ಮೂಡಲಗಿ: ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದಿಂದ ಕೊಡಮಾಡುವ ರಾಜ್ಯ ಯುವ ಪ್ರಶಸ್ತಿಯನ್ನು ಮೂಡಲಗಿ ತಾಲೂಕಿನ ಸಂಕಲ್ಪ ಕ್ರೀಡಾ ಮತ್ತು ಸಮಾಜ ಸೇವಾ ಸಂಘದ ಅಧ್ಯಕ್ಷ ಸುಭಾಷ್ ಗೊಡ್ಯಾಗೋಳ ಅವರಿಗೆ ನೀಡಿ ಗೌರವಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಸವಣೂರು ಪಟ್ಟಣದಲ್ಲಿ ಇತ್ತೀಚೆಗೆ ಸ್ವಾಮಿ ವಿವೇಕಾನಂದ ಜಯಂತಿಯ ಪ್ರಯುಕ್ತ ನಡೆದ ಯುವ ಸಮ್ಮೇಳನ ಮತ್ತು ರಾಜ್ಯ ಯುವ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಳೆದ ೧೨ ವರ್ಷಗಳಿಂದ ಗ್ರಾಮೀಣ ಕ್ರೀಡೆ, ಕಲೆ, ಸಾಹಿತ್ಯ, ಪರಿಸರ ಸಂರಕ್ಷಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ನಿರಂತರ ಯುವ ಸಂಘಟನೆ, ಜನ ಜಾಗೃತಿಯಂತಹ ಸಮಾಜ ಸೇವಾ ಕಾರ್ಯವನ್ನು ಪರಿಗಣಿಸಿ ೨೦೨೪ – ೨೫ನೇ ಸಾಲಿನ ರಾಜ್ಯ ಯುವ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ರಾಜ್ಯದ ೩೧ಜಿಲ್ಲೆಯ ಸಮಾಜ ಸೇವಕರನ್ನು ಗುರುತಿಸಿ, ಗೌರವಿಸಲಾಗಿದ್ದು ಬೆಳಗಾವಿ ಜಿಲ್ಲೆಯಿಂದ ಸುಭಾಸ್ ಗೊಡ್ಯಾಗೋಳ ಪ್ರಶಸ್ತಿ ಪಡೆದುಕೊಂಡರು.
ಮಾಜಿ ಸಂಸದ ನಳೀನ್ ಕುಮಾರ್ ಕಟೀಲ್, ಪುತ್ತೂರು ಶಾಸಕಿ ಭಾಗೀರಥಿ, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷ ಡಾ.ಬಾಲಾಜಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ್ ರೈ ಸೂಡಿಮುಳ್ಳು, ಜಿಲ್ಲಾಧ್ಯಾಕ್ಷ ಸಿದ್ದಣ್ಣ ದುರದುಂಡಿ, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಸುಧೀರ ನಾಯರ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.