ಗಣೇಶ ಹಬ್ಬದಲ್ಲಿ ವಿಶೇಷ ಸಂಭ್ರಮ ; ಗೌರಿ ಬಾಗಿನ

Must Read

ಗೌರಿ – ಗಣೇಶ ಹಬ್ಬ ಬಂದಿದೆ. ಇದು ಹಿಂದೂಗಳಿಗೆ ಬಹಳ ಪ್ರಮುಖವಾದ ಹಬ್ಬಗಳಲ್ಲಿ ಒಂದು. ಅದರಲ್ಲೂ ಗೌರಿ ಹಬ್ಬ ಹೆಣ್ಣು ಮಕ್ಕಳಿಗೆ ಬಹಳ ಮುಖ್ಯ. ಈ ಹಬ್ಬ ಹೆಣ್ಣು ಮಕ್ಕಳಿಗೆ ಮೀಸಲಾದ ಹಬ್ಬಗಳಲ್ಲಿ ಒಂದು ಎನ್ನಬಹುದು

ಈ ಹಬ್ಬ ವಿವಾಹಿತ ಮಹಿಳೆಯರಿಗೆ ಬಹಳ ವಿಶೇಷ ಎನ್ನಬಹುದು. ಈ ದಿನ ಮಹಿಳೆಯರು ತನ್ನ ತಾಯಿ – ಅತ್ತಿಗೆಗೆ ಬಾಗಿನ ನೀಡಿ, ಮುತ್ತೈದೆಯರಿಗೆ ಅರಿಶಿನ – ಕುಂಕುಮವನ್ನು ನೀಡಿ ಆಶೀರ್ವಾದ ಬೇಡುತ್ತಾರೆ. ಅದರಲ್ಲೂ ಮದುವೆಯ ನಂತರ ಮೊದಲ ಗೌರಿ ಹಬ್ಬವಾದರೆ ಇನ್ನೂ ಹೆಚ್ಚು ವಿಶೇಷವಾಗಿರುತ್ತದೆ. ಈ ದಿನ ಬಹಳ ಶ್ರದ್ಧೆ ಹಾಗೂ ಭಕ್ತಿಯಿಂದ ಗೌರಿಯನ್ನು ಪೂಜೆ ಮಾಡುವುದರಿಂದ ತಾಯಿ ನಮ್ಮ ಕಷ್ಟಗಳನ್ನು ದೂರ ಮಾಡಿ, ಇಷ್ಟಗಳನ್ನು ಪೂರೈಸುತ್ತಾಳೆ ಎನ್ನುವ ನಂಬಿಕೆ ಇದೆ. ಅಲ್ಲದೇ ಈ ರೀತಿ ಮಾಡುವುದರಿಂದ ಸಂಸಾರದಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಿರುತ್ತದೆ ಎನ್ನಲಾಗುತ್ತದೆ. ಇದು ಬಹಳ ವಿಭಿನ್ನವಾದ ಹಬ್ಬ.

ಮೊದಲೇ ಹೇಳಿದಂತೆ ಈ ದಿನ ತವರುಮನೆಯಿಂದ ಹೊರಗೆ ವಿವಾಹ ಮಾಡಿಕೊಟ್ಟ ಹೆಣ್ಣು ಮಕ್ಕಳಿಗೆ ತವರುಮನೆ ಉಡುಗೊರೆಯಾಗಿ ಬಾಗಿನ ನೀಡಲಾಗುತ್ತದೆ. ಸಾಮಾನ್ಯವಾಗಿ ಎಲ್ಲರೂ ಮೊರದ ಬಾಗಿನ ಕೊಡುವುದನ್ನ ನೋಡಿರುತ್ತೇವೆ. ಅದರಲ್ಲಿ ಏನಿರುತ್ತದೆ ಎಂಬುದು ಹಲವಾರು ಜನರಿಗೆ ಗೊತ್ತಿಲ್ಲ. ಇನ್ನೂ ಕೆಲವರಿಗೆ ಈ ವಿಚಾರದಲ್ಲಿ ಬಹಳ ಗೊಂದಲವಿದೆ. ಹಾಗಾಗಿ ಮೊರದ ಬಾಗಿನದಲ್ಲಿ ಏನೆಲ್ಲಾ ಇದೆ ಎಂಬುದನ್ನ ನಾವಿಲ್ಲಿ ನೋಡೋಣ.

