spot_img
spot_img

ಸ್ವಾವಲಂಬಿ ಜೀವನಕ್ಕೆ ಸ್ವಾಭಿಮಾನದ ಬೀಜ

Must Read

- Advertisement -

ನನ್ನ ಕಾಲಿನ ಮೇಲೆ ನಾನು ನಿಂತು ಬದುಕಿ ತೋರಿಸಬೇಕೆಂದರೆ ನನ್ನಿಂದಾಗುತ್ತದೆಯೋ ಇಲ್ಲವೋ ಎನ್ನುವ ಭಯ ಕಾಡುತ್ತದೆ. ಹೊಸತೇನಾದರೂ ಮಾಡಬೇಕೆಂದರೆ ಕೈಯಲ್ಲಿರುವುದನ್ನೂ ಕಳೆದುಕೊಂಡರೆ ಗತಿಯೇನು? ಎಂಬ ಹೆದರಿಕೆ ಕಿತ್ತು ತಿನ್ನುತ್ತದೆ. ಜನ ಸಮೂಹದಲ್ಲಿರುವಾಗ ಅವಮಾನವಾದರಂತೂ ಸ್ವಾವಲಂಬಿಯಾಗಿ ಬದುಕಲೇಬೇಕು ಅನಿಸುತ್ತದೆ. ಬೇರೆಯವರ ಆಶ್ರಯದಲ್ಲಿ ಅವರು ಹೇಳಿದಂತೆ ಬದುಕಿದರೆ ತೊಂದರೆ ಇಲ್ಲ.

ಆದರೆ ಅದರಲ್ಲಿ ಸಂತೃಪ್ತಿ ಆನಂದ ಎಳ್ಳಷ್ಟೂ ಸಿಗದು. ಹಾಗಾದರೆ ಸಂತೋಷದಿಂದ ಸ್ವಾವಲಂಬಿಯಾಗಿರಲು ಸಾಧ್ಯವೇ ಇಲ್ಲವೇ? ವಾಸ್ತವದಲ್ಲಿ ನಮ್ಮನ್ನು ಸ್ವಾವಲಂಬಿ ಆಗುವದರಿಂದ ಹಿಂದಕ್ಕೆ ಹಿಡಿದು ಎಳೆಯುವವರೂ ಯಾರೂ ಇಲ್ಲ. ನಮಗೆ ನಾವೇ ಸೃಷ್ಟಿಸಿದ ನರಕದ ಪರಾಲಂಬಿ ಜೀವನದಲ್ಲಿ ಕಾಲೆಳೆಯುತ್ತ, ಕೈ ಚೆಲ್ಲಿ ಬದುಕುವುದರಲ್ಲಿ ಏನೂ ಅರ್ಥವಿಲ್ಲ. ಬದುಕೆಂಬುದು ನಮ್ಮಲ್ಲಿರುವ ಸಾಮರ್ಥ್ಯಗಳನ್ನು ಹೆಚ್ಚು ಹೆಚ್ಚಾಗಿ ಬಳಸಿಕೊಂಡು ಹೆಚ್ಚು ಸೌಖ್ಯವಾಗಿರಲು ಇರುವ ಒಂದು ಅತ್ಯಮೂಲ್ಯ ಅವಕಾಶ.

