ಕವನ: ಅವ್ವ ನೀ ಭಾಳ ಸುಳ್ಳು ಹೇಳತಿ

0
2869

ಅವ್ವನ ಮನಸೇ ದೊಡ್ಡದು, ಅವ್ವ ಅನ್ನುವ ಹೆಸರಿನ ಜೀವವೇ ಬಂಗಾರ.

ಅವ್ವ ಸುಳ್ಳು ಹೇಳುತ್ತಾಳೆ ಆದರೆ ಅದರಲ್ಲಿ ಪ್ರೀತಿ ಇದೆ, ಒಲವು ಇದೆ, ಮುದ್ದು ಇದೆ, ಕಾಳಜಿ ಇದೆ.

ವಾಟ್ಸಪ್ ನಲ್ಲಿ ಬಂದ ಅವ್ವನ ಕುರಿತ ಕವನ ಮನ ತಟ್ಟುತ್ತದೆ.

ನಮ್ಮ ಅವ್ವನಿಗೆ ಅರ್ಪಣೆ

ಅವ್ವ ನೀ ಭಾಳ ಸುಳ್ಳು ಹೇಳತಿ

ಮುಂಜಾನೆ ಜಲ್ದಿ ಎಬ್ಬಸಾಕ, ಏಳಕ್ಕೆ ಎಂಟು ಆಗೆತಿ ಅಂತಿ
ಜಳಕ ಮಾಡ ಜಳಕ ಮಾಡ ಅಂತ ಗಂಟ ಬೀಳತಿ
ನನಗ ಆರಾಮ ಇಲ್ಲಂದ್ರ, ದೃಷ್ಟಿ ಬಿಟ್ಟಾರ ಅಂತ ಓಣಿ ಒಳಗಿನ ಮಂದಿಗೆ ಬೈತಿ
ಸಣ್ಣ ಸಣ್ಣ ವಿಷಯಕ್ಕ ಅಳಕೋತ ಕುಂದರತಿ
ಅವ್ವ ನೀ ಭಾಳ ಸುಳ್ಳು ಹೇಳತಿ…

ಇದ್ದ ಅಡಗಿ ನನಗ ತಿನಿಸಿ, ನಂಗ ಹಸಿವಿಲ್ಲ ಯಪ್ಪ ಅಂತಿ
ನಾ ಮನ್ಯಾಗ ಇಲ್ಲಂದ್ರ ಹೋಳಗಿ ಮಾಡಲ್ಲ ಅಂತಿ
ನಾ ಎಷ್ಟು ದಪ್ಪಗಿದ್ರೂ ಸೊರಗಿ ನೋಡ್ ಯಪ್ಪ ಅಂತಿ
ಅವ್ವ ನೀ ಭಾಳ ಸುಳ್ಳು ಹೇಳತಿ…

ಎರಡು ರೊಟ್ಟಿ ಕಟ್ಟಿನಿ ಅಂತ
ನಾಕ ಜನ ತಿನ್ನುವಷ್ಟು ಬುತ್ತಿಕಟ್ಟತಿ
ಎನೂ ಇಲ್ಲ, ಏನೂ ಇಲ್ಲ ಅಂತ ಹೇಳಿ
ಚೀಲದಾಗ ಉಪ್ಪಿನಕಾಯಿ ಬಾಟಲಿ ಇಡತಿ

ಅವ್ವ ನೀ ಭಾಳ ಸುಳ್ಳು ಹೇಳತಿ

ನನ್ನ ಜೊತಿ ಜಗಳಾಡಿದರ
ಮಾತು ಬಿಟ್ಟು ಸಿಟ್ಟ ಮಾಡ್ಕೊತಿ
ಒಂದೇ ತಾಸಿನ್ಯಾಗ ವಾಪಸ ಬಂದು
ನೀನ ಶ್ಯಾಣೆ ಎಂದು ರಮಿಸಿ ಸೋಲತಿ
ಅವ್ವ ನೀ ಭಾಳ ಸುಳ್ಳು ಹೇಳತಿ..