ಮೊರದ ಬಾಗಿನದಲ್ಲಿ ಏನೆಲ್ಲಾ ಇರಬೇಕು ?
ಮೊರ,
ವಿವಿಧ ಬೇಳೆಗಳ ಮಿಶ್ರಣ ( ತೊಗರಿ ಬೇಳೆ, ಕಡ್ಲೆ ಬೇಳೆ, ಹೆಸರು ಬೇಳೆ, ಉದ್ದಿನ ಬೇಳೆ ಇತ್ಯಾದಿ )
ಅಕ್ಕಿ
ಗೋಧಿ
ಬೆಲ್ಲ ಅಚ್ಚು
ಅರಿಶಿನ ಮತ್ತು ಕುಂಕುಮ
ಕಣ್ಣು ಕಪ್ಪು
ಬಳೆ
ಜೋಡಿ ಓಲೆ
ಕರಿಮಣಿ
ಕನ್ನಡಿ
ಬಾಚಣಿಗೆ
ಬ್ಲೌಸ್‌ ಪೀಸ್‌ (ಕೆಂಪು ಅಥವಾ ಹಸಿರು)
ವೀಳ್ಯದ ಎಲೆ ಮತ್ತು ಅಡಿಕೆ
ತೆಂಗಿನಕಾಯಿ
ಬಾಳೆಹಣ್ಣು
ದಕ್ಷಿಣೆ ( ಉಡುಗೊರೆ )
ಇತ್ಯಾದಿ.

ಇನ್ನು ಈ ಬಾಗಿನದಲ್ಲಿ ಕೊಡುವ ಪ್ರತಿಯೊಂದು ವಸ್ತುವಿಗೂ ಒಂದೊಂದು ಅರ್ಥವಿದೆ.
ಅರಿಶಿನ ಗೌರಿದೇವಿ.
ಕುಂಕುಮ ಮಹಾಲಕ್ಷ್ಮಿ ಹಾಗೂ ಸಿಂಧೂರ ಸರಸ್ವತಿ ದೇವಿಯ ಸ್ವರೂಪ ಎನ್ನಲಾಗುತ್ತದೆ. ಹಾಗೆಯೇ ಕನ್ನಡಿಯು ರೂಪಲಕ್ಷ್ಮಿಯ ಸಂಕೇತವಾದರೆ, ಬಾಚಣಿಗೆ – ಶೃಂಗಾರಲಕ್ಷ್ಮಿ, ಕಾಡಿಗೆ – ಲಜ್ಜಾಲಕ್ಷ್ಮಿ, ಅಕ್ಕಿ – ಶ್ರೀಲಕ್ಷ್ಮಿಯ ಸ್ವರೂಪ ಎನ್ನುವ ನಂಬಿಕೆ ಇದೆ.

ಅದರಂತೆಯೇ ನಾವು ಕೊಡುವ ಬೇಳೆಗಳಿಗೆ ಸಹ ಒಂದೊಂದು ಅರ್ಥವಿದೆ. ತೊಗರಿ ಬೇಳೆ – ವರಲಕ್ಷ್ಮಿ, ಉದ್ದಿನ ಬೇಳೆ – ಸಿದ್ಧಲಕ್ಷ್ಮಿ, ಹೆಸರು ಬೇಳೆ – ವಿದ್ಯಾಲಕ್ಷ್ಮಿ, ತೆಂಗಿನ ಕಾಯಿ – ಸಂತಾನಲಕ್ಷ್ಮಿ, ವೀಳ್ಯದೆಲೆ – ಧನಲಕ್ಷ್ಮಿ, ಅಡಿಕೆ – ಇಷ್ಟಲಕ್ಷ್ಮಿ ಎನ್ನಲಾಗುತ್ತದೆ. ಇದರ ಜೊತೆಗೆ ಹಣ್ಣು – ಜ್ಞಾನಲಕ್ಷ್ಮಿ, ಬೆಲ್ಲ – ರಸಲಕ್ಷ್ಮಿ, ಬಟ್ಟೆ – ವಸ್ತ್ರಲಕ್ಷ್ಮಿ.