ಸ್ವಾವಲಂಬಿತನಕ್ಕೆ ಬೇಕಾದುದನ್ನು ಹೊರಗಿನಿಂದ ಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಅದು ಈಗಾಗಲೇ ನಮ್ಮಲ್ಲೇ ಇದೆ. ಆಲೋಚನೆ ಮತ್ತು ವಿಚಾರದ ಸ್ವಭಾವಕ್ಕೆ ತಕ್ಕ ಹಾಗೆ ಸ್ಪಂದನೆ ಮತ್ತು ಪ್ರತಿಕ್ರಿಯೆಗಳು ದೊರೆಯುತ್ತವೆ. ಮಾನವ ಮೂಲತಃ ಸ್ವಾವಲಂಬಿಯಾಗಿ ಬದುಕಬಲ್ಲ ಜೀವಿ. ಹೀಗಾಗಿ ಸ್ವತಂತ್ರವಾಗಿ ಆಲೋಚಿಸುವ ಗೊಡವೆಗೆ ಹೋಗದಿದ್ದರೆ, ಪ್ರಜ್ಞಾಪೂರ್ವಕವಾಗಿ ಆಯ್ಕೆ ಮಾಡಿಕೊಳ್ಳದಿದ್ದರೆ ಜೀವನ ಪೂರ್ತಿ ಅವರಿವರ ಹಂಗಿನಲ್ಲೇ ಅರ್ಥಹೀನವಾಗಿ ಬದುಕಬೇಕಾಗುತ್ತದೆ.ಜೀವನದ ಕಡಲಿನ ಅಲೆಗಳೊಂದಿಗೆ ಕೊಚ್ಚಿ ಹೋಗಿ ಆತ್ಮ ದ್ರೋಹ ಮಾಡಿಕೊಳ್ಳಬಾರದು. ಕೆಲವು ಸರಳ ತಂತ್ರಗಳನ್ನು ಅನುಸರಿಸುವ ಮೂಲಕ ನಮಗಿಷ್ಟವಾದ ಸ್ವಚ್ಛಂದದ ಬದುಕನ್ನು ನಮ್ಮದಾಗಿಸಿಕೊಳ್ಳಬಹುದು.

- Advertisement -

ಸ್ವಾಭಿಮಾನದ ಬೀಜ ಎಲ್ಲೂ ನೆಲೆ ಇಲ್ಲದಂತಿದ್ದ ಚಿಕ್ಕ ಬೀಜವೊಂದು ಭೂಮಿಯ ಮಡಿಲಲ್ಲಿ ಬಿದ್ದು, ಅದೇ ಭೂಮಿಯಲ್ಲಿ ಚಿಗುರೊಡೆದು ಬೇರುಗಳನ್ನು ಆಳಕ್ಕಿಳಿಸಿ ಮುಂದೊಂದು ದಿನ ಹೆಮ್ಮರವಾಗಿ ಎಷ್ಟೋ ಪಕ್ಷಿ ಪ್ರಾಣಿಗಳಿಗೆ, ಜೀವ ಸಂಕುಲಕ್ಕೆ ಆಶ್ರಯ ನೀಡುವ ಹೆಮ್ಮರವಾಗುತ್ತದೆ. ನಾವೆಲ್ಲರೂ ಬೀಜದಂತೆ ಹೆಮ್ಮರವಾಗಲು ಬಯಸುತ್ತೇವೆ. ಸ್ವಾವಲಂಬಿಗಳಾಗಲು ಹಾತೊರೆಯುತ್ತೇವೆ. ಬಹುತೇಕರು ತಿಳಿದಂತೆ ಈ ಜಗತ್ತು ಅಸ್ತವ್ಯಸ್ತವಾಗಿಲ್ಲ.

ಇಲ್ಲಿ ನಡೆಯುವ ಎಲ್ಲದಕ್ಕೂ ಒಂದೇ ಕಾರಣವಿಲ್ಲ ಆದರೂ ಒಂದಕ್ಕೊಂದು ಕಾರಣವಾಗಿರುತ್ತವೆ. ಇದನ್ನೇ ಕಾರ್ಯಕಾರಣ ಸಿದ್ಧಾಂತವೆಂದು ಕರೆಯುತ್ತಾರೆ. ಪರಾವಲಂಬಿತನದ ಮಿತಿಯ ಬದುಕು, ಹಂಗಿನ ಜೀವನ ನೋವಿನ ಬುತ್ತಿಯನ್ನು ಬಿಟ್ಟು ಬೇರೇನನ್ನೂ ತರುವುದಿಲ್ಲ. ನಮ್ಮೊಳಗೇ ಇರುವ ಅನಂತತೆಯ ಭಂಡಾರವನ್ನು ಕಾಣದಿರುವ ಅಜ್ಞಾನವೇ ಪರಾವಲಂಬಿತನಕ್ಕೆ ಕಾರಣ.

ಕಲಾವಿದನೊಬ್ಬ ಸುಂದರ ಚಿತ್ರ ತೆಗೆಯುವ ಮೊದಲು ಅದನ್ನು ತನ್ನ ಮನದೊಳಗೆ ಕಂಡಿರುತ್ತಾನೆ. ಅಂತೆಯೇ ಚೆಂದದ ಬದುಕಿನ ಕನಸನ್ನು ಮನಸ್ಸಿನಲ್ಲಿ ಮೂಡಿಸಿಕೊಂಡು ಅದರ ಬೆನ್ನು ಹತ್ತಬೇಕು.ಮನದ ಭಿತ್ತಿಯಲ್ಲಿ ಅಚ್ಚಳಿಯದಂತೆ ಬರೆದುಕೊಳ್ಳಬೇಕು. ಯಾವುದೇ ಉದ್ದೇಶ ಗೊತ್ತು ಗುರಿಯಿಲ್ಲದ ಬದುಕು ಯಾವ ದಡವನ್ನೂ ತಲುಪಲಾರದು.

- Advertisement -

ಸ್ವಾಭಿಮಾನದ ಗೈರುಹಾಜರಿ ಬದುಕಿನ ಶ್ರೇಷ್ಠತೆಯನ್ನು ನಾಶ ಮಾಡುತ್ತದೆ. ಸ್ವಾಭಿಮಾನಕ್ಕೆ ಪೆಟ್ಟು ಬಿದ್ದಾಗಲಂತೂ ತುಂಬಾ ನೋವಾಗುತ್ತದೆ. ಸ್ವಾಭಿಮಾನದ ಬೀಜ ಬಿತ್ತುವುದೇ ಸ್ವಾವಲಂಬಿ ಜೀವನಕ್ಕೆ ಮೊದಲ ಹೆಜ್ಜೆ.
ಬುದ್ಧಿಯ ಮಾರ್ಗದರ್ಶನ ಉಕ್ಕಿನ ತುಂಡನ್ನು ಕಾಂತೀಕರಿಸಿದರೆ ಅದು ತನ್ನ ಭಾರದ ಹನ್ನೆರಡು ಪಟ್ಟು ಹೆಚ್ಚು ಭಾರವನ್ನು ಎತ್ತಬಲ್ಲದು. ಒಂದು ವೇಳೆ ಉಕ್ಕನ್ನು ಕಾಂತೀಕರಿಸದಿದ್ದರೆ ಪುಟ್ಟ ಹಕ್ಕಿಯ ಪುಕ್ಕವನ್ನೂ ಎತ್ತಲೂ ಸಮರ್ಥವಾಗದು. ಅಂತೆಯೇ ನಾವೂ ಕೂಡ.

ಬುದ್ಧಿಯು ಆಲೋಚಿಸಬಲ್ಲದು ಯಾವುದೇ ವಿಷಯಕ್ಕೆ ಕಾರಣಗಳನ್ನು ಕಂಡುಕೊಳ್ಳಬಲ್ಲದು. ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲ ಅಸೀಮ ಶಕ್ತಿ ಅದಕ್ಕಿದೆ. ಬುದ್ಧಿಯನ್ನು ಉಪಯೋಗಿಸಿದರೆ ಅತ್ಯದ್ಭುತ ಸಾಧನೆಗೆ ಸಾಧನವಾಗಲ್ಲದು. ಇಲ್ಲದಿದ್ದರೆ ಮೊಂಡ ಕತ್ತರಿಯಂತೆ ಏನನ್ನೂ ಕತ್ತರಿಸಲಾಗದೇ ಉಳಿದು ಬಿಡುವುದು. ಒಳ್ಳೆಯ ನಿರ್ಧಾರ ದೃಢ ನಿಶ್ಚಯ ಮನೋನಿಯಂತ್ರಣ ಸ್ವಾವಲಂಬಿ ಜೀವನಕ್ಕೆ ಮುನ್ನುಡಿಯಿದ್ದಂತೆ.

