spot_img
spot_img

“ಬದುಕು ಬಂಡಿ” ಸಿನೇಮಾ ಆದ “ಕತೆಯಲ್ಲ ಜೀವನ”

Must Read

- Advertisement -

ಇದೇ ಮಾರ್ಚ 19 ರಂದು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಡಾ.ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಬದುಕು ಬಂಡಿ ಚಲನಚಿತ್ರ ಪ್ರೋಮೋ ಮತ್ತು ವೈ.ಬಿ.ಕಡಕೋಳರ ಸಂಪಾದಕತ್ವದ ಮನೆಮದ್ದು ಕೃತಿ ಲೋಕರ್ಪಾಣೆಗೊಳ್ಳಲಿದೆ.ಈ ಚಲನಚಿತ್ರ ಬಿಡುಗಡೆಯನ್ನು ಸನ್ಮಾನ್ಯ ಶಿಕ್ಷಣ ಸಚಿವರಾದ ಸುರೇಶಕುಮಾರ್ ನೆರವೇರಿಸಲಿದ್ದು.ಕಾರ್ಯಕ್ರಮದ ಉದ್ಘಾಟನೆಯನ್ನು ವಿಧಾನಸಭಾ ಸಭಾಪತಿಗಳಾದ ಬಸವರಾಜ ಹೊರಟ್ಟಿಯವರು ನೆರವೇರಿಸುವರು.‌ ಮನೆಮದ್ದು ಪುಸ್ತಕ ಲೋಕಾರ್ಪಣೆಯನ್ನು ಧಾರವಾಡ ಗ್ರಾಮೀಣ ಶಾಸಕರಾದ ಅಮೃತ ದೇಸಾಯಿ ನೆರವೇರಿಸಲಿರುವರು.

ಸವದತ್ತಿ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ವಿಕಲಚೇತನ ಸಂಪನ್ಮೂಲ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ವೈ.ಬಿ.ಕಡಕೋಳ ಸಂಪಾದಿಸಿ ಪ್ರಕಟಿಸಿದ್ದ ಕತೆಯಲ್ಲ ಜೀವನ(2018) ಕೃತಿಯಾಧಾರಿತ ವಿಷಯವನ್ನಿಟ್ಟುಕೊಂಡು ಧಾರವಾಡದ ನವರಸ ಸ್ನೇಹಿತರ ವೇದಿಕೆಯಲ್ಲಿ ಶಿಕ್ಷಕರಾದ ಬಾಬಾಜಾನ್ ಮುಲ್ಲಾ ಮತ್ತು ನಂದಕುಮಾರ ದ್ಯಾಂಪುರ ಸೇರಿ ಬದುಕು ಬಂಡಿ ಚಲನಚಿತ್ರ ಚಿತ್ರೀಕರಣ ಮಾಡಿ ಶಿಕ್ಷಕರೊಬ್ಬರ ಆತ್ಮಕಥನವನ್ನು ಸಿನೇಮಾ ಮಾಡುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.

- Advertisement -

ಜೀವನದಲ್ಲಿ ಮನುಷ್ಯನಿಗೆ ಅನೇಕ ಕಷ್ಟಗಳು ಬರುವುದು ಸಹಜ. ಆ ಕಷ್ಟಗಳನ್ನು ಮೆಟ್ಟಿನಿಂತು ಸಮಾಜಕ್ಕೆ ಅದರಲ್ಲಿಯೂ ದೇಶದ ಭಾವೀ ಸತ್ಪ್ರಜೆಗಳಾದ ಶಾಲಾ ಮಕ್ಕಳಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ನಿಸ್ವಾರ್ಥವಾಗಿ ಸೇವೆ ಮಾಡಿ ಈಗ ನಿವೃತ್ತರಾದರೂ ಮಕ್ಕಳಿಗೆ ಪಾಠ ಮಾಡುತ್ತ ಒಂಟಿ ಪಯಣದ ಬದುಕನ್ನು ಬದುಕುತ್ತಿರುವ ದತ್ತಿದಾನಿ ಮಾತೆ ಲೂಸಿ ಸಾಲ್ಡಾನಾ.

ಉಡುಪಿ ಹತ್ತಿರದ ಬೈಂದೂರಿನ ಕುಟುಂಬದ ಲೂಸಿ ಬಾಲ್ಯದಲ್ಲಿ ತಂದೆ ತಾಯಿಯೊಂದಿಗೆ ಮುಂಬೈಗೆ ರೈಲಿನಲ್ಲಿ ಹೊರಟಾಗ ಹುಬ್ಬಳ್ಳಿಯ ರೈಲು ನಿಲ್ದಾಣದಲ್ಲಿ ರೈಲು ನಿಂತ ಸಂದರ್ಭ, ವಿಪರೀತ ಬಾಯಾರಿಕೆಯಾದ ಲೂಸಿ ರೈಲಿನಿಂದಿಳಿದು ಹತ್ತಿರದ ನಲ್ಲಿಯಲ್ಲಿ ನೀರು ಕುಡಿಯುವಷ್ಟರಲ್ಲಿ ರೈಲು ಹೊರಟು ಹೋಗಿ ಅನಾಥಳಾಗಿ ಸವದತ್ತಿ ತಾಲೂಕಿನ ವ್ಯಕ್ತಿಯೋರ್ವರು ಅವಳನ್ನು ಜೋಪಾನ ಮಾಡುವ ಮೂಲಕ ಬದುಕಿನ ಹೊಸ ಅಧ್ಯಾಯವನ್ನು ಕಂಡ ಲೂಸಿಯವರ ಬದುಕು ಕತೆಯಲ್ಲ ಜೀವನ ವೈ.ಬಿ.ಕಡಕೋಳರ ಸಂಪಾದಕತ್ವದಲ್ಲಿ 2018 ರಲ್ಲಿ ಪ್ರಕಟವಾಯಿತು.

