ಶರಣ ‘ ಕೊಟಾರದ ಸೋಮಣ್ಣ ‘
ಹನ್ನೆರಡನೆಯ ಶತಮಾನವನ್ನು ಸುವರ್ಣಯುಗವೆಂದು ಕರೆಯಲಾಗುತ್ತದೆ ಯಾಕೆಂದರೆ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬ ಧ್ಯೇಯ ವಾಕ್ಯವನ್ನು ಪಸರಿಸಿ ಅದರಂತೆ ನಡೆ-ನುಡಿ ಸಾಮರಸ್ಯದಲ್ಲಿ ನಡೆದು ತೋರಿಸಿದವರು ಶರಣರು ವಚನ ಸಾಹಿತ್ಯ ಕನ್ನಡ ಸಾಹಿತ್ಯದಲ್ಲಿ ಪ್ರಭಾವಶಾಲಿ ಸಾಹಿತ್ಯ ಪ್ರಕಾರವಾಗಿದೆ ಆತ್ಮ ವಿಮರ್ಶೆಯ ಮಾಧ್ಯಮವಾಗಿ ಸ್ವತಂತ್ರವಾಗಿ ಬೆಳೆದು ವಿಜೃಂಭಿಸಿ ಮುಂದಿನ ಸಾಹಿತ್ಯ ಪರಂಪರೆಗಳ ಮೇಲೆ ಪ್ರಭಾವ ಬೀರಿದ ಕನ್ನಡ ಸಾಹಿತ್ಯದಲ್ಲಿ ವಚನ ಸಾಹಿತ್ಯ ಮಾತ್ರವಾಗಿದೆ.
ಸ್ವಂತಿಕೆಯಿಂದ ಹುಟ್ಟಿದ ವಚನ ಸಾಹಿತ್ಯವು ಜೇಡರದಾಸಿಮಯ್ಯನ ವಚನಗಳಿಂದ ಪ್ರಾರಂಭವಾಗಿ 150 ಕ್ಕಿಂತ ಹೆಚ್ಚು ಶರಣರು 50 ಕ್ಕಿಂತ ಹೆಚ್ಚು ಶರಣೆಯರು ವಿವಿಧ ಕಾಯಕಗಳಲ್ಲಿ ನಿರತರಾದ ಶರಣರ ಸರಮಾಲೆಯೆ ಕಂಡುಬರುತ್ತದೆ. ಸಮಾಜ ಡಾಂಭಿಕರಿಂದ ಶೋಷಕರಿಂದ ತುಂಬಿತ್ತು, ನಡೆ-ನುಡಿಯಲ್ಲಿ ಸಾಮರಸ್ಯವಿಲ್ಲದೆ ನಿರ್ಜೀವವಾಗಿತ್ತು. ಜನರ ಮೌಡ್ಯವನ್ನು ತೊಡೆದು ಹಾಕಿ ಅನೇಕ ಅನಾರೋಗ್ಯಕರವಾದ ಆಚರಣೆಗಳನ್ನು ಖಂಡಿಸಿದರು, ದೇವವಾಣಿ ಜನವಾಣಿ ಯಾವುದು ಅಸಾಧ್ಯವಾದಾಗ ಜನವಾಣಿಯನ್ನೇ ದೇವವಾಣಿಯ ಮಟ್ಟಕ್ಕೇರಿಸಿದರು.
