರಿಂದ ಮಲಾಪಹಾರೀ ಎಂದು ಖ್ಯಾತಳಾದ ಮಲಪ್ರಭಾ ನದಿ ತೀರದ ಪ್ರದೇಶದಲ್ಲಿ ಆಚಾರ್ಯರ ಸಾಧನೆ ಮುಂದುವರೆಯಿತು. “ಮಲಹಾರ್ಯಾಂ ಜನಾರ್ಧನಮ್” ಎಂದು ಹೇಳಿದಂತೆ ಮಲಪ್ರಭಾ ನದಿಯಲ್ಲಿ ಜನಾರ್ದನನ್ನು ಸ್ಮರಿಸುತ್ತ ಸ್ನಾನಾದಿಗಳನ್ನು ನೆರವೇರಿಸಿಕೊಂಡು ನಿತ್ಯ ಕರ್ಮಗಳನ್ನು ನೆರವೇರಿಸಿಕೊಂಡು ನಿರಂತರ ಪಾಠ ಪ್ರವಚನದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಬ್ರಹ್ಮಚರ್ಯ ಮತ್ತು ಗೃಹಸ್ಥಾಶ್ರಮಗಳನ್ನು ಶಾಸ್ತ್ರೋಕ್ತ ರೀತಿಯಲ್ಲಿ ಪೂರೈಸಿದ್ದ ಆಚಾರ್ಯರು ಈಗ ವಾನಪ್ರಸ್ಥಾಶ್ರಮಿಯಾಗಿ “ಮುನಿವಳ್ಳಿ” ಬಳಿಯ ವಿಜನ ದೇಶದಲ್ಲಿ ಮುನಿಗಳಂತೆ ಜೀವಿಸತೊಡಗಿದರು.

ಪತ್ನಿಯೊಂದಿಗೆ ಇದ್ದರೂ ಏಕಾಪತ್ಯ ಜನನ ಪರ್ಯಂತರ ಸಂಸಾರ ಜೀವನವನ್ನು ನಡೆಸಿದ ಆಚಾರ್ಯರು ಸಾಂಸಾರಿಕ ಸುಖ ಭೋಗಗಳನ್ನು ತ್ಯಜಿಸಿದರು. ಅತ್ಯಂತ ಕಠಿಣ ತಮವಾದ ಸಾಮಾನ್ಯರಿಗೆ ಕಲ್ಪಿಸಲೂ ಅಶಕ್ಯವಾದ “ಅಸಿಪತ್ರ ವೃತ”ವನ್ನು ಕೈಗೊಂಡರು. ಪರಸ್ಪರರ ಆಕರ್ಷಣೆಯಿಂದ ದೂರವಾಗಿರುವುದು ಒಂದು ವೇಳೆ ಮನಸ್ಸು ವಿಕಾರಗೊಂಡರೆ ಅದೇ ಖಡ್ಗದಿಂದ ಪ್ರಾಣ ತೆಗೆದುಕೊಳ್ಳುವ ಸಂಕಲ್ಪ ಮಾಡಿ ಸ್ವೀಕರಿಸಿದ ವೃತಕ್ಕೆ ಅಸಿಪತ್ರ ವೃತವೆಂದು ಹೆಸರು. ಮನಸ್ಸನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳದೇ ಇರುವವರಿಗೆ ಊಹಿಸಲೂ ಅಸಾಧ್ಯವಾದ ಚರಿತ್ರೆಯಲ್ಲೇ ದುರ್ಲಭವಾದ ಇಂತಹ ವ್ರತವನ್ನು ಆಚರಿಸಿದ ಆಚಾರ್ಯರು “ಅರಣ್ಯಕಾಚಾರ್ಯರು” ಅಡವಿ ಆಚಾರ್ಯರೆಂದೇ ಪ್ರಸಿದ್ಧರಾದರು. ಅವರ ಮುಂದಿನ ವಂಶವೆಲ್ಲ ಅಡವಿ ವಂಶವೆಂದೇ ಪ್ರಸಿದ್ಧವಾಯಿತು.

