spot_img
spot_img

ಕಾಲನು ಕಾಲನ್ನು ಕಿತ್ತುಕೊಂಡ ಅಷ್ಟೆ, ಕನ್ನಡ ಕಟ್ಟುವ ಕೆಲಸವನ್ನಲ್ಲ

Must Read

- Advertisement -

ದೇವುಡು ನರಸಿಂಹಶಾಸ್ತ್ರಿಗಳು ಕನ್ನಡಿಗರಿಗೆ ಕೊಟ್ಟ ಅಮರ ಕಾಣಿಕೆ ಗೊತ್ತೆ ?

ಬೆಂಗಳೂರಿನ ಅವೆನ್ಯೂ ರಸ್ತೆಯ ಒಂದು ಪಾದಾಚಾರಿ ಮಾರ್ಗದಲ್ಲಿ ಪುಸ್ತಕಗಳ ರಾಶಿಯೊಳಗೊಂದು ರದ್ದಿ ಪುಸ್ತಕ ಎಂದು ಕೊಂಡಿದ್ದ ಅಂಗಡಿಯವನ ಹತ್ತಿರ ಅದೃಷ್ಟಕ್ಕೆ ಚಲನ ಚಿತ್ರ ಸಾಹಿತಿ ಚಿ. ಉದಯ ಶಂಕರ್ ಅವರಿಗೆ ಸಿಕ್ಕಿತ್ತು, ಆ ಕಾದಂಬರಿಯನ್ನು ಅವರು ಓದಿದರು, ನಂತರ ಅವರು ಅದನ್ನು ನಟ ಸಾರ್ವಭೌಮ ಡಾ. ರಾಜ್ ಕುಮಾರ್ ಹಾಗೂ ಅವರ ಸಹೋದರ ವರದರಾಜ್ ಅವರಿಗೂ ಆ ಕಾದಂಬರಿಯ ಹೂರಣವನ್ನು ಎಳೆಎಳೆಯಾಗಿ ಬಿಡಿಸಿಟ್ಟರು, ಒಮ್ಮೆಲೇ ಅಣ್ಣಾವ್ರ ಒಂದೇ ಮಾತು ಹೊರಗೆ ಬಂತು, ಈ ಕಾದಂಬರಿಯನ್ನು ನಾವೇಕೆ ಚಲನ ಚಿತ್ರ ಮಾಡಿ ಕನ್ನಡಿಗರಿಗೆ ಗತಿಸಿದ ಇತಿಹಾಸದ ಬಗ್ಗೆ ಬೆಳಕು ಚೆಲ್ಲಬಾರದು ? ಎಂದು ಹೇಳಿದರು, ಅದೇ ರೀತಿ ಚಲನ ಚಿತ್ರವೂ ಆಯ್ತು, ಕರ್ನಾಟಕದ ಚಲನ ಚಿತ್ರ ಇತಿಹಾಸದಲ್ಲಿ ಒಂದು ಮೈಲಿಗಲ್ಲಾಯಿತು, ಆ ಚಲನ ಚಿತ್ರವೇ ಕನ್ನಡಿಗರ ಹೆಮ್ಮೆಯ ಮಯೂರ, ಎಲ್ಲಿಯವರೆಗೆ ಕನ್ನಡ ಇರುವುದೋ ಅಲ್ಲಿಯವರೆಗೆ ಈ ಮಯೂರ ಚಲನ ಚಿತ್ರ ಅಚ್ಚಳಿಯದೆ ಉಳಿಯುತ್ತದೆ, ಹಾಗೇ ಈ ಮಯೂರ ವರ್ಮ ಕಾದಂಬರಿಯ ಕರ್ತೃ ದೇವುಡು, ದೇವುಡು ನರಸಿಂಹ ಶಾಸ್ತ್ರೀ ಅವರೂ ಸಹ ಅಜರಾಮರರೇ ಆಗಿರುತ್ತಾರೆ

