ಕಲ್ಲೋಳಿಯಲ್ಲಿ ತಲ್ಲೂರು ರಾಯನಗೌಡರ ವಿಚಾರ ಸಂಕಿರಣ

Must Read

ಕೊರೋನಾ ಸಮರ್ಥವಾಗಿ ಎದುರಿಸಲು ಲಸಿಕೆ ಪಡೆಯಿರಿ – ಡಾ.ಶಾಂತವೀರ

ಸಿಂದಗಿ: ಕೋವಿಡ್ ಲಸಿಕೆ ಪಡೆಯುವುದರಿಂದ ಕೋವಿಡ್ ಸೋಂಕು ತಗುಲಿದರು ಯಾವುದೇ ಅಪಾಯವಾಗುವದಿಲ್ಲ ಲಸಿಕೆಯ ಬಗ್ಗೆ ತಪ್ಪು ಗ್ರಹಿಕೆ ಬಿಟ್ಟು 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ...

ಪ್ರಕೃತಿಯೇ ನಿಜವಾದ ದೇವರು – ಶಾಂತ ಗಂಗಾಧರ ಶ್ರೀಗಳು

ಸಿಂದಗಿ: ಪ್ರಕೃತಿಯೇ ನಿಜವಾದ ದೇವರು ನಿಸರ್ಗವೇ ಕೂಡಲ ಸಂಗಮ ಎಂದು ಹೇಳಿದ ಬಸವಣ್ಣನವರ ಹಾಗೂ ಶರಣೆ ಮಾತುಗಳು ಅಕ್ಷರಶಃ ಪ್ರಸ್ತುತವಾಗಿವೆ. ಎಂದು ಪಟ್ಟಣದ ಗುರುದೇವಾಶ್ರಮದ ಶ್ರೀ ಶಾಂತಗಂಗಾಧರ...

ಉತ್ತಮ ಸಮಾಜ ನಿರ್ಮಾಣದಲ್ಲಿ ಶರಣರ ಪಾತ್ರ ಕುರಿತು ಪ್ರವಚನ

ಸಿಂದಗಿ: ಪ್ರತಿಯೊಬ್ಬರಲ್ಲಿ ವಚನ ಸಾಹಿತ್ಯ ಭಂಡಾರವೇ ಅಡಗಿರುತ್ತದೆ ಅದನ್ನು ಪ್ರಸ್ತುತ ಪಡಿಸುವ ಸಾಮರ್ಥ್ಯ ಹೊಂದಿದವರಿಗೆ ಮಾತ್ರ ಸಂಗ್ರಹ ಮಾಡುವ ಧ್ಯೇಯ ಇರುತ್ತದೆ ಅಂಥವರ ಸಾಲಿನಲ್ಲಿ ಶ್ರೀ ಶಾಂತಗಂಗಾಧರ...

ಈ ನಾಡಿನ ಇತಿಹಾಸದಲ್ಲಿ ಹುದುಗಿಹೋದ ಕಿತ್ತೂರು ಸಂಸ್ಥಾನವನ್ನು ಶೋಧಿಸಿ.ನಂತರ ರಾಣಿ ಚನ್ನಮ್ಮ ಇತಿಹಾಸ ಮಂಡಲ ಸ್ಥಾಪನೆಗೆ ಕಾರಣೀಭೂತರಾಗಿ ಬಹುದೊಡ್ಡ ಕೊಡುಗೆ ನೀಡಿದ ಮಹಾನುಭಾವರು ತಲ್ಲೂರು ರಾಯನಗೌಡರು. ಅವರ ಕುರಿತು ಕನ್ನಡ ಅಧ್ಯಯನ ಪೀಠದ ಅಧ್ಯಾಪಕರಾದ ಡಾ.ಮೈತ್ರೇಯಣಿ ಗದಿಗೆಪ್ಪಗೌಡರ ಇವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೂಡ ಸಾಗಿದ್ದು ಈ ದಿಸೆಯಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ ಹಾಗೂ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮದರ್ಜೆ ಕಾಲೇಜು.ಕಲ್ಲೋಳಿ ಮೂಡಲಗಿ ತಾಲೂಕಿನಲ್ಲಿ ಪೆಬ್ರುವರಿ 24 ರಂದು ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿದೆ.

ಈ ವಿಚಾರ ಸಂಕಿರಣವನ್ನು ಶ್ರೀ ಬಸನಗೌಡ ಶಿವಗೌಡ ಪಾಟೀಲ. ಅಧ್ಯಕ್ಷರು ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆ ಕಲ್ಲೋಳಿ ಇವರು ಉದ್ಘಾಟಿಸಲಿದ್ದು ಮುಖ್ಯ ಅತಿಥಿಗಳಾದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಶ್ರೀ ಹನಿಮಂತ ಶಿಗ್ಗಾಂವ ಆಗಮಿಸಲಿದ್ದು.ರಾಣಿ ಚನ್ನಮ್ಮ ಅಧ್ಯಯನ ಪೀಠದ ಅಧ್ಯಕ್ಷರಾದ ಶ್ರೀ ಎಸ್.ಎಂ.ಗಂಗಾಧರಯ್ಯ ಇವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗುತ್ತಿದ್ದು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ.ಆರ್.ಎಂ.ಷಡಕ್ಷರಯ್ಯ ಆಶಯ ನುಡಿಗಳನ್ನಾಡಲಿರುವರು.

- Advertisement -

ವಿಚಾರ ಸಂಕಿರಣದ ಮೊದಲ ಗೋಷ್ಠಿಯಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಅಧ್ಯಾಪಕರಾದ ರಾಯನಗೌಡರ ಕುರಿತು ಪಿ.ಎಚ್.ಡಿ.ಮಾರ್ಗದರ್ಶಕರಾದ ಡಾ.ಮೈತ್ರೇಯಣಿ ಗದಿಗೆಪ್ಪಗೌಡರ ರಾಯನಗೌಡರ ಜೀವನಾದರ್ಶಗಳನ್ನು ಕುರಿತು ನಂತರ ಕಲ್ಲೋಳಿಯ ಸಾಹಿತಿಗಳು ಡಾ.ಸುರೇಶ ಹನಗಂಡಿಯವರು ಕಿತ್ತೂರು ರಾಣಿ ಚನ್ನಮ್ಮ ಸಂಶೋಧನೆ ಮತ್ತು ಇತಿಹಾಸ ಮಂಡಳ ಸಂರಚನೆ ಬೆಳವಣಿಗೆ ಕುರಿತು ವಿಷಯ ಮಂಡಿಸಲಿರುವರು.

ಎರಡನೆಯ ಗೋಷ್ಠಿಯಲ್ಲಿ ಬೆಳಗಾವಿಯ ಸಾಹಿತಿಗಳಾದ ಪ್ರಕಾಶ ಗಿರಿಮಲ್ಲನವರ ಕಿತ್ತೂರು ರಾಣಿ ಚನ್ನಮ್ಮ ಇತಿಹಾಸ ಮತ್ತು ಸಂಶೋಧನಾ ಮಂಡಳದ ಸಾಹಿತ್ಯ ಕುರಿತು.ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಮುನವಳ್ಳಿಯ ಸಾಹಿತಿಗಳಾದ ಶ್ರೀ ವೈ.ಬಿ.ಕಡಕೋಳ ತಲ್ಲೂರು ರಾಯನಗೌಡರ ಶೋಧಗಳು ಕುರಿತು ಮಾತನಾಡಲಿರುವರು.