ಬಾಗಿನ ಮೊರವನ್ನು ತಯಾರಿಸುವುದು ಹೇಗೆ ?
ಮೊರದ ಬಾಗಿನಕ್ಕೆ ಅಣಿಯಾದ ಮೊರವನ್ನು ಶುಭ್ರಗೊಳಿಸಿ ಅದಕ್ಕೆ ಅರಿಶಿನ, ಕುಂಕುಮ ಹಚ್ಚಿ ಚೆನ್ನಾಗಿ ಆರಿಸಿ ನಂತರ ಧಾನ್ಯಗಳು, ತೆಂಗಿನಕಾಯಿ, ಬಳೆ-ಬಿಚ್ಚೋಲೆ, ಕನ್ನಡಿ, ಬಳೆಗಳು, ಬಗೆ ಬಗೆಯ ಹಣ್ಣುಗಳು, ರವಿಕೆ ಕಣ, ತಾಯಿಗೆ ಹಾಗೆ ಅತ್ತಿಗೆ – ನಾದಿನಿಯರಿಗೆ ಸೀರೆಯನ್ನು ಹಾಕಿ, ಸುಮಂಗಲಿಯರು ಉಪಯೋಗಿಸುವ ವಸ್ತುಗಳು, ಭಕ್ಷ್ಯಗಳು ಹಾಕಿ ಮೊರದ ಬಾಗಿನ ಸಿದ್ಧ ಪಡಿಸಬೇಕು.

ಮೊದಲೇ ನಿಮಗೆ ಬೇಕಾದಷ್ಟು ಮೊರ ತಂದು ಚೆನ್ನಾಗಿ ತೊಳೆಯಿರಿ. ನಂತರ ಅದರ ಮೇಲೆ ಅರಿಶಿನ, ಕುಂಕುಮದ ಪಟ್ಟಿ ಬಳಿಯಿರಿ. ಹಾಗೆಯೇ ಅದರ ಅಂಚುಗಳಲ್ಲಿ ಕುಂಕುಮ ಹಚ್ಚಿ. ಈಗ ಅದರಲ್ಲಿ ಕನಿಷ್ಟ 2 ಎಲೆ, ಕನಿಷ್ಠ 4 ಅಡಿಕೆ ಹಾಗೂ ತೆಂಗಿನ ಕಾಯಿ ಇಡಿ, ಹಾಗೆಯೇ ದಕ್ಷಿಣೆ ಇಡಿ, ನಂತರ ಈಗಾಗಲೇ ಮೇಲೆ ತಿಳಿಸಿರುವ ಇತರ ಸಾಮಾನುಗಳನ್ನು ಇಡಿ. ಈಗ ಇನ್ನೊಂದು ಮೊರವನ್ನು ತೆಗೆದುಕೊಂಡು. ವಿರುದ್ಧ ದಿಕ್ಕಿನಲ್ಲಿ ಇಡಿ. ನಂತರ ಮೊರವನ್ನು ದಾರದಿಂದ ಕಟ್ಟಿದರೆ ಮೊರದ ಬಾಗಿನ ರೆಡಿ.

ಡಾ. ಹೇಮಂತ ಚಿನ್ನು
ಕರ್ನಾಟಕ ಶಿಕ್ಷಕರ ಬಳಗ

Latest News

ರಾಮಾಯಣ ಮಹಾಭಾರತಕ್ಕಿಂತ ಹಳೆಯ ಭಾಷೆ ಕನ್ನಡ – ಬಾಗೇಶ ಮುರಡಿ

ಸಿಂದಗಿ; ಪ್ರಪಂಚದಲ್ಲಿ ೬ ಸಾವಿರ ಭಾಷೆಗಳಿಗೆ ಅದರಲ್ಲಿ ೪ ಸಾವಿರ ಭಾಷೆಗಳಿಗೆ ಲಿಪಿಯಿಲ್ಲ. ಲಿಪಿ ಇರುವ ೨ ಸಾವಿರ ಭಾಷೆಗಳಲ್ಲಿ ಇತಿಹಾಸವನ್ನು ಹೊಂದಿದ ಹಾಗೂ ಮಹಾಭಾರತ,...

More Articles Like This

error: Content is protected !!
Join WhatsApp Group