spot_img
spot_img

ಹೆಣ್ಣುಮಕ್ಕಳ ತಂದೆ – ಗುಂಡಪ್ಪ ಬಡಿಗೇರ

Must Read

- Advertisement -

(ರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ ವಿಶೇಷ ಲೇಖನ)

ಹೆಣ್ಣಿದ್ದ ಮನೆಗೆ ಕನ್ನಡಿಯಾತಕ?
ಹೆಣ್ಣು ಸಣ್ಣವಳು ಒಳಗಿರಲು
ಕನ್ನಡಿಯಂಗ ಹೊಳೆಯುವಳು !!

ಎಂಬ ತ್ರಿಪದಿಯ ಸಾಲುಗಳು ಜನಪದರ ಬದುಕಿನಲ್ಲಿ ಹೆಣ್ಣಿನ ಮಹತ್ವವನ್ನು ತಿಳಿಸುತ್ತವೆ. ‘ಪ್ರತಿ ಮನೆಯಲ್ಲೂ ಹೆಣ್ಣುಮಕ್ಕಳಿದ್ದರೆ, ಆ ಮನೆಯಲ್ಲಿ ಉತ್ಸಾಹ, ಸಂತೋಷ, ನೆಮ್ಮದಿಯು ಸ್ಥಿರವಾಗಿರುತ್ತದೆ’ ಎಂಬುದು ಅವರ ಭಾವನೆಯಾಗಿತ್ತು. ಆದರೆ ವಿಜ್ಞಾನ ತಂತ್ರಜ್ಞಾನಯುಗದ ಉತ್ಕೃಷ್ಟ ಕಾಲದಲ್ಲಿಯೂ ಸ್ತ್ರೀಯನ್ನು ಎರಡನೆಯ ದರ್ಜೆಯ ವ್ಯಕ್ತಿಯಾಗಿ ಪರಿಗಣಿಸುವುದು ಮಾತ್ರವಲ್ಲದೆ, ಹುಟ್ಟುವ ಮಗು ‘ಹೆಣ್ಣು’ ಎಂದು ಗೊತ್ತಾದರೆ, ಇನ್ನೂ ತಾಯಿಯ ಗರ್ಭದಲ್ಲಿರುವಾಗಲೇ ಅದನ್ನು ಹತ್ಯೆ ಮಾಡುವ ಅಮಾನವೀಯ ಘಟನೆಗಳು ಹೆಚ್ಚುತ್ತಿವೆ. ವಿದ್ಯಾವಂತರೆನಿಸಿಕೊಂಡ ಪಾಲಕರೇ ಇಂಥ ಕೃತ್ಯಗಳಲ್ಲಿ ಸಕ್ರಿಯವಾಗಿರುವುದು ಆಧುನಿಕತೆಯ ದುರಂತವಾಗಿದೆ. ಇಂತಹ ವಿಪ್ಲವಗಳ ಮಧ್ಯೆಯೇ ಬೆರಳೆಣಿಕೆಯಷ್ಟು ಪಾಲಕರು ಮಾತ್ರ ಸ್ತ್ರೀ-ಪುರುಷ ಭೇದ-ಭಾವ ಮಾಡದೆ, ತಮ್ಮ ಹೆಣ್ಣುಮಕ್ಕಳನ್ನು ಸ್ವಾವಲಂಬಿಗಳನ್ನಾಗಿಸುವ ‘ಭಗೀರಥ ಪ್ರಯತ್ನ’ ಮಾಡಿದ್ದಾರೆ. ಇಂತಹ ನಿಜಾರ್ಥದ ‘ಹೆಣ್ಣುಮಕ್ಕಳ ತಂದೆ’ಯರಲ್ಲಿ ದಿ. ಗುಂಡಪ್ಪ ಬಡಿಗೇರ ಅವರದು ಸ್ತುತ್ಯರ್ಹ ಹೆಸರು.

