spot_img
spot_img

ದಿನಕ್ಕೊಬ್ಬ ಶರಣ ಮಾಲಿಕೆ

Must Read

- Advertisement -

ಶರಣ ಕೋಲಶಾಂತಯ್ಯ

ಕನ್ನಡ ಸಾಹಿತ್ಯದಲ್ಲಿ ಬಹಳ ಶ್ರೇಷ್ಠವಾದ ಸಾಹಿತ್ಯ ಅಂದರೆ ಅದು ವಚನ ಸಾಹಿತ್ಯ. 12ನೇಯ ಶತಮಾನದಲ್ಲಿ ಹುಟ್ಟಿಕೊಂಡ ಸಾಹಿತ್ಯ ಹಲವಾರು ಶರಣರ ಹಾಗು ವಚನಕಾರರ ಫಲಶೃತಿ. ತಮ್ಮ ನಿತ್ಯ ಜೀವನದಲ್ಲಿ ಕಾಯಕ ನಿಷ್ಠೆ, ಪ್ರಾಮಾಣಿಕತೆಯಿಂದ ಹೆಸರುವಾಸಿಯಾದ ಹಲವು ವಚನಕಾರರಲ್ಲಿ ಕೋಲಶಾಂತಯ್ಯ ಎಂಬ ವಚನಕಾರನ ಹೆಸರು ಪ್ರಸಿದ್ಧವಾದದ್ದು.

ಈತ ಹಿರಿಯ ಶರಣ ಹಾಗೂ ವಚನಕಾರ. ಬಸವಣ್ಣ, ಬಿಜ್ಜಳರ ಸಮಕಾಲೀನ. ಕಟ್ಟಿಗೆ ಅಥವಾ ಕೋಲನ್ನು ಹಿಡಿದು ಪಶುಪಾಲನೆಯ ಕಾಯಕವನ್ನು ನಡೆಸುತ್ತಿದ್ದುದರಿಂದ ಈತನ ಹೆಸರಿನ ಹಿಂದೆ ಕೋಲು ವಿಶೇಷಣವಾಗಿ ಬಂದಿರಬಹುದೆಂದು ಹೇಳಬಹುದಾಗಿದೆ. ಕೆಲವು ವಚನಗಳಲ್ಲಿ ತನ್ನ ಗೋಪಾಲ ವೃತ್ತಿಯ ಪರಿಭಾಷೆಯನ್ನು ಅರ್ಥಪೂರ್ಣವಾಗಿ ಬಳಸಿಕೊಂಡಿದ್ದಾನೆ. ವಚನ ರಚನೆಯಿಂದ ಸಾಹಿತ್ಯದಲ್ಲಿಯೂ ಹಿರಿಯ ಸ್ಥಾನವನ್ನು ಸಂಪಾದಿಸಿಕೊಂಡಿದ್ದಾನೆ. ಈಗ ದೊರೆತಿರುವಂತೆ ಈತನ ವಚನಗಳ ಸಂಖ್ಯೆ 100. ಇವುಗಳಲ್ಲಿ 64 ಸಾಮಾನ್ಯವಚನಗಳು, 36 ಬೆಡಗಿನ ವಚನಗಳು. ಪುಣ್ಯಾರಣ್ಯ ದಹನ ಭೀಮೇಶ್ವರಲಿಂಗ ನಿರಂಗಸಂಗ ಎಂಬುದು ಈತನ ವಚನಾಂಕಿತ. ಎಲ್ಲ ವಚನಕಾರರಂತೆ ಈತನೂ ಷಟ್ಸ್ಥಲ ಸಿದ್ಧಾಂತವನ್ನು ಪ್ರತಿಪಾದಿಸಿದ್ದಾನೆ.

- Advertisement -

ಈತನು ಇಂದಿನ ಕಲಬುರ್ಗಿಯ ಜೀವರ್ಗಿಯ ತಾಲೂಕಿನ ನೆಲೋಗಿಯ ಗ್ರಾಮದವನು ಎಂಬುದಕ್ಕೆ ಬಸವಾಪಟ್ಟಣ ಶಾಸನ, ಬುಯಾರ ಶಾಸನ ಮತ್ತು ಮರಡಿಪುರ ಶಾಸನಗಳಲ್ಲಿ ಉಲ್ಲೇಖವಿದೆ. ನೀಲಕಂಠೇಶ್ವರ ಭಕ್ತನಾದ ಈತನು ಶಿವಯೋಗದ ಕುರಿತು ವಚನಗಳಲ್ಲಿ ಪ್ರಸ್ತಾಪಿಸಿದ್ದು ಶಿವಯೋಗಿಯಾಗಿ ಗುರುತಿಸಿಕೊಂಡಿದ್ದಾನೆ. ಈತನು ರಚಿಸಿದ ಹಲವಾರು ವಚನಗಳು ಆಧ್ಯಾತ್ಮಿಕತೆಗೆ ಹೆಚ್ಚು ಸಂಬಂಧಿಸಿದ್ದು ಓದುಗರರಿಗೆ ಅಷ್ಟೊಂದು ಸುಲಭವಾಗಿ ಅರ್ಥವಾಗಲಾರವು.

