- Advertisement -
ಅಪ್ಪ
ಅಪ್ಪನ ಚಿತ್ರವನ್ನೊಮ್ಮೆ ನೋಡಿದೆ ಅಲ್ಲಿಲ್ಲ
ಅಪ್ಪ ಯಾಕೋ ಬೇಗ ಹೋಗಿ ಬಿಟ್ಟ
ಕೇಳಲೆಂದು ಬಂದೆ ಯಾಕೋ ಮಾತಾಡಲಿಲ್ಲ
ಯಾಕೆಂದೆ ಸುಮ್ಮನಾಗಿ ಬಿಟ್ಟ ಅಪ್ಪ
ಅಮ್ಮನೊಂದಿಗೆ ಹೆಗಲು ಕೊಟ್ಟ ಅಪ್ಪ
ಎತ್ತಾಗಿ ದುಡಿದು ದಣಿದು ಬಿಟ್ಟ ಅಪ್ಪ
ಬೆವರು ಹನಿ ಭೂಮಿ ನುಂಗಿ ಸುಮ್ಮನಿತ್ತು
ಅಪ್ಪ ಅತ್ತಿದ್ದ ಆಕಾಶ ನೀಲಿಯಾಗಿತ್ತು
ಅಪ್ಪ ತಾನೋಡದ ಜಗವ ನಾನು
ನೋಡಲೆಂದು ಹೆಗಲ ಮೇಲೆ ಹತ್ತಿಸಿದ
ನಾನು ನೋಡಿದೆ ಅವ ಸಂತಸ ಪಟ್ಟ
ಯಾಕೆ ಬೇಗ ಹೋದ ಅಪ್ಪ ಗೊತ್ತಿಲ್ಲ
- Advertisement -
ಬರಿಗಾಲಲಿ ನಡೆದು ಪಾದ ಸವೆದಿತ್ತು
ಗೆರೆ ಬಿದ್ದ ಅಂಗಾಲು ಕತೆ ಹೇಳಿತ್ತು
ಗುಳಿ ಬಿದ್ದ ಕೆನ್ನೆ ಕಣ್ಣೀರು ತುಂಬಿತ್ತು
ಕಂಬನಿ ಜಾರಿ ಹೋಗಿ ಅಪ್ಪನಿಲ್ಲ
ವಿಧಿ ಲಿಖಿತದ ಮೊದಲ ಪುಟದಲಿ
ಅಪ್ಪ ನಿನ್ನ ಹೆಸರಿತ್ತಾ ಬೇಗ ಹೋಗಲು
ಯಾಕೆ ಹೇಳಲಿಲ್ಲ ಅಮ್ಮನಿಗೆ ನೀನು
ಹೋಗುವುದನು ಅಪ್ಪ ನೀನೇಕೆ ಹೀಗೆ
ಹೇಳದೆ ಬಾ ಎಂದನಾ ಆ ನೊಸಲಿ
ಹೇಳಿ ಹೋಗದ ಕಾರಣ ನಿನಗೇನಿತ್ತು
ಅವಸರವೇನಿತ್ತು ಅಪ್ಪ ನಿನಗೆ
ಯಾಕೆ ಹೇಳಿ ಹೋಗಲಿಲ್ಲ ಅಪ್ಪ
- Advertisement -
ಶ್ರೀ ಇಂಗಳಗಿ ದಾವಲಮಲೀಕ