- Advertisement -

“Daughter is not a tension, she is equal to ten sons ” ಎಂಬ ಮಾತನ್ನು ಕೇವಲ ಬಾಯಿಮಾತು, ಬರವಣಿಗೆಯಲ್ಲಿಡದೆ, ಅಕ್ಷರಶಃ ಜಾರಿಗೆ ತಂದವರು ಶ್ರೀಯುತ ಗುಂಡಪ್ಪ ಬಡಿಗೇರ ಅವರು. ‘ಹೆಣ್ಣು ಹುಟ್ಟಿದರೆ ಹುಣ್ಣು ಹುಟ್ಟಿದಂತೆ’ ಎಂದು ಭಾವಿಸುವ ಸಮಾಜದಲ್ಲಿ ತಮಗೆ ಹುಟ್ಟಿದ ಆರೂ ಮಕ್ಕಳು ಹೆಣ್ಣುಮಕ್ಕಳಾದರೂ, ಅವರನ್ನು ‘ಹೊರೆ’, ‘ಭಾರ’, ‘ಹುಣ್ಣು’ ಎಂದುಕೊಳ್ಳದೆ, ಸಂಪ್ರದಾಯದ ಹೆಸರಿನಲ್ಲಿ ಅವರನ್ನು ನಾಲ್ಕು ಗೋಡೆಗಳಿಗೆ ಸೀಮಿತಗೊಳಿಸದೆ, ‘ಹೆಣ್ಣುಮಕ್ಕಳೂ ಕೂಡ ಮಗನಷ್ಟೇ ವಿದ್ಯೆ ಕಲಿತು, ಉದ್ಯೋಗ ಮಾಡಿ, ತಮಗೆ ಕೀರ್ತಿ ತರಬಲ್ಲರು, ಹೆತ್ತವರನ್ನು ಸಾಕಬಲ್ಲರು’ ಎಂದು ತಮ್ಮ ಮಕ್ಕಳ ಮೇಲೆ ನಂಬಿಕೆಯಿಟ್ಟು ಅವರಿಗೆ ಒಳ್ಳೆಯ ಶಿಕ್ಷಣ ಕೊಡಿಸಿ, ಉದ್ಯೋಗ ದೊರೆಯುವಂತೆ ಮಾಡಿದರು. ತಮ್ಮ ಹೆಣ್ಣುಮ್ಕಳಿಗೆ ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಸಿಗುವಂತೆ ಮಾಡಿದ ಇವರು ತಂದೆಯ ಸ್ಥಾನಕ್ಕೆ ಸಾರ್ಥಕತೆಯನ್ನು ಒದಗಿಸಿದವರು.

ಪಾರಂಪರಿಕವಾಗಿ ವಿಶ್ವಕರ್ಮ ಸಮುದಾಯಕ್ಕೆ ಒಂದಲ್ಲ ಒಂದು ಕಲೆಯಲ್ಲಿ ಪರಿಣಿತಿ ಇದ್ದೇ ಇರುತ್ತದೆ. ಗುಂಡಪ್ಪ ಬಡಿಗೇರ ಅವರು ತೀವ್ರ ಬಡತನದ ಮಧ್ಯೆಯೂ ಮನೆ ನಿರ್ಮಾಣ ಕಲೆಯನ್ನು ಕರಗತ ಮಾಡಿಕೊಂಡು, ಮನೆ ಕಟ್ಟುವ ಕಾಯಕವನ್ನು ಮಾಡುತ್ತಿದ್ದರು. ಹದಿನೈದು ಇಪ್ಪತ್ತು ಜನರ ತಂಡವನ್ನು ಕಟ್ಟಿಕೊಂಡು ಕಲ್ಲೊಳ್ಳಿ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಅನೇಕ ಮನೆಗಳನ್ನು ನಿರ್ಮಿಸಿದ್ದಾರೆ. ಅವರ ಒಡನಾಡಿಯೂ ಆಗಿದ್ದ ಸಿ. ಪಿ. ಪಟ್ಟಣಶೆಟ್ಟಿಯವರು “ಕಲ್ಲೊಳ್ಳಿಯಲ್ಲಿರುವ ಕೆಂಪು ಹಂಚಿನ ಮನೆಗಳಲ್ಲಿ 80% ಗುಂಡಪ್ಪನ ನೇತೃತ್ವದ ತಂಡವೇ ಕಟಿದ್ದು” ಎಂದು ಸ್ಮರಿಸಿಕೊಳ್ಳುತ್ತಾರೆ.
ಗುಂಡಪ್ಪ ಬಡಿಗೇರ ಅವರು ನೇವರಿಸುವ ಬಳ್ಳಿಯಾಗದೆ, ಸಾವರಿಸಿಕೊಂಡು ಸ್ವಯಂಪೂರ್ಣವಾಗಿ ನಿಲ್ಲುವ ಮರವಾದವರು. ಮರವನ್ನಪ್ಪಿ ಬೆಳೆಯುವ ಲತೆಯಾಗದೆ, ಹತ್ತಾರು ಲತೆಗಳಿಗೆ ಆಸರೆಯಾಗುವ ಮರವಾದವರು. ಸೃಷ್ಠಿಗೆ ಮಾರುಹೋಗದೆ, ತನ್ನೊಳಗೆ ಇರುವ ಶಾಂತಿದಾಯಕ ಸೃಷ್ಟಿಯನ್ನು ಕಂಡುಕೊಂಡವರು. ತಮ್ಮಲ್ಲಿ ಹುದುಗಿರುವ ಜ್ಞಾನದ ಬೆಳಕಲ್ಲಿ ನಡೆವರು. ನಿರಂತರವಾಗಿ ಬದುಕಿನ ಪಯಣಕ್ಕೆ ಬೇಸರಪಡದೆ, ಈ ಜೀವನದ ಅರ್ಥ ತಿಳಿದು ನಡೆದವರು. ಈ ಬದುಕೆಂಬ ಸುಂದರ ಚಿತ್ರದಲ್ಲಿ ತಮ್ಮ ಪಾತ್ರಕ್ಕೊಂದು ಅರ್ಥ ಕೊಟ್ಟವರು. ಕೈ ನೀಡಿ ಬೇಡುವ ದೀನನಾಗದೆ ಕೈಯೆತ್ತಿ ನೀಡುವ ದಾನಿಯಾದವರು. ತಮಗೊಲಿದ ಸುಂದರ ಕ್ಷಣಗಳನ್ನು ವ್ಯರ್ಥಮಾಡದೆ, ಆ ದೇವನೊಪ್ಪುವಂತೆ ನಡೆದವರು.

