ಇಂದು ನೇತಾಜಿಯವರ ೧೨೫ ನೇ ಜನ್ಮದಿನದ ಅಂಗವಾಗಿ ಈ ದಿನವನ್ನು ಪರಾಕ್ರಮ ದಿವಸ ವನ್ನಾಗಿ ಆಚರಿಸಲು ಭಾರತ ಸರ್ಕಾರ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಶೋಭಾರಾವ್ ಅವರು ಬರೆದ ಲೇಖನ….
1939 ರ ವರೆಗೂ ಕಾಂಗ್ರೆಸ್ ನಲ್ಲಿ ಗಾಂಧಿಯ ಮಾತಿಗೆ ಎದುರು ಎನ್ನುವುದೇ ಇರಲಿಲ್ಲ. ಅವರ ಮಾತು, ನಿರ್ಧಾರವೇ ಅಂತಿಮ. ಹಾಗೆ ಪ್ರಶ್ನಾತೀತ ನಾಯಕರೆನಿಸಿಕೊಂಡಿದ್ದ ಗಾಂಧಿಯ ಅಹಂ ಮುರಿದದ್ದು ಆ ವರ್ಷದ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಾಗ. ಹಂತ ಹಂತವಾಗಿ ಬ್ರಿಟಿಷರು ಸ್ವಾತಂತ್ರ್ಯ ಕೊಡಲಿ ಎಂದು ಬಯಸಿದ್ದ ಕಾಂಗ್ರೆಸ್ ಆಲೋಚನೆಗೆ ವಿರುದ್ಧವಾಗಿ ಒಂದೇ ಸಾರಿಗೆ ಸ್ವರಾಜ್ಯ ಪಡೆಯೋಣ ಎನ್ನುವ ಸುಭಾಷ್ ರ ಸ್ವಾಭಿಮಾನ ನುಂಗಲಾರದ ತುತ್ತಾಗಿತ್ತು. ಆ ವರ್ಷ ಸುಭಾಷ್ ತಾವು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ಹೇಳಿದ್ದರು. ಅಲ್ಲಿಯವರೆಗೆ ಚುನಾವಣೆ ಎನ್ನುವುದು ನೆಪಮಾತ್ರವಾಗಿತ್ತು. ಗಾಂಧೀಜಿ ಯಾವುದೊ ಹೆಸರು ಸೂಚಿಸುತ್ತಿದ್ದರು, ಅವರು ಅವಿರೋಧವಾಗಿ ಆಯ್ಕೆ ಆಗುತ್ತಿದ್ದರು. ಚುನಾವಣೆ ಎನ್ನುವುದು ಬರಿ ನೆಪಮಾತ್ರವಾಗಿತ್ತು. ಹೀಗಿರುವಾಗ ಸುಭಾಷ್ ಸ್ಪರ್ಧಿಸುತ್ತಾರೆ ಎನ್ನುವುದು ಗಾಂಧೀಜಿಗೆ ಅರಗಿಸಿಕೊಳ್ಳಲು ಆಗಿರಲಿಲ್ಲ.