ಕಥೆಯಲ್ಲ ಜೀವನ : ಈ ಕೃತಿ 2018 ರಲ್ಲಿ ಶಿವಲೀಲಾ ಪ್ರಕಾಶನ ಮುನವಳ್ಳಿಯಿಂದ ಪ್ರಕಟವಾಗಿದೆ. 108 ಪುಟಗಳ ಹರವು ಪಡದಿದೆ. ಇದು ಲೂಸಿ ಸಾಲ್ಡಾನ ಅವರ ಆತ್ಮಕಥೆಯನ್ನು ವೈ.ಬಿ.ಕಡಕೋಳ ಅವರು ವ್ಯವಸ್ಥಿತವಾಗಿ ಸಂಪಾದಿಸಿದ್ದಾರೆ. ಲೂಸಿ ಸಾಲ್ಡಾನಾ ಅವರ ಕಷ್ಟದ ಬದುಕಿನ ನೋವು, ನಲಿವು, ವೃತ್ತಿ ಬದುಕಿನ ನೆನಪುಗಳ ಬರಹಕ್ಕೆ ಒಂದು ರೂಪಕೊಟ್ಟ ಶ್ರಮ ಎದ್ದುಕಾಣುವದು.

- Advertisement -

ಬದುಕು ಬಂಡಿ ಚಿತ್ರಕಲಾ ಶಿಕ್ಷಕ ಬಾಬಾಜಾನ್ ಮುಲ್ಲಾ ಮತ್ತು ಶಿಕ್ಷಕ ನಂದಕುಮಾರ ದ್ಯಾಂಪೂರ ಇಬ್ಬರೂ ನವರಸ ಸ್ನೇಹಿತರ ವೇದಿಕೆ ಧಾರವಾಡ ಇವರ ಮೂಲಕ ನಿರ್ಮಿಸಿ ನಿರ್ದೇಶನ ಮಾಡಿರುವ ಚಲನಚಿತ್ರ. ಈ ಚಲನಚಿತ್ರದಲ್ಲಿ ಗಿಣಿರಾಮ ಧಾರಾವಾಹಿಯ ನಟಿ ಅನ್ನಪೂರ್ಣ ಉಂಡಿ ನಟಿಸಿದ್ದು ಕತೆಗಾರ ವೈ.ಬಿ.ಕಡಕೋಳ ಸಹ ಪಾತ್ರ ನಿರ್ವಹಿಸುವ ಮೂಲಕ ಸವದತ್ತಿಯ ಓರ್ವ ಬರಹಗಾರರ ಕತೆ ಚಲನಚಿತ್ರವಾಗುವ ಜೊತೆಗೆ ಅವರೂ ಚಲನಚಿತ್ರದಲ್ಲಿ ಮಾಧ್ಯಮ ಪ್ರತಿನಿಧಿಯಾಗಿ ನೈಜ ಹೆಸರಿನ ಪಾತ್ರದಲ್ಲಿ ಅಭಿನಯಿಸಿದ್ದು ಸವದತ್ತಿ ತಾಲೂಕಿನ ಹೆಮ್ಮೆ.ಶಿಕ್ಷಕ ಸಾಹಿತಿ ವೈ.ಬಿ.ಕಡಕೋಳ ಕಳೆದ ಇಪ್ಪತ್ತೈದು ವರ್ಷಗಳಿಂದ ಸವದತ್ತಿ ತಾಲೂಕಿನ ಶಿಕ್ಷಕರಾಗಿ ಸಂಪನ್ಮೂಲ ವ್ಯಕ್ತಿಗಳಾಗಿ ಸದ್ಯ ವಿಕಲಚೇತನ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸುವ ಜೊತೆಗೆ ಸಾವು ಬದುಕಿನ ನಡುವೆ(ಕಥಾ ಸಂಕಲನ) ಸಂಸ್ಕಾರಫಲ(ಮಕ್ಕಳ ಕಥಾ ಸಂಕಲನ) ಚರಿತ್ರೆಗೊಂದು ಕಿಟಕಿ ( ಅಂಕಣ ಬರಹ) ದೇಗುಲ ದರ್ಶನ. ಪಯಣಿಗ (ಪ್ರವಾಸ ಕಥನ) ಕತೆಯಲ್ಲ ಜೀವನ. ಅಮೃತಧಾರೆ.ಒಂಟಿ ಪಯಣ.ಗುರು ಶಿಷ್ಯರ ಅಪೂರ್ವ ಸಂಗಮ.

