spot_img
spot_img

ಮಹಾಶಿವರಾತ್ರಿ ಹಿಂದಿನ ಕಥೆ, ಹಬ್ಬದ ಆಚರಣೆ ಏಕೆ ಗೊತ್ತಾ?

Must Read

- Advertisement -

ಹಿಂದೂಗಳ ಹಬ್ಬಗಳಲ್ಲೊಂದಾದ ಮಹಾಶಿವರಾತ್ರಿ ಆಚರಣೆಗೂ ಹಿನ್ನೆಲೆಯಿದೆ, ಅನೇಕ ಕಥೆಗಳಿವೆ. ​ಕೈಲಾಸವಾಸಿ ಶಿವನಿಗೆ ಶಿವರಾತ್ರಿ ಅತ್ಯಂತ ಪ್ರಿಯವಾದ ದಿನ. ಶಿವರಾತ್ರಿಯಂದು ತನ್ನನ್ನು ಪೂಜಿಸುವ ಭಕ್ತರಿಗೆ ತಾನು ವಿಶೇಷವಾಗಿ ಅನುಗ್ರಹ ನೀಡುವುದಾಗಿ ಸ್ವತ: ಶಿವನೇ ಪಾರ್ವತಿಯಲ್ಲಿ ಅರುಹಿದ್ದಾನೆ ಎನ್ನುತ್ತದೆ ಶಿವಪುರಾಣ. ಮಹಾ ಶಿವರಾತ್ರಿಯಂದು ಬಿಲ್ವಪತ್ರೆಯನ್ನು ಶಿವಲಿಂಗದ ಮೇಲಿಟ್ಟು ಪೂಜಿಸಿದರೆ, ಯಾಗ ಮಾಡಿದ ಫಲ ದೊರೆಯುತ್ತದೆ ಎಂದೂ ಹಿರಿಯರು ಹೇಳುತ್ತಾರೆ. ಅಲ್ಲದೆ, ಶಿವರಾತ್ರಿಯ ಆಚರಣೆ​ಗೆ ವೈಜ್ಞಾನಿಕ ಕಾರಣಗಳೂ ಇವೆ.

ಭಾರತೀಯರು ಆಚರಿಸುವ ಯಾವುದೇ ಹಬ್ಬ-ಹರಿದಿನಗಳು, ಸಮಾರಂಭ, ದಿನಾಚರಣೆ, ಜಯಂತಿ, ಉತ್ಸವಗಳು ಸಾಮಾನ್ಯವಾಗಿ ಅಮರವಾಗಿ ಉಳಿದಿರುವ ಯಾವುದೋ ಗತ ವ್ಯಕ್ತಿಯ, ಶಕ್ತಿಯ ಅಥವಾ ಪ್ರಾಚೀನತೆಯ ಪ್ರತೀಕಗಳಾಗಿರುತ್ತವೆ. ‌ ‌ ಹೀಗೆ ಹಿಂದೂಗಳ ಪ್ರಮುಖ ಹಬ್ಬಗಳಲ್ಲೊಂದಾದ ಮಹಾಶಿವರಾತ್ರಿ ಆಚರಣೆಗೂ ಹಿನ್ನೆಲೆಯಿದೆ, ಅನೇಕ ಕಥೆಗಳಿವೆ. ಶಿವನು ಪಾರ್ವತಿ ದೇವಿಯನ್ನು ವಿವಾಹವಾದ ದಿನವಾಗಿ ಶಿವರಾತ್ರಿಯೆಂದು ಹೇಳಲಾಗುತ್ತದೆ. ಅಲ್ಲದೆ, ದೇವತೆಗಳು ಹಾಗೂ ಅಸುರರ ನಡುವೆ ಸಮುದ್ರ ಮಂಥನ ನಡೆದು ವಿಷ ಉದ್ಭವವಾದಾಗ, ಅದನ್ನು ಶಿವ ಕುಡಿದ. ವಿಷ ಗಂಟಲೊಳಗಿಂದ ಇಳಿಯದಂತೆ ಪಾರ್ವತಿ ಇಡೀ ರಾತ್ರಿ ತಡೆದಳು ಎನ್ನುತ್ತದೆ ಶಿವಪುರಾಣದ ಇನ್ನೊಂದು ಮಹಿಮೆ. ಜೊತೆಗೆ, ಭಗೀರಥನ ತಪಸ್ಸಿಗೆ ಮೆಚ್ಚಿ ಇಳೆಗೆ ಇಳಿದು ಬಂದ ಗಂಗೆಯನ್ನು ಶಿವ ತನ್ನ ಜಡೆಯಲ್ಲಿ ತುಂಬಿಸಿಕೊಂಡಿದ್ದ.