ಪ್ರತಿನಿತ್ಯವೂ ಉತ್ತರಾತ್ರಿಯಲ್ಲಿ ಆರು ಘಳಿಗೆ ರಾತ್ರಿ ಇರುವಾಗ ನಿದ್ರೆಯಿಂದ ಎಚ್ಚೆತ್ತು ಉಪದಿಷ್ಟ ಮಾರ್ಗದಿಂದ ಹರಿಯ ಧ್ಯಾನ ನಂತರ ನದಿಗೆ ನಡೆದು ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಮಲಪ್ರಭಾ ನದಿಯಲ್ಲಿ ಜನಾಧರ್ನನನ್ನು ಸ್ಮರಿಸಿ ನದ್ಯಭಿಮಾನಿ ದೇವರಿಗೆ ಅರ್ಘ್ಯ ನೀಡಿ.ಸ್ನಾನಾಂಗ ತರ್ಪಣ ನೀಡುತ್ತ ಪದ್ಮಾಸನದಲ್ಲಿ ಕುಳಿತು ಸುಮಧ್ವ ವಿಜಯವನ್ನು ಒಂದು ಸಾವಿರದ ಎಂಟು ಶ್ಲೋಕಗಳನ್ನು ಸಂಪೂರ್ಣವಾಗಿ ಪಾರಾಯಣ ಮಾಡುತ್ತಿದ್ದರು.ಇವರು ಸುಮಧ್ವ ವಿಜಯದ ಹದಿನಾರು ಸರ್ಗಗಳ ಪ್ರಮೇಯಗಳನ್ನು ಹಾಗೂ ಒಂದೊಂದು ಸ್ವರ್ಗದ ಫಲವನ್ನು ಪ್ರತ್ಯೇಕವಾಗಿ ತಿಳಿಸುವ “ಶ್ರೀ ಮತ್ಸುಮಧ್ವವಿಜಯ ಪ್ರಮೇಯ ಫಲ ಮಾಲಿಕಾ”ಎಂಬ ಸುಂದರ ಎಪ್ಪತ್ತೆರಡು ಶ್ಲೋಕಗಳ ಕೃತಿಯೊಂದನ್ನು ರಚಿಸಿರುವರು.

ಇವರು ಪ್ರತಿನಿತ್ಯ ಸೂರ್ಯಾಸ್ತದ ಸಮಯಕ್ಕೆ ಎರಡು ಘಳಿಗೆ,ಸಾಯಂಕಾಲ ಪೂಜೆ ಇತ್ಯಾದಿಗಳನ್ನು ಮುಗಿಸಿ ನಂತರ ಎಂಟು ಘಳಿಗೆಗಳ ಕಾಲ ಗ್ರಂಥಾವಲೋಕನ ಹಾಗೂ ಗ್ರಂಥ ನಿರ್ಮಾಣಕ್ಕಾಗಿ ಮೀಸಲಿಡುತ್ತಿದ್ದರು.ಈ ರೀತಿಯಾಗಿ ಹನ್ನೆರಡು ವರ್ಷಗಳವರೆಗೆ ವಾನಪ್ರಸ್ಥಾಶ್ರಮವನ್ನು ಆಚರಿಸಿ ಅನಿತರ ಸಾಧಾರಣ ವೈರಾಗ್ಯದಿಂದ,ಅಡವೀ ಆಚಾರ್ಯರು,ಅರಣ್ಯಕಾಚಾರ್ಯರು,ಅವಧೂತ ಶಿರೋಮಣಿಗಳು ಎಂದು ಪ್ರಖ್ಯಾತರಾದ ಅಡವೀ ಆಚಾರ್ಯರು ತಮ್ಮ ವಾನಪ್ರಸ್ಥದ ಅವಧಿಯಲ್ಲಿಯೇ ಅನೇಕ ಗ್ರಂಥಗಳನ್ನು ಬರೆದಿದ್ದು.ಇವರ ಗ್ರಂಥಗಳು ಇಷ್ಟೇ ಎಂದು ನಿಖರವಾಗಿ ತಿಳಿದು ಬಂದಿಲ್ಲ.

