ದ್ವಂದ್ವ
ಜೀವನವೆಂದರೆ
ಬರಿ ಸಂತಸವೇ ತುಂಬಿದ ಜೋಳಿಗೆಯಲ್ಲ….
ಕಾಣದ ಜೋಳಿಗೆಗೆ ಕೈಹಾಕಿದಾಗ ಸಿಗುವುದನು
ನೋಡಿ ನೀ ದಕ್ಕಿಸಿಕೊಳ್ಳಬೇಕು….
ನೋವು ನಿರಾಶೆಹತಾಶೆಗೆ
ಕುಗ್ಗಿದರೆ ಹಿಗ್ಗನು ಕಾಣಲು ತಾಳ್ಮೆ ಬೇಕು, ಕಾಣುವ ಛಲವು ಬೇಕು….
ಮನದಮಾತಿಗೆ ಮನಸ್ಸು ಕೊಡುವ ಒಂದು ಹೃದಯವನ್ನಾದರು
ಸಂಪಾದಿಸಬೇಕು….
ಒತ್ತಿ ಇಡುವ ಒತ್ತಡಗಳ
ಮುಟೆಯನೂ ಒಮ್ಮೆ ಯಾದರು ಹರವಿ ಹಗುರಾಗಬೇಕು….
ಅಹಂನ ಕೋಟೆಯೊಡೆದ
ಅಂಗಳದಲಿ ಅಳುವ
ಮಗುವಂತೆ ಅತ್ತು ಅತ್ತು
ಹಸನಾಗಬೇಕು…..
ಬದುಕು ಸರಿಸಿ ಸಾವು
ಕರೆಯುವಮುನ್ನ
ಕ್ಷಣವಾದರು ನಿನ್ನ ನೀ ಪ್ರೀತಿಸಬೇಕು….
ದಿನವೂ ಕಾಣುವ ಹಗಲು
ರಾತ್ರಿಯಂತೆ ಜೀವನದ ಎರಿಳಿತಗಳು ಎನ್ನುವ ಸರಳ ತತ್ವವನ್ನಾದರು ನೆನಪಿಸಿಕೋಳ್ಳಬೇಕು….
ಬದುಕು ಶಾಶ್ವತವಲ್ಲ
ಸೋಲು ಸಾವಲ್ಲ
ಸೋಲುಒಪ್ಪದೆ ಬದುಕು
ಅಪ್ಪುವದಕೆ ಮನಸ್ಸು ಮಣಿಸಬೇಕು…
ಬದುಕು ಸಾಕು
ಸಾವು ಬೇಕು ಎನ್ನುವ ಅಂತರಂಗದ ಕೊನೆಕ್ಷಣದ ದ್ವಂದ್ವ ಯುದ್ದದಲಿ
ಬದುಕ ಗೆಲಿಸಬೇಕು….
✒️ಡಾ. ನಿರ್ಮಲಾ ಬಟ್ಟಲ
ಭಾವಗೀತೆಯ ಗೆಳೆಯ ಗೆಳತಿ
ಬಂದೇ ಬರುವೆ, ನೀನು ಎಂದು
ಚಾತಕ ಪಕ್ಷಿಯ ಹಾಗಾದೆ//
ಕೊಕ್ಕರೆಯಂತೆ ಕೊರಳನು ಬೀರಿ
ತವಕದಿ ನಿನಗೇ ನಾ ಕಾದೇ//
ನಿನ್ನ ಧ್ವನಿಯಲಿ ನನ್ನ ಭಾವ
ಸೇರಿ ನಲಿಯಿತು ಹಾಡಾದೆ//
ನನ್ನ ಮಿಲನವು ನಿನ್ನೊಳಗಾಯಿತು
ಭೇದ ಎಂಬುವುದೆಲ್ಲಿ ಇದೆ.//
ಇಬ್ಬರು ಒಂದೇ ಆದರು ಇಲ್ಲಿ
ದೇಹವು ಎರಡೂ ಕಂಡುದಿದೆ//
ಹಾಲು, ನೀರೂ ಬೆರೆತಂತಾಯಿತು
ನನ್ನ ಬಾಳೂ ನಿನಗೆಂದೇ//
ಹೋಗುವ ದೂರಾ ಬಾ ಜೊತೆಗಾರ ನಾಚಿಕೆ ಏಕೇ ನಿನಗೆ ಇದೆ?//
ಬಾನಲಿ ತೇಲುತ ಹಾರುವ ನಾವೂ,ಸೂರ್ಯನ ಬಣ್ಣವ ಕಾಣಲಿದೆ.//
ಶಾಂತಾ ಕುಂಟಿನಿ
ನಿತ್ಯವೂ ವಿಶ್ವ ಪರಿಸರ ದಿನ
ಕುಣಿಯನು ತೋಡೋಣ
ಸಸಿಯನು ನಡೆಸೋಣ
ಬನ್ನೀ ಮಕ್ಕಳೆ ಕೈ ಜೋಡಿಸೋಣ.
ದಿನವು ಪರಿಸರ ದಿನ
ಗಮನ ಹರಿಸುವ ಮನ
ನೋಡಿ ಸಂತೋಷ ಪಡಲಿ ಜನ.
ಅರ್ಧ ಮರ್ಧ ಮಾಡುದು ಬೇಡ
ಬದುಕಿನುದ್ದಕ್ಕೂ ಗಿಡ ನಮ್ಮಜೋಡ
ಬೆಳೆಸೋದು ಮುಂದಿನವರಿಗೆ ಮರಿಬೇಡ.
ಸರ್ಕಾರ ಕೊಡತೈತಿ ಸಸಿ
ಮಾಡು ನೀ ಮಣ್ಣು ಹಸಿ
ದೊಡ್ಡದಾಗುವತನಕ ಮಾಡು ಕೃಷಿ.
ಸ್ವಚ್ಛ ಅಭಿಯಾನ ಪಾಲಿಸೋಣ
ಜನರಲ್ಲಿ ಜಾಗೃತಿ ಮೂಡಿಸೋಣ
ಪರಿಸರವೇ ನಮ್ಮಉಸಿರು ತಿಳಿ ಹೇಳೋಣ.
ಮನೆ ಮನೆಗೊಂದು ಗಿಡವು
ಆಗುವುದು ಊರು ವನವು
ಮರೆಯದೆ ಪಾಲಿಸಿ ನಿಮ್ಮರಿವು.
ನಾವಿದ್ದರೆ ಪರಿಸರ
ಬದುಕಿಗೆ ಅದರ ಆಸರ
ಮನಸ್ಸು ಮಾಡಿ ಇದುವೇ ಸಾಕಾರ.
ಹಸಿರು ಕ್ರಾಂತಿ ಮಾಡೋಣ
ಜಗಕೆ ತಂಪನು ನೀಡೋಣ
ವೃಕ್ಷ ಅಭಿಯಾನ ಯಶಸ್ವಿಗೊಳಿಸೋಣ.
ಡಾ.ವಿ. ಡಿ. ಐಹೊಳ್ಳಿ