ಎನ್ನಾಕಾರವೆ ನೀನಯ್ಯ ಬಸವಣ್ಣ.
ನಿ [ನ್ನಾಕಾರವೆ] ಕೋಲ ಶಾಂತ.
ಹಿಡಿದಿರ್ದ ಕರಸ್ಥಲ ಬಸವಣ್ಣನಿಂದ ಉದಯವಾದ ಕಾರಣ ಆ ಬಸವಣ್ಣನ ಶ್ರೀಪಾದಕ್ಕೆ ಅಹೋರಾತ್ರಿಯಲ್ಲಿ   ನಮೋ ನಮೋಯೆಂಬೆ. ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.

ಬಸವಣ್ಣನವರ ಪ್ರಭಾವ ಆತನಲ್ಲಿ ಹಲವು ಬದಲಾವಣೆಗಳಿಗೆ ಕಾರಣವಾಗಿದ್ದು ಅದಕ್ಕೆ ಚಿರಋಣಿಯಾಗಿ ಬಸವಣ್ಣನ ಬಗೆಗಿನ ಅಪಾರ ಭಕ್ತಿಯನ್ನು ಹೇಳುವಲ್ಲಿ ಈ ವಚನ ಸಾಕ್ಷಿಯಾಗಿದೆ.

- Advertisement -

ಜಡೆಮುಡಿ ಬೋಳು ಹೇಗಾದಡಾಗಲಿ, ನಡೆನುಡಿ ಸಿದ್ದಾಂತವಾದಡೆ ಸಾಕು , ಆತ ಪರಂಜ್ಯೋತಿ ಗುರುವಹ.   ಆ ಇರವ ನಿನ್ನ ನೀನರಿ , ಪುಣ್ಯಾರಣ್ಯ ದಹನ ಭೀಮೇಶ್ವರಲಿಂಗ ನಿರಂಗಸಂಗ.

ಭಕ್ತನಾದವನ ಜಡೆಮುಡಿಗಳು ಎಂತೇ ಇರಲಿ ಆತನ ನಡೆನುಡಿ ಸಿದ್ಧಾಂತವಾದರೆ ಸಾಕು. ಅವನಿಗೆ ಅವಸೋಂಕು ಬಂದರೂ ಭಾವ ಶುದ್ಧವಾಗಿರಬೇಕು.-ಎಂಬಿವೇ ಮೊದಲಾದ ವಿವಿಧ ನೀತಿಗಳನ್ನು ಹಲವಾರು ಉತ್ತಮ ಉಪಮೆಗಳ ಮೂಲಕ ನಿರೂಪಿಸಿದ್ದಾನೆ.

ವೇಶ್ಯಯ ಸಂಗ ದ್ರವ್ಯದ ಕೇಡು, ದಾಸಿಯ ಸಂಗ ಮಾನಹಾನಿಗೆ ಮೊದಲು; ಆಂದಣಗಿತ್ತಿಯ ಮಾತು ಬಂದಿಕಾರ ಜಗಳದಂತೆ, ಕಂಡವರಲ್ಲಿ ತಂದು ಮಾಡುವವನ ಮಾಟ ಸಾಕಿ ಕೊಂದಿಹನ ದಯದಂತೆ;
ಮಾಡಿ ಆಡಲೇತಕ್ಕೆ, ಸಲಹಿಕೊಲಲೇತಕ್ಕೆ, ಬಿತ್ತಿ ಕೀಳಲೇತಕ್ಕೆ, ಕಟ್ಟಿ ಒಡೆಯಲೇಕೆ? ಮಾಡಿ ಮಾಡಿ ಮನಗುಂದುವ ನೀಡಿ ನೀಡಿ ನಿಜಗುಂದುವಣ ಬೇಡ-ಎಂದು ಹೇಳುವ ಈತನ ನೀತಿ ನಿರೂಪಣೆಯ ಶೈಲಿ ಉತ್ತಮ ಮಟ್ಟದ್ದಾಗಿದೆ.