ಮನೆಮದ್ದು(ಸಂಪಾದಿತ ಕೃತಿಗಳು) ಕೃತಿಗಳನ್ನು ಪ್ರಕಟಿಸಿದ್ದು. ಚರಿತ್ರೆಗೊಂದು ಕಿಟಕಿ ಗುಲ್ಬರ್ಗ ಜಿಲ್ಲೆಯ ಅಕ್ಷರ ಲೋಕದ ನಕ್ಷತ್ರ ಮತ್ತು ಪಯಣಿಗ ಹಾರೂಗೇರಿಯ ಅಜೂರ ಪ್ರತಿಷ್ಠಾನದ ಪ್ರಶಸ್ತಿಗೆ ಪಾತ್ರವಾಗಿವೆ.‌ ಇವರ ಕತೆಯೊಂದು ಸಿನೆಮಾ ಆಗುವ ಮೂಲಕ ಹೊಸ ಭಾಷ್ಯ ಬರೆದಿದೆ ಮುಂಬರುವ ದಿನಗಳಲ್ಲಿ ಇವರಿಗೆ ಇನ್ನೂ ಹೆಚ್ಚಿನ ಸಾಹಿತ್ಯ ಕ್ಷೇತ್ರದ ಅವಕಾಶ ದೊರೆಯುವಂತಾಗಲಿ ಇವರ ಕೃತಿಗಳು ಚಲನಚಿತ್ರವಾಗಲಿ ಎಂದು ಹಾರೈಸುವೆ.

ಕರಳು ಕರಗಿಸುವ ‘ಕಥೆಯಲ್ಲ ಜೀವನ’

ಶ್ರೀ ವೈ.ಬಿ. ಕಡಕೋಳರು ಸಂಪಾದಿಸಿದ ಕಥೆಯಲ್ಲ ಜೀವನ ಕೃತಿ ಲೂಸಿ ಸಾಲ್ಡಾನ ಅವರ ಆತ್ಮಕಥೆ. ಈ ಆತ್ಮಕಥೆಯನ್ನು ಅಚ್ಚುಕಟ್ಟಾಗಿ ಸಂಪಾದಿಸಿ ಕೊಟ್ಟಿರುವದು ಸ್ವಾಗತಾರ್ಹ ಕಾರ್ಯವೆ. ಶಿಕ್ಷಕರಾದ ಕಡಕೋಳ ಅವರು ಇನ್ನೊಬ್ಬ ಶಿಕ್ಷಕರ ಆತ್ಮಕಥನವನ್ನು ಸಂಪಾದಿಸಿ ಬೆಳಕಿಗೆ ತಂದಿರುವದು ವಿಶೇಷ ಮತ್ತು ಅರ್ಥಪೂರ್ಣವೆನಿಸಿದೆ.
‘ಜಗವೆಲ್ಲ ನಗುತಿರಲಿ, ಜಗದಳಿವು ನನಗಿರಲಿ’ ಎಂದಿರುವ ಕವಿ ಈಶ್ವರ ಸಣಕಲ್ಲ ಅವರ ಮಾತುಗಳು ಲೂಸಿ ಸಾಲ್ಡಾನ ಗುರುಮಾತೆಯವರ ಬದುಕಿಗೆ ಹೇಳಿಮಾಡಿಸಿದಂತಿದೆ. ಬದುಕಿನ ಬವಣೆ ಬೆನ್ನಿಗೆ ಕಟ್ಟಿಕೊಂಡು ಹೆಣ್ಣು ಅಬಲೆಯಲ್ಲಿ ಸಬಲೆ ಎಂದು ಸಾಧಿಸಿ ವರ್ತಮಾನ ಸಮಾಜಕ್ಕೆ ತೋರಿಸಿಕೊಟ್ಟು ಶಿಕ್ಷಕ ವೃತ್ತಿಗೆ ಕಳೆ ತಂದವರು. ಬದುಕಿನ ಬೆಂಕಿಯಲ್ಲಿ ಬಹಳಷ್ಟು ಬೆಂದು ನೊಂದು ಸಹಜವಾಗಿ ಸಾಧಿಸಿದವರು. ಸಮಾಜದಲ್ಲಿ, ವೃತ್ತಿಯಲ್ಲಿ ಬಾನಂಗಳದ ಬೆಳ್ಳಿಚುಕ್ಕೆಯಂತೆ ಬೆಳಕಾದವರು ಅವರ ಈ ಆತ್ಮಕಥೆಯಲ್ಲಿ ಮೂಡಿ ಬಂದಿರುವ ಹಲವಾರು ವಿಚಾರಗಳು ಸಾಕ್ಷೀಕರಿಸಿ ಪುಷ್ಠಿ ನೀಡುತ್ತವೆ. ಈ ಗುರುಮಾತೆಯ ವ್ಯಕ್ತಿತ್ವ ಎತ್ತರದಲ್ಲಿ ತಂದು ನಿಲ್ಲಿಸಿವೆ. ಸದಾ ತಾವು ಕಾರ್ಯ ಮಾಡುವ ‘ಶಾಲೆ’ ಹೀಗೆ ಇರಬೇಕು ಎಂದು ಬಯಸಿ, ಶಾಲಾಮಕ್ಕಳ ಬೆಳವಣಿಗೆ ಅಭಿವೃದ್ಧಿಯಾಗಿ, ಸುಂದರ ಸಮಾಜಕ್ಕೆ ಬೆಳೆವ ಈ ಸಸಿಗಳು ಮುಂದೆ ಹೆಮ್ಮರವಾಗಿ ಸಮಾಜಕ್ಕೆ ನೆರಳಾಗಬೇಕೆಂದು ಕನಸು ಕಂಡು, ನನಸು ಮಾಡಿತೋರಿದ ಗಟ್ಟಿ ಹೃದಯದವರು ಈ ಸಾಲ್ಡಾನ್ ಗುರುಮಾತೆ ಅವರು. ಶಾಲೆಯೇ ದೇವಾಲಯ, ಮಕ್ಕಳೇ ದೇವರು, ನಾವು ಅರ್ಚಕರೆಂದು ಭಾವಿಸಿ ಈ ಪವಿತ್ರ ವೃತ್ತಿಗೆ ಗೌರವ ತಂದವರು.

