ಬೀದರ – ಒಂಬತ್ತು ತಿಂಗಳು ಹೊತ್ತು ಹೆತ್ತರಿವ ತಮ್ಮ ಕರುಳ ಬಳ್ಳಿಗಳನ್ನೇ ನಿರ್ದಯವಾಗಿ ಕಸದ ತೊಟ್ಟಿಯಲ್ಲಿ ಬಿಟ್ಟು ಹೋದಂತಹ ಅಮಾನವೀಯ ಘಟನೆಯೊಂದು ಬೀದರ್‌ನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಬೀದರ್ ನಗರದ ಹೃದಯ ಭಾಗ ಬ್ರಿಮ್ಸ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು ಎರಡು ತಿಂಗಳ ಗಂಡು ಮಗು ಹಾಗು ಒಂದು ವಾರದ ಹೆಣ್ಣು ಮಗು ಕಸದ ತೊಟ್ಟಿಯಲ್ಲಿ ಪತ್ತೆಯಾಗಿವೆ.
ಆಗಸ್ಟ್ 14 ಮತ್ತು ಆಗಸ್ಟ್ 25 ರಂದು ಆಸ್ಪತ್ರೆಯ ಐದನೇ ಮಹಡಿಯ ಲಿಪ್ಟ್ ಬಳಿ ಒಂದು ಮಗು ಹಾಗೂ ಆಸ್ಪತ್ರೆಯ ಅವರಣದಲ್ಲಿರುವ ಕಸದ ತೊಟ್ಟಿ ಬಳಿ ಒಂದು ಮಗು ಪತ್ತೆಯಾಗಿದ್ದವು. ಹೀಗೆ ಪತ್ತೆಯಾದ ನವಜಾತ ಶಿಶುಗಳಿಗೆ ಆರೋಗ್ಯದಲ್ಲಿ ಏರುಪೇರಾಗಿದ್ದು, ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಚಿಕಿತ್ಸೆ ಬಳಿಕ ಚೇತರಿಸಿಕೊಂಡ ಮಕ್ಕಳನ್ನ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮಾರ್ಗದರ್ಶನದಲ್ಲಿ ಭಾಲ್ಕಿ ಹಿರೇಮಠಕ್ಕೆ ಒಪ್ಪಿಸಲಾಗಿದೆ.
ಇನ್ನು ಅನಾಥವಾಗಿ ಪತ್ತೆಯಾದ ಮಕ್ಕಳ ತಂದೆ ತಾಯಿ ಕುರಿತು ಮಾಹಿತಿ ಸಂಗ್ರಹಕ್ಕೆ ಪೊಲೀಸರು ಹಾಗು ಬ್ರಿಮ್ಸ್ ಸಿಬ್ಬಂದಿ ಮುಂದಾಗಿದ್ದಾರೆ. ಬೀದರ್‌ನ ಸಖಿ ಸೆಂಟರ್ ಹಾಗೂ ಮಹಿಳಾ ಠಾಣೆ ಪೊಲೀಸರು ಮಹಿಳೆಯ ಗುರುತು ಪತ್ತೆ ಹಚ್ಚಿದ್ದು, ಕಲಬುರಗಿ ಜಿಲ್ಲೆಯ ಮೂಲದ ಮಾನಸಿಕ ಅಸ್ವಸ್ಥ ಮಹಿಳೆಯೋರ್ವಳು ಹೈದರಾಬಾದನಲ್ಲಿ ಹೆರಿಗೆಯಾದ ಬಳಿಕ ಬ್ರಿಮ್ಸ್ ಆಸ್ಪತ್ರೆಯಲ್ಲಿ ಮಗುವನ್ನ ಬಿಟ್ಟು ಹೋಗಿದ್ದಾಳೆ ಎಂದು ತಿಳಿದುಬಂದಿದೆ. ಪ್ರಕರಣವನ್ನ ಕಲಬುರಗಿಗೆ ವರ್ಗಾವಣೆ ಮಾಡಲಾಗಿದೆ ಎಂದು ಎಸ್‌ಪಿ ಪ್ರದೀಪ ಗುಂಟಿ ಮಾಹಿತಿ ನೀಡಿದ್ದಾರೆ.
ವರದಿ : ನಂದಕುಮಾರ ಕರಂಜೆ, ಬೀದರ