ಬಸವಾದಿ ಶರಣರ ವಿಚಾರಗಳಿಗೆ ಮನಸೋತು ನಾಡಿನ ಮೂಲೆ ಮೂಲೆಯಿಂದ ಆಗಮಿಸಿ ಕಲ್ಯಾಣದಲ್ಲಿ ಶರಣರ ಸಂಗಮದಿಂದ ಶರಣ ಧರ್ಮವನ್ನು ಸ್ವೀಕರಿಸಿ ತಾವು ಶರಣರಾಗಿ ಬಸವ ವಿಚಾರಗಳನ್ನು ಬಿತ್ತರಿಸುತ್ತಾ ಶರಣ ಬದುಕನ್ನು ನಡೆಸಿದವರಲ್ಲಿ ಕೊಟಾರದ ಸೋಮಣ್ಣ ಶರಣರು ಒಬ್ಬರು. ಇವರು ಬಸವಣ್ಣನವರ ಸಮಕಾಲೀನ ವಚನಕಾರರಾಗಿದ್ದು ಇವರ ಕಾಲವನ್ನು ಕ್ರಿ.ಶ. 1160 ಎಂದು ಹಲವು ಗ್ರಂಥಗಳ ಅಧ್ಯಯನದಿಂದ ಗುರುತಿಸಬಹುದಾಗಿದೆ. ಶರಣ ಕೊಟಾರದ ಸೋಮಣ್ಣನವರ ಕುರಿತು ಹೆಚ್ಚಿನ ವಿವರಗಳು ದೊರೆಯುವುದಿಲ್ಲ. ಆದರೆ ಕೊಟಾರ ಅನ್ನುವ ಪದ ನಿಷ್ಪತ್ತಿಯನ್ನು ನೋಡಿದಾಗ ಉಗ್ರಾಣ,ದಾಸ್ತಾನು ಮಳಿಗೆ ಎಂದು ಅರ್ಥ ತಿಳಿದುಬರುತ್ತದೆ. ಈ ಪದದಿಂದ ನಮಗೆ ತಿಳಿದು ಬರುವದೇನೆಂದರೆ ಶರಣರಾದ ಸೋಮಣ್ಣನವರು ಕೊಟಾರ ಅಂದರೆ ಉಗ್ರಾಣ ನೋಡಿಕೊಳ್ಳುವ ಕಾಯಕ ಹೊಂದಿದ್ದರು ಎಂಬುದನ್ನು ತಿಳಿದುಕೊಳ್ಳಬಹುದು. ಯಾಕೆಂದರೆ 12 ನೇ ಶತಮಾನದ ಶರಣರು ತಾವು ಮಾಡುವ ಕಾಯಕದಿಂದಲೇ ತಮ್ಮ ಹೆಸರನ್ನು ಗುರುತಿಸಿಕೊಂಡಿರುವುದನ್ನು ಹಲವಾರು ವಚನಕಾರರ ಹೆಸರುಗಳನ್ನು ನಾವು ನೋಡಿದಾಗ ತಿಳಿದುಬರುತ್ತದೆ.
ಇವರು ಬರೆದ ವಚನಗಳ ಬಗೆಗೆ ವಚನ ಸಂಪುಟಗಳನ್ನು ಅವಲೋಕಿಸಿದಾಗ ಇಲ್ಲಿಯವರೆಗೆ ನಮಗೆ ಸಿಕ್ಕ ಅವರ ವಚನಗಳ ಸಂಖ್ಯೆ ಒಂದು, ಒಂದೇ ವಚನವಾಗಿದ್ದರೂ ಬಹಳಷ್ಟು ದೀರ್ಘವಾದ ವಚನ ಇದಾಗಿದೆ. ‘ಬಸವಣ್ಣ ಪ್ರಿಯ ನಿಃಕಳಂಕ ಸೋಮೇಶ್ವರ’ ಎಂಬುವುದು ಇವರ ವಚನಾಂಕಿತವಾಗಿದೆ.
ಗುರು, ಲಿಂಗ, ಜಂಗಮದ ಅರ್ಥ ತಿಳಿದುಕೊಳ್ಳಲಾರದೆ ಕೇವಲ ವಿಭೂತಿ ರುದ್ರಾಕ್ಷಿ ಧರಿಸುವುದರಿಂದ ಪ್ರಯೋಜನವಿಲ್ಲವೆಂದು ಶರಣರಾದ ಕೊಟಾರದ ಸೋಮಣ್ಣನವರು ತಮ್ಮ ವಚನದುದ್ದಕ್ಕೂ ತಿಳಿಸಿರುವುದು ಕಂಡುಬರುತ್ತದೆ.
ವಿಭೂತಿ ರುದ್ರಾಕ್ಷಿಯ ಧರಿಸಿ ಷಡಕ್ಷರಿಯಂ ಜಪಿಸಿ
ಗುರು ಲಿಂಗ ಜಂಗಮದ ಆದ್ಯಂತವನರಿಯದೆ
ಏನೆಂದು ಪೂಜಿಸುವಿರಿ, ಆರಾಧಿಸುವಿರಿ?
ಅದೆಂತೆಂದಡೆ
ಹರದನ ಕೈಯಲ್ಲಿ ಕೊಟ್ಟು ಮಾರಿಸಿಕೊಂಡುದು
ಲಿಂಗವಾದ ಪರಿ ಹೇಂಗೆ?