ಮೂರನೆಯ ಗೋಷ್ಠಿಯಲ್ಲಿ ಮದ್ರಾಸ್ ವಿಶ್ವವಿದ್ಯಾಲಯ ಚಿನ್ನೈ ನ ಅಧ್ಯಾಪಕರಾದ ಡಾ.ಎಂ.ರಂಗಸ್ವಾಮಿಯವರು ಕಿತ್ತೂರು ಚರಿತ್ರೆಯ ಮರು ನಿರ್ಮಾಣದ ಪ್ರಯತ್ನಗಳು ಕುರಿತು. ನಂತರ ಗೋಕಾಕ ಬಯಲಾಟದ ಕಲಾವಿದರಾದ ಈಶ್ವರಚಂದ್ರ ಬೆಟಗೇರಿಯವರು ಕಿತ್ತೂರು ಚನ್ನಮ್ಮ ಪಾತ್ರದ ಪ್ರ್ರಾತ್ಯಕ್ಷಿಕೆ ನೀಡಲಿರುವರು.

ಸಮಾರೋಪ ಸಮಾರಂಭದಲ್ಲಿ ಬೆಳಗಾವಿಯ ಸಾಹಿತಿಗಳಾದ ಯ.ರು.ಪಾಟೀಲ ಸಮಾರೋಪ ನುಡಿಗಳನ್ನಾಡಲಿದ್ದು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಣಿ ಚನ್ನಮ್ಮ ಅಧ್ಯಯನ ಪೀಠದ ಅಧ್ಯಕ್ಷರಾದ ಶ್ರೀ ಎಸ್.ಎಂ.ಗಂಗಾಧರಯ್ಯ ವಹಿಸಲಿದ್ದು. ವಿಶ್ವವಿದ್ಯಾಲಯದ ಮತ್ತು ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮದರ್ಜೆ ಕಾಲೇಜು.ಕಲ್ಲೋಳಿ ಆಡಳಿತಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿರುವರು.

ತಲ್ಲೂರು ರಾಯನಗೌಡರು

ರಾಯನಗೌಡರು 28-2-1910 ರಂದು ತಲ್ಲೂರ ಗೌಡರ ಮನೆತನದಲ್ಲಿ ಜನಿಸಿದರು.ಇವರ ತಂದೆ ಲಿಂಗನಗೌಡ ತಾಯಿ ಬಸಮ್ಮ್ಪ. ಅವರಿಗೆ ಇಬ್ಬರು ಗಂಡು ಮಕ್ಕಳಲ್ಲಿ ಎರಡನೆಯವರಾಗಿ ಜನಿಸಿದ ರಾಯನಗೌಡರು ತಮ್ಮ ಬಾಲ್ಯವನ್ನು ತಲ್ಲೂರು ಮತ್ತು ಮುರಗೋಡದಲ್ಲಿ ಕಳೆದರು.ಚಿಕ್ಕವರಿದ್ದಾಗಲೇ ತಾಯಿಯನ್ನು ಕಳೆದುಕೊಂಡ ಇವರ ಬದುಕು ಸಾಗಿದ್ದು ಅಜ್ಜಿ ಶ್ರೀಮತಿ ಸಿದ್ದಲಿಂಗಮ್ಮನವರ ಲಾಲನೆ ಪೋಷಣೆಯಲ್ಲಿ.ಸಿದ್ದಲಿಂಗಮ್ಮನವರು ರಾಯನಗೌಡರನ್ನು ತಾಯಿಯಿಲ್ಲದ ತಬ್ಬಲಿಯೆಂದು ಬಹಳ ಅಕ್ಕರೆಯಿಂದ ಅತ್ಯಂತ ಮುದ್ದು ಮುದ್ದಾಗಿ ಬೆಳೆಸಿದರು.ಪರಿಣಾಮವಾಗಿ ರಾಯನಗೌಡರು ಬಹು ತುಂಟ ಬಾಲಕನಾಗಿ ಬೆಳೆದರು.ಅವರ ತುಂಟುತನವು ಶಾಲೆ ಕಾಲೇಜುವರೆಗೂ ಬಂದಿತ್ತು.

ವಿದ್ಯಾಭ್ಯಾಸ ಮತ್ತು ಪರಿಸರ

ರಾಯನಗೌಡರ ಪ್ರಾಥಮಿಕ ಶಿಕ್ಷಣ ತಲ್ಲೂರಿನಲ್ಲಿಯೇ ಆಯಿತು. ಅವರ ಶಿಕ್ಷಕರಾದ ಶ್ರೀ ಬಸಪ್ಪ ಮಲಕಣ್ಣವರ.ಬಸಲಿಂಗಪ್ಪ ಕಾಶಪ್ಪನವರ ಹಾಗೂ ದುಂಡಯ್ಯ ತೊರಗಲ್ಲಮಠರು ರಾಯನಗೌಡರ ಬಾಲ ಪ್ರತಿಭೆಯನ್ನು ಹೊರತರಲು ಶ್ರಮ ಪಟ್ಟಿದ್ದರು. ರಾಯನಗೌಡರು ತಮ್ಮ ಶಿಕ್ಷಣ ಮುಗಿದ ಮೇಲೂ ಹಾಗೂ ಅವರು ಸಾಮಾಜಿಕ ವ್ಯಕ್ತಿಯಾದ ಮೇಲೂ ಈ ಗುರುಗಳೊಡನೆ ಸ್ನೇಹ ಸಂಬಂಧವನ್ನು ಇಟ್ಟುಕೊಂಡಿದ್ದರು.ಮುಲ್ಕಿ ಪರೀಕ್ಷೆಯ ನಂತರ ಬಿ.ಎ.ಪದವಿಯನ್ನು ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ 1932 ರಲ್ಲಿ ಸೇರಿದರು.ನಂತರ ಎಲ್.ಎಲ್.ಬಿ. ಅಭ್ಯಸಿಸಲು ಮುಂಬೈಗೆ ತೆರಳಿದರು.

ಪ್ರಭಾವ ಮತ್ತು ಪ್ರೇರಣೆ

ರಾಯನಗೌಡರಿಗೆ ಸ್ವಾತಂತ್ರ್ಯದ ಹೋರಾಟದ ಪ್ರಭಾವ ಗಾಂಧೀಜಿಯವರ ಭಾಷಣಗಳ ಮೂಲಕ ಆಯಿತು.ನಂತರ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡರು.1942 ರ ವರೆಗಿನ ಅವರ ಹೋರಾಟದ ಪುಟಗಳು ಅಮೋಘ.ನಂತರ ಶರಣಾಗತರಾಗಿ ಜೈಲುವಾಸ.