ಮನೋನಿಯಂತ್ರಣ ಅತಿ ಕಷ್ಟಕರವಾದದ್ದು. ಮನಸ್ಸೆಂಬುದು ಕಡಿವಾಣವಿಲ್ಲದ ಕುದುರೆಯಂತೆ ಅದು ಎಲ್ಲೆಂದರಲ್ಲಿ ಜಿಗಿಯುತ್ತದೆ. ಅದನ್ನು ಸ್ಥಿಮಿತಕ್ಕೆ ತರುವುದು ಮರಭೂಮಿಯಲ್ಲಿ ನೀರಿನ ಚಿಲುಮೆ ಕಂಡಂತೆ. ಸುಲಭದ ಕೆಲಸವೇನೂ ಅಲ್ಲ ಆದರೂ ಮನಸ್ಸು ಮಾಡಿದರೆ ಅಸಾಧ್ಯವೂ ಅಲ್ಲ. ನಮ್ಮ ಮನೋಧರ್ಮದ ತರಹ ಬದುಕು ರೂಪುಗೊಳ್ಳುತ್ತದೆ. ಬುದ್ಧಿಯು ಮನಸ್ಸಿಗೆ ಮಾರ್ಗದರ್ಶನ ಮಾಡಬೇಕು.

ಆಗ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳಲು ಸಾಧ್ಯವಾಗುವುದು. ಇದು ಮನಸ್ಸಿನ ನೈಜ ಪರಿಸ್ಥಿತಿ. ಸಾಗರದ ಆಳದಲ್ಲಿ ಅನರ್ಘ್ಯ ಮುತ್ತುರತ್ನಗಳಿರುವಂತೆ ಆಳಕ್ಕಿಳದಂತೆ ಶ್ರೇಷ್ಠ ಚಿಂತನೆಗಳು ಜೀವನ ತತ್ವಗಳು ದೊರೆಯುವುದು ಖಚಿತ. ಗಳಿಕೆಯಲ್ಲಿಯೇ ಬದುಕುವ ಖುಷಿ ಹಣದ ವಿಷಯದಲ್ಲಿ ಮತ್ತೊಬ್ಬರ ಮುಂದೆ ಕೈ ಚಾಚುವುದೆಂದರೆ ಮೈ ಮೇಲೆ ಮುಳ್ಳು ಬಂದಂತಹ ಅನುಭವ.

ಆರ್ಥಿಕವಾಗಿ ಸಾಮಾನ್ಯ ಬದುಕಿಗೆ ಅಡೆತಡೆಯಾಗದಂತೆ ನಮ್ಮ ಗಳಿಕೆಯಲ್ಲೇ ಬದುಕುವ ಖುಷಿಯೂ ಸಂತೃಪ್ತಿಯನ್ನು ನೀಡಬಲ್ಲದು. ಅಲ್ಪ ಸ್ವಲ್ಪ ಕೂಡಿಟ್ಟ ಹಣದಲ್ಲಿ ಹಬ್ಬ ಇಲ್ಲವೇ ಮನೆಯಲ್ಲಿ ಯಾವುದಾದರೂ ಶುಭ ಸಮಾರಂಭವನ್ನು ಮಾಡಿದರಂತೂ ಮನಸ್ಸು ಬಾನೆತ್ತರಕ್ಕೆ ಹಾರುತ್ತದೆ. ಬೇರೆಯವರ ಸಹಾಯದಿಂದ ಕನಿಕರದಿಂದ ಸಾಗಿಸಬೇಕಾದ ಬದುಕು ಕನಿಷ್ಟವೆನಿಸುವುದು. ನಮ್ಮ ಸ್ವಂತ ಆಲೋಚನೆಗಳಂತೆ ಜೀವನ ನಡೆಸಲು ಸಾಧ್ಯವಾಗುವುದು. ಆರ್ಥಿಕವಾಗಿ ಹಿಂದುಳಿದಾಗ ಇರುವ ಮನಸ್ಥಿತಿ ಬದಲಾಗಿ ಆತ್ಮವಿಶ್ವಾಸ ಮತ್ತು ಸ್ವ ಗೌರವವನ್ನು ಹೆಚ್ಚಿಸುತ್ತದೆ.

ಇದ್ದುದರಲ್ಲಿಯೇ ಸ್ವಲ್ಪ ನಿರ್ಗತಿಕರಿಗೆ ಅಸಹಾಯಕರಿಗೆ ಕೊಡುವ ಗುಣವಂತೂ ನೆಮ್ಮದಿಯನ್ನು ನೀಡುತ್ತದೆ. ಇತರರಿಗೆ ನೆರವು ನೀಡುವ ತಾಕತ್ತು ನನ್ನಲ್ಲಿದೆ ಎಂಬ ಭಾವ ಮತ್ತಷ್ಟು ಬಲವನ್ನು ತುಂಬುತ್ತದೆ.

