ಗಜಲ್ ಗಳು

Must Read

ರೇಷ್ಮಾ ಕಂದಕೂರ,ಮಂಡಲಗಿರಿ ಪ್ರಸನ್ನ……

ಹಸಿವಿನಿಂದ ಕಂಗೆಟ್ಟವರ ತೊಳಲಾಟ ನೋಡದಾಗಿದೆ
ಕೃಶ ದೇಹದ ಅಧೋಗತಿಯ ಪರಿಸ್ಥಿತಿ ನೋಡದಾಗಿದೆ

ಕಮರಿದೆ ಭರವಸೆಯ ಬೆಳಕು ಮಂದಾಗ್ನಿಯಲಿ
ಹಣೆಬರಹದ ಕ್ರೂರತನ ಮದವೇರಿದನು ನೋಡದಾಗಿದೆ

ತುತ್ತಿನ ಚೀಲ ತುಂಬಿಸಲು ಕಗ್ಗಂಟಾಗಿ ಹೋಗಿದೆ
ಆ ದೇವನ ದೂಷಿಸುತ ದಿನ ದೂಡುವದನು ನೋಡದಾಗಿದೆ

ತಿಂದು ತೇಗಿ ಬಿಸಾಕುವ ಜನಕೆ ತಿಳಿಯಬಾರದೇ
ಕೊಳ್ಳುಬಾಕ ಮನೋಭಾವದಿ ಮೆರೆಯುವವರ ನೋಡದಾಗಿದೆ