ಸ್ವಾತಂತ್ರ್ಯ ನಂತರ ಸಂಶೋಧನೆ ಸಮಾಜಸೇವೆ ಇತರ ಚಟುವಟಿಕೆಗಳನ್ನು ಬೈಲಹೊಂಗಲದಲ್ಲಿ ಆರಂಭಿಸಿದರು.ರಾಣಿ ಚನ್ನಮ್ಮ ಇತಿಹಾಸ ಮಂಡಳದ ಕಾರ್ಯದರ್ಶಿಯಾಗಿ ಜನತಾ ಸೇವಕ ಸಮಾಜ ಸಂಸ್ಥೆಯ ಚಟುವಟಿಕೆಯ ಮೂಲಕ ಕಿತ್ತೂರ ಮ್ಯೂಜಿಯಂ ಸ್ಥಾಪನೆ ಹಾಗೂ ಮಲ್ಲಸರ್ಜ ಕಾವ್ಯ ಸಂಪಾದನೆ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸುತ್ತ 1952 ರಲ್ಲಿ ಮುಂಬೈ ವಿಧಾನ ಸಭೆಗೆ ಗುಡಿಸಲು ಚಿನ್ಹೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲನನುಭವಿಸಿದರು.

ಸ್ವಂತ ಬಲದ ಮೇಲೆ ಪ್ರಜಾ ಸಮಾಜವಾದೀ ಪಕ್ಷದ ಸಕ್ರೀಯ ಸದಸ್ಯರಾಗಿ ಮುಂದುವರೆದರು.ಕರ್ನಾಟಕದಲ್ಲಿ ಆ ಪಕ್ಷವನ್ನು ಬಲಪಡಿಸಲು ಶ್ರಮಿಸಿದರು. ಮಾರ್ಚ 21, 1954 ರಲ್ಲಿ ಬೆಳಗಾವಿಯಲ್ಲಿ ನಡೆದ ಪಕ್ಷದ ಸಭೆಯಲ್ಲಿ ಕರ್ನಾಟಕ ಪ್ರಜಾ ಸಮಾಜವಾದಿ ಪಕ್ಷದ ಅಧ್ಯಕ್ಷರಾಗಿ ಸರ್ವಾನುಮತದಿಂದ ಚುನಾಯಿತರಾದರು.ಅವರ ಸೋಲು ಅವರನ್ನು ದೃತಿಗೆಡಿಸಿತು.ಅಷ್ಟೇ ತಮ್ಮ ಜೀವಿತಾವಧಿಯವರೆಗೂ ಅವರು ಸಮಾಜ ಸೇವೆ ಮತ್ತು ಬರವಣಿಗೆಯಲ್ಲಿ ತೊಡಗಿಸಿಕೊಂಡರು.

ರಾಯನಗೌಡರು ತಾವು ಸ್ಥಾಪಿಸಿದ್ದ ಜನತಾ ಸೇವಕ ಸಮಾಜ(ಸಾಹಿತ್ಯ) ದಿಂದ “ಕರ್ನಾಟಕದ ಗಡಿಗೆರೆಗಳು ಭಾಗ-1” ಎಂಬ ಪುಸ್ತಕವನ್ನು ಬರೆದು ಕರ್ನಾಟಕದ ವಿವಿಧ ಭಾಗಗಳು ಬೇರೆ ಬೇರೆ ರಾಜ್ಯದಲ್ಲಿ ಹಂಚಿಹೋಗಿದ್ದನ್ನು ಕನ್ನಡಿಗರ ಅವಗಾಹನೆಗೆ ತಂದಿರುವರು. ಹೀಗೆ ಅವರ ರಾಜಕೀಯ ಮತ್ತು ಸಾಮಾಜಿಕ ಬದುಕಿನ ಮೇಲೆ ಬೆಳಕು ಚಲ್ಲುವ ಅವರ ಕೈಬರಹದ ಮತ್ತು ವಿವಿಧ ಪತ್ರಿಕೆಗಳಲ್ಲಿ ಪ್ರಕಟಿತ ಅವರ ಬರಹಗಳು ಇಂದಿನ ಪೀಳಿಗಗೂ ತಲುಪಬೇಕಾಗಿದೆ.

ಇವರ ಮನೆಯಲ್ಲಿ ಇವರದೇ ಆದ ಒಂದು ಕೊಠಡಿ. ಅಲ್ಲಿ ಒಂದು ಕಟ್ಟಿಗೆಯ ಖುರ್ಚಿ.ಖಾದಿ ಗ್ರಾಮೋದ್ಯೋಗ ಭಂಡಾರದಿಂದ ತಂದಿದ್ದ ಆಯ್ದ ಸೋಪಾನಗಳು ಮಧ್ಯದಲ್ಲಿ ಹೂವಿನ ಗುಚ್ಚದಿಂದಾವೃತವಾದ ಕುಂಡ. ಅಲ್ಲಿ ತಮ್ಮ ಅರಾಮ ಕುರ್ಚಿಯಲ್ಲಿ ಕುಳಿತು ಪ್ರತಿ ದಿನ ಬೆಳಗಿನ 7 ಗಂಟೆಯಿಂದ 9 ಗಂಟೆಯವರೆಗೆ ತಮ್ಮ ನಿಕಟವರ್ತಿಗಳೊಂದಿಗೆ ಪತ್ರ ಬರೆಯುವ ದಿನಚರಿ.ಹಾಗೆಯೇ ಯಾರಾದರೂ ಭೇಟಿಗೆ ಬಂದರೆ ಅವರ ಉಭಯ ಕುಶಲೋಪಚರಿ ವಿಚಾರಿಸಿ ಅವರ ಕಾರ್ಯಕ್ಕೆ ಕೈ ಜೋಡಿಸುವುಮ್ಮಿವರ ನಿತ್ಯದ ದಿನಚರಿಯಾಗಿತ್ತು. ಎಂದು ಅವರ ಮಗಳು ದೇವಿಕಾರಾಣಿ ಹೇಳುತ್ತಾರೆ.ಎತ್ತರದ ಕಟ್ಟು ಮಸ್ತಾದ ಕಾಯ ಪ್ರತಿಭೆ ಸೂಸುವ ಕಣ್ಣು ನಯ ವಿನಯ ಗೌರವರ್ಣ ಸದಾ ಹಸನ್ಮುಖಿ ಅಪ್ಪಟ ಭಾರತೀಯ ರೈತ ನನ್ನ ತಂದೆ ಎಂದು ಅವರು ತಮ್ಮ ತಂದೆಯ ಕುರಿತು ಹೇಳುವಾಗ ಅವರ ಪೋಟೋ ನೋಡಿದರು ಸಾಕು ಅವರ ವ್ಯಕ್ತಿತ್ವ ನಮ್ಮ ಕಣ್ಮುಂದೆ ಬರುವುದು.