ಮುನವಳ್ಳಿಯಲ್ಲಿ ಜಯತೀರ್ಥಾಚಾರ್ಯರ ಕೀರ್ತಿ ದಿನದಿನಕ್ಕೆ ಬೆಳೆಯ ತೊಡಗಿತು. ಇವರನ್ನು ಸೇವಿಸಿ ಆನಂದಿಸುವವರಂತೆ ಇವರನ್ನು ದೂಷಿಸುವ ಮತ್ಸರಿಗಳ ಮಾತ್ಸರ್ಯವೂ ಬೆಳೆಯಿತು. ಗುಣ ಮತ್ಸರಿಗಳು ಎಲ್ಲ ಕಾಲದಲ್ಲಿಯೂ ಇರುವವರೇ ಅಂತಹ ಮಾತ್ಸರ್ಯಯುಕ್ತರಾದ ಕೆಲವು ಕುಹಕಿಗಳು ಇವರನ್ನು ನಿಂದಿಸುತ್ತಿದ್ದರು. ಇವರ ಶಿಷ್ಯ ಸಂಪತ್ತನ್ನು ಕಂಡು ಕರುಬಿದ ಕೆಲವು ಅಸೂಯಾಗ್ರಸ್ತರು ಇವರ ಶಿಷ್ಯರನ್ನು ನಿಂದಿಸಿದರು. ಇವರು ಮಧ್ಯಾಹ್ನದವರೆಗೆ ಶ್ರವಣ ಮಾಡಿ ಪಂಡಿತರಾದರು, ಇವರ ಗುರುಗಳು ಎರಡು ಘಳಿಗೆ ಮಾತ್ರ ಶ್ರವಣದಿಂದ ವಿದ್ವಾಂಸರು, ಅವರ ಗುರುಗಳಂತೂ ಅಧ್ಯಯನವೇ ಮಾಡದೇ ಚಿಟಿಕೆ ಒಳಗೆ ಪಂಡಿತರಾದರು, ಎಷ್ಟೋ ದಿವಸಗಳವರೆಗೆ ವಾಖ್ಯಾರ್ಥ ವಿಚಾರಗಳನ್ನು ಮಾಡಿದರೂ ದೊರಕದ ವಿದ್ಯೆಯು ಇವರಿಗೆ ಸುಮ್ಮನೆ ಶ್ರವಣ ಮಾತ್ರದಿಂದ ಹೇಗೆ ದೊರಕಲು ಸಾಧ್ಯ ಎಂಬಿತ್ಯಾದಿಯಾಗಿ ದೂಷಣೆ ಮಾಡಿದರು.

ಈ ರೀತಿಯಾಗಿ ಅನೇಕರು ನಿಂದಿಸುತ್ತಾರೆಂಬುದನ್ನು ತಿಳಿದು ಕೂಡ ಜಯತೀರ್ಥಾಚಾರ್ಯರು ಏನೂ ಹೇಳಲಿಲ್ಲ. ಮುಗುಳ್ನಕ್ಕು ಸುಮ್ಮನಾದರು ಅಷ್ಟೆ. ಕೆಲವು ಶಿಷ್ಯರು ಬಂದು ಹೀಗೆ ನಿಂದಿಸುವುದನ್ನು ಕೇಳಿ ಕೂಡ ಹೇಗೆ ಸುಮ್ಮನಿರುವಿರಿ ಎಂದು ಪ್ರಶ್ನೆ ಮಾಡಲು ಜಯತೀರ್ಥಾಚಾರ್ಯರು ಮುಗುಳು ನಗುತ್ತ ಉತ್ತರಿಸಿದರು.