ವೃತ್ತಿ ಜೀವನದ ತೊಡಕು ತೊಂದರೆ ಸಹಿಸಿ ಸುಂದರ ಸಮಾಜ ನಿರ್ಮಾಣಕ್ಕೆ ಕಟಿಬದ್ಧರಾಗಿ ನಿಂತು ಪ್ರೇರಣೆಯಾದವರು ವಾಸ್ತವಕ್ಕೆ.
ಲೂಸಿ ಸಾಲ್ಡಾನ ಅವರ ಬದುಕು ಕಷ್ಟಗಳ ಸರಮಾಲೆಯಲ್ಲಿ ಮೈದಾಳಿ ಅರಳಿರುವದಂತಹದ್ದು. ಇವರು ಮೂಲತಃ ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ, ಬೈಲೂರಿನ ಕ್ರಿಶ್ಚಿಯನ್ ಸಮುದಾಯದಲ್ಲಿ ಜನಿಸಿದವರು. ಇವರ ತಂದೆ-ತಾಯಿಗಳಿಗೆ ಹತ್ತು ಜನ ಮಕ್ಕಳು ಅದರಲ್ಲಿ ಕೊನೆಯ ಮಗಳೆ ಸಾಲ್ಡಾನ ಅವರು. ಶ್ರೀಮಂತ ಕುಟುಂಬದಲ್ಲಿ ಹುಟ್ಟಿ ಬೆಳೆದವರು.

ಮೂರನೆಯ ತರಗತಿ ಕಲಿಯುವಾಗ ರಜೆಯಲ್ಲಿ ಇವರ ತಂದೆ ಇವರನ್ನು, ಮುಂಬೈನ ಅವರ ಅಕ್ಕನ ಮನೆಗೆ ಕರೆದುಕೊಂಡು ಹೋಗುವಾಗ ರೈಲಿನಲ್ಲಿ ಪ್ರಯಾಣ ಬೆಳೆಸಿದರು ಕಡೂರಿನಿಂದ. ಇವರಿಗೆ ಬಹಳಷ್ಟು ಬಾಯಾರಿಕೆ ಅಷ್ಟರಲ್ಲಿ ಹುಬ್ಬಳ್ಳಿ ರೈಲು ನಿಲ್ದಾಣ ಬರುವದು. ಇವರ ತಂದೆಗೆ ನಿದ್ರೆ ಆವರಿಸಿರುವದು. ಅವರಿಗೆ ಹೇಳದೆ ನೀರು ಕುಡಿಯಲು ಇಳಿದಾಗ ರೈಲು ಹೋಗುವದು. ಇವರ ಮಾತೃಭಾಷೆ ಕೊಂಕಣಿ. ಹುಬ್ಬಳ್ಳಿ ರೈಲು ಇಲಾಖೆಯವರು ಇವರು ಅಳುವದನ್ನು ಗಮನಿಸಿ ತಮ್ಮ ಮನೆಗೆ ಕರೆದುಕೊಂಡು ಹೋಗಿ ಜೋಪಾನ ಮಾಡುವರು ಮುಂದೆ ಆಶ್ರಯ ನೀಡಿದವರೆ ಇವರನ್ನು ಮುದುವೆಯಾಗುವರು.

