ಶೋಭಾ ಪುರೋಹಿತ, ಎಚ್ ಎನ್ ಸವಿತಾ, ಶರಶ್ಚಂದ್ರ ತಳ್ಳಿ
ಮರಳಿ ರಾಮರಾಜ್ಯವಾಗಲಿ
ಭರತಖಂಡದ ಇತಿಹಾಸದಲ್ಲಿ ಮರೆಯದ ದಿನವಿದು…
ಸುವರ್ಣಾಕ್ಷರಗಳಲ್ಲಿ ಬರೆದಿಡುವ ದಿನವಿಂದು!!
ರಾಮಜನ್ಮಭೂಮಿಯಲ್ಲಿ ಭೂಮಿಪೂಜೆ ನಡೆದುದು..
ಪ್ರತಿಯೊಬ್ಬ ಭಾರತೀಯ ಹೆಮ್ಮೆ ಪಡುವಂಥಹದು!!
ಎನಿತು ಕಾಲದಿಂದ ಎದುರು ನೋಡುತಿದ್ದೆವು…
ಅಂತೂ ಆ ದಿನ ಬಂದಿತಿಂದು ಸಂಭ್ರಮಿಸಿದೆವು!!
ನಮ್ಮದೇ ಮನೆಯಲ್ಲಿ ಅಸಹಾಯಕರಾಗಿದ್ದೆವು!!
ಶ್ರೀರಾಮ ಜನ್ಮಭೂಮಿ ಪಡೆಯುವಲ್ಲಿ ಗೆದ್ದೆವು!!
ತಲೆಯೆತ್ತಲಿದೆ ಕೆಲ ಕಾಲದಲಿ ರಾಮಮಂದಿರ..
ರಾರಾಜಿಸುವನಿಲ್ಲಿ ರಘುವಂಶದ ರಾಮಚಂದಿರ!!
ನೆನೆದುಕೊಂಡರೇ ಅದೇನೋ ಮನದಲಿ ಪುಳಕ..
ಹರಸಬೇಕು ನಮ್ಮನೆಲ್ಲ ಆ ರಘುಕುಲತಿಲಕ!!
ಕಷ್ಟ ನಷ್ಟ ರೋಗ ರುಜಿನ ಮಾಯವಾಗಲಿ…
ಮಗ್ಗುಲು ಮುಳ್ಳಾದ ಶತ್ರುಗಳು ನಾಶವಾಗಲಿ!!
ಭರತಖಂಡದಲ್ಲಿ ಶಾಂತಿ ಸುಖವೇ ನೆಲೆಸಲಿ…
ಮರಳಿ ರಾಮರಾಜ್ಯವಾಗಿ, ಸುಭಿಕ್ಷವಾಗಲಿ!!
ಜೈ ಶ್ರೀರಾಮ್..ಜೈ ಶ್ರೀರಾಮ್..ಜೈ ಶ್ರೀರಾಮ್
*ಶೋಭಾ ಪುರೋಹಿತ್* ಬೆಂಗಳೂರು
*****************************
*ಸೀತಾ..ಸೀತಾ..*
ಅಯೋಧ್ಯೆಯ ಯುವರಾಣಿ ಸೀತಾ
ಕೌಸಲ್ಯ,ಸೌಮಿತ್ರಿ,ಕೈಕೇಯಿ ಸೊಸೆ ಸೀತಾ
ಊರ್ಮಿಳಾ ಸೋದರಿ ಸೀತಾ
ಜನಕರಾಜನ ಪುತ್ರಿ ಸೀತಾ
ಮಿಥಿಲಾ ರಾಜ್ಯದ ಯುವರಾಣಿ ಸೀತಾ
ಹನುಮನ ಆರಾಧ್ಯದೇವತೆ ಸೀತಾ
ಲಕ್ಷಣ,ಭರತ,ಶತ್ರುಘ್ನರ ಮಮತೆಯ ಅತ್ತಿಗೆ ಸೀತಾ,
ಮಾಯಾ ಜಿಂಕೆಯ ಮೋಡಿಗೆ ಸಿಲುಕಿ,
ರಾವಣನ ಅಪಹರಣಕೆ ಸಿಲುಕಿದ ಸೀತಾ,
ಅಗಸನ ಮಾತಿನ ಪ್ರವಾಹಕೆ ಸಿಲುಕಿ
ಅಗ್ನಿಪರೀಕ್ಷೆಯಲಿ ಗೆದ್ದು ಬಂದ ಸೀತಾ,
ಲವಕುಶ ಮಾತಾ ಸೀತಾ,
ಮಹಿಳಾ ಕುಲಕೆ ಆದರ್ಶ ಮಾತೆ ಸೀತಾ,
ಯುಗದ ಮಹಾಮಾತೆ ಸೀತಾ..