ಇದರಿಂದ ವಿಚಲಿತನಾದ ಭಗೀರಥ ಗಂಗೆಯನ್ನು ಭೂಮಿಗೆ ಹರಿಸುವಂತೆ ಶಿವನನ್ನು ಪ್ರಾರ್ಥಿಸಿದ. ಆತನ ಭಕ್ತಿಗೆ ಮೆಚ್ಚಿ ಶಿವ ಗಂಗೆಯನ್ನು ಹರಿಯಬಿಟ್ಟಿದ್ದು ಇದೇ ದಿನ ಎನ್ನುತ್ತದೆ ಪುರಾಣ. ಇನ್ನು, ಶಿವನ ಆದಿ ಮತ್ತು ಅಂತ್ಯ ಹುಡುಕಲು ಹೊರಟ ವಿಷ್ಣು ಹಾಗೂ ಬ್ರಹ್ಮನಿಗೆ, ಶಿವರಾತ್ರಿಯಂದು ಶಿವ ಲಿಂಗರೂಪಿಯಾಗಿ ದರ್ಶನ ನೀಡಿದ ಎಂಬುದು ಪ್ರತೀತಿ.

- Advertisement -

ಶಿವರಾತ್ರಿ ಆಚರಣೆಯ ಹಿನ್ನೆಲೆ

ಕೈಲಾಸವಾಸಿ ಶಿವನಿಗೆ ಶಿವರಾತ್ರಿ ಅತ್ಯಂತ ಪ್ರಿಯವಾದ ದಿನ. ಶಿವರಾತ್ರಿಯಂದು ತನ್ನನ್ನು ಪೂಜಿಸುವ ಭಕ್ತರಿಗೆ ತಾನು ವಿಶೇಷವಾಗಿ ಅನುಗ್ರಹ ನೀಡುವುದಾಗಿ ಸ್ವತ: ಶಿವನೇ ಪಾರ್ವತಿಯಲ್ಲಿ ಅರುಹಿದ್ದಾನೆ ಎನ್ನುತ್ತದೆ ಶಿವಪುರಾಣ. ಮಾಘ ಬಹುಳ ಚತುರ್ದಶಿಯ ರಾತ್ರಿಯೇ ಶಿವ ಪಾರ್ವತಿಯನ್ನು ವರಿಸಿದ್ದನಂತೆ. ಹೀಗಾಗಿ ಅಂದು ರಾತ್ರಿ ದೇವಾನು ದೇವತೆಗಳೆಲ್ಲರೂ ಜಾಗರಣೆ ಮಾಡಿ, ಗಿರಿಜಾ ಕಲ್ಯಾಣ ವೀಕ್ಷಿಸಿ, ಶಿವಪಾರ್ವತಿಯರಿಬ್ಬರನ್ನೂ ಪೂಜಿಸಿದರಂತೆ. ಹೀಗಾಗಿಯೇ ಜಾಗರಣೆ ಪದ್ಧತಿ ಆಚರಣೆಗೆ ಬಂದಿದೆ ಎನ್ನಲಾಗುತ್ತದೆ.