ಮದುವೆಯಾದ ಹೊಸತರಲ್ಲಿ ಗಂಡ ತೀರಿ ಹೋಗುವನು. ಮುಂದೆ ದಿಕ್ಕು ತೋಚದೆ ತಾನು ಹುಟ್ಟಿ ಬೆಳೆದ ಊರಿಗೆ ಹೋಗುವರು ಅಲ್ಲಿನ ಪರಿಸರವೂ ಒಗ್ಗದೆ ಮತ್ತೆ ಹುಬ್ಬಳ್ಳಿಗೆ ಬಂದು ಕಷ್ಟದಲ್ಲೆ ಕಲಿತು ಶಿಕ್ಷಕಿಯಾಗುವರು. ಮುಂದೆ ಸಾಕಷ್ಟು ವರ ಮದುವೆಯಾಗಲು ಬಂದರೂ ಮದುವೆ ತಿರಸ್ಕರಿಸಿ ಏಕಾಂಗಿ ಜೀವನ ನಡೆಸಿದವರು. ಜೀವನದ ಬಹುಪಾಲು ಸಮಯವನ್ನು ಶಾಲೆಯ ಮಕ್ಕಳು, ಶಾಲೆ ಪಾಠ ಬೋಧನೆಗೆ ಮುಡಿಪಾಗಿ ಇಟ್ಟವರು. ಅನೇಕ ಸರಕಾರಿ ಶಾಲೆಗಳಿಗೆ ದತ್ತಿ ನಿಧಿ ಸ್ಥಾಪಿಸಿ ಪ್ರೇರಣೆಯಾಗಿದ್ದಾರೆ. ವೃತ್ತಿಯಿಂದ ನಿವೃತ್ತರಾದರೂ ಸರಕಾರಿ ಶಾಲೆಗೆ ದಿನವೂ ಹೋಗಿ ಉಚಿತವಾಗಿ ಪಾಠಮಾಡಿ ಬರುವದು ಇವರ ಹವ್ಯಾಸವಾಗಿದೆ. ಇಂತಹ ಅಮೂಲ್ಯ ವಿಚಾರಗಳು ತುಂಬಿರುವ ಆದರ್ಶ ಮಹಿಳಾ ಶಿಕ್ಷಕಿಯ ಜೀವನ ಅನೇಕ ಮಜಲುಗಳ ಸುಂದರ ಹೂರಣವೆ ಈ ಕೃತಿ.

ಕಡಕೋಳ ಅವರು ಹವ್ಯಾಸ ಹದಗೊಳಿಸಿ ನೈಜತೆಯಿಂದ ಬರೆಯುವ ಬರಹಗಾರರು. ಇವರು ಆಸಕ್ತಿಯಿಂದ ಈ ಕೃತಿಯನ್ನು ಅಚ್ಚುಕಟ್ಟಾಗಿ ಹೊಂದಿಸಿ ಕೊಟ್ಟಿರುವದು ಸರಿಯಾಗಿದೆ. ಪರಿವಿಡಿಯಲ್ಲಿ ಹೊಂದಿಸಿದ ಶೀರ್ಷಿಕೆ, ಉಪಶೀರ್ಷಿಕೆಗಳು ಸುಂದರವಾಗಿ ಮೂಡಿ ಬಂದಿರುವದನ್ನು ಕಾಣಬಹುದು. ಲೂಸಿ ಸಾಲ್ಡಾನಾ ಆತ್ಮ ಚರಿತ್ರೆ ಬದುಕಿನ ಪುಟಗಳು, ಬಾಲ್ಯ, ಮರೆಯದ ಘಟನೆ, ತಂದೆಯ ಬದುಕು ಕಲಿಸಿದ ಪಾಠ, ಜಾತೀಯತೆಯ ಭೇದಭಾವ ಅಂದು, ಅಕ್ಕನ ಸ್ವಭಾವ, ಬದುಕಿನ ತಿರುವು, ತಿರುವಿನೊಡನೆ ಜೀವನ ಪಯಣ, ನೋವಿನ ನುಡಿ ತಿರುವಿನ ಒಡಲು, ಬದುಕು ಜಟಕಾ ಬಂಡಿ, ಬದುಕಿಗೆ ನೆರವಾದವರ ಹಿನ್ನೆಲೆ, ಕಣ್ಣೀರಧಾರೆ ಇದೇಕೆ ಹೀಗೇಕೆ?, ಭಯ ನಿರ್ಭಯ, ಅರಳಿದ ಕುಸುಮ, ಮದುವೆಯ ಈ ಬಂಧ, ಟೈಫಾಯ್ಡಗೆ ತುತ್ತಾಗಿದ್ದು, ಬದುಕೊಂದು ದೈವ ಲೀಲೆ ಚದುರಂಗದ ಆಟ, ನೋವುಗಳ ನಡುವೆ ಮರಳಿ ಊರಿಗೆ, ಜ್ಞಾನದ ಬೆಳಕಿನೆಡೆಗೆ, ನೆಚ್ಚಿನ ಗುರು ವೃಂದದ ಒಡನಾಡದಲ್ಲಿ, ಕಾಲೇಜು ವ್ಯಾಸಂಗದತ್ತ, ವಿವಾಹದ ಚರ್ಚೆಯಲ್ಲಿ ವಿದ್ಯಾರ್ಥಿ ಜೀವನ, ಸಹೋದರ ಸಹೋದರಿಯರ ಬದುಕು, ವಿದ್ಯಾರ್ಥಿ ಬದುಕಿನ ನೆನಪುಗಳು, ವೆಂಕಟೇಶರ ಮದುವೆ ಪ್ರಸ್ತಾಪ, ಉನ್ನತ ವ್ಯಾಸಂಗದ ಬದುಕು, ಶಿಕ್ಷಕ ವೃತ್ತಿಯ ಬದುಕು, ಸದ್ಲಾಪೂರರ ನಿಧನದ ಆಘಾತ, ಕಲಘಟಗಿಯಿಂದ ಹುಬ್ಬಳ್ಳಿಯತ್ತ ವೃತ್ತಿ ಬದುಕು, ಲೂಸಿ ಸಾಲ್ಡಾನರವರ ದತ್ತಿ ಇಟ್ಟ ಶಾಲೆಗಳ ವಿವರ. ವೃತ್ತಿ ಬದುಕಿನ ಕೊನೆಯ ಪುಟಗಳು, ದತ್ತಿ ಇಟ್ಟ 65 ಶಾಲೆಗಳ ವಿವರ. ಇದರಲ್ಲಿ ಅಡಕವಾಗಿದೆ.