- Advertisement -

ಪ್ರಗತಿಪರ ಚಿಂತನೆಯ ತಂದೆಯಾಗಿ ತಮ್ಮ ಕುಟುಂಬ ನಿರ್ವಹಣೆಯೊಂದಿಗೆ, ಸಾಮಾಜಿಕ ಚಟುವಟಿಕೆಗಳಲ್ಲಿಯೂ ದುಂಡಪ್ಪ ಬಡಿಗೇರ ಅವರು ಸಕ್ರಿಯರಾಗಿದ್ದರು. ಯಾವಾಗಲೂ ಬಿಳಿ ಧೋತರ, ಬಿಳಿ ನಿಲುವಂಗಿ, ಗಾಂಧಿ ಟೋಪಿ ಧರಿಸುತ್ತಿದ್ದ ಅವರ ವ್ಯಕ್ತಿತ್ವವೂ ಅಷ್ಟೇ ಶುಭ್ರವಾಗಿತ್ತು. ‘ಸಿರಿ ಬಂದ ಕಾಲಕ್ಕೆ ಕರೆದು ದಾನವ ಮಾಡು, ಪರಿಣಾಮವಕ್ಕು ಪದವಕ್ಕು, ಕೈಲಾಸ ನೆರೆಮನೆಯಕ್ಕು ಸರ್ವಜ್ಞ’ ಎಂಬ ಸರ್ವಜ್ಞನ ಮಾತಿನಂತೆ ಬಡಿಗೇರ ಅವರು, ತಮ್ಮ ಬಳಿ ಇದ್ದುದರಲ್ಲಿಯೇ ಇತರರೊಂದಿಗೆ ಹಂಚಿಕೊಂಡು ಬದುಕಿದ ಹಿರಿಯ ಚೇತನವಾಗಿದ್ದರು. ಪ್ರತಿ ವರ್ಷ ತಮ್ಮ ಹುಟ್ಟು ಹಬ್ಬವನ್ನು ಬೆಳಗಾವಿ, ಕೋರಕೊಪ್ಪದಲ್ಲಿರುವ ಅನಾಥ ಮಕ್ಕಳ ಆಶ್ರಮದಲ್ಲಿ ಆಚರಿಸಿಕೊಳ್ಳುತ್ತಿದ್ದರು. ಅಂದಿನ ದಿನ ಕುಟುಂಬ ಸಮೇತರಾಗಿ ಅನಾಥಾಶ್ರಮಕ್ಕೆ ತೆರಳಿ, ಇಡೀ ದಿನ ಅಲ್ಲಿನ ಮಕ್ಕಳೊಂದಿಗೆ ಕಳೆಯುತ್ತಿದ್ದರು. ಆಶ್ರಮದಲ್ಲಿನ ಆ ದಿನದ ವಿಶೇಷ ಊಟೋಪಚಾರದ ಖರ್ಚು ಮಾತ್ರವಲ್ಲದೆ, ಅಲ್ಲಿನ ಎಲ್ಲ ಮಕ್ಕಳಿಗೂ ವಿಶೇಷ ಉಡುಗೊರೆಯನ್ನು ಕೊಡುತ್ತಿದ್ದರು.