ಪ್ರತಿ ದಿನವೂ ತಲ್ಲೂರಲ್ಲಿ ಇದ್ದಾಗ ಮುಂಜಾವಿನ 5 ಗಂಟೆಗೆ ಎದ್ದು 2.4 ಕಿ.ಮೀ ಅಂತರದಲ್ಲಿರುವ ತಮ್ಮ ಹೊಲಗಳಿಗೆ ಭೇಟಿ ನೀಡುವುದು.ನಿಸರ್ಗದ ಬಗ್ಗೆ ತಮ್ಮ ಮಕ್ಕಳಿಗೆ ಹೇಳುತ್ತ ಸಾಗುವುದು ಅವರೊಟ್ಟಿಗೆ ಮಕ್ಕಳನ್ನು ಕರೆದುಕೊಂಡು ಸಂಚಾರಕ್ಕೆ ಹೊರಡುತ್ತಿದ್ದ ರೀತಿಯನ್ನು ಅವರ ಮಗಳು ದೇವಿಕಾರಾಣಿ ಹೇಳುವುದನ್ನು ಕೇಳಿದರೆ ನಿಜಕ್ಕೂ ಅವರ ದೈನಂದಿನ ದಿನಚರಿ ಅದ್ಬುತ ಮತ್ತು ಶಿಸ್ತಿನಿಂದ ಕೂಡಿತ್ತು ಎಂಬುದನ್ನು ನಾವು ಕಾಣಬಹುದು.

ರಾಜಕೀಯ ಬದುಕು

ಭಾರತ 1947 ರಲ್ಲಿ ಸ್ವತಂತ್ರವಾಯಿತು.ಸ್ವಾತಂತ್ರ್ಯ ನಂತರ ರಾಯನಗೌಡರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾಗಿ ರಾಜಕೀಯ ಜೀವನ ಆರಂಭಿಸಿದರು.ನಾಡಿನ ಎಲ್ಲ ನಾಯಕರೊಡನೆ ಉತ್ತಮ ಸಂಬಂಧ ಹೊಂದಿದ್ದ ರಾಯನಗೌಡರು ಚುನಾವಣೆಗೆ ನಿಲ್ಲುವ ಮಹದಾಸೆ ಹೊಂದಿದ್ದರು.ಆದರೆ ಅವರಿಗೆ ಚುನಾವಣೆ ಟಿಕೇಟು ನಿರಾಕರಿಸಲಾಯಿತು ಹೀಗಾಗಿ 1952 ಮುಂಬೈ ವಿಧಾನ ಸಭೆಗೆ ಗುಡಿಸಲು ಚಿನ್ಹೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲನನುಭವಿಸಿದರು. ಸ್ವಂತ ಬಲದ ಮೇಲೆ ಪ್ರಜಾ ಸಮಾಜವಾದೀ ಪಕ್ಷದ ಸಕ್ರೀಯ ಸದಸ್ಯರಾಗಿ ಮುಂದುವರೆದರು.

ಕರ್ನಾಟಕದಲ್ಲಿ ಆ ಪಕ್ಷವನ್ನು ಬಲಪಡಿಸಲು ಶ್ರಮಿಸಿದರು. ಮಾರ್ಚ 21,1954 ರಲ್ಲಿ ಬೆಳಗಾವಿಯಲ್ಲಿ ನಡೆದ ಪಕ್ಷದ ಸಭೆಯಲ್ಲಿ ಕರ್ನಾಟಕ ಪ್ರಜಾ ಸಮಾಜವಾದಿ ಪಕ್ಷದ ಅಧ್ಯಕ್ಷರಾಗಿ ಸರ್ವಾನುಮತದಿಂದ ಚುನಾಯಿತರಾದರು.ಅವರ ಸೋಲು ಅವರನ್ನು ದೃತಿಗೆಡಿಸಿತು. ಅಷ್ಟೇ ತಮ್ಮ ಜೀವಿತಾವಧಿಯವರೆಗೂ ಅವರು ಸಮಾಜ ಸೇವೆ ಮತ್ತು ಬರವಣಿಗೆಯಲ್ಲಿ ತೊಡಗಿಸಿಕೊಂಡರು.

ಸಾಹಿತ್ಯಕ ಜೀವನ

ರಾಯನಗೌಡರು ಮೂಲತಃ ಬರಹಗಾರರಾಗಿದ್ದರು ಇವರು ಬಿಡುವಿನ ಸಮಯವನ್ನು ಬರವಣಿಗೆಗೆ ಮೀಸಲಾಗಿರಿಸಿದ್ದರು.ರಾಯನಗೌಡರು 1946 ರಲ್ಲಿ “ಕಿತ್ತೂರು ರಾಣಿ ಚನ್ನಮ್ಮ ಇತಿಹಾಸ ಮಂಡಳ”ವನ್ನು ಸ್ಥಾಪಿಸಿ ಚನ್ನಮ್ಮ ರಾಣಿಯ ಇತಿಹಾಸ ಶೋಧನೆಗೆ ತೊಡಗಿದರು. ಈ ಸಂದರ್ಭದಲ್ಲಿ ಮಲ್ಲಸರ್ಜ ಕಾವ್ಯ ಮತ್ತು ಕಿತ್ತೂರ ಬಂಡಾಯ ಸಂಶೋಧನಾ ಕೃತಿ ಪ್ರಕಟಿಸಿದರಲ್ಲದೇ ಕರ್ನಾಟಕದ ಗಡಿರೇಖೆಗಳು, ಭೀಮಕವಿಯ ರಾಷ್ಟೀಯ ಗೀಗೀ ಪದಗಳು, ಹುತಾತ್ಮ ಸಾತಪ್ಪ ಎಂಬ ಬರಹಗಳನ್ನು ಬರೆದು ಪ್ರಕಟಿಸಿದರು.

ರಾಯನಗೌಡರ ಸಾಹಿತ್ಯವನ್ನು ನಾವು ಐದು ಗುಂಪುಗಳಾಗಿ ವಿಭಾಗಿಸಬಹುದು:

  1. ಐತಿಹಾಸಿಕ
  2. ಧಾರ್ಮಿಕ
  3. ಜನಪದ
  4. ವಿಜ್ಞಾನ
  5. ವ್ಯಕ್ತಿ ವಿಶ್ಲೇಷಣೆಗಳು

ರಾಯನಗೌಡರು ಕನಕದಾಸರು, ಅಕ್ಕಮಹಾದೇವಿ, ರೇಡಿಯೋ ನಾಟಕಗಳನ್ನು ಬರೆದಿರುವರು. ಜನಪದ ಗೀತೆಗಳಲ್ಲಿ ಶೃಂಗಾರದ ವಸ್ತು ವಡವೆಗಳು,ಕುಟುಂಬ ಚಿತ್ರಣ,ತಾಯಿ ಮಗು,ಅಣ್ಣ ತಮ್ಮ ಅಕ್ಕ ತಂಗಿ ಮುಂತಾದ ಬರಹಗಳು ಗಮನ ಸೆಳೆಯುತ್ತವೆ. ಅವರು ಬಹಳಷ್ಟು ಬರೆದ ಬರಹಗಳು ಧಾರವಾಡ ಆಕಾಶವಾಣಿಯಿಂದ ಪ್ರಸಾರವಾಗುವ ಭಾಷಣಗಳಿಗೆ ಮೀಸಲಾಗಿದ್ದವು ಹೆಚ್ಚಿನವು ಹೊರದೇಶದ ರಾಜಕೀಯ ಇತಿಹಾಸ ಭೂಗೋಲಕ್ಕೆ ಸಂಬಂಧಿಸಿದವುಗಳಾಗಿದ್ದವು.

