ಪುಸ್ತಕ ಪರಿಚಯ
ಪುಸ್ತಕದ ಹೆಸರು : ಹೃದಯ ಮಾಧುರ್ಯ
ಲೇಖಕರ ಹೆಸರು : ಬಿ. ಕೆ. ಮಲಾಬಾದಿ
ಪ್ರಕಾಶಕರು : ಶ್ರೀಶೈಲಗಿರಿ ಪ್ರಕಾಶನ ಶಹಪುರ ಬೆಳಗಾವಿ
ಪ್ರಥಮ ಮುದ್ರಣ : ೨೦೨೦
ಪುಟಗಳು : xxiv+58=82
ಶ್ರೀ. ಬಿ. ಕೆ. ಮಲಾಬಾದಿಯವರು ವೃತ್ತಿಯಿಂದ ಹಿರಿಯ ಲೆಕ್ಕಪರಿಶೋಧಕರಾಗಿದ್ದರೂ ಸಹ ಪ್ರವೃತ್ತಿಯಿಂದ ಲೇಖಕರಾಗಿದ್ದಾರೆ . ತಮ್ಮಲ್ಲಿರುವ ನೈಜ ಭಾವನೆಗಳನ್ನು ಲಿಖಿತ ರೂಪದಲ್ಲಿ ತರುವುದು ಇವರ ಅತ್ತುತ್ಯಮ ಹವ್ಯಾಸವಾಗಿ ವೃತ್ತಿ ಮತ್ತು ಪ್ರವೃತ್ತಿಯ ನಡುವೆ ಇವರು ಉತ್ತಮ ಸಾಹಿತಿಗಳಾಗಿ ಕನ್ನಡಿಗರೆಲ್ಲರಿಗೂ ಚಿರಪರಿಚಿತರು, ಇದೀಗ ಇವರು ಬರೆದ “ಹೃದಯ ಮಾಧುರ್ಯ” ಕವನ ಸಂಕಲನವು ನಾವಿನ್ಯ ಪೂರ್ಣ ಶಬ್ದ ಪ್ರಯೋಗಗಳಿಂದ ಕೂಡಿದೆ. ಇಲ್ಲಿ ಒಟ್ಟು 47 ಕವನಗಳು ಕವಿಹೃದಯದಿಂದ ಬಹಳ ಅರ್ಥಪೂರ್ಣವಾಗಿ ಹೊರಹೊಮ್ಮಿವೆ.
ಜಗದ ರಕ್ಷಕ ಶಿವನ ಸ್ಮರಣೆಯೊಂದಿಗೆ ಪ್ರಾರಂಭವಾಗುವ ಕವನದ ಹಾದಿಯಲ್ಲಿ ಸುಂದರ ಕವನ ಕುಸುಮಗಳನ್ನು ನಾವು ನೋಡಬಹುದು ಮಾನವ ಕುಲ ಒಂದೇ ಎಂಬುದು ಲೋಕ ನೀತಿಯಾಗಿದ್ದರೂ ಸಹ ಕೈಯಲ್ಲಿರುವ ಐದು ಬೆರಳುಗಳು ಸಮವಾಗಿಲ್ಲ ಎನ್ನುವ ತಾತ್ವಿಕ ರೀತಿಯಲ್ಲಿ ನಾವೆಲ್ಲ ನಮ್ಮ ನೆರೆಹೊರೆಯ ವರೊಂದಿಗೆ ಬದುಕಬೇಕಾಗಿದೆ. ಅಂತೆಯೇ ನಮ್ಮ ಸುತ್ತಲಿರುವ ಅನೇಕರಲ್ಲಿ ಕೆಲವರು ಹಿತಶತ್ರುಗಳು ಆಗಿರುತ್ತಾರೆ. ಈ ತರಹದ ಕುತಂತ್ರಿಗಳನ್ನು ಗುರ್ತಿಸದೇ ಹೋದರೆ ನಮಗೆ ಒಳಿತಾಗಲಾರದು ಎನ್ನುವ ನೀತಿಯ ಮಾತು ನಮ್ಮನು ಎಚ್ಚರಗೊಳಿಸುತ್ತದೆ.