ಒಮ್ಮೆ *ದೇವುಡು* ಅವರು ಬೆಂಗಳೂರಿನಲ್ಲಿರಬೇಕಾದರೆ ಕೆಲವು ನಂಜನ ಗೂಡಿನ ಜನರು ಬಂದು ಅವರಲ್ಲಿ ಮನವಿ ಸಲ್ಲಿಸಿ, ತಾವುಗಳು ದಯಮಾಡಿ ನಂಜನ ಗೂಡಿಗೆ ಬಂದು ಸ್ತ್ರೀ ಶಕ್ತಿಯ ಬಗ್ಗೆ, ಹಾಗೂ ಕನ್ನಡ ಕಟ್ಟುವಲ್ಲಿ ಸ್ತ್ರೀಯರ ಪಾತ್ರ ಎಂಬುದರ ಬಗ್ಗೆ ಮಾತನಾಡಬೇಕೆಂದು ಕೋರಿಕೊಂಡರು, ಅದಕ್ಕೆ ದೇವುಡು ಅವರು ಒಪ್ಪಿಕೊಂಡು ನಂಜನ ಗೂಡಿಗೆ ಹೋದರು, ಕಾರ್ಯಕ್ರಮ ಜರುಗಿತು, ಅತ್ಯದ್ಭುತವಾಗಿ ಕನ್ನಡದ ಕಂಪಿನ ಬಗ್ಗೆ, ಅದರಲ್ಲೂ ಮಹಿಳಾ ಸಾಹಿತಿ, ಸಾಹಿತ್ಯದ ಬಗ್ಗೆ ಮಾತನಾಡಿದರು, ಆ ಕಾರ್ಯಕ್ರಮ ಮುಗಿಯಿತು, ಹೊರಡಲನುವಾದರು, ಆದರೆ ಅವರ ಪಾದರಕ್ಷೆಗಳನ್ನು ಯಾರೋ ಕದ್ದು ಬಿಟ್ಟಿದ್ದರು, ದೇವುಡು ಅವರು ಸಭೆ ಸಮಾರಂಭದಲ್ಲಿ ವೇದಿಕೆಗೆ ಪಾದರಕ್ಷೆ ಹಾಕಿಕೊಂಡು ಹೋಗುವ ಅಭ್ಯಾಸವಿರದೆ, ಸಭಾ ಗೌರವ, ಸಭಾ ಮರ್ಯಾದೆ ಎಂದು ವೇದಿಕೆಯ ಕೆಳಭಾಗದಲ್ಲಿಯೇ ಪಾದರಕ್ಷೆ ಬಿಟ್ಟು ಹೋಗುವ ಅಭ್ಯಾಸ ಇಟ್ಟುಕೊಂಡಿದ್ದರಂತೆ
ಏನು ಮಾಡುವುದು, ಹಾಗೇ ಬರಿಗಾಲಲ್ಲೇ ಹೊರಟರು, ಕೂಡಲೇ ಅವರ ಅಭಿಮಾನಿಯೊಬ್ಬ

- Advertisement -

‘ ಸ್ವಾಮಿ, ನಮ್ಮ ಕಾರ್ಯಕ್ರಮಕ್ಕೆ ಬಂದು ನಿಮ್ಮ ಚಪ್ಪಲಿ ಕಳುವಾಯಿತು, ನೀವು ಬರೀ ಕಾಲಲ್ಲಿ ಹೋಗಬಾರದು, ನಿಲ್ಲಿ, ನಾನೊಂದು ಜೊತೆ ಚಪ್ಪಲಿ ತರುತ್ತೇನೆಂದು’ ಓಡಿ ಹೋಗಿ ಆ ವ್ಯಕ್ತಿ ಒಂದು ಜೊತೆ ಚಪ್ಪಲಿ ತಂದು ಕೊಟ್ಟ, ದೇವುಡು ಅವರು ಆ ವ್ಯಕ್ತಿಯ ಅಭಿಮಾನಕ್ಕೆ ಮನಸೋತು ಆ ಚಪ್ಪಲಿ ಸ್ವೀಕರಿಸಿ ಹಾಕಿಕೊಂಡರು, ಕೆಲವು ದಿನಗಳ ನಂತರ ಆ ಚಪ್ಪಲಿಯು ಕಾಲು ಕಚ್ಚಿತು, ಅಲ್ಲಿ ಗಾಯವಾಯ್ತು, ಬರೀ ಗಾಯವಾಗಲಿಲ್ಲ ವೃಣವೂ ಆಯ್ತು, ವೈದ್ಯರಿಗೆ ತೋರಿಸಿದರು, ಆಗ ಇವರಿಗೆ ಸಕ್ಕರೆ ಕಾಯಿಲೆ ಇರುವುದು ತಿಳಿಯಿತು, ದಿನೇ ದಿನೇ ಗಾಯ ವೃಣ ವಾಗುತ್ತಾ, 3 ತಿಂಗಳೊಳಗೆ ಅವರ ಗಾಯವಾದ ಕಾಲನ್ನು ವೈದ್ಯರು ಕತ್ತರಿಸಿ ತೆಗೆದೇ ಬಿಟ್ಟರು, ಕಾಲು ತಗೆದಿದ್ದರೂ ಅವರಲ್ಲಿ ಜೀವನೋತ್ಸಾಹ,, ಕನ್ನಡ ಕಾಯಕ ಚಿಮ್ಮುತ್ತಿತ್ತು,