ಕಾರ್ಯಕಾರಿಣಿ ಗಾಂಧೀಜಿಯ ಅಭಿಪ್ರಾಯದ ಮೇರೆಗೆ ಪಟ್ಟಾಭಿ ಸೀತಾರಾಮಯ್ಯ ಅವರ ಹೆಸರು ಸೂಚಿಸಿತು. ಅಧ್ಯಕ್ಷ ಸ್ಥಾನ ಎನ್ನುವುದು ಕೂಡ ಬರಿ ನೆಪಮಾತ್ರವಾಗಿದ್ದು ಸುಳ್ಳಲ್ಲ. ಸುಭಾಷ್ ಹಿಂದೆ ಸರಿಯಲಿಲ್ಲ. ಚುನಾವಣೆ ನಡೆದು ಗಾಂಧೀಜಿ ಬಹಿರಂಗವಾಗಿ ಬೆಂಬಲಿಸಿದ್ದ ಪಟ್ಟಾಭಿ ಅವರು ಸೋತು ಸುಭಾಷ್ ಜಯ ಗಳಿಸಿಬಿಟ್ಟರು. ಪಟ್ಟಾಭಿ ಅವರ ಸೋಲು ತನ್ನ ಸೋಲು ಎಂದುಕೊಂಡರು ಗಾಂಧೀಜಿ. ಇದರ ಪರಿಣಾಮವಾಗಿ ಅವರನ್ನು ಹೀನಾಯವಾಗಿ ನಡೆಸಿಕೊಂಡಿತು ಕಾಂಗ್ರೆಸ್. ಬ್ರಿಟಿಷರು ಆರು ತಿಂಗಳ ಒಳಗೆ ಭಾರತ ಬಿಟ್ಟು ಹೋಗಬೇಕು ಎಂಬ ಸುಭಾಷರ ಗೊತ್ತುವಳಿಯನ್ನು ಗಾಂಧೀಜಿ ವಿರೋಧಿಸಿದರು. ಈ ಒಳಸುಳಿ ರಾಜಕೀಯ ನೋಡಿ ಬೇಸತ್ತು ಸುಭಾಷ್ ರಾಜೀನಾಮೆ ನೀಡಿದರು. ಇಷ್ಟೆಲ್ಲಾ ಆದರೂ ಸುಭಾಷ್ ಎಂದು ಗಾಂಧೀಜಿಯ ಬಗ್ಗೆ ಹಗುರವಾಗಿ ಒಮ್ಮೆಯೂ ಮಾತಾಡಲಿಲ್ಲ.
ಅವರ ಉದ್ದೇಶ ಭಾರತ ಸ್ವತಂತ್ರ್ಯವಾಗಬೇಕು ಅನ್ನುವುದಷ್ಟೇ. ತನಗೆ ಹೆಸರು, ಅಧಿಕಾರ ಬರಬೇಕು ಎನ್ನುವ ಯಾವ ಸಣ್ಣ ಆಲೋಚನೆಯು ಇರಲಿಲ್ಲ. ಸ್ವಾಭಿಮಾನ ಕ್ಷಾತ್ರತ್ವದ ಭಾರತದ ನಿರ್ಮಾಣವಷ್ಟೇ ಅವರ ಗುರಿಯಾಗಿತ್ತು. ಸ್ವಾತಂತ್ರ್ಯ ಯಾವತ್ತೂ ಭಿಕ್ಷೆಯಾಗಬಾರದು ಎನ್ನುವುದು ಅವರ ಆಲೋಚನೆಯಾಗಿತ್ತು. ವಿರೋಧ ಹಾಗು ಆಪತ್ತು ಕೇವಲ ಬ್ರಿಟಿಷರಿಂದ ಮಾತ್ರವಿರಲಿಲ್ಲ. ಅವೆಲ್ಲವನ್ನು ಎದುರಿಸಿ ಗೃಹಬಂಧನದಿಂದ ಪಾರಾಗಿ ದೇಶ ವಿದೇಶ ಸುತ್ತಿ ಇಂಡಿಯನ್ ನ್ಯಾಷನಲ್ ಆರ್ಮಿ ಸೈನ್ಯ ಕಟ್ಟಿದ ಮಹಾ ಪರಾಕ್ರಮಿ ದಂಡನಾಯಕ ಸುಭಾಷ್ ಯುವಕನಾಗಿದ್ದಾಗ ಕಣ್ಣು ದುರ್ಬಲವಾಗಿದೆ ಎಂದು ಸೈನ್ಯ ಸೇರಲು ನಿರಾಕರಿಸಲ್ಪಟ್ಟಿದ್ದರು.
ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ, ಹೆಜ್ಜೆ ಹೆಜ್ಜೆಯಲ್ಲೂ ಅಪಾಯ ಎದುರಿಸಿದ್ದ ಸುಭಾಷ್ ಎಂದು ಧೃತಿಗೆಟ್ಟವರಲ್ಲ. ಅಪಾರ ಧೈರ್ಯ ಸ್ವಾತಂತ್ರ್ಯ ಪಡೆಯಲೇ ಬೇಕು ಎನ್ನುವ ದೃಢತೆ ಅವರನ್ನು ಯಾವುದರಿಂದಲೂ ಹಿಂದೆಗೆಯದ ಹಾಗೆ ಮಾಡಿತ್ತು. ಅವರು ಬರಿ ವ್ಯಕ್ತಿಯಾಗದೆ ಇಡೀ ಭಾರತದ ಯುವಕರ ಶಕ್ತಿಯಾಗಿದ್ದರು. ಆತ್ಮಾಭಿಮಾನದ ಪ್ರತೀಕವಾಗಿದ್ದರು. ಅಂತಹ ಶಕ್ತಿ ಹತ್ತಿದ್ದ ವಿಮಾನ ಆಗಸಕ್ಕೆ ಏರುವ ಮೊದಲೇ ಅಪಘಾತಕ್ಕೆ ಈಡಾಗಿತ್ತು . ಹಾಗೆ ಸ್ಫೋಟಿಸಿದ ವಿಮಾನದ ಆವರಿಸಿದ ಹೊಗೆಯ ನಡುವೆ ಏನಾಯಿತು? ಎನ್ನುವುದು ರಹಸ್ಯವಾಗಿಯೇ ಉಳಿಯಿತು. ಇಡೀ ದೇಶಕ್ಕೆ ಮಬ್ಬು ಮುಸುಕಿತು.
ಅಧಿಕಾರದ, ನಾಯಕತ್ವದ ಹಪಾಹಪಿಯ ನಡುವೆ ನಿಜವಾಗಲೂ ನಡೆದದ್ದು ಏನು ತಿಳಿಯದೆ ಹೋದರೆ, ಸ್ವಾತಂತ್ರ್ಯ ನಿಜವಾಗಲೂ ಸಿಕ್ಕಿದ್ದಾ, ಪಡೆದದ್ದಾ ಗೊತ್ತಾಗದಿದ್ದರೆ, ತ್ಯಾಗ ಬಲಿದಾನಗಳು ಅರ್ಥವಾಗದಿದ್ದರೆ ನಮ್ಮ ಗುಲಾಮಿತನ ಕಳೆಯುವುದಿಲ್ಲ. ಮುಸುಕಿನಲ್ಲಿ ಮರೆಯಾಗಿರುವ ಆತ್ಮಾಭಿಮಾನ ದಕ್ಕುವುದಿಲ್ಲ. ಸುಭಾಷ್ ಜನ್ಮದಿನ ಪರಾಕ್ರಮ ದಿನವಾಗಿ ಆಚರಿಸುವುದು ನಿಜವಾಗಲೂ ಒಳ್ಳೆಯ ಹೆಜ್ಜೆ. ಹಾಗೆ ಅವರ ಸಾವಿನ ಬಗ್ಗೆ ರಹಸ್ಯಗಳು ಬದಲಾದರೆ ಅದು ಅವರಿಗೆ ಸಲ್ಲಿಸುವ ಗೌರವದ ಜೊತೆಜೊತೆಗೆ ಕ್ಷಾತ್ರತ್ವದ ಪುನರುತ್ಥಾನ ಕೂಡ.
ಗುಲಾಮಗಿರಿಯ ಪೊರೆ ಹರಿದು ದೃಷ್ಟಿ ನಿಚ್ಛಳವಾಗಲಿ.
ನಿಜವಾಗಲೂ ನಡೆದದ್ದೇನು ಜಗತ್ತಿಗೆ ತಿಳಿಯಲಿ.
ಸುಭಾಷ್ ಮನೆ ಮನದಲ್ಲಿ ಬೆಳಗಲಿ.
ಶೋಭಾರಾವ್