ನಡೆದ ಹಾದಿಯ ನಿಶಾನೆಯಿಡಿದು
***** *******
ನಾಲ್ದಿಕ್ಕುಗಳು
ಧರೆ ಮೇಲೆ ಸಮವು
ಕತ್ತಲ್ಬೆಳಕು
ಅಮೃತ ಸುಖ
ಉಂಡ ತರದ ತೆರೆ
ವೈರತ್ವದ ಗೆರೆಯು
ಒಡಹುಟ್ಟಿದ
ದಾಯಾದಿ ಕದನಕೆ
ಕಾಲು ಕೆರೆದು
ನೆಲ ಮುಗಿಲ
ಭೂತ ವೃತ್ತ ಚಿತ್ತವೆ
ಕತ್ತಲದ ಕಣ್ಣು
ನಡೆದ ಹಾದಿಗೆ
ನಿಶಾನೆಯ ಹೊದಿಕೆ
ಕರ್ಕಶ ಕೇಕೆ
ಕರಿ ಕಂಬಳಿಯಂತೆ
ಚಿತ್ರ ವಿಚಿತ್ರ ದನಿ
ಮುಸುಕ ಹಾಸಿತು
ಪ್ರಳಯ ಮೆಟ್ಟಿ
ಹಲುಬಿತು ಮಲಿನ
ಕಪಟ ದ್ವೇಷದಿ
ಅದೋ
ಚಿತ್ಕಳೆ ಬಂತು
ಯೋಗ ನಿದ್ರೆ ತಳೆದು
ಯೋಗಿಯಂತೆ
ಹಿರಿತನದ
ಮಿಂಚರಿಸಿ ನರ್ತಿಸುತ
ಚಿನ್ನದ ನಗೆ ಬೀರಿ
ತಿಳಿ ಬೆಳಗು
ಅಂಗಳಕಿಳಿಯಿತು
ಹರುಷ ಚೆಲ್ಲಿ
ಬಿಲ್ಲು ಬಿಡಿಸಿ
ಸಂಚರಿಸಿತು ಬಾಣ
ಇಳೆ-ನಾಕಕೆ
ಪ್ರಾಯ ಪೌರುಷ
ಕರ್ಮ ಮರ್ಮದ ಬೀಗು
ನಿತ್ಯವೂ ಸಾಗೆ
ಲೋಕ ನಾಕದ
ಕತ್ತಲು ನಾಯಕನ
ವಿಕಟ ನಗೆಯಲಿ
ಸೋಲು-ಒಪ್ಪದ
ಬೆಳಕ-ಕೊರಳಿಗೆ
ಗಾಳವೆಳೆದು
ಗಹಗಹಿಸಿ
ಹರಿದರಿದು ತಿಂತು
ನಂಜಿನ ತುತ್ತು
ಬೆಳಕ ನುಂಗಿ
ಕತ್ತಲು-
ಕೇಕೆ ಹಾಕಲು,
ಭೀಕರ ಢಾಲು
ಗಂಟಲ ನರ
ಬಿಗಿದು ಕಕ್ಕಿತು ನಿಂತು
ಕತ್ತಲ್ಹುಳವು
ಭಾನ-ಭುವಿಗೆ
ಝಳ ಕಳವಳ
ಜ್ವಾಲೆಯ ಜಾಲ
ಹರಿದಾಡಿ
ಹುಟ್ಟಿತು ಹಠ
ಕರತಲಾಮಲಕ
ಮರಣ ಮಂತ್ರ
ಹರಣ ತಂತ್ರ
ಯಾರ ಸೋಲೂ
ಯಾರ ಅಳಲೂ
ಇಲ್ಲದ ಕ್ರಾಂತಿಗೆ
ಬಳಲಿದವು
ಕೊನೆಗೂ ಶೂನ್ಯ
ಅನಂತ ಸಮರ
ಅಪಾರ ಸಾರ
ಸರಿದು ನಿಂತು
ಛಲ ತೀರಿತು
ಹೊಸ ಬೆಸುಗೆ ಬೆರೆತು
ಭೀಷ್ಮ ಪ್ರತಿಜ್ಞೆ
ಮಾಡಿದವು
ನೀನು ಕತ್ತಲು
ಬೆಳಕಾದರೆ ನಾನು
ಜಗಕೆ ಸಾಕು
ಬಗೆಯ ನೂಕು
ಕತ್ತಲೆಂದರೆ
ಸೋಲೂ ಅಲ್ಲ,ನಿರಾಳ
ಬೆಳಕ ಮೊಳಕೆಯ
ಬೆಡಗು
ಬೆಳಕೆಂದರೆ
ಗೆಲುವೂ ಅಲ್ಲ-ಅದು
ಕತ್ತಲ ಶಕ್ತಿಯ
ಬಿನ್ನಾಣ
ಕತ್ತಲ್ಬೆಳಕು
ಕಳಕಳಿಯ ಸ್ವಾದ
ನಮಗೆ ಬೇಕು
ಸೃಷ್ಟಿಗೂ ಚಿಂತೆ
ಚಿಂತೆಗೂ-
ಚಿಂತೆ ಇದೆ
ಒಂದಕ್ಕೊಂದು
ಬೇರು…
ಉಸಿರು…
ಸಹಸ್ರಾರು….
ಶರಶ್ಚಂದ್ರ ತಳ್ಳಿ ಕುಪ್ಪಿಗುಡ್ಡ