ನಿಸರ್ಗವನ್ನು ಪ್ರಿತಿಸುವ ಮನಸ್ಸುಗಳು ಎಲ್ಲರಲ್ಲಿದ್ದರೆ ದಣಿದ ದೇಹಗಳಿಗೆ ವಿಶ್ರಾಂತಿ ದೊರಕುತ್ತದೆ ಎಂದು ಹೇಳುತ್ತಾರೆ. ಆಧ್ಯಾತ್ಮಿಕ ತವರೂರಾದ ಭಾರತದೇಶದಲ್ಲಿ ಕರುನಾಡು ಎಂಬುದು ಮರೆಯದ ಮಾಣಿಕ್ಯವಿದ್ದಂತೆ ಎಂದಿದ್ದಾರೆ ಇಂತಹ ಸಂಪದ್ಭರಿತವಾದ ನಾಡಿನಲ್ಲಿ ಜನಿಸಿದ ಕನ್ನಡಿಗರೆಲ್ಲರೂ ಧನ್ಯರು ಎಂಬ ಮಾತನ್ನು ನೆನಪಿಸಿದ್ದಾರೆ. ಭಗವಂತ ಕರುಣಿಸಿದ ಈ ಜನ್ಮವು ಸಾರ್ಥಕಗೊಳ್ಳಬೇಕಾದರೆ ಭಕ್ತಿಯೆಂಬ ಸನ್ಮಾರ್ಗದಲ್ಲಿ ಸಾಗಿ ಶಿವದರುಶನವ ಪಡೆದು ಮುಕ್ತಿ ಕಾಣಬೇಕೆಂಬುದು ಕವಿಯ ಹಂಬಲವಾಗಿದೆ. ಆದ್ದರಿಂದ ನಾವು ಸಾಗುವ ಮಾರ್ಗದಲ್ಲಿ ಉದ್ದೇಶಪೂರ್ವಕ ಪ್ರಮಾದಗಳನ್ನು ಮಾಡದೇ ಅತಿ ಆಸೆಗೆ ಮೋಸ ಹೋಗದೆ ನಮಲ್ಲಿ ಅಡಗಿರುವ ಅಹಂನ್ನು ನಿಯಂತ್ರಿಸಿ ಶಿಸ್ತಿನ ಜೀವನ ಸಾಗಿಸಿದರೆ ಅಮರತ್ವಕ್ಕೆ ಆರೇ ಮೆಟ್ಟಿಲು ಎಂಬ ನೀತಿ ಮನದಾಳದಲ್ಲಿ ನೆಲೆಯೂರಬಹುದು. ಆದರೂ ಕೂಡ ಕೆಲವೊಮ್ಮೆ ನಮ್ಮ ಬಾಳಿನಲ್ಲಿ ವಿಧಿಲೀಲೆ ಎನ್ನುವುದು ಪಗಡೆಯಾಟ ಆಡಿಯೂಬಿಡಬಹುದು ಎಂಬುದನ್ನು ಮರೆಯುವ ಹಾಗಿಲ್ಲ ಅಂತೆಯೇ ಮನವೆಂಬ ಮರ್ಕಟವನ್ನು ಧ್ಯಾನವೆಂಬ ಅಸ್ತ್ರದಿಂದ ನಿಯಂತ್ರಣದಲ್ಲಿಟ್ಟರೆ ಅರಿಷಡ್ ವೈರಿಗಳನ್ನು ಗೆಲ್ಲುವುದು ಸುಲಭವಲ್ಲವೆ?
ಕರ್ಮದ ಮರ್ಮವನರಿತು ಬದುಕಿದರೆ ನಾವೆಲ್ಲ ವಿಶ್ವಮಾನವರು ಆಗಬಹುದು ಎನ್ನುವ ಕವಿ ಕಲ್ಪನೆ ಮನದಾನಂದವನ್ನು ಉಂಟುಮಾಡುತ್ತದೆ.
ಹಣಬಲ, ಜನಬಲ, ಮತ್ತು ತೋಳ್ಬಲಗಳನ್ನೇ ನಂಬಿ ಬದುಕುವ ಇಂದಿನ ವರ್ತಮಾನದ ಅನೇಕರಲ್ಲಿ ಶಾಶ್ವತ ಭಾಗ್ಯದ ಸಿರಿಯನು ಕಾಣಲು ಹೇಗೆ ತಾನೆ ಸಾಧ್ಯವಾದೀತು? ಎಂಬ ಸಂಶಯ ನಮ್ಮನ್ನು ಕಾಡದೇ ಇರಲಾರದು. ಕನಸು ಕಾಣುವ ಕಂಗಳಲ್ಲಿ ಭಯ ಎಂಬುದು ಇರದೇ ಹೋದರೆ ಮನದಲ್ಲಿರುವ ಮಹಾದೇವನ ಸಾಕಾರ ರೂಪವನ್ನು ಕಾಣುವ ಸದ್ಭಾವನೆ ಎಲ್ಲರಲ್ಲಿ ಉದಯಿಸಬೇಕು. ಜನಜಾತ್ರೆಯ ಪಯಣದಲ್ಲಿ ಜನಸಂಖ್ಯೆ ಸ್ಫೋಟದ ಭೀತಿ ನಮ್ಮಲ್ಲಿ ಇರದೇ ಹೋದರೆ ಅದಕ್ಕಿಂತ ಹಾನಿ ಮತ್ತೊಂದಿಲ್ಲ, ನಾವು ಎಷ್ಟೆ ಒಳ್ಳೆಯ ಕಾರ್ಯಗಳನ್ನು ಮಾಡಿದರೂ ಸಹ ಹೆತ್ತವರ ಋಣ ತೀರಿಸದೇ ಹೋದರೆ ನಾವು ಮಾಡಿದ ಎಲ್ಲ ಪುಣ್ಯಕಾರ್ಯಗಳು ನಿಷ್ಫಲ ಎನ್ನುವದನ್ನು ಮರೆಯುವಂತಿಲ್ಲ.