ಪ್ರತಿ ಸಂವತ್ಸರದಲ್ಲಿ, ಶಿಶಿರ ಋತುವಿನ ಮಾಘ ಮಾಸದ ಕೃಷ್ಣಪಕ್ಷ ಚತುರ್ದಶಿಯಂದು, ರಾತ್ರಿ ವೇಳೆಯಲ್ಲಿ ಶಿವ ಪಾರ್ವತಿ ಜೊತೆಯಲ್ಲಿ ಭೂಮಿಯಲ್ಲಿ ಸಂಚರಿಸುತ್ತ ಎಲ್ಲಾ ಸ್ಥಾವರ ಜಂಗಮ ಲಿಂಗಗಳಲ್ಲಿ ಸಂಕ್ರಮಣಗೊಳ್ಳುತ್ತಾನೆ. ಆ ಸಮಯದಲ್ಲಿ ಅಂದರೆ ಶಿವರಾತ್ರಿಯಂದು ರಾತ್ರಿಯ ವೇಳೆಯಲ್ಲಿ ತನ್ನನ್ನು ಯಾರು ಪೂಜಿಸುವರೋ ಅವರ ಪಾಪಗಳು ಪರಿಹಾರವಾಗುತ್ತವೆ ಎಂದು ಸ್ವತಃ ಶಿವನೇ ತಿಳಿಸಿದ್ದಾನೆ ಎಂಬುದರ ಬಗ್ಗೆ ಶಾಸ್ತ್ರೋಕ್ತಿ ಇದೆ.

ಶಿವರಾತ್ರಿಯು ಸಮಯ ಪೂಜೆಗೆ ಬಹು ಪ್ರಾಶಸ್ತ್ಯವಾದ ಸಮಯ. ಆ ದಿನ ರಾತ್ರಿಯಲ್ಲಿ ಮೋಡಗಳಿಲ್ಲದ ಶುಭ್ರ ಆಕಾಶ, ಮಂಗಳಕರನಾದ ಶುಭ್ರ ಚಂದ್ರ ಸ್ಪೂರ್ತಿ ಹುಟ್ಟಿಸುವ ಸಂವೇದನಾಶೀಲ ವಾತಾವರಣವನ್ನು ಕಾಣಬಹುದು. ಈ ಪರ್ವಕಾಲ ಪೂಜೆಗೆ ಪ್ರಶಸ್ತವಾದ ಕಾಲವಾಗಿದ್ದು, ಅಂದು ಈಶ್ವರನ ಆರಾಧನೆ ಮಾಡಿದರೆ ಪಾಪ ಕರ್ಮಗಳನ್ನು ಕಳೆದುಕೊಳ್ಳುತ್ತಾನೆ ಎಂಬ ಪ್ರತೀತಿ ಸ್ಕಂದ ಪುರಾಣದಲ್ಲಿ ಉಲ್ಲೇಖವಾಗಿದೆ.

- Advertisement -

ಹೀಗೆ, ಮಹಾಶಿವರಾತ್ರಿಯ ಈ ಪವಿತ್ರ ದಿನದ ಮಧ್ಯರಾತ್ರಿಯಲ್ಲಿ ಶಿವ ಲಿಂಗ ರೂಪದಲ್ಲಿ ಆವಿರ್ಭವಿಸಿದನಂತೆ. ಹಿಂದೂಗಳಿಗೆ ಪ್ರಮುಖವಾಗಿ ಶಿವಭಕ್ತರಿಗೆ ಮಹಾ ಶಿವರಾತ್ರಿ ಉಪವಾಸದ ದಿನವಾದರೂ ಹಬ್ಬದ ಸಡಗರ ಮನೆ ಮಾಡುತ್ತದೆ. ಅಂದು ಪ್ರಾತಃಕಾಲದಲ್ಲಿಯೇ ಎದ್ದು, ಸ್ನಾನ ಮಾಡಿ, ಮಡಿ ವಸ್ತ್ರ ತೊಟ್ಟು, ಉಪವಾಸವಿದ್ದು, ಶಿವನ ದೇವಾಲಯಗಳಿಗೆ ತೆರಳಿ, ಶಿವಾರ್ಚನೆ ಮಾಡಿದರೆ ಮತ್ತು ರಾತ್ರಿಯಿಡೀ ಜಾಗರಣೆ ಮಾಡಿ ಶಿವನ ಪೂಜೆ ಮಾಡಿದರೆ ಎಲ್ಲಾ ಕಷ್ಟಗಳೂ ಪರಿಹಾರವಾಗಿ ಸುಖ, ಶಾಂತಿ, ಸಂಪತ್ತು ಲಭಿಸುತ್ತದೆ, ಪಾಪ ಪರಿಹಾರವಾಗುತ್ತದೆ ಎಂಬ ನಂಬಿಕೆಯೂ ಇದೆ.