ಅಂಗ ಊನವಾದರು ಸಹ ಅವರು ಕನ್ನಡ ಕಟ್ಟುವ ಕಾಯಕದಲ್ಲಿ ನಿರತರಾಗಿದ್ದರು, ಒಮ್ಮೆ ಮೈಸೂರಿನ ಅವರ ಅಭಿಮಾನಿಗಳು ಬಂದು ಕಾರ್ಯಕ್ರಮಕ್ಕೆ ಆಹ್ವಾನಿಸಿದರು, ಆದರೆ ಅವರ ಕಾಲನ್ನು ತೆಗೆದಿರುವ ಬಗ್ಗೆ ಆ ಅಭಿಮಾನಿಗಳಿಗೆ ತಿಳಿದಿರಲಿಲ್ಲ, ಆಹ್ವಾನಿಸಿದರು, ದೇವುಡು ಅವರೂ ಸಹ ಒಪ್ಪಿಕೊಂಡರು, ಒಪ್ಪಿಕೊಂಡಂತೆ ದೇವುಡು ಅವರು ಮೈಸೂರು ಕಾರ್ಯಕ್ರಮಕ್ಕೆ ಹೋದರು, ವೇದಿಕೆಗೆ ಆಯೋಜಕರು ದೇವುಡು ಅವರನ್ನು ಆಹ್ವಾನಿಸಿದರು, ಆದರೆ ದೇವುಡು ಅವರು *ಏನಯ್ಯ ನನ್ನನ್ನು ವೇದಿಕೆಗೆ ಕರೆಯುವುದೇನು ? ನೀವೆ ಬಂದು ನನ್ನನ್ನು ಹೊತ್ತುಕೊಂಡು ಹೋಗಿ ಎಂದರು, ಆಯೋಜಕರಿಗೆ ಅರ್ಥವಾಗಲಿಲ್ಲ, ಆದರೂ ದೊಡ್ಡವರು ಹೇಳಿದಾಗ ಇಲ್ಲ ಎನ್ನಲಾದೀತೆ, ನಾಲ್ಕು ಜನ ಹೊತ್ತುಕೊಂಡು ವೇದಿಕೆಗೆ ಕರೆದುಕೊಂಡು ಬಂದರು, ದೇವುಡು ಅವರಲ್ಲಿ ಎಷ್ಟು ಜೀವನೋತ್ಸಾಹ ಇತ್ತೆಂದರೆ ಅವರು ಮಾತನಾಡುತ್ತಾ, ಎಲ್ಲರನ್ನೂ ಸತ್ತಾಗ ನಾಲ್ಕು ಜನ ಹೊತ್ತೊಯ್ಯುವರು, ಆದರೆ ನಾನು ಸತ್ತಾಗ ಹೇಗೆ ನನ್ನನ್ನು ಹೊತ್ತೊಯ್ಯುವರು ಎಂದು ಬದುಕಿದ್ದಾಗಲೇ ನೋಡಿದ ಭಾಗ್ಯವಂತ, ಈ ಅದೃಷ್ಟ ಎಷ್ಟು ಜನರಿಗೆ ದಕ್ಕುತ್ತೆ, ಎಂದು ಮಾತನಾಡುತ್ತಾ, ಅವರು ಮುಂದುವರೆದು ಆ ಕಾಲನು ನನ್ನ ಒಂದು ಕಾಲನ್ನು ಮಾತ್ರ ಕಿತ್ತುಕೊಂಡ, ಕನ್ನಡ ಕಟ್ಟುವ ಮನಸ್ಸನ್ನು, ಬರೆಯುವ ಕೈ ಯನ್ನು, ಕನ್ನಡಿಗರಿಗಿರುವ ಓದುವ ಮನಸ್ಸನ್ನು ಕಿತ್ತುಕೊಳ್ಳಲಾದೀತೆ ? ಈ ಜೀವ ಉಸಿರಾಡುವ ತನಕ ಕನ್ನಡ ಕಟ್ಟುತ್ತೇನೆ, ಕಟ್ಟಿಯೇ ಕಟ್ಟುತ್ತೇನೆ ಎಂದು ಮಾತನಾಡಿದರು, ಅಂತಹ ಚೇತನ ದೇವುಡು ನರಸಿಂಹ ಶಾಸ್ತ್ರಿಗಳದ್ದು