ಅಯೋಗ್ಯರ ನಿಂದೆಯನ್ನು ಮನಸಿಗೆ ತಂದು ಕೊಳ್ಳಬೇಡಿರಿ. ಖಳರ ನಿಂದೆಯಿಂದ ನಮಗೇನು ಹಾನಿಯಿಲ್ಲ “ಖಳರ ನಿಂದೆಯಲೇನು ಆಗುವುದು | ಮುಖ್ಯ ತಮಸಿನ ಒಳಗೆ ತಾವೇ | ಬೊಕ್ಕ ಬೋರಲ ಬಿದ್ದು ಅದರೊಳು ಸಿಕ್ಕು ಒದ್ದಾಡುವರು ಅಲ್ಲೆ ದಿಕ್ಕು ಕಾಣದಲೆ” ಯೋಗ್ಯರು ಸಜ್ಜನರನ್ನು ನಿಂದಿಸಿದರೆ ಅದು ಅವರ ಪ್ರಾರಬ್ಧಕ್ಕನುಗುಣವಾಗಿ ಅವರ ಪೂರ್ವ ಜನ್ಮಾರ್ಜಿತ ಪುಣ್ಯ ನಾಶ ಮಾಡುತ್ತದೆ ಎಂದು ತಿಳಿದು ತಾನು ಮಾತ್ರ ಪ್ರತಿಕ್ರಿಯಿಸದೇ ಸುಮ್ಮನಿರಬೇಕು. ಉತ್ತರ ನೀಡಿದರೆ ಕಲಹ ಪರಂಪರೆ ಹೀಗೆ ಮುಂದುವರೆದೀತು. ಸ್ತುತಿ ನಿಂದೆಗಳಿಗೆ ಶಿಲಾಸದೃಶನಾಗಿ ನಿಂತು ತನ್ನ ಉದ್ಧಾರ ತಾನೇ ಮಾಡಿ ಕೊಂಡವನೇ ಜಾಣ ಎಂದು ಉಪದೇಶ ನೀಡಿದರು.

ತಮ್ಮ ಗುರುಗಳ ಸ್ಥಿತ ಪ್ರಜ್ಞತೆಯನ್ನು ಕಂಡ ಅವರ ಶಿಷ್ಯರುಗಳು ತಮ್ಮ ಗುರುಗಳ ಉನ್ನತ ಚಿಂತನೆಯನ್ನು ಅರಿತು ಗುರು ಭಕ್ತಿ ಪರವಶರಾದರು. ಈ ಸಮಯದಲ್ಲೇ ಅವರಿಗೆ ಪತ್ನಿ ವಿಯೋಗವಾಯಿತು.ಗುರುಪತ್ನಿಗಾಗಿ ಶೋಕಿಸುತ್ತಿದ್ದ ಶಿಷ್ಯರನ್ನು ಹಾಗೂ ತಾಯಿಗಾಗಿ ಶೋಕಿಸುತ್ತಿದ್ದ ಪುತ್ರ ಕೃಷ್ಣಾಚಾರ್ಯರನ್ನು ಆಚಾರ್ಯರೇ ಸಮಾಧಾನ ಪಡಿಸಿದರು. ತಾವೇ ಗ್ರಂಥಗಳಲ್ಲಿ ತಿಳಿಸಿದಂತೆ ಜೀವನ ಯಜ್ಞಕ್ಕೆ ಮರಣವೇ ಅವಭೃತ ಸ್ನಾನ, ಹುಟ್ಟಿದವನಿಗೆ ಮರಣ ತಪ್ಪದು, ಅವಶ್ಯವಾಗಿ ನಡೆಯುವುದಕ್ಕೆ ಶೋಕಿಸಿ ಪ್ರಯೋಜನವಿಲ್ಲ. ಪುಣ್ಯ ಸಾಧನ ಮಾಡಿಕೊಂಡು ನಿರಂತರ ಭಗವತ್ಸ್ಮರಣೆಯನ್ನು ಮಾಡುತ್ತಾ ಮರಣಕ್ಕೆ ಸನ್ನದ್ಧರಾಗಿರಬೇಕು. ಹಳೆಯ ವಸ್ತ್ರವನ್ನು ತೆಗೆದು ಹೊಸ ವಸ್ತ್ರಧಾರಣೆ ಮಾಡಿದ ಹಾಗೆ, ಹಳೆಯ ಶರೀರವು ಕಳಚಿ ಮತ್ತೊಂದು ಶರೀರ ಪ್ರಾಪ್ತವಾಗುತ್ತದೆ. ಅದಕ್ಕಾಗಿ ಶೋಕಿಸಿ ಪ್ರಯೋಜನವಿಲ್ಲವೆಂದು ತಿಳಿಸಿದರು.