ಅಪ್ಪ ಹೊಸ ಸಿರಿ ತಗೋಳೊಕ ರೊಕ್ಕ ಕೊಟ್ರ
ಹಳೆ ಸೀರೆನ ಹೊಸದರಾಂಗ ಉಟ್ಕೊತಿ
ಮನ್ಯಾಗ ಯಾರಿಗು ಗೊತ್ತಾಗದಂಗ
ಅದೆ ರೊಕ್ಕ ನನಗ ಖರ್ಚಿಗೆ ಕೊಡ್ತಿ
ಅವ್ವ ನೀ ಭಾಳ ಸುಳ್ಳು ಹೇಳತಿ..

ನಾ ಗೆದ್ದರ ಉಪ್ಪು ಖಾರ ಹಚ್ಚಿ
ಎಲ್ಲರ ಮುಂದ ಹೇಳತಿ
ನನ್ನ ಕೆಟ್ಟ ಗುಣ ಎಲ್ಲರಿಂದ ಮುಚ್ಚಿ ಇಡ್ತಿ
ನನ್ನ ಸಲುವಾಗಿ ಉಪವಾಸ ಮಾಡಿ
ತೆಂಗಿನಕಾಯಿ ಒಡಸಿ ತಾಯತ ಕಟ್ಟತಿ
ಅವ್ವ ನೀ ಭಾಳ ಸುಳ್ಳು ಹೇಳತಿ..

ನಾ ಕೆಲಸದಾಗ ಮುಳುಗಿದರ
ನೀನೆ ನನ್ನ ಜಗತ್ತು ಅಂತಿ
ಜಗತ್ತಿನ್ಯಾಗ ನನ್ನತಂವ ಇಲ್ಲ ಅಂತ ಹೇಳಿ
ನನ್ನ ಚಿಂತ್ಯಾಗ ನಿನ್ನ ಸುಖ ಮರಿತಿ
ಅವ್ವ ನೀ ಭಾಳ ಸುಳ್ಳು ಹೇಳತಿ…

ನಿನ್ನ ಒಡವಿ ಮುರಿಸಿ
ನನಗ ಚೈನಾ ಮಾಡಿಸಿ ಹಾಕತೀ
ನಾ ಬಳಿ ಮಾಡಿಸಿ ತಂದರ
ಬ್ಯಾಡ ಬ್ಯಾಡ ಅಂತ ದೂರ ತಳ್ಳತಿ
ಅವ್ವ ನೀ ಭಾಳ ಸುಳ್ಳು ಹೇಳತಿ…

ವಯಸ್ಸಾಗಿ ಮೈ ಕೈ ನೊವಿದ್ದರು
ಯಾವಾಗ ಕೇಳಿದರು ಆರಾಮಿದಿನಿ ಅಂತಿ
ಓದಾಕ ಬರಿಯಾಕ ಬರಲಿಲ್ಲ ಅಂದ್ರೂ
ಎಲ್ಲಾರ ಮುಖ ಓದತಿ
ಅವ್ವ ನೀ ಭಾಳ ಸುಳ್ಳು ಹೇಳತಿ…

ನಿನ್ನ ಬಿಟ್ಟು ಎಲ್ಲೂ ಹೋಗಂಗಿಲ್ಲ
ನಿನ್ನ ಬಿಟ್ಟು ಎಲ್ಲೂ ಹೋಗಂಗಿಲ್ಲ
ಅಂತ ಹೇಳಿ ಒಂದು ದಿನ ಹೊಂಟ ಹೋಗತಿ
ಅವ್ವ ನೀ ಭಾಳ ಸುಳ್ಳು ಹೇಳತಿ…

ಅವ್ವ ನೀ ಭಾಳ ಸುಳ್ಳು
ಹೇಳತಿ…


ಸರ್ವೇ ಜನಾ: ಸುಖಿನೋ ಭವಂತಿ