ಕೋರಕೊಪ್ಪದ ರೇವಣಸಿದ್ದೇಶ್ವರ ಗುರುಕುಲ ಮತ್ತು ಅನಾಥಾಲಯದಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡು, ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ವಿತರಿಸಿದ ಭಾವಚಿತ್ರ.

ಇಂತಹ ತಂದೆಯ ಮಾರ್ಗದರ್ಶನದಲ್ಲಿ ಬೆಳೆದ ಅವರ ಆರು ಜನ ಹೆಣ್ಣುಮಕ್ಕಳು ‘ತಂದೆಯವರ ಆದರ್ಶಗಳನ್ನು ಪಾಲಿಸಿ, ಸಮಾಜದಲ್ಲಿ ಏನಾದರೂ ಸಾಧಿಸಬೇಕು’ ಎಂಬ ಗುರಿಯನ್ನು ಹೊಂದಿದ ಅಮೂಲ್ಯ ರತ್ನಗಳಾಗಿದ್ದಾರೆ. ಆರೂ ಹೆಣ್ಣುಮಕ್ಕಳು ಉನ್ನತ ವ್ಯಾಸಂಗ ಮಾಡಿ, ಶಿಕ್ಷಕಿ, ಉಪನ್ಯಾಸಕಿ, ವೈದ್ಯ ಸೇರಿದಂತೆ ಎಲ್ಲರೂ ಒಂದೊಂದು ವೃತ್ತಿಯಲ್ಲಿ ನಿರತರಾಗಿದ್ದಾರೆ.

ಎಲ್ಲ ಹೆಣ್ಣುಮಕ್ಕಳಿಗೂ ಇಂತಹ ತಂದೆ ಸಿಕ್ಕರೆ, ಶತ ಶತಮಾನಗಳಿಂದ ತಮ್ಮ ತಲೆಯಲ್ಲಿ ತುಂಬಿಕೊಂಡಿರುವ ‘ಅಪುತ್ರಸ್ಯ ಗತಿರ್ನಾಸ್ತಿಃ’ ಎಂಬ ಮೌಢ್ಯವನ್ನು ತುಂಬಿಕೊಂಡಿರುವ ಈ ಸಮಾಜವು ಬದಲಾಗಬಲ್ಲದು. ಎಲ್ಲ ತಂದೆಯರು ಹೀಗೆ ತಮ್ಮ ಹೆಣ್ಣುವiಕ್ಕಳನ್ನು ಪ್ರೀತಿಸಿದರೆ, ‘ಆಗ ಹೆಣ್ಣು ಮಗುವಾಗುವುದು ಸಮಾಜದ ಕಣ್ಣು’. ಅಂತಾರಾಷ್ಟ್ರೀಯ ಮಹಿಳಾ ದಿನದ ಈ ಸಂದರ್ಭದಲ್ಲಿ ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳನ್ನು ಹೆಣ್ಣು-ಗಂಡು ಎಂಬ ತರತಮ ಭಾವದಿಂದ ನೋಡದೆ, ಅವರನ್ನು ಸಮಾನತೆಯಿಂದ ಕಂಡು, ಸ್ವಾವಲಂಬಿಗಳನ್ನಾಗಿ ಮಾಡುವ ದೃಢ ಸಂಕಲ್ಪ ಮಾಡಬೇಕಾಗಿದೆ.


ಶ್ರೀ ರಾಜಶೇಖರ ಬಿರಾದಾರ,
ಸಹಾಯಕ ಪ್ರಾಧ್ಯಾಪಕರು, ಶ್ರೀ ಸಿ.ಎಂ.ಮಾಮನಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಯರಗಟ್ಟಿ ತಾ.ಸವದತ್ತಿ ಜಿ.ಬೆಳಗಾವಿ-591129
ಮೊ.9740954140

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group