ಸಾಮಾನ್ಯವಾಗಿ ಎಲ್ಲಾ ಶಿವ ದೇವಾಲಯಗಳಲ್ಲೂ ರಾತ್ರಿಯಿಡೀ ರುದ್ರಾಭಿಷೇಕ, ಗಂಗಾಜಲಾಭಿಷೇಕ, ಪಂಚಾಮೃತ ಅಭಿಷೇಕ ನಡೆಯುತ್ತದೆ, ಗೋರೋಚನ, ವಿಭೂತಿ ಹಾಗೂ ರುದ್ರಾಕ್ಷಿ ಮಾಲೆಯಿಂದ ಶಿವಲಿಂಗವನ್ನು ಅಲಂಕರಿಸಲಾಗುತ್ತದೆ. ಪುಷ್ಪಗಳಿಂದ ಹಾಗೂ ಬಿಲ್ವಪತ್ರೆಯಿಂದ ವಿಶೇಷ ಅಲಂಕಾರದೊಂದಿಗೆ, ಪೂಜಾ ಕೈಂಕರ್ಯಗಳು ನಡೆಯುತ್ತವೆ. ಮಹಾ ಶಿವರಾತ್ರಿಯಂದು ಬಿಲ್ವಪತ್ರೆಯನ್ನು ಶಿವಲಿಂಗದ ಮೇಲಿಟ್ಟು ಪೂಜಿಸಿದರೆ, ಯಾಗ ಮಾಡಿದ ಫಲ ದೊರೆಯುತ್ತದೆ ಎಂದೂ ಹಿರಿಯರು ಹೇಳುತ್ತಾರೆ.

‌ಶಿವರಾತ್ರಿಯ ಆಚರಣೆಗೆ ವೈಜ್ಞಾನಿಕ ಕಾರಣ

‌ ಅಲ್ಲದೇ, ಶಿವರಾತ್ರಿಯ ಆಚರಣೆಗೆ ವೈಜ್ಞಾನಿಕ ಕಾರಣಗಳೂ ಇವೆ. ಸೂರ್ಯ ಮತ್ತು ಚಂದ್ರರ ಚಲನೆಯಿಂದಾಗುವ ಎಲ್ಲಾ ಕಾಲ ವ್ಯತ್ಯಾಸಕ್ಕೆ ನಮ್ಮ ದೇಹ ಹೊಂದಿಕೊಳ್ಳ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಈ ಹಬ್ಬದ ಆಚರಣೆ ಮುಖ್ಯವಾಗಿದೆ. ಈ ಸಮಯದಲ್ಲಿ ಚಳಿಗಾಲವು ಮುಗಿದು ಬೇಸಿಗೆ ಕಾಲವು ಪ್ರಾರಂಭಗೊಳ್ಳುವುದು. ಅಂದರೆ ಈ ದಿನದಂದು ಚಳಿಗಾಲ ಉತ್ತುಂಗದಲ್ಲಿದ್ದು ಕೃಷ್ಣ ಪಕ್ಷದ ಕೊನೆಯ ದಿನವೂ ಆಗಿರುತ್ತದೆ. ಈ ದಿನದಲ್ಲಿ ಸೂರ್ಯನ ಶಾಖ ಕಡಿಮೆಯಾಗಿರುತ್ತದೆ ಮತ್ತು ಚಂದ್ರನ ಪ್ರಕಾಶವೂ ಕ್ಷೀಣಿಸಿರುತ್ತದೆ. ನಮ್ಮ ಪೂರ್ವಜರು ಇದನ್ನೆಲ್ಲಾ ಅರಿತೇ ಹಬ್ಬ ಹರಿದಿನಗಳನ್ನು ಆಚರಿಸುತ್ತಿದ್ದರು.