ಕೈಯೆತ್ತಿ ಕೊಡುವುದರಲ್ಲಿನ ಸಂತಸ ಪಡೆಯುವುದರಲ್ಲಿಲ್ಲ. ‘ಬತ್ತಿಯಂತೆ ಉರಿದು ಮಿಣುಕು ಬೆಳಕು ನೀಡುವುದು ಸಾಧ್ಯವಾದರೆ ನಾನೇ ಧನ್ಯ.’ಎಂದಿದ್ದಾರೆ ಸಾನೆ ಗುರೂಜಿ.

ಕೊನೆ ಹನಿ

ಸ್ವಾವಲಂಬಿ ಜೀವನವೆಂದರೆ ಮನೆ ಮಂದಿಯನ್ನು ಬಿಟ್ಟು ಸ್ವಾರ್ಥದ ಮೂಸೆಯಲ್ಲಿ ಬದುಕುವುದಲ್ಲ. ‘ಬತ್ತುವ ಕೆರೆಗಿಂತ ಒಸರುವ ಒರತೆಯೇ ಲೇಸು.’ಸ್ವಾವಲಂಬಿಯಾಗಿರುವುದು ಜೀವನದ ಮಹತ್ವಪೂರ್ಣ ಕೌಶಲ್ಯ. ಇದು ಬದುಕಿನ ಇನ್ನಿತರೆ ಸಮಸ್ಯೆಗಳಿಗೂ ಪರಿಹಾರವನ್ನು ತನ್ನ ಮೂಟೆಯಲ್ಲಿ ಹೊತ್ತು ತಂದಿರುತ್ತದೆ. ನಮ್ಮನ್ನು ನಾವು ಇದ್ದ ಹಾಗೆ ಸ್ವೀಕರಿಸಲು ಕಲಿಸುತ್ತದೆ. ನಮ್ಮನ್ನು ನಾವು ಪ್ರೀತಿಸುವಂತೆ ನಂಬುವಂತೆ ಬೇರೆಯವರನ್ನು ಗೌರವಿಸುವಂತೆ ಕಲಿಸುವ ಏಕೈಕ ದೊಡ್ಡ ಸೂತ್ರವಿದು.

ಸಣ್ಣ ಪುಟ್ಟ ವಿಚಾರಗಳಿಗೂ ಕುಟುಂಬ, ಗೆಳೆಯರ ಮೇಲೆ ಅವಲಂಬಿತರಾಗುವುದನ್ನು ತಪ್ಪಿಸುತ್ತದೆ. ಕೈಲಾಗದವರ ಭಾರವನ್ನು ಕೆಳಗಿಳಿಸಲು ನೆರವಿಗೆ ಬರುತ್ತದೆ. ಸ್ವಾವಲಂಬಿ ಬದುಕಿನತ್ತ ಮುಖ ಮಾಡಿದಾಗ ಇತರರು ನಿಮ್ಮತ್ತ ನೋಡುವ ದೃಷ್ಟಿಕೋನವೇ ಬದಲಾಗುತ್ತದೆ. ಸ್ಥಾನಮಾನ ಪ್ರತಿಷ್ಠೆ ಮೇಲೇರುತ್ತದೆ. ‘ಜೀವನವು ಸೌಂದರ್ಯಮಯವೆಂದು ಕನಸು ಕಂಡೆ.

ಜೀವನವು ಕರ್ತವ್ಯಮಯವೆಂದು ಎದ್ದಾಗ ಅರಿತುಕೊಂಡೆ.’ ಎಂಬ ಹೋಮರ್‍ನ ನುಡಿ ಸತ್ವಪೂರ್ಣವಾದುದು.ಈ ನುಡಿಯಂತೆ ನಡೆದುಕೊಂಡರೆ ಚೆಂದದ ಜೀವನ ತಬ್ಬಿಕೊಳ್ಳುವುದು.

ಜಯಶ್ರೀ.ಜೆ. ಅಬ್ಬಿಗೇರಿ, ಬೆಳಗಾವಿ
(ಇಂಗ್ಲೀಷ್ ಉಪನ್ಯಾಸಕರು)
9449234142

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group