ಹೆಚ್.ಎನ್.ಸವಿತಾ ರಾಮಕುಮಾರ್
ಮೊ:63631 72368.
ಅವನು-ಅವಳು
1) ಅವನು ಯೋಗಿಯಾದನೆ
ಮಾಗಿದ ನಗೆಯನು
ವಯ್ಯಾರದಿ ಮಲಗಿಸಿ
ತ್ಯಾಗ ಮಾಡಿದನೆ ಪ್ರೀತಿ
2) ಅವನ ಅನಂತ ಪ್ರೀತಿಗೆ
ನೋವಿನ ಮುಗಿಲಾದೆನೆ ನಾನೆ?
ತಿರುಗಿಯೂ ನೋಡದೆ
ಮೇರೆಯ ಮೀರಿದ.
3) ಹಲವು ಬಾರಿ ಸೋತಿದ್ದ
ಸೋಲಿನಲು ಗೆದ್ದಿದ್ದ
ಗಗನದಲಿ ತೇಲಿದ್ದ
ಅರಿತೂ-ಅರಿಯದವಳಾದೆ
4) ಇಳೆಯಂತೆ ಕಪ್ಪಿಟ್ಟ
ಕರಿ ಮೋಡ ಎದೆಗಪ್ಪಿ
ಮರ್ಮರ ಮಳೆ ಹೊತ್ತರೂ
ನೇಮದ ಸೀಮೆ ದಾಟಿದ
5) ಅವನ ಮೋಹವು
ನಾಟಕದ ಜಾಲವು
ಮಲೆತ ನಾಲೆ ನೀರೆಂದು
ಬಸಿರ ಬಯಕೆ ಅದುಮಿದೆ
6) ನಿರ್ದೋಷಿ ಎಂದರಿತು
ನಿಲುವು-ಒಲವು ನೆನೆದು
ಮಿಡುಕಿದೆ ಮೈ ಮರೆತು
ಒಡಲ ಗಡಿ ದಾಟಿದವನ
7) ಅಂದೊಮ್ಮೆ ಕರೆದ
ಸರಸಕೆ ಕಾಡಿದ
ತನಗೆ ತಾನೇ ತಿಳಿಯಾಗಿ
ಉಗುಳು ನುಂಗಿದ
8) ಕೇಳಿದೆನು ಬಗೆಯ
ತೋರಿತು ಕುರುಹು
ತೂಗಾಡಿತು ಮೊಗವು
ಅವನ ಕಣ್ಣ ಭಾಷೆಯು
ಕಡಲು ಕದಿಯುವ ಹುನ್ನಾರವೆ?
9) ನೆಗೆಯುವುದು ಜಿಗಿಯುವುದು
ಮುಗಿದಾದ ಮೇಲೆ
ಗಳಿಗೆಯನು ಹುಗಿಯುವುದು
ನರಕ ನೋಡಾ ಗೆಳತಿ?
10) ಬೆಳಕಿನ ಕನಸುಗಳ
ತೂಕದಿ ಕಾಣಲು
ತತ್ತರಿಸಿತು ಜೀವ
ಮುತ್ತ ಪೋಣಿಸಲು ಕರೆದೆ
11) ನೋವಿನಲಿರುವೆ
ಸಾವಿನಲೂ ಜೊತೆಯಾಗುವೆ
ಒಪ್ಪಿದರೆ ಸಹ ಎನ್ನು
ತಪ್ಪಿದರೆ ನಹ ಅನ್ನು
12) ಹತ್ತಾರು ಜನುಮ
ಹಿಗ್ಗುತ ಬೆಳಗಿ
ನಿಚ್ಚಳ ಬುತ್ತಿ
ಹೃದಯಾಮೃತ ಪ್ರೇಮ
ಬಿಚ್ಚುತ ಉಣ್ಣಾಮು
ಎಂದಿದ್ದ
13) ಎದೆಯ ತೆರೆದಿದ್ದ
ಅಲರು ಹಿಡಿದು
ದೊರೆಯಂತೆ ಕರೆದಿದ್ದ
ಉತ್ತರ ನೀಡುವದರೊಳಗೆ
ಅವನು ಹೊರಟೇ ಹೋಗಿದ್ದ
14) ಯೋಗಿಯಾದನೆ
ತ್ಯಾಗ ಮಾಡಿದನೆ ಪ್ರೀತಿ
ತಳಮಳದಲಿ ಮುಳುಗಿ
ಚಂದಿರನಂತೆ ಬೀಗಿ….
ಶರಶ್ಚಂದ್ರ ತಳ್ಳಿ, ಕುಪ್ಪಿಗುಡ್ಡ