ಅಷ್ಟೇ ಅಲ್ಲದೇ ‘ಬಡವರ ಪಾಲಿನ ಸರಕಾರಿ ಶಾಲೆಗೆ ದತ್ತಿ ನೀಡಿದ ಮಹಾದಾನಿ ಲೂಸಿ ಸಾಲ್ಡಾನಾ’ ಇದು ಇವರ ವಿದ್ಯಾರ್ಥಿ ಎಲ್.ಡಿ.ಲಕ್ಕಮ್ಮನವರ ಬರೆದ ಲೇಖನ, ನಂತರ ಮೇಡಂ ಸಾಲ್ಡಾನ್ ಇದನ್ನು ಶ್ರೀಮತಿ ಶಾರದಾ.ಮೆ. ಜಯರಾಮನವರು ಬರೆದಿರುವರು. ಪ್ರತಿಭಾನ್ವಿತ ಬಡಮಕ್ಕಳ ಆಶಾಕಿರಣ ಸಾಲ್ಡಾನಾ ಮೇಡಂ ಇದನ್ನು ಶ್ರೀಮತಿ ಕೀರ್ತಿವತಿ ವಿ.ಎನ್. ರಚಿಸಿದ್ದಾರೆ. ಶ್ರೀಮತಿ ಲೂಸಿ ಸಾಲ್ಡಾನಾ ನಿವೃತ್ತಿ ಶಿಕ್ಷಕಿಯರ ಬಗ್ಗೆ ಅನಿಸಿಕೆಗಳು ಇದನ್ನು ಶ್ರೀ ಎ.ಎಂ. ಲೋಬೋ ಅವರು ರಚಿಸಿದ್ದಾರೆ. ಆರಂಭದಲ್ಲಿ ಸಂಪಾದಕರ ನುಡಿ, ಖ್ಯಾತ ಪರಿಸರವಾದಿ ಸುರೇಶ ಹೆಬ್ಳಿಕರ ಅವರ ಮುನ್ನುಡಿ, ಶ್ರೀಮಹಾಂತ ಸ್ವಾಮಿಗಳವರ ಆಶಯ ನುಡಿ, ಕ್ಷೇತ್ರ ಸಮನ್ವಯಯಾಧಿಕಾರಿಗಳವರಾದ ಡಾ. ರೇಣಗಿ ಅಮಲಝರಿ ಅವರ ಅಭಿಪ್ರಾಯ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ವಿದ್ಯಾ ನಾಡಿಗೇರ ಅವರ ನೋವುಂಡು ನಲಿದವರು ಕವಿತೆ ಎಡೆಪಡೆದರೆ. ಲೂಸಿ ಸಾಲ್ಡಾನವರ ಸ್ಮರಣಿಯ ಭಾವಚಿತ್ರಗಳು ಬೆನ್ನುಡಿ ಬರೆದ ಶ್ರೀಮತಿ ವಿದ್ಯಾ ನಾಡಿಗೇರ ಅವರುಗಳ ಬರಹಗಳು ಕೃತಿ ಸೌಂದರ್ಯಕ್ಕೆ ಪೂರಕವೆನಿಸಿವೆ ಎಂದು ಹೇಳಬಹುದು.

ಈ ಆತ್ಮ ಕಥನವನ್ನು ಸಂಪಾದಿಸಲು ಒದಗಿ ಬಂದ ಅವಕಾಶವನ್ನು ಸಂಪಾದಕರಾದ ಕಡಕೋಳ ಅವರು ಹೇಳುವದು ಹೀಗಿದೆ. ಲೂಸಿ ಸಾಲ್ಡಾನ್ ಮಾತೆಯವರನ್ನು ನಾನು ನೋಡಿದ್ದು ಅವರು ಹೆಬ್ಬಳ್ಳಿಯಲ್ಲಿದ್ದಾಗ. ನಮ್ಮ ತಾಯಿಯ ಜೊತೆ ಹೆಬ್ಬಳ್ಳಿಗೆ ಜಾತ್ರೆಗೆ ಚಿಕ್ಕವನಿದ್ದಾಗ ಹೋಗುತ್ತಿದ್ದೆ. ಆಗ ಲಕ್ಕಮ್ಮನವರ ಗುರುಗಳು ನಮ್ಮ ಗುರುಮಾತೆಯವರ ಮನೆಗೆ ಹೋಗೋಣ ಬಾ ಎಂದು ನನ್ನನ್ನು ಕರೆದೊಯ್ಯುತ್ತಿದ್ದರು. ಅವರು ಲಕ್ಕಮ್ಮನವರಿಗೆ ಅಚ್ಚು ಮೆಚ್ಚಿನ ಗುರುಮಾತೆಯಾಗಿದ್ದರು. ಆಗ ನಮಗೆ ಅಷ್ಟೊಂದು ತಿಳಿವಳಿಕೆ ಇರದು.