- Advertisement -

ಸೃಜನ ಶೀಲ ಸಾಹಿತ್ಯರಚನೆ, ಸಂಶೋಧನೆ, ಶಿಶು ಸಾಹಿತ್ಯ, ವಯಸ್ಕರ ಶಿಕ್ಷಣ, ರಂಗಭೂಮಿ ಮತ್ತು ಚಲನಚಿತ್ರ ಮುಂತಾದ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದ ದೇವುಡುರವರು ಹುಟ್ಟಿದ್ದು ಮೈಸೂರಿನಲ್ಲಿ 1896 ರ ಡಿಸೆಂಬರ್ 29 ರಂದು ತಂದೆ ಕೃಷ್ಣಶಾಸ್ತ್ರಿ ತಾಯಿ ಸುಬ್ಬಮ್ಮ ಮೈಸೂರು ಮಹಾರಾಜ ಕಾಲೇಜಿನಿಂದ ಪಡೆದ ಬಿ.ಎ. ಮತ್ತು ಎಂ.ಎ. ಪದವಿ ಸಂಸ್ಕೃತ ಐಚ್ಛಿಕ ವಿಷಯ ತತ್ತ್ವಶಾಸ್ತ್ರದ ವಿದ್ಯಾರ್ಥಿಯಾಗಿ ಪ್ರೊ. ಹಿರಿಯಣ್ಣ ಮತ್ತು ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ರವರ ನೆಚ್ಚಿನ ವಿದ್ಯಾರ್ಥಿ ಬಾಲ್ಯದಿಂದಲೇ ರಂಗಭೂಮಿಯತ್ತ ಒಲವು 1924 ರಲ್ಲಿ ಬೆಂಗಳೂರಿಗೆ ಆಗಮನ. ಗಾಂಧಿ ನಗರದ ಪ್ರೌಢಶಾಲೆಯಲ್ಲಿ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಣೆ. ಬೆಂಗಳೂರಿಗೆ ಬಂದ ನಂತರ ನಮ್ಮ ಪುಸ್ತಕ ಯೋಜನೆಯಡಿ ಮಕ್ಕಳಿಗೆ ವೈವಿಧ್ಯಮಯ ಸಾಹಿತ್ಯದ ಕೊಡುಗೆ. ಕನ್ನಡ ಕಲಿಯಲು ಸರಳಗನ್ನಡ ಕಲಿಕೆ ವಿಧಾನದ ಆವಿಷ್ಕಾರ ವಯಸ್ಕರ ಶಿಕ್ಷಣ ಸಮಿತಿ ಸ್ಥಾಪನೆಗೆ ನಾಂದಿ. ಹೀಗೆ ಮಕ್ಕಳಿಗಾಗಿಯೇ ರಚಿಸಿದ ಕೃತಿಗಳು ಸುಮಾರು ೨೦. ಅದರಲ್ಲಿ ಬುದ್ಧಿಯ ಕಥೆಗಳು, ಗಣೇಶನ ಕಥೆ, ದೇಶಾಂತರದ ಕಥೆಗಳು, ತಂತ್ರಗಾರ ನರಿ ಮತ್ತು ಇತರ ಕಥೆಗಳು ಮುಂತಾದವುಗಳು. ಕಳ್ಳರ ಕೂಟ, ಅಂತರಂಗ, ಮಯೂರ, ಇವುಗಳಲ್ಲದೆ ಮಹಾಬ್ರಾಹ್ಮಣ, ಮಹಾಕ್ಷತ್ರಿಯ, ಮಹಾದರ್ಶನ ಇವು ದೇವುಡುರವರಿಗೆ ಖ್ಯಾತಿ ತಂದ ಕೃತಿಗಳು.