ಈ ಅವಧೂತ ಶಿಖಾಮಣಿಗಳು ಪ್ರತಿ ನಿತ್ಯ ಆಹ್ನಿಕ ಮಾಡುವ ಕಾಲದಲ್ಲಿ ಇವರ ಶಿಷ್ಯರು ಇವರಿಗೆ ತಿಳಿಯದಂತೆ ಒಂದು ತಾಮ್ರದ ಪುಟ್ಟ ದೊಡ್ಡ ಅರ್ಧಾಣೆ ಯನ್ನು ಇವರ ಆಸನದ ಬುಡದಲ್ಲಿ ಇಟ್ಟಿರುತ್ತಿದ್ದರು. ಶ್ಲೋಕಗಳಿಂದ ರಮಾ ಸ್ತೋತ್ರವನ್ನು ನಿತ್ಯವು ಅಭಿಮಯಿಸುತ್ತಿದ್ದರು. ಪ್ರಾತರಾಹ್ನಿಕ ಮುಗಿದ ಮೇಲೆ ಆ ಆಸನ ಬುಡದಲ್ಲಿಯ ಆ ತಾಮ್ರತನವು ಚಿನ್ನವಾಗುತ್ತಿತ್ತು. ಈ ಚಿನ್ನದ ನಾಣ್ಯವನ್ನು ಮಾರಿ 200 ಜನ ಶಿಷ್ಯರಿಗೆ ಮೃಷ್ಟಾನ್ನ ಭೋಜನ ನಡೆಯುತ್ತಿತ್ತು. ಈ ರೀತಿ ಒಂದು ವರ್ಷ ನಡೆಯಿತು.

ಇತಿದೇವೀಸ್ತವಂಪುಣ್ಯಂ ಸರ್ವಪಾಪ ಪ್ರಣಾಶನಾಂ
ಯಃಪಠೇತ್ ಶ್ರುಣುಯಾದ್ವಾಪಿ ಸ ಮುಕ್ತೊ ನಾತ್ರ ಸಂದಯಃ||

ಕಾರಣಾಂತರದಿಂದ ಇವರಿಗೆ ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಸಂಧ ತೀರ್ಥರಿಂದ ಬಹಿಷ್ಕಾರ ಪತ್ರ ಬಂದಿತು. ಅದನ್ನು ಮಾನ್ಯ ಮಾಡಿ ಶ್ರೀಗಳವರಿದ್ದಲ್ಲಿಗೆ ಹೋಗಿ ಅವರು ಬಿಡಾರ ಮಾಡಿದ ಗೃಹದ ಸುತ್ತಲೂ ಸುಧಾ ಪಠಣ ಮಾಡುತ್ತ ಕಸ ಬಳಿದು ಗೋಮಯದಿಂದ ಸಾರಿಸಿ ಭಗವ ರೂಪಗಳನ್ನು ರಂಗವಲ್ಲಿಯಿಂದ ಅಲಂಕರಿಸಿ ಜನರು ಏಳುವುದರಲ್ಲಿಯೇ ಅದೃಶ್ಯರಾಗುತ್ತಿದ್ದರು. ಹೀಗೆ ಎಷ್ಟೋ ದಿನ ನಡೆಯಿತು.ಮುಂದೆ ಶ್ರೀ ಸತ್ಯವರ ತೀರ್ಥರು ಪೀಠಕ್ಕೆ ಬಂದರು. ಇವರು ನಿತ್ಯವೂ ಇದನ್ನು ನೋಡಿ ಆಶ್ಚರ್ಯಚಕಿತರಾಗಿ ಯಾರು ಹೀಗೆ ಮಾಡುತ್ತಾರೆಂಬುದನ್ನು ಪತ್ತೆ ಮಾಡಬೇಕೆಂದು ಕರದೀಪ ಹಿಡಿಸಿಕೊಂಡು ಬಂದು ಇವರನ್ನು ವಿಚಾರಿಸಲಾಗಿ ತಮಗೆ ಮಠದಿಂದ ಬಹಿಷ್ಕಾರಾಜ್ಞೆ ಆಗಿದೆ . ಅದರ ನಿವಾರಣಕ್ಕೆ ಗುರ್ವನುಗ್ರಹಕ್ಕಾಗಿ ಈ ರೀತಿ ಸೇವಾನಿರತನಾಗಿದ್ದೇನೆಂದು ಬಿನ್ನವಿಸಿದರು. ನಿಮ್ಮಂಥ ವರಿಗೆ ಯಾರು ಬಹಿಷ್ಕಾರ ಪತ್ರ ಕಳಿಸಿದ್ದೆಂದು ಖಿನ್ನರಾಗಿ ಸನ್ಮಾನ ಮಾಡಿ ಸಮ್ಮುಖದಲ್ಲಿ ಕೂಡಿಸಿಕೊಂಡು ಭೋಜನಾದಿಗಳನ್ನು ಮಾಡಿಸಿದರು.

