ಕವನ: ಹೃನ್ಮನೆ

0
999

ಎಲ್ಲಾ ‌ಹೃದಯವಂತರಿಗೆ ವಿಶ್ವ ಹೃದಯ ದಿನಾಚರಣೆಯ ಶುಭಾಶಯಗಳು.

ಹೃನ್ಮನೆ

ಎರಡು ಬಾಗಿಲು ಇರುವ
ಈ ಪುಟ್ಟ ಮನೆಗೆ
ನಾಲ್ಕು ಕೋಣೆಗಳಿಹವು
ಬಡಿತ ಗಳಿಗೆ-ಗಳಿಗೆ!!

ನಿಚ್ಚಳ ಪ್ರೀತಿಗೆ
ನೆಲೆ ಇಹುದು ಒಳಗೆ
ಕಶ್ಮಲ ಕಪಟತನವದು
ಬಾಗಿಲಿನ ಹೊರಗೆ

ಬಿಟ್ಟ ಲಜ್ಜೆಯ ಹಗೆಯು
ಚುಚ್ಚು ಮಾತಿನ ಬಗೆಯು
ಸುಟ್ಟ ಚುಟ್ಟದ ಹೊಗೆಗೆ
ಉಸಿರು ಕಟ್ಟುವುದಿದಕೆ!!

ಕೆಟ್ಟ ಕೊಬ್ಬಿನ ಸ್ನೇಹ
ದುಷ್ಟ ವ್ಯಸನದ ದಾಹ
ಕುಟ್ಟುವಂಥಾ ಚಿಂತೆ
ಧ್ವಂಸಗೊಳಿಸಲು ನಾಂದಿ!!

ಸ್ವಾಸ್ಥ್ಯಚಿತ್ತದ ಗಾಳಿ
ನೇಮ-ನಿಷ್ಠೆಯ ಬೇಲಿ
ಪ್ರಮುಖ ಶಾಂತಿಯ ರವಳಿ
ಈ ಮನೆಯು ಬೆಳಗಲು!!


ಚುಟ್ಟ=ಬೀಡಿ
ರವಳಿ= ಶಕ್ತಿ


✍️ ಕಮಲಾಕ್ಷಿ ಕೌಜಲಗಿ.