ಸುಮಾರು ೧೫ ಕಾದಂಬರಿಗಳ ಕರ್ತೃ ಕಾದಂಬರಿಗಳಲ್ಲದೆ ಸೋಲೋ ಗೆಲುವೋ, ದೇವುಡು ಕಥೆಗಳು, ಘಾಟಿ ಮುದುಕ ಮತ್ತು ಇತರ ಕಥೆಗಳು, ಮೂರು ಕನಸು, ಭಾರ್ಗವಿ ಮುಂತಾದ ಕಥಾ ಸಂಕಲನಗಳು ಪ್ರಕಟಿತವಾದವು, ದುರ್ಮಂತ್ರಿ, ಸಾವಿತ್ರಿ, ವಿಚಿತ್ರ ಶಿಕ್ಷೆ, ಮಯೂರ, ಯಾಜ್ಞವಲ್ಕ ಮುಂತಾದ ನಾಟಕಗಳು ರಾಮಾಯಣದ ಮಹಾಪುರುಷರು, ಭಾರತದ ಮಹಾಪುರುಷರು, ಸಂಗ್ರಹ ರಾಮಾಯಣ, ಮಹಾಭಾರತ ಸಂಗ್ರಹ, ಪುರುಷೋತ್ತಮ, ಕಾಳಿದಾಸನ ಕೃತಿಗಳು ಸೇರಿ ಸುಮಾರು 100 ಕ್ಕೂ ಹೆಚ್ಚು ಕೃತಿ ಪ್ರಕಟಿತ. ಪತ್ರಿಕಾರಂಗ ಹಾಗೂ ವಿದ್ಯಾಸಂಸ್ಥೆಗಳ ಜೊತೆಗೆ ಕೈಗೊಂಡ ಸಾರ್ವಜನಿಕ ಸೇವೆ, 1944 ರಲ್ಲಿ ಪ್ರಜಾಪ್ರತಿನಿಧಿ ಸಭೆಯ ಸದಸ್ಯರಾಗಿ ಆಯ್ಕೆ ಇದಲ್ಲದೆ ಕನ್ನಡ ಕಾದಂಬರಿಕಾರರ ಸಮ್ಮೇಳನದ ಅಧ್ಯಕ್ಷರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸದಸ್ಯರಾಗಿಯೂ ಸಲ್ಲಿಸಿದ ಸೇವೆ ಬಾಬು ರಾಜೇಂದ್ರ ಪ್ರಸಾ‌ದ್‌ರವರಿಂದಲೇ ಕಾಶಿಯಲ್ಲಿ ಗೌರವ ಪಡೆದ ದೇವುಡು ರವರಿಗೆ 1963 ರಲ್ಲಿ ಮಹಾಬ್ರಾಹ್ಮಣ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಸಿಕ್ಕಿತು. ದೇವುಡು ಅವರು 27-10-1962 ರಂದು ನಮ್ಮನ್ನಗಲಿದರು.

ಇಂಥಹ ಮಹಾನ್ ಚೇತನಕ್ಕೆ ನಮೋ ನಮಃ

ಸಂಗ್ರಹ : ಎಮ್ ವೈ. ಮೆಣಸಿನಕಾಯಿ

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group