ಧರ್ಮಮಾರ್ಗದಿ ನಡೆದು ದೇವರನು ಕಾಣಲಿಕೆ
ಮುಂದಡಿಯನಿಡು ಮೊದಲು ಮನಸುಮಾಡಿ
ಇಂದಿಲ್ಲದಿದ್ದರೂ ನಾಳೆಗಾದರು ತಲುಪಿ
ದೊರಕುವುದು ದರುಶನವು – ಎಮ್ಮೆತಮ್ಮ
ಶಬ್ಧಾರ್ಥ
ದರುಶನ – ದರ್ಶನ, ಕಾಣ್ಕೆ, ಕಾಣಿಸಿಕೊಳ್ಳುವುದು, ಆಧ್ಯಾತ್ಮಿಕ ಸಿದ್ದಾಂತ
ಮೋಸ, ವಂಚನೆ, ಕಳವು, ಕೊಲೆ, ಸುಲಿಗೆ, ನಿಂದನೆ, ಕೋಪ,
ಸುಳ್ಳು, ಚಾಡಿ ದುರ್ಗುಣಗಳನ್ನು ಬಿಟ್ಟು ಸರಳವಾದ ಜೀವನ ಮಾಡುವುದು ಮತ್ತು ಸತ್ಯಶುದ್ಧ ಕಾಯಕದಿಂದ ಬದುಕುವುದೆ ನಿಜವಾದ ಧರ್ಮ. ಅಂಥ ಧರ್ಮ ಮಾರ್ಗದಲ್ಲಿ ನಡೆಯುತ್ತ ಪರಿಶುದ್ಧಭಾವದಿಂದ ದೇವರನ್ನು ಒಲಿಸಿಕೊಳ್ಳಲು ಒಂದು ಹೆಜ್ಜೆ ಮುಂದೆ ಇಟ್ಟರೆ ಸಾಕು ಅದು ಒಂದೊಂದೆ ಹೆಜ್ಜೆ ಹಾಕುತ್ತ
ಗುರಿಯನ್ನು ತಲುಪಿಸುತ್ತದೆ. ಮೊದಲ ಹೆಜ್ಜೆಯನ್ನೆ ಇಡಲಿಲ್ಲ ಎಂದರೆ ಗುರಿ ತಲುಪಲು ಸಾಧ್ಯವಿಲ್ಲ. ಹಾಗೆ ದಿನಸಾಧನೆ ಘನಸಾಧನೆಯಾಗಿ ಮೇರುಗಿರಿ ಪರ್ವತವನ್ನೆ ಏರಬಹುದು. ನೀನು ಒಂದು ಹೆಜ್ಜೆ ಇಟ್ಟರೆ ದೇವ ಹತ್ತು ಹೆಜ್ಜೆ ಇಟ್ಟು ನಿನ್ನ ಬಳಿಗೆ ಬರುತ್ತಾನೆ. ಒಂದಿಲ್ಲ ಒಂದು ದಿನ ನಿನಗೆ ದೇವನ ಅನುಭವ ನಿನ್ನ ದೇಹದಲ್ಲಿ ಉಂಟಾಗುತ್ತದೆ. ದೇವನೆಂದರೆ ನಮ್ಮಂತೆ ದೇಹಧರಿಸಿ ಪ್ರತ್ಯಕ್ಷವಾಗುವದಿಲ್ಲ.ಅದೊಂದು ಕಣ್ಣಿಗೆ ಕಾಣದ ಆದರೆ ಅನುಭವಕ್ಕೆ ಬರುವ ಮಹಾಶಕ್ತಿ. ಆ ಶಕ್ತಿ ನಿನ್ನಲ್ಲಿ ತುಂಬಿತೆಂದರೆ ಆರೋಗ್ಯ, ಆನಂದ,ಆರ್ಥಿಕತೆ ಮುಂತಾದ ಜೀವನದ ಸರ್ವಾಂಗ ಸಮೃದ್ಧಿಗಳು ನಿನ್ನ
ಜೀವನದಲ್ಲಿ ಬರುತ್ತವೆ.ಅದುವೆ ನಿಜವಾದ ದೇವನ ದರ್ಶನ.
ದೇವ ಎಂದರೆ ಬೆಳಕು, ಜ್ಞಾನ ಎಂದರ್ಥ.ಆ ಜ್ಞಾನರತ್ನ ದೊರಕಿದ ಮೇಲೆ ಯಾವ ಕೊರತೆ ಇರುವುದಿಲ್ಲ.ಶಾಂತಿ
ಸಮಾಧಾನ ನೆಮ್ಮದಿ ಸಿಕ್ಕು ಆನಂದದಿಂದ ಬದುಕಬಹುದು.
ರಚನೆ ಮತ್ತು ವಿವರಣೆ
ಎನ್.ಶರಣಪ್ಪ ಮೆಟ್ರಿ