ಮಾಡಿ ಮಾಡಿದನೆಂದು ಹೇಳದಿರು, ನೀನೇ ಸಾಕಿ ಹತ್ಯ ಮಾಡದೆ, ನೀನೇ ಬಿತ್ತಿ ಅದನ್ನ ಕೀಳದೇ, ಕಟ್ಟಿದ ಕೆಡವದೇ ಮಾಡಿದ್ದನ್ನು ಮಾಡಿದನೆಂದು ಹೇಳದೆ ಇದ್ದರೆ ಅದರಿಂದ ನಮಗೆ ಒಳಿತು. ಒಳ್ಳೆಯದು ಯಾವುದು ಕೆಟ್ಟದ್ದು ಯಾವುದು ಎಂಬುವ ಪರಿಜ್ಞಾನ ಹೊಂದಿದ ನಾವುಗಳು ನಾಶಕ್ಕೆ ಹೆಗಲು ಕೊಡದೆ ಒಳ್ಳೆಯದನ್ನು ಮುಂದುವರಿಸಬೇಕು ಇತರರಿಗೆ ಸಹಾಯ ಮಾಡಿದ್ದನ್ನು ಹೇಳದೆ ಸಮಾಜ ಸೇವೆಯಲ್ಲಿ ತೊಡಗುವುದು ಉತ್ತಮ ಎಂದು ಹೀಗೆ ಹೇಳುತ್ತಾರೆ

ಬಿತ್ತಿದ ಬೆಳೆ, ಕಟ್ಟಿದ ಕೆರೆ , ಸಲಹಿದ ಶರೀರ, ನೆಟ್ಟ ವೃಕ್ಷ ತನಗಲ್ಲದೆ ಅವಕೊಡಲುಂಟೆ ? ತಾ ಮಾಡುವ ಭಕ್ತಿ ತನಗಲ್ಲದೆ ಬೇರೊಂದು ಗುಣವನರಸಲಿಲ್ಲ. ಆ ಪರಿಯ ನಿನ್ನ ನೀ ತಿಳಿ.

ನಾವು ಬಿತ್ತಿದ ಬೆಳೆ, ಕಟ್ಟಿದ ಕೆರೆ, ನಮ್ಮ ಶರೀರವನ್ನು ಚೆನ್ನಾಗಿ ಇಟ್ಟುಕೊಳ್ಳುವುದು, ಹಾಗು ನಾವು ಬೆಳೆಸಿದ ಮರ ಇವುಗಳ ಪ್ರತಿಫಲ ನಮಗೆ ದೊರೆಯುವುದು ಅದರಂತೆ ನಮ್ಮ ಭಕ್ತಿ ನಮಗಲ್ಲದೆ ಮತ್ತೊಬ್ಬರಿಗೆ ಆಗದು. ನಾವು ಮಾಡಿದ್ದು ನಮಗೆ ಅನ್ನುವುದು ಒಳ್ಳೆಯದನ್ನು ಮಾಡಿದರೆ ಒಳ್ಳೆಯ ಪ್ರತಿಫಲ ಸಿಕ್ಕೆ ಸಿಗುತ್ತದೆ ಎಂಬ ಅರಿವು ನಮ್ಮಲ್ಲಿ ಮೂಡಬೇಕು.

 ಪ್ರೊ. ನಾಗರಾಜ ಮ ಕೋಟಗಾರ.                 ಸಹಾಯಕ ಪ್ರಾಧ್ಯಾಪಕರು ಕೆ ಎಲ್ ಇ ಸಂಸ್ಥೆಯ ಶ್ರೀ ಮೃತ್ಯುಂಜಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಧಾರವಾಡ.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಶಿಕ್ಷಕರಾದ ಮೆಟ್ಯಾಲಮಠ ರವರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ

ಬೆಳಗಾವಿ:-ತಾಲೂಕಿನ ಹಿಂಡಲಗಾ ವಿಜಯನಗರ ದ ಸರಕಾರಿ ಪ್ರಾಥಮಿಕ ಮರಾಠಿ ಶಾಲೆಯ ಕ್ರಿಯಾಶೀಲ ಕನ್ನಡ ಶಿಕ್ಷಕರಾದ ರುದ್ರಯ್ಯ ಈರಯ್ಯ ಮೆಟ್ಯಾಲಮಠ ರವರಿಗೆ ತಾಲೂಕು ಆದರ್ಶ ಶಿಕ್ಷಕ ಪ್ರಶಸ್ತಿ...
- Advertisement -

More Articles Like This

- Advertisement -
close
error: Content is protected !!
Join WhatsApp Group