ರಾಯನಗೌಡರ ಸಂಶೋಧನಾ ಸಾಹಿತ್ಯ

ರಾಯನಗೌಡರ ದಿನಚರಿಯಲ್ಲಿ ಅವರ ಬೆಳಗಿನ ಸಮಯ 7 ಗಂಟೆಯಿಂದ ಆಕಾಶವಾಣಿ ಧಾರವಾಡ ಕೇಂದ್ರದಿಂದ ಪ್ರಸಾರಿತ ವಾರ್ತೆಯನ್ನು ಕೇಳುವ ಮೂಲಕ ಚಹಾ ಸೇವಿಸಿ ತಮ್ಮ ಮಕ್ಕಳನ್ನು ಹತ್ತಿರಕ್ಕೆ ಕರೆದು ತಮ್ಮ ಪತ್ನಿಗೆ ಜನಪದ ಹಾಡು ಹೇಳುವಂತೆ ಕೇಳುತ್ತಿದ್ದರಂತೆ ಅವರು ಹೇಳಿದ ಜನಪದ ಹಾಡುಗಳಾದ ಹಂತಿ ಪದ.ಬೀಸುವ ಪದ.ಕುಟ್ಟುವ ಲಾವಣಿ ಪದ ಇತ್ಯಾದಿ ಅವರ ಶಬ್ದ ಉಚ್ಚಾರಣೆಯನ್ನು ಗ್ರಹಿಸುತ್ತ ಅವುಗಳನ್ನು ತಮ್ಮ ನೋಟ್ ಬುಕ್‍ದಲ್ಲಿ ಬರೆಯುತ್ತಿದ್ದರಂತೆ.

ಒಂದೊಂದು ದಿನ ಒಂದೊಂದು ವಿಷಯದ ಬಗ್ಗೆ ಮನೆಯಲ್ಲಿ ಚರ್ಚಿಸುತ್ತಿದ್ದರಂತೆ. ರಾಯನಗೌಡರು.ಹೊರಗೆ ಹೊರಟರೆ ಬೇರೆ ಎಲ್ಲಿಯೂ ಏನನ್ನೂ ತಿನ್ನುವಂತಿರಲಿಲ್ಲ. ಕಾರಣ ಅವರ ಪತ್ನಿ ಅವರಿಗೆ ಹೊರ ಹೊರಟರೆ 2 ಜೋಳದ ಇಲ್ಲವೇ ಗೋಧಿ ರೊಟ್ಟಿ(ಚಪಾತಿ).ಕೆಂಪು ಚಟ್ನಿ.ಯತೇಚ್ಚವಾಗಿ ಬೆಣ್ಣೆ, ಹಸಿ ತಪ್ಪಲು ಪಲ್ಲೆ.ಟೋಮೋಟೋ ಸವತೆಕಾಯಿ ಬುತ್ತಿ ಕಟ್ಟಿ ಕಳಿಸುವುದು ವಾಡಿಕೆ.ಎಷ್ಟೇ ಹೊತ್ತು ತಡವಾದರೂ ಮನೆಗೆ ಬಂದ ನಂತರವೇ ರಾತ್ರಿಯ ಊಟ. ಹೀಗೆ ಅವರ ದಿನಚರಿ.

ಇವರು ತಮ್ಮ ರಾಜಕೀಯ ಬದುಕಿನ ನಂಟಿನ ಜೊತೆಗೆ ಆಕಾಶವಾಣಿ ಧಾರವಾಡ ಕೇಂದ್ರಕ್ಕೆ ಚಿಂತನ ಕೃಷಿರಂಗ ಜನಪದ ಗೀತೆಗಳನ್ನು ಜನಪದ ಸಂಸ್ಕøತಿ ಕುರಿತಂತೆ ವಿಚಾರಗಳ ಭಾಷಣಗಳನ್ನು ಸಿದ್ದಪಡಿಸಿ ಮಾತನಾಡಿ ಬರುವುದು ಆಗ ಆಕಾಶವಾಣಿಯಲ್ಲಿ ಇವರ ಭಾಷಣ ಚಿಂತನಗಳು ಪ್ರಸಾರವಾಗುತ್ತಿದ್ದರೆ ಮನೆಯಲ್ಲಿ ಎಲ್ಲರೂ ಒಂದೆಡೆ ಕುಳಿತು ಅದನ್ನು ಆಲಿಸುತ್ತಿದ್ದರಂತೆ. ಹೀಗೆ ಬರೆದಿಡುವ ರೂಢಿಯನ್ನು ಅವರು ಉಳಿಸಿಕೊಂಡು ಬಂದ ಪರಿಣಾಮವೇ ಅವರ ಬರಹಗಳು ಅಂದು ಸಂಯುಕ್ತ ಕರ್ನಾಟಕ ಕರ್ಮವೀರ ವಾರಪತ್ರಿಕೆ ಪಾಟೀಲ ಪುಟ್ಟಪ್ಪನವರ ಪ್ರಪಂಚ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದವು.

ಮಲ್ಲಸರ್ಜ ಕಾವ್ಯ ಮತ್ತು ಕಿತ್ತೂರ ಬಂಡಾಯ

ಕಿತ್ತೂರಿನ ಇತಿಹಾಸಕ್ಕೆ ಸಂಬಂಧಿಸಿದಂತೆ ಲಂಡನ್‍ವರೆಗೂ ಹೋಗಿ ಅಲ್ಲಿನ ಕಿತ್ತೂರಿನ ಕಾಗದ ಪತ್ರಗಳನ್ನು ಭಾರತಕ್ಕೆ ತಂದ ಶ್ರೇಯಸ್ಸು ರಾಯನಗೌಡರಿಗೆ ಸಲ್ಲುತ್ತದೆ. 1950 ರಲ್ಲಿ ಆಗಿನ ಸಾಹಸಿ ಉದ್ಯಮಿ ಬೈಲಹೊಂಗಲದ ಬಸರೀಗಿಡದ ವೀರಪ್ಪನವರು ಭಾರತದ ಹಡಗು ಉದ್ಯಮ ಕಟ್ಟಲು ಇಂಗ್ಲೆಂಡಿಗೆ ಪ್ರಯಾಣ ಬೆಳೆಸಿದರು. ಅವರು ತಮ್ಮೊಂದಿಗೆ ತಲ್ಲೂರು ರಾಯನಗೌಡರನ್ನು ಕರೆದುಕೊಂಡು ಹೋಗಿದ್ದರು.