ತಮ್ಮ 45 ನೇ ವಯಸ್ಸಿನಲ್ಲಿ ಉತ್ತರಾದಿ ಮತದ ಶ್ರೀ ಸತ್ಯವರತೀರ್ಥ ರಿಂದ ತುರೀಯಾಶ್ರಮವನ್ನು ಸ್ವೀಕರಿಸಿ ಶ್ರೀ ವಿಷ್ಣು ತೀರ್ಥರೆಂದು ನಾಮವನ್ನು ಪಡೆದರು. ಉತ್ತರಾದಿ ಮಠದ ಸಂಸ್ಥಾನಾಧಿಪತ್ಯ ಕ್ಕೆ ಆಗಲೀ ಬಹು ಜನ ಶಿಷ್ಯ ಸಂಪತ್ತಿಗಾಗಲಿ ಆ ಮಠದ ಅಪರಿಮಿತ ಐಶ್ವರ್ಯಕ್ಕಾಗಲೀ ಇವರು ಆಶ್ರಮವನ್ನು ಹೊಂದಲಿಲ್ಲ. ಕೇವಲ ವೈರಾಗ್ಯದಿಂದ ಸನ್ಯಾಸಾಶ್ರಮವನ್ನು ಹೊಂದಿ ಸಮಲೋಷ್ಠಾಶ್ಮಕಾಂಚನರಾಗಿ ಶಿಷ್ಯರ ಉದ್ಧಾರ ಮಾಡಿದರು. ಇವರು 12 ವರ್ಷ ಅರಣ್ಯದಲ್ಲಿ ವಾಸವಾಗಿದ್ದರಿಂದ ಇವರನ್ನು ಆರಣ್ಯಕಾಚಾರ್ಯರು (ಅಡವಿಸ್ವಾಮಿಗಳು) ಎಂದು ಜನ ಕರೆದರು.ಇವರು ಶಿಷ್ಯರಿಗೆ ಪಾಠ ಪ್ರವಚನ ಮಾಡಿಸುತ್ತ ಸಂಚಾರ ಮಾಡುತ್ತಿದ್ದರು