ಈಗ ಅವರ ಬದುಕಿನ ಚಿತ್ರಣವನ್ನು ಕಾರ್ಯಬಾಹುಳ್ಯದಿಂದ ಶ್ರೀಮತಿ ವಿದ್ಯಾ ನಾಡಿಗೇರ ಕ್ಷೇತ್ರ ಶಿಕ್ಷಣಾಧಿಕಾರಿಗಳು ನನ್ನ ಹೆಗಲಿಗೆ ನೀಡಿದಾಗ ಅದೊಂದು ಗುರುಕೃಪೆ ಎಂದು ಸ್ವೀಕರಿಸಿದೆ. ಹಂತ ಹಂತವಾಗಿ ಅವರ ಬದುಕಿನ ಚಿತ್ರಣವನ್ನು ಅವರದೇ ಶೈಲಿಯಲ್ಲಿ ನಿರೂಪಿಸುತ್ತ ಬದುಕಿನ ಘಟನೆಗಳಿಗೆ ಪೂರಕವಾಗಿ ಅಲ್ಲಲ್ಲಿ ಸಹ ಶಿರ್ಷಿಕೆಗಳನ್ನು ನೀಡುತ್ತ ಹೋದಂತೆ ಗುರುಮಾತೆಯ ಬದುಕಿನ ಚಿತ್ರಣ ಕಣ್ಣಂಚಲ್ಲಿ ನೀರು ತರಿಸಿತ್ತು. ಇಂದು ನಾವು ಇಂತಹ ಅಪರೂಪದ ವ್ಯಕ್ತಿತ್ವವುಳ್ಳ ಗುರುಮಾತೆಯರನ್ನು ಕಾಣುವುದು ತುಂಬ ವಿರಳ. ಅವರ ಬದುಕೇ ನಮಗೊಂದು ಆದರ್ಶ. ಪ್ರತಿ ಪುಟಗಳಲ್ಲೂ ಅದರ ಜೀವನದ ನೋವು ನಲಿವುಗಳು ತುಂಬಿಕೊಂಡಿವೆ. ಅವರ ಜೊತೆ ಬರಹಕ್ಕೆ ಸಂಬಂಧಿಸಿದಂತೆ ಹಲವು ವಿಚಾರಗಳನ್ನು ಪೋನಿನಲ್ಲಿ ಮಾತಾಡುವಾಗ ಕೂಡ ಅವರಲ್ಲಿನ ಸ್ಪಷ್ಟ ವಿಚಾರದಾರೆಗಳು ನನಗೆ ಮಾದರಿಯೆನಿಸಿದವು.

ಈ ನಿಟ್ಟಿನಲ್ಲಿ ಅವರ ಬದುಕಿನ ಚಿತ್ರಣವನ್ನು ಕಟ್ಟಿಕೊಡಲು ನನಗೆ ಅಭಿಮಾನವೆನಿಸಿದೆ ಎಂದು ಹೃದಯಾಳದ ತಮ್ಮ ಸಂಪಾದಕತ್ವದ ನಿವೇದನೆಯನ್ನು ಅಂದವಾಗಿ ಹೇಳಿದ್ದಾರೆ.