ಇಂಗ್ಲೆಂಡ ತಲುಪಿದ ನಂತರ ಬಸರೀಗಿಡದ ವೀರಪ್ಪನವರ ಆರೋಗ್ಯ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲಾಗದೇ ಮರಳಿ ಭಾರತಕ್ಕೆ ಬಂದರು. ಆದರೆ ತಲ್ಲೂರ ರಾಯನಗೌಡರು ಅಲ್ಲಿಯೇ ಪ್ರವಾಸ ಮುಂದುವರೆಸಿ ಲಂಡನಿನಲ್ಲಿರುವ ಇಂಡಿಯಾ ಹೌಸ್ ಮತ್ತು ಬ್ರಿಟಿಷ್ ಮ್ಯುಜಿಯಂನಲ್ಲಿರುವ ಕಿತ್ತೂರ ಸಂಸ್ಥಾನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಹುಡುಕಲು ಪ್ರಾರಂಭಿಸಿದರು.

ಆದರೆ ಅದು ಸಾಧ್ಯವಾಗಲಿಲ್ಲ.ಕಾರಣ ಇವರು ಸರಕಾರದ ಪ್ರತಿನಿಧಿಗಳಾಗಿ ಹೋಗಿರದೇ ಖಾಸಗಿ ವ್ಯಕ್ತಿಯಾಗಿ ಲಂಡನ್ ಪ್ರಯಾಣ ಕೈಗೊಂಡಿದ್ದು.ಪಟ್ಟು ಸಡಿಲಿಸದ ರಾಯನಗೌಡರು ಬ್ರಿಟನ್ ರಾಣಿ ಎಲಿಜಬೆತ್ ಅವರನ್ನು ಸಂಪರ್ಕಿಸಿದರು.

ಅಲ್ಲದೇ ಇಲ್ಲಿನ ಕಿತ್ತೂರಿನ ಇತಿಹಾಸ ಕುರಿತು ಮನವರಿಕೆ ಮಾಡಿದಾಗ ರಾಣಿಯು ಅವರಿಗೆ ಇಂಡಿಯಾ ಹೌಸ್ ಮತ್ತು ಬ್ರಿಟಿಷ ಮ್ಯುಜಿಯಂ ನೋಡಲು ಅವಕಾಶ ನೀಡಿದರು.ಅಲ್ಲಿ ಲಭ್ಯವಾದ ದಾಖಲೆಗಳನ್ನು ತಗೆದುಕೊಂಡು ಮರಳಿದರು.ಇದನ್ನು ಆಧಾರವಾಗಿಟ್ಟುಕೊಂಡು ಜಿ.ಎಸ್.ಹಾಲಪ್ಪ ಅವರುಕಿತ್ತೂರು ಇತಿಹಾಸ ಮತ್ತು ಸಂಗೊಳ್ಳಿ ರಾಯಣ್ಣ ಕೃತಿ ಪ್ರಕಟಿಸಿ ಅದರಲ್ಲಿ ರಾಯನಗೌಡರನ್ನು ಕುರಿತು ಸ್ಮರಣೆ ಮಾಡಿರುವರು.

ಮಲ್ಲಸರ್ಜ ಕಾವ್ಯ

ಇದನ್ನು ತಲ್ಲೂರ ರಾಯನಗೌಡರು ಸಂಪಾದಿಸಿರುವರು.ತಮ್ಮ ನುಡಿಗಳಲ್ಲಿ ಅವರು ಈ ಕಾವ್ಯ ಯಾರದು ಎಂಬ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದು ಇದು ಇತಿಹಾಸ ಗ್ರಂಥವೋ ಕಾವ್ಯ ಸಾಹಿತ್ಯವೋ ಇದನ್ನು ನಿರ್ಣಯಿಸುವ ಗೋಜಿಗೆ ನಾವು ಹೋಗುವುದಿಲ್ಲ. ಇದೊಂದು ಐತಿಹಾಸಿಕ ಕಾವ್ಯ. ಇಲ್ಲಿನ ನಾಯಕನು ಅವನ ಸಾಹಸಗಳು ಕಾಲ್ಪನಿಕವಲ್ಲ. ಮಲ್ಲಸರ್ಜ ಪ್ರಭುವೇ ಈ ಕೃತಿಯ ನಾಯಕ. ಆತನು ಕಿತ್ತೂರು ಆಳುತ್ತಿರುವಾಗ ಪೇಶ್ವೆ ಭಾಜೀರಾಯನು ಕರ್ನಾಟಕಕ್ಕೆ ದಂಡೆತ್ತಿ ಬಂದನು.ಮಲ್ಲಸರ್ಜ ಪ್ರಭುವು ಪೇಶ್ವೆ ಭಾಜೀರಾಯನ ಸಾಮಂತನಾಗಲಿಕ್ಕೂ ಮತ್ತು ಕಾಣಿಕೆ ಕಪ್ಪ ಒಪ್ಪಿಸಲಿಕ್ಕೂ ಸಿದ್ದನಾಗಲಿಲ್ಲ.

ಮುಂದೆ ಶೇಗುಣಸಿ ಗೌಡರು ಸಂಧಾನುಧೂತರಾಗಿ ಬಂದು ಪೇಶ್ವೆಯವರ ಬಿಡಾರಕ್ಕೆ ಕರೆತಂದರು.ಕೂಡಲೇ ಪೇಶ್ವೆ ಸರಕಾರವು ರಾಜಬಂಧಿಯಾಗಿ ಮಲ್ಲಸರ್ಜನನ್ನು ಪುಣೆಗೆ ಒಯ್ದರು. ಅಲ್ಲಿಯ ಬಂಧಿಯ ನಿವಾಸದಲ್ಲಿ ಮಲ್ಲಸರ್ಜ ಪ್ರಭುವಿಗೆ ನಸೀಕ್ಷಯ ರೋಗವು ಹತ್ತಿತು.ತಿರುಗಿ ಕಿತ್ತೂರ ರಾಜಧಾನಿಗೆ ಬರುವಷ್ಟರಲ್ಲಿ ಆ ರೋಗ ಉಗ್ರರೂಪ ತಾಳಿ ರಾಜವಾಡೆಯಲ್ಲಿ ಬಂದಿಳಿದ ಮೂರು ನಾಲ್ಕು ದಿನಗಳಲ್ಲಿ ಮೃತಪಡಬೇಕಾಯಿತು. ಇದೇ ಒಂದು ಘಟನೆ ಇತಿಹಾಸಕ್ಕೆ ಸತ್ತ ಸಂಗತಿ.