ಸಂಚಾರ ಕ್ರಮದಿಂದ ಕಿನ್ನಾಳ ಗ್ರಾಮಕ್ಕೆ ಬಂದು ಆ ಗ್ರಾಮದ ದೇಸಾಯ ರಿಗೆ ಬಂದ ವಿಪತ್ತನ್ನು ಸಂಹರಿಸಿ 108 ಸಾರೆ ಸುಧಾ ಪಾಠ ಪ್ರವಚನ ಜರುಗಿಸಿ.ರುದ್ರಾಂಶ ಸಂಭೂತರೆಂದೇ ಜನ ನಂಬಿರುವ ಈ ಮಹನೀಯರು ಕ್ರಿ.ಶ.1806 ನೇ ಇಸ್ವಿಯ ಮಾಘ ಕೃಷ್ಣ ತ್ರಯೋದಶಿ(ಮಹಾ ಶಿವರಾತ್ರಿ) ದಿನದಂದು ದಕ್ಷಿಣ ಬದರಿ ಕ್ಷೇತ್ರವೆಂದು ಪ್ರಸಿದ್ದವಾದ ಮಾದಿನೂರಿನಲ್ಲಿ ವೃಂದಾವನ ಪ್ರವೇಶ ಮಾಡುವ ಮೂಲಕ ಇಂದಿಗೂ ಭಕ್ತರ ಕಾಮಧೇನುವಾಗಿ ಜನರನ್ನು ಭಕ್ತಿಭಾವದ ಮೂಲಕ ಆಕರ್ಷಿಸಿದ್ದು, ಇವರ ಆರಾಧನೆ ಪ್ರತಿವರ್ಷವೂ ಜರುಗುತ್ತ ಬರುತ್ತಿರುವುದಕ್ಕೆ ಸಾಕ್ಷಿ.

ಇಲ್ಲಿಯವರೆಗೆ ಉಪಲಬ್ಧವಾದ ವಿಷ್ಣುತೀರ್ಥರ ಕೃತಿಗಳು ಸುಮಾರು ಹತ್ತೊಂಬತ್ತು ಇದರಲ್ಲಿ ಸುಮಧ್ವ ವಿಜಯ, ಪ್ರಮೇಯ ಫಲಮಾಲಿಕಾ ಮತ್ತು ರಮಾಸ್ತೋತ್ರ ಎರಡನ್ನು ಬಿಟ್ಟರೆ ಉಳಿದೆಲ್ಲ ಕೃತಿಗಳು ಪ್ರಾಯಶಃ ಮುನಿವಳ್ಳಿಯಲ್ಲಿಯೇ(ಸನ್ಯಾಸಕ್ಕೆ ಪೂರ್ವದಲ್ಲಿಯೇ) ರಚಿತವಾದವುಗಳು ಇವುಗಳಲ್ಲಿ ಸ್ವತಂತ್ರ ಗ್ರಂಥಗಳು, ಟಿಪ್ಪಣೀ ಗ್ರಂಥಗಳು, ಪ್ರಮೇಯ ಸಂಗ್ರಹ, ಸ್ತೋತ್ರಗಳು, ಪತ್ರ ಸಾಹಿತ್ಯ ಇತ್ಯಾದಿಯಾಗಿ ಬಹಳ ವಿಸ್ತ್ರತವಾಗಿದೆ ಇವರ ಗ್ರಂಥ ಪ್ರಪಂಚ.ಇವರ ಸ್ಮರಣೆಯು ಇಂದಿಗೂ ಮುನವಳ್ಳಿಯಲ್ಲಿ ಆಶ್ರಮಕಟ್ಟೆ (ಅಶ್ವತ್ಥಕಟ್ಟೆ) ಎಂದು ಕರೆಯಲಾಗುವ ಸ್ಥಳ ಹಾಗೂ ಮಾದನೂರಲ್ಲಿ ಇವರು ನೆಲೆಸಿದ ಹಲವು ಸ್ಥಳದಲ್ಲಿ ಅಡವಿ ಆಚಾರ್ಯರ ಸ್ಮರಣೆಯ ಕಾರ್ಯಕ್ರಮಗಳು ನಡೆಯುತ್ತಿವೆ.


ವೈ.ಬಿ.ಕಡಕೋಳ(ಶಿಕ್ಷಕರು)
ಮಾರುತಿ ಬಡಾವಣೆ, ಸಿಂದೋಗಿ ಕ್ರಾಸ್.
ಮುನವಳ್ಳಿ-591117
ತಾಲೂಕ – ಸವದತ್ತಿ ಜಿಲ್ಲೆ- ಬೆಳಗಾವಿ
8971117442 9449518400

error: Content is protected !!
Join WhatsApp Group