ಮಾನವನ ಅಭಿವೃದ್ಧಿಗೆ ಹಾಗೂ ಅವನತಿಗೆ ಮನಸ್ಸೆ ಕಾರಣ ಎನ್ನುವ ಸರ್ವಕಾಲಿಕ ಸತ್ಯವನ್ನು ಕವಿಗಳು ಈ ಕವನ ಸಂಕಲನದ ಅನೇಕ ಕವನಗಳಲ್ಲಿ ತೋರ್ಪಡಿಸಿದ್ದನ್ನು ನೋಡಿದರೆ ಕಾಲಜ್ಞಾನಿ ಶ್ರೀ ಅಲ್ಲಮ ಪ್ರಭುಗಳ ವಚನಗಳಲ್ಲಿ ಬರುವ ಒಂದು ಉಕ್ತಿಯನ್ನು ಇಲ್ಲಿ ಸ್ಮರಿಸಿಕೊಳ್ಳಲೇಬೇಕು. ಅದೇನೆಂದರೆ,
“ಅತ್ತಲಿತ್ತ ಹರಿವ ಮನವ ಚಿತ್ತದಲ್ಲಿ ನಿಲಿಸಬಲ್ಲಡೆ ಬಚ್ಚ ಬರಿಯ ಬೆಳಗು ಗುಹೇಶ್ವರ ಲಿಂಗವು” ಎನ್ನುವ ಸತ್ಯ ಸಂಗತಿಯನ್ನು ಮತ್ತೊಮ್ಮೆ ನೆನಪಿಸಿದ್ದಕ್ಕೆ ಧನ್ಯವಾದಗಳನ್ನು ಹೇಳಲೇಬೇಕು.
ಅಮೂಲ್ಯವಾದ ಈ ಕವನ ಸಂಕಲನ ಕಾಗವಾಡದಲ್ಲಿ ನಡೆಯುತ್ತಿರುವ ಬೆಳಗಾವಿ ಜಿಲ್ಲಾ 14ನೇಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಲೋಕಾರ್ಪಣೆಗೊಳ್ಳುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯ. ಲೇಖಕರಾದ ಶ್ರೀ ಬಿ.ಕೆ. ಮಲಬಾದಿಯವರು ತಮ್ಮ ಸೇವಾವಧಿಯಲ್ಲಿ ರಾಷ್ಟ್ರಪ್ರಶಸ್ತಿ ವಿಜೇತರಾಗಿದ್ದರೂ ಸಹ ನಿಗರ್ವಿಯಾದ ಸರಳ ಮತ್ತು ಸ್ನೇಹ ಜೀವಿಯಾಗಿದ್ದಾರೆ.
ಎಲ್ಲಕಿಂತ ಮಿಗಿಲಾಗಿ ಈ ಕವನ ಸಂಕಲನವನ್ನು ಪರಮಪೂಜ್ಯ ಶ್ರೀ ಶಿವಾನಂದ ಮಹಾಸ್ವಾಮಿಜಿ ಶ್ರೀ ಸಿದ್ಧೇಶ್ವರ ಮಠ ಹಂದಿಗುಂದ-ಆಡಿ ಶ್ರೀಗಳ ಪಾದಕಮಲಗಳಿಗೆ ಅರ್ಪಿಸಿ ಆಶೀರ್ವಾದ ಪಡೆದಿರುವುದು ವಿಶೇಷವಾಗಿದೆ. ಲೇಖಕರಿಂದ ಇನ್ನುಷ್ಟು ಕವನ ಸಂಕಲನಗಳು ಕನ್ನಡಮ್ಮನ ಮಡಿಲು ಸೇರುವಂತಾಗಲಿ ಮತ್ತು ಹೃದಯ ಮಾಧುರ್ಯ ಎಂಬ ಈ ಕವನ ಸಂಕಲನ ಎಲ್ಲ ಓದುಗರ ಹೃದಯ ಸ್ಪಂದಿಸಲಿ ಎನ್ನುವದೇ ಕನ್ನಡಿಗರೆಲ್ಲರ ಪರವಾಗಿ ನನ್ನ ಹಾರೈಕೆಯಾಗಿದೆ. ಎಂದು ತಿಳಿಸಲು ಸಂತೋಷವೆನಿಸುತ್ತದೆ.
ವೀರಭದ್ರ. ಮ. ಅಂಗಡಿ ಸಂಘಟನಾ ಕಾರ್ಯದರ್ಶ ಕ.ಸಾ.ಪ ಬೆಳಗಾವಿ
ಮೋ: 9481738616