ಪ್ರಸ್ತುತ ಕಾವ್ಯ ರುದ್ರಕವಿ ಎಂಬ ಕವಿ ಬರೆದಿರಬಹುದು ಎಂದು ಊಹಿಸಬಹುದು ಎಂಬ ಸತ್ಯಕ್ಕೆ ರಾಯನಗೌಡರು ಬರುವರು. ಇಲ್ಲಿ ಶರಣರ ನಾಡು ಕಿತ್ತೂರು ಎಂಬ ದುಂಧುಭಿಯಿಂದ ಈ ಕೃತಿ ಆರಂಭವಾಗಿ ಪೇಶ್ವೆ ದಂಡಿನ ಪಯಣ.,ಭಾಜೀರಾಯಣ ಪಯಣ (ಪುಣ್ಯಕ್ಷೇತ್ರ ದರ್ಶನ).ಮಲ್ಲಭೂಪನ ಸೈನ್ಯ ಸಿದ್ದತೆ ಮತ್ತು ಬೀಳ್ಕೊಡುವ ಸಂಭ್ರಮ. ಶೇಗುಣಸಿ ಗೌಡರ ಕುಟಿಲ ರಾಯಭಾರ. ಮಲ್ಲಭೂಪನ ಮೇಲೆ ಕಾವಲು. ಭಾಜೀರಾಯನ ಮೇಜವಾನಿ ಸಮಾರಂಭ ಮಲ್ಲಭೂಪನಿಗೆ ಔತಣ. ಅತ್ತೆಯ ಮರಣ ವಾರ್ತೆ ಮತ್ತು ಮಲ್ಲಭೂಪನ ಹೃದ್ರೋಗ.ಮಲ್ಲಭೂಪನ ವ್ಯವಸ್ಥಾ ಪತ್ರ. ಮಲ್ಲಭೂಪನ ಬಿಡುಗಡೆ ಹಾಗೂ ತೀರ್ಥಯಾತ್ರೆ. ಮಲ್ಲಭೂಪನ ಕಾಯಿಲೆ ಹಾಗೂ ಮರಣ.ಚನ್ನಮ್ಮ ರಾಣಿಯ ಪ್ರಲಾಪ. ಮಲ್ಲಭೂಪನ ಸ್ಮಶಾನ ಯಾತ್ರೆ, ಹೀಗೆ ಒಟ್ಟು ಹದಿಮೂರು ಭಾಗಗಳಲ್ಲಿ ಈ ಕಾವ್ಯವಡಗಿದೆ. ಇಲ್ಲಿ ಪ್ರತಿ ಕಾವ್ಯವೂ ಒಂದೊಂದು ಘಟನೆಗಳನ್ನು ಹೇಳುತ್ತ ಸಾಗುವುದು.ಇದರ ಇಂಗ್ಲೀಷ ಅವತರಣಿಕೆಯನ್ನು ನ್ಯಾಯವಾದಿ ಶ್ರೀ ವೀರಭದ್ರಪ್ಪ ಬಿ ಹಾಲಭಾವಿಯವರು ಮಾಡಿದ್ದು ಎರಡೂ ಭಾಷೆಯನ್ನು ಒಳಗೊಂಡ ಕೃತಿಯನ್ನು ರಾಯನಗೌಡರ ಸಂಪಾದಕತ್ವದಲ್ಲಿ ಹೊರತಂದಿದ್ದು ಕಿತ್ತೂರಿನ ಇತಿಹಾಸದ ಮೇಲೆ ಬೆಳಕು ಚಲ್ಲುವ ಈ ಕೃತಿ ಕಾವ್ಯಾತ್ಮಕವಾಗಿದೆ.

ಕಿತ್ತೂರು ಬಂಡಾಯ

ಇದು ಕೂಡ ಚನ್ನಮ್ಮರಾಣಿ ಇತಿಹಾಸ ಮಂಡಳ ಬೈಲಹೊಂಗಲ ಇವರು ಪ್ರಕಟಿಸಿದ ಕೃತಿ. ಇದು ಚನ್ನಮ್ಮನ ಲಾವಣಿಯಿಂದ ಪ್ರಾರಂಭವಾಗುತ್ತದೆ. ಇಲ್ಲಿಯೂ ಕೂಡ ಕಿತ್ತೂರಿನ ಇತಿಹಾಸಕ್ಕೆ ಸಂಬಂಧಿಸಿದಂತೆ ರಾಯನಗೌಡರು ವಿವಿಧ ಆಯ್ದ ಲೇಖಕರಿಂದ ಬರೆಸಿ ಪ್ರಕಟಿಸಿದ ಲೇಖನಗಳನ್ನು ಒಳಗೊಂಡ ಸಂಪಾದಿತ ಕೃತಿ. ಇಲ್ಲಿಯೂ ಕನ್ನಡ ಮತ್ತು ಇಂಗ್ಲೀಷನಲ್ಲಿ ಬರಹಗಳಿವೆ. ತಲ್ಲೂರು ರಾಯನಗೌಡರು ಬರೆದ ಕನ್ನಡ ನಾಡಿನ ರಾಣಿ ಕಿತ್ತೂರು ಚನ್ನಮ್ಮ ಲೇಖನ ಶ್ರೀ ಕಲ್ಮೇಶ್ವರ ಚನ್ನಮಲ್ಲಪ್ಪ ಶ್ರೇಷ್ಠಿ ಬರೆದ ಕಿತ್ತೂರು ಸಂಸ್ಥಾನದ ಇತಿಹಾಸ.ಶೀ.ಗಿ.ಕಟ್ಟಿಯವರು ಬರೆದ ಕಿತ್ತೂರು ಅರಸರು.ವೀರಪ್ಪ ಬಸರೀಗಿಡದ ಅವರ ಕಿತ್ತೂರು ರಾಜಮನೆತನಗಳು.ಸರಸ್ವತಿದೇವಿ ಗೌಡರರ ಕಿತ್ತೂರು ಚಿನ್ನವ್ವ.

ಕೀರ್ತನಕೇಸರಿ ಬಿ.ಶಿವಮೂರ್ತಿ ಶಾಸ್ತ್ರೀಯವರ ವೀರರಾಣಿ ಕಿತ್ತೂರು ಚಿನ್ನವ್ವ. ಸೌ.ಪದ್ಮಾವತಿದೇವಿ ಅಂಗಡಿಯವರ ಕನ್ನಡತಿಯ ಕ್ರಾಂತಿ ಕಿಡಿಯು.ಭಾವೆಪ್ಪ ಮೂಗಿಯವರ ಐತಿಹಾಸಿಕ ಕಾಗದ ಪತ್ರಗಳು.ಎಂ.ಪಿ.ವಾಲಿಯವರ ವೀರ ಕನ್ನಡಿಗರ ಬೀಡು ಕಿತ್ತೂರು.ರಾಜ ಪುರೋಹಿತರವರ ಕಿತ್ತೂರ ದೇಸಗತಿ.ನರಸಿಂಹಾಚಾರ್ಯ ಪುಣೇಕರವರ ಕಿತ್ತೂರ ದೇಶಗತಿ. ಬಸವರಾಜ ಕಟ್ಟೀಮನಿಯವರ ಚನ್ನವ್ವನ ಕಿತ್ತೂರು ನಾಟಕ.ದೇಸಾಯಿ ಪಾಂಡುರಂಗರಾವ ಅವರ ಚಿನ್ನವ್ವ. ಹೀರೇಮಠ ರಾಮಯ್ಯ ಚನಬಸಯ್ಯ ಅವರ ಕಿತ್ತೂರಿನ ಕೊನೆಯ ಕಾಳಗ.ಶೇ.ಗಿ.ಕಟ್ಟಿಯವರ ಕಿತ್ತೂರಿನ ಕೊನೆಯು. ಪೈ.ಇ.ವಲ್ಲದ ಮಲಿಕಸಾಹೇಬ ಬರೆದ ಮಲ್ಲಸರ್ಜ ದೇಸಾಯರ ಸ್ಥಾನ ಬದ್ದತೆ. ಅಮೃತೇಶರ ಕಿತ್ತೂರು ರಾಜೇಂದ್ರ.ಕಾಸೀರಾಜ ಕವಿಯ ಮಲ್ಲಸರ್ಜ.ರುದ್ರಕವಿಯ ಕಿತ್ತೂರ ಗೀತೆ. ಆನಂದ ಕವಿಯ ಕಿತ್ತೂರು ಕೋಟೆಯ ನೋಟ. ಎಸ್.ಡಿ.ಇಂಚಲರ ಕಳೆದ ಕಿತ್ತೂರು.ಎಸ್.ಡಿ.ಇಂಚಲರೇ ಬರೆದ ಕಿತ್ತೂರ ರಾಣಿಯ ಸಮಾಧಿ ನೋಡಿ. ಕಿತ್ತೂರು ಅರಸರ ಕೋಲುಪದ ಸಂಗ್ರಹದಿಂದ ಆಯ್ದು ಪ್ರಕಟಿಸಲಾಗಿದೆ.ರುದ್ರಕವಿಯ ಸೂಳೆ ಸರ್ಜರ ಪ್ರಣಯ. ಕೊನೆಯಲ್ಲಿ ಶಿವಲಿಂಗ ರುದ್ರಸರ್ಜರ ದತ್ತಕ ಪ್ರಕರಣ. ಈರವ್ವನ ದುರಂತ ಮರಣ.