ಸಕಲ ವ್ಯಾಪಾರ ಅಳುವಿಂಗೆ ಒಳಗಾಗಿ
ತೊಡಿಸಿ ಬರೆಸಿಕೊಂಡುದು ಮಂತ್ರವಾದ ಪರಿ ಹೇಂಗೆ?
ಅಜ್ಞಾನಿ ಮೃಗ ಪಶುವಿನ ಸಗಣಿಯ ಸುಟ್ಟುದು ವಿಭೂತಿಯಾದ ಪರಿ ಹೇಂಗೆ?
ಪಂಚಭೂತಿಕದಿಂದ ಜನಿಸಿದ ವೃಕ್ಷದ ಫಲ ರುದ್ರಾಕ್ಷಿಯಾದ ಪರಿ ಹೇಂಗೆ?
ಸಕಲ ಜೀವವೆರಸಿ ಕರಗಿದ ಅಸಿಯ ಜಲ ತೀರ್ಥವಾದ ಪರಿ ಹೇಂಗೆ?
ಸಕಲ ಪ್ರಾಣಿಗಳಾಹಾರ ಹದಿನೆಂಟು ಧಾನ್ಯ ಕ್ಷುಧಾಗ್ನಿಯಲ್ಲಿ
ಜನಿಸಿ ನವಾದುದು ಪ್ರಸಾದವಾದ ಪರಿ ಹೇಂಗೆ?
ಅದೆಂತಡೆಃ
ನಿಗಮ ಶಾಸ್ತೃಕ್ಕೆ ಅಗಣಿತವಾದ ನಾದಬಿಂದುವಿಗೆ
ನಿಲುಕದ ನಿತ್ಯತೃಪ್ತ ಪರಂಜ್ಯೋತಿಲಿಂಗದ ವೈಭವಕ್ಕೆ
ಅಂಗವಾದುದು ಈ ಗುರುವಲಾ ಎಂದು ಅರಿದು
ಆ ಲಿಂಗದ ಚೈತನ್ಯ ಈ ಲಿಂಗವಲಾ ಎಂದು ಅರಿದು
ಮಾಡೂದು ತನು ಮನ ಧನ ವಂಚನೆಯಳಿದು
ಗುರುಭಕ್ತಿ ಸನ್ನಿಹಿತವಾಗಿ ಆ ಲಿಂಗದ ವದನ ಈ ಜಂಗಮವಲಾ
ಎಂದರಿದು ಮಾಡೂದೂ ಆ ತನು ಮನ ಧನ ವಂಚನೆಯಳಿದು
ಜಂಗಮಶಕ್ತಿ ಸನ್ನಿಹಿತವಾಗಿ ಆ ಲಿಂಗದ ಕಾಯಕಾಂತಿಯ
ಬೆಳಗಿನ ಐಶ್ವರಿಯಲಾ ಎಂದರಿದು ಧರಿಸೂದು ಶ್ರೀ ವಿಭೂತಿಯ
ಆ ಲಿಂಗದ ಶೃಂಗಾರದ ಹರನಾಭರಣವಲಾ ಎಂದರಿದು
ಅಳವಡಿಸೂದು ರುದ್ರಾಕ್ಷಿಯನು
ಆ ಲಿಂಗದ ಉತ್ತುಂಗ ಕಿರಣಚರಣಾಂಬುಜವಲಾ ಎಂದು
ಧರಿಸೂದು, ಕೊಂಬುದು ಪಾದೋದಕವನು,
ಆ ಲಿಂಗದ ನಿತ್ಯಪದ ಸಂಯೋಗ ಶೇಷವ ತಾ ಎಂದರಿದು
ಕೊಂಬುದು ಪ್ರಸಾದವನು
ಇಂತಿವೆಲ್ಲವನರಿದುದಕ್ಕೆ ಸಂತೋಷವಾಗಿ ಚರಿಸುವಾತನೆ ಸದ್ಭಕ್ತ
ಆತನ ಕಾಯ ಕರಣ ಪ್ರಾಣ ಭಾವಾದಿಗಳು ಸೋಂಕಿದೆಲ್ಲವೂ
ಲಿಂಗದ ಸೋಂಕು, ಲಿಂಗದ ಕ್ರೀ, ಲಿಂಗದ ದಾಸೋಹ