ಇನ್ನು, ಈ ದಿನದಂದು ನಾವು ಮಾಡುವ ಶಿವನ ಪೂಜೆ, ಉಪವಾಸಗಳು ನಮಗೆ ತುಂಬಾ ಉಪಯುಕ್ತ. ಅಂದು ಪರಶಿವನಿಗೆ ನೀರಿನ ಅಭಿಷೇಕ ಮತ್ತು ಬಿಲ್ವ ಪತ್ರೆಯ ಪೂಜೆ ಮಾಡುತ್ತೇವೆ. ಬಿಲ್ವ ಪತ್ರೆಯಲ್ಲಿ ಉಸಿರಾಟದ ತೊಂದರೆ ನಿವಾರಿಸುವ ಗುಣವಿದೆ. ಬಿಲ್ವವನ್ನು ಲಿಂಗದ ಮೇಲೆ ಅರ್ಪಿಸುವಾಗ ಅದರ ವಾಸನೆ ನಮ್ಮ ದೇಹದ ಒಳಗೆ ಹೋಗುವುದು. ಶಿವನ ಲಿಂಗವು ಕಲ್ಲಿನದಾಗಿದ್ದು ಅದರ ಮೇಲೆ ನೀರನ್ನು ಸುರಿಯುವುದರಿಂದ ಬಹಳಷ್ಟು ಶಕ್ತಿ ಹೊರಹೊಮ್ಮುತ್ತದೆ. ಅದೊಂದು ವಿಶಿಷ್ಟ ಕಲ್ಲಿನಿಂದ ಮಾಡಿದ ಲಿಂಗವಾಗಿರುತ್ತದೆ.

ಜೊತೆಗೆ, ಪೂಜಿಸುವ ದೇಗುಲವನ್ನು ವಾಸ್ತುವಿನ ಪ್ರಕಾರ ಕಟ್ಟಿರುತ್ತಾರೆ. ಈ ಕ್ಷೇತ್ರದಲ್ಲಿ ಹೆಚ್ಚಿನ ಗುರುತ್ವಾಕರ್ಷಣವಿದ್ದು ಅದನ್ನು ಶಿವ ಶಕ್ತಿಯೆಂದೂ ಕರೆಯುವರು. ಇಲ್ಲಿ ಮಂತ್ರಗಳನ್ನು ಪಠಿಸುತ್ತಾ ವಿಶಿಷ್ಟ ಕಲ್ಲಿನಿಂದ ಕೆತ್ತಿರುವ ಲಿಂಗಕ್ಕೆ ನೀರಿನ ಅಭಿಷೇಕ ಮಾಡುವುದರಿಂದ ಸುತ್ತಮುತ್ತಲೆಲ್ಲ ಹೆಚ್ಚಿನ ಶಕ್ತಿ ಬರುವುದೆಂಬ ನಂಬಿಕೆ ಇದೆ.

ಎಮ್ ವೈ ಮೆಣಸಿನಕಾಯಿ, ಬೆಳಗಾವಿ

- Advertisement -
- Advertisement -

Latest News

ಕ್ಷುಲ್ಲಕ ಕಾರಣಕ್ಕೆ ಪತ್ನಿಯ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ !

ಮೂಡಲಗಿ - ಎಮ್ಮೆ ಮಾರಿ ಬಂದ ಹಣ ಕೇಳಿದ್ದಕ್ಕೆ ಕುಪಿತಗೊಂಡ ವ್ಯಕ್ತಿಯೊಬ್ಬ ಕುಡಿತದ ನಶೆಯಲ್ಲಿ ಹೆಂಡತಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ. ತಾಲೂಕಿನ ಫುಲಗಡ್ಡಿ...
- Advertisement -

More Articles Like This

- Advertisement -
close
error: Content is protected !!
Join WhatsApp Group