ಶೇ,ಗಿ.ಕಟ್ಟಿಯವರ ಸಂಗೊಳ್ಳಿ ರಾಯನಾಯಕನ ಬಂಡು ಬರಹಗಳೊಂದಿಗೆ ಈ ಸಂಪಾದಿತ ಕೃತಿ ಪ್ರಕಟಗೊಂಡಿದೆ. ಇದರಲ್ಲಿ ಬಹುತೇಕ ದಾಖಲೆಗಳನ್ನು ಪುಣೆಯಿಂದ ಪಡೆಯಲಾಗಿದೆ.

ಸಮಾರೋಪ

ಸ್ವಾತಂತ್ರ್ಯ ಹೋರಾಟಗಾರಾಗಿ ಕರ್ನಾಟಕ ಏಕೀಕರಣ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡು ಉತ್ತಮ ವಾಗ್ಮಿಗಳಾಗಿ,ಸಂಶೋಧಕ ಲೇಖಕರಾಗಿ,ಸಾಮಾಜಿಕ ಚಿಂತನಶೀಲರಾಗಿ,ರಾಜಕೀಯ ದುರೀಣರಾಗಿ ಬಾಳಿ ಬದುಕಿದ್ದ ತಲ್ಲೂರು ರಾಯನಗೌಡರು 30-9-1982 ರಂದು ನಿಧನರಾದರು. ಅವರ ಹೆಸರಿನಲ್ಲಿ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ದತ್ತಿನಿಧಿಯನ್ನು ಅವರ ಕುಟುಂಬದವರು ಸ್ಥಾಪಿಸಿದ್ದು ಪ್ರತಿವರ್ಷ ಆ ದತ್ತಿಯ ಮೂಲಕ ರಾಯನಗೌಡರ ಸ್ಮರಣೆಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ರಾಯನಗೌಡರ ಸ್ಮರಣೆಯನ್ನು ಚಿರಸ್ಥಾಯಿಯಾಗಿಸಿರುವರು.ಕಿತ್ತೂರು ಚನ್ನಮ್ಮ ಚಲನಚಿತ್ರವಾಗಲು ಕೂಡ ಕಾರಣೀಭೂತರಾಗಿದ್ದ ರಾಯನಗೌಡರು ಈ ನಾಡಿಗೆ ಕಿತ್ತೂರು ಸಂಸ್ಥಾನಕ್ಕೆ ಸಂಬಂಧಿಸಿದ ಬಹುದೊಡ್ಡ ಕೊಡುಗೆಯನ್ನು ನೀಡಿರುವರು.

ಅವರ ಬದುಕನ್ನು ಆಧರಿಸಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಡಾ.ಮೈತ್ರೇಯಣಿ ಗದಿಗೆಪ್ಪಗೌಡರ ಇವರ ಮಾರ್ಗದರ್ಶನದಲ್ಲಿ ಸಂಶೋಧನೆ ಜರುಗುತ್ತಿರುವುದು ನಿಜಕ್ಕೂ ಶ್ಲಾಘನೀಯ. ಕನ್ನಡ ವಿಭಾಗದಿಂದ ಒಂದು ದಿನದ ವಿಚಾರ ಸಂಕಿರಣ ಕಲ್ಲೋಳಿಯಲ್ಲಿ ಜರುಗುತ್ತಿರುವುದು ಈ ಮೂಲಕ ರಾಯನಗೌಡರ ವ್ಯಕ್ತಿತ್ವಕ್ಕೆ ಇನ್ನಷ್ಟು ಮಹತ್ವದ ದಾಖಲಾರ್ಹ ಸಂಗತಿಗಳು ಈ ವಿಚಾರ ಸಂಕಿರಣದ ಮೂಲಕ ಮೂಡಿ ಬರಲಿ.ಇಂದಿನ ಪೀಳಿಗೆಗೆ ರಾಯನಗೌಡರ ಬದುಕಿನ ಆದರ್ಶ ತಿಳಿಯುವಂತಾಗಲಿ.ಈ ವಿಚಾರ ಸಂಕಿರಣ ಹಮ್ಮಿಕೊಂಡ ಎಲ್ಲ ಆಯೋಜಕರಿಗೆ ಅದರಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಕಾರ್ಯನಿರ್ವಹಿಸುತ್ತಿರುವ ಎಲ್ಲರಿಗೂ ಧನ್ಯವಾದಗಳು.


ವೈ.ಬಿ.ಕಡಕೋಳ
ಶಿಕ್ಷಕರು
ಮಾರುತಿ ಬಡಾವಣೆ ಸಿಂದೋಗಿ ಕ್ರಾಸ್
ಮುನವಳ್ಳಿ 591117
ಸವದತ್ತಿ ತಾಲೂಕ ಬೆಳಗಾವಿ ಜಿಲ್ಲೆ

- Advertisement -
- Advertisement -

Latest News

ಕೊರೋನಾ ಸಮರ್ಥವಾಗಿ ಎದುರಿಸಲು ಲಸಿಕೆ ಪಡೆಯಿರಿ – ಡಾ.ಶಾಂತವೀರ

ಸಿಂದಗಿ: ಕೋವಿಡ್ ಲಸಿಕೆ ಪಡೆಯುವುದರಿಂದ ಕೋವಿಡ್ ಸೋಂಕು ತಗುಲಿದರು ಯಾವುದೇ ಅಪಾಯವಾಗುವದಿಲ್ಲ ಲಸಿಕೆಯ ಬಗ್ಗೆ ತಪ್ಪು ಗ್ರಹಿಕೆ ಬಿಟ್ಟು 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ...
- Advertisement -

More Articles Like This

- Advertisement -
close
error: Content is protected !!