ಇಂತೀ ತ್ರಿವಿಧವ ಸವೆದು ಅಳಿದುಳಿದ ಸದ್ಭಕ್ತನ ಶ್ರೀಪಾದಕ್ಕೆ
ನಮೋ ನಮೋ ಎಂಬೆನು ಕಾಣಾ
ಬಸವಣ್ಣಪ್ರಿಯ ನಿಃಕಳಂಕ ಸೋಮೇಶ್ವರನೆ ||
ಸುಮಾರು ಮೂವತ್ತು ಸಾಲಿನ ಸುಧೀರ್ಘವಾದ ವಚನ ಇದಾಗಿದ್ದು ಇಲ್ಲಿ ಪ್ರಶ್ನೆಗಳನ್ನು ವಚನದ ಪ್ರಾರಂಭದಲ್ಲಿ ಕೇಳಿದ ಸೋಮಣ್ಣ ಶರಣರು ಅದರ ಮುಂದಿನ ಭಾಗದಲ್ಲಿ ಆ ಪ್ರಶ್ನೆಗಳಿಗೆ ತಾವೆ ಸಮರ್ಪಕವಾದ ಉತ್ತರಗಳನ್ನೂ ಕೊಡುತ್ತಾ ಹೋಗಿದ್ದಾರೆ. ನಾವು ನಿಷ್ಠಾ ಭಕ್ತರಾಗಿರಬೇಕು ಎಂಬುದನ್ನು ಹೇಳುತ್ತಾ, ಗುರು. ಲಿಂಗ, ಜಂಗಮ, ವಿಭೂತಿ, ರುದ್ರಾಕ್ಷಿ, ಪಾದೋದಕ, ಪ್ರಸಾದ, ಮಂತ್ರದ ಅಷ್ಟಾವರ್ಣಗಳ ಪ್ರಾಮುಖ್ಯತೆಯನ್ನು ಇಲ್ಲಿ ತಿಳಿಸಿಕೊಡುತ್ತಾರೆ. ವಿಭೂತಿ ರುದ್ರಾಕ್ಷಿ ಮೈಮೇಲೆಲ್ಲಾ ಧರಿಸಿಕೊಂಡು ಓಂ ನಮಃ ಶಿವಾಯ ಎಂಬುವ ಷಡಕ್ಷರಿ ಮಂತ್ರವನ್ನು ಬಾಯಿ ತುಂಬಾ ಹೇಳಿ ದಿನಾ ದೂಡುತ್ತಾ, ಗುರು, ಲಿಂಗ, ಜಂಗಮ ಎಂದರೆ ಏನು ಎಂಬುದನ್ನು ಅರಿಯದೇ ಆರಾಧನೆ, ಪೊಜೆ ಮಾಡಿದರೆ ಅದು ವೃಥಾ ವ್ಯರ್ಥ ಎಂಬುದನ್ನು ಪ್ರಾರಂಭದಲ್ಲಿಯೇ ಹೇಳುತ್ತಾರೆ. ಹೀಗೆ ಇರುವ ಪೊಜೆಯನ್ನು ನೆಲದ ಮೇಲಣ ಶಿಲೆಗೆ ಹೋಲಿಸುತ್ತಾರೆ. ಈ ಭೂಮಿಯ ಮೇಲೆ ಸಿಗುವ ಕಲ್ಲನ್ನು ತೆಗೆದುಕೊಂಡು ಬಂದು ಆ ಕಲ್ಲನ್ನು ಒಬ್ಬ ಶಿಲ್ಪಿ ಅದನ್ನು ಸುಂದರವಾದ ಮೂರ್ತಿ ಮಾಡಿ ಒಬ್ಬ ವ್ಯಾಪಾರಿಯ ಕೈಯಲ್ಲಿ ಕೊಟ್ಟು ಬಜಾರದಲ್ಲಿ ಇಂತಿಷ್ಟು ಹಣಕ್ಕೆಂದು ಮಾರಿದರೆ ಅದು ಹೇಗೆ ದೈವತ್ವ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಪ್ರಶ್ನಿಸುತ್ತಾನೆ. ಯಾರೂ ಅಜ್ಞಾನಿಗಳ ಕೈಯಲ್ಲಿ ಹೊರಹೊಮ್ಮಿದ ಮಂತ್ರ ಮಂತ್ರವಾಗಿ ಇರಲು ಸಾಧ್ಯವೇ? ಅಜ್ಞಾನಿ ಮೃಗ ಪಶುವಿನ ಸೆಗಣಿಯಿಂದ ಮಾಡಿದ ವಿಭೂತಿ ಶ್ರೇಷ್ಟವಾಗಲು ಹೇಗೆ ಸಾಧ್ಯ?, ಪಂಚಭೂತಗಳಿಂದ ಜನಿಸಿದ ಅಂದರೆ ಭೂಮಿ, ನೀರು, ಆಕಾಶ, ಅಗ್ನಿ, ಗಾಳಿಯಿಂದ ಹುಟ್ಟಿ ಮರದಲ್ಲಿ ಬೆಳೆದ ರುದ್ರಾಕ್ಷಿ ಶ್ರೇಷ್ಟವಾಗಿರಲು ಹೇಗೆ ಸಾಧ್ಯ? ಸಕಲ ಜೀವ ರಾಶಿಯನ್ನು ಒಳಗೊಂಡು ಅದರಲ್ಲಿ ಕರಗಿಸಿಕೊಂಡ ನೀರು ತೀರ್ಥ ಹೇಗಾಗುತ್ತದೆ? ಹಾಗಾದರೆ ಅವುಗಳೆಲ್ಲವೂ ಶ್ರೇಷ್ಟವಾಗಬೇಕಾದರೆ ತನು, ಮನ, ಧನ ಶುಚಿತ್ವದಿಂದ ಕೂಡಿ ವಂಚನೆಯನ್ನು ಅಳಿದು ಮರದ ಬಾಯಿ ಬೇರು ಹೇಗೆಯೂ ಹಾಗೆ ಲಿಂಗದ ಮುಖ ಜಂಗಮ, ಲಿಂಗದ ಕಾಂತಿ ವಿಭೂತಿ, ಲಿಂಗದ ನಿತ್ಯಪದ ಸಂಯೋಗ ಶೇಷವ ತಾ ಎಂದರಿದು ಕೊಂಬುದು ಪ್ರಸಾದ ಹೀಗೆ ಇವೆಲ್ಲವುಗಳನ್ನು ತಿಳಿದುಕೊಂಡು ಅನುಸರಿಸಿಕೊಂಡಿರುವವನೆ ನಿಜವಾದ ಭಕ್ತ ಎಂದು ಹೇಳುತ್ತಾನೆ.
ಆತನ ಕಾಯ ಕರಣ ಪ್ರಾಣ ಭಾವಾದಿಗಳು ಸೋಂಕಿದೆಲ್ಲವೂ ಲಿಂಗದ ಸೋಂಕು, ಲಿಂಗದ ಕ್ರೀ, ಲಿಂಗದ ದಾಸೋಹ, ಇಂತೀ ತ್ರಿವಿಧವ ಸವೆದು ಅಳಿದುಳಿದ ಸದ್ಭಕ್ತನ ಶ್ರೀಪಾದಕ್ಕೆ ನಮೋ ನಮೋ ಎಂಬೆನು ಕಾಣಾ ಎಂದು ಹೇಳುತ್ತಾನೆ. ಅಂದರೆ, ಇಷ್ಟಲಿಂಗ, ಭಾವಲಿಂಗ, ಪ್ರಾಣಲಿಂಗವನ್ನು ಕಾಯದಲ್ಲಿ ಒಂದಾಗಿರಿಸಿಕೊಂಡ ಸದ್ಭಕ್ತನ ಪಾದಕ್ಕೆ ನಮೋ ನಮೋ ಎನ್ನುವೆನು ಎಂದು ಹೇಳುತ್ತಾನೆ. ಒಟ್ಟಾರೆ ಕೇವಲ ಭೌತಿಕ ವಸ್ತುಗಳಿಂದಲೇ ಸಾಧನೆಯಾಗದು, ಮಾನಸಿಕ ಪರಿವರ್ತನೆಗೆ ಕಾರಣವಾಗುವ ಪ್ರಕ್ರಿಯೆ ಮುಖ್ಯ ಎಂಬುದನ್ನು ಈ ವಚನವು ತಿಳಿಸುತ್ತದೆ.
ಪ್ರೊ. ಸಿದ್ಧಲಿಂಗೇಶ ಉ. ಸಜ್ಜನಶೆಟ್ಟರ