ಬಡ ಪ್ರತಿಭಾವಂತ ಗ್ರಾಮೀಣ ಕುಡಿಗಳ ಬಗ್ಗೆ ಮುಕ್ತ ಮನಸ್ಸಿನಿಂದ ಹಿತ ಬಯಸುವ ಹಿತಚಿಂತಕರು ಹುಡುಕಿದರೂ ಸಿಗದ ಈ ಕಲಿಕಾಲದಲ್ಲಿ. ನೌಕರಿ ಬಂದರೆ ಹುಟ್ಟಿದ ಊರನ್ನು ತಂದೆ-ತಾಯಿ ಬಂಧುಗಳನ್ನು ಮರೆತು. ನಾಜೂಕಿನ ಸಂಸ್ಕøತಿಯಲ್ಲಿ ಸೆರಗಿನ ಚಾಟಿನಲ್ಲಿ ಜೋಪಾನವಾಗಿ ಮಿಂಚಿ ಬಹುಬೇಗ ಮರೆಯಾಗುವ ಮಹಾನುಭಾವರೆ ಕಂಗೊಳಿಸುವ ಈ ಕಾಲದಲ್ಲಿ ಲೂಸಿ ಅವರು ಮಾದರಿಯಾಗಿ ನಿಲ್ಲುತ್ತಾರೆ ಶಿಕ್ಷಣ ಕ್ಷೇತ್ರಕ್ಕೆ ಹಗಲಿರಳು ಮಕ್ಕಳಿಗಾಗಿ ಮಿಡಿದು. ನಾಡಿನ ಸುಸಂಸ್ಕøತ ಸಂಪನ್ಮೂಲ ಬೆಳೆಸಿದವರು. ತಮ್ಮ ಬದುಕಿನ ನೋವನ್ನು ಮರೆತು ಅನೇಕ ಶಾಲೆಗಳಿಗೆ ದಾನ ಮಾಡಿ ಉಳ್ಳವರು ಕಣ್ಣು ತೆರೆಸುವಂತೆ ಮಾಡಿದ ಗುರುಮಾತೆ ಇವರು. ಬಸವ ಚಿಂತನೆಯ ದಾಸೋಹ ತತ್ವದ ಅಂಶಗಳು ಇವರು ಮಾಡುವ ಕಾಯಕದಲ್ಲಿ ಎದ್ದುಕಾನುವವು. ಮಲೆನಾಡ ಮಡಿಲಲ್ಲಿ ಹುಟ್ಟಿ ಬೆಳೆದರೂ. ಇವರ ಅಮೂಲ್ಯ ಸೇವೆ ಸಿಕ್ಕಿದ್ದು ಉತ್ತರ ಕರ್ನಾಟಕದ ಬಯಲು ಸೀಮೆಗೆ. ಇಲ್ಲಿನ ಗ್ರಾಮೀಣ ಶಾಲೆಯ ಮಕ್ಕಳ ಬಾಳು ಹಸನುಮಾಡಿ ನಂದಾದೀಪ ಹಚ್ಚಿದವರು ಲೂಸಿ ಸಾಲ್ಡಾನ್ ಗುರುಮಾತೆಯರು. ಶಾಲೆಯಲ್ಲಿ ಬರುವ ಅನೇಕ ಸಮಸ್ಯೆಗಳನ್ನು ಶಾಂತಚಿತ್ತದಿಂದ ಆಲಿಸಿ ಪರಿಹಾರ ಕಂಡುಕೊಂಡು ಎಲ್ಲರಿಗೂ ಬೇಕಾದವರು.

ಅಡುಗೆ ಪರಿಕರಗಳನ್ನು ಅಂದವಾಗಿ ಬಳಸಿ ಶುಚಿ ರುಚಿಯಾದ ಅಡುಗೆ ತಯಾರಿಸಿ ಮಕ್ಕಳಿಗೆ ವುನಿಸಿದವರು. ಮಕ್ಕಳ ಆ ತೃಪ್ತಿಕಂಡು ನಸುನಗೆ ಬೀರಿದವರು. ಶಾಲಾ ಕೈತೋಟ, ಪರಿಸರ ಕಾಳಜಿಗಳನ್ನು ಮಕ್ಕಳಲ್ಲಿ ಮೂಡಿಸಿ ಶಾಲೆಯಲ್ಲಿ ಪ್ರಯೋಗಿಸಿ ಮಂದಹಾಸದ ನಗೆ ಬೀರಿದವರು. ನುಡಿದಂತೆ ನಡೆದು ತೋರಿಸಿ ಮಕ್ಕಳ ಮನಪಠಲದಲ್ಲಿ ಮರೆಯಲಾಗದೆ ಸದಾ ಹಸಿರಾಗಿ ಉಳಿದವರು. ಮೇಲಾಧಿಕಾರಿಗಳಿಂದ ಮೆಚ್ಚುಗೆ ಗಳಿಸಿ. ಶಾಲೆಯ ಶಿಸ್ತಿಗೆ ಕಳೆತಂದವರು. ಹುಟ್ಟಿದ್ದು ಕ್ರೈಸ್ತ ಮತವಾದರೂ ಬೆಳದದ್ದು ಹಿಂದೂ ಮತ ಎರಡನ್ನೂ ಸಮನ್ವಯದಿಂದ ಕಂಡು ಆರಾಧಿಸಿದವರು. ಇಂತಹ ಮನುಷ್ಯ ಚೇತನದ ಆತ್ಮಕಥನ ಸಂಪಾದಿಸಿ ನಾಡಿನ ಸಹೃದಯ ಓದುಗರಿಗೆ ನೀಡಿದ ಕಥೆಗಾರ ಕಡಕೋಳರು ನಿಜವಾಗಲು ಧನ್ಯವೆಂದು ಹೇಳಬೇಕು. ಎಲ್ಲರೂ ತುಂಬ ಹೃದಯದಿಂದ ಅವರನ್ನು ಅಭಿನಂದಿಸಲೇಬೇಕು.


ಡಾ. ವ್ಹಿ.ಬಿ.ಸಣ್ಣಸಕ್ಕರಗೌಡರ
ಉಪನ್ಯಾಸಕರು,
ಮೊ: 9901510259

- Advertisement -
- Advertisement -

Latest News

ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸಮಾನತೆ ದೊರಕಬೇಕು- ಸಿಡಿಪಿಓ ಶ್ವೇತಾ

ಮೈಸೂರು ನಗರ ವರ್ತಲ ರಸ್ತೆಯಲ್ಲಿರುವ ಮಾರ್ವೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ...
- Advertisement -

More Articles Like This

- Advertisement -
close
error: Content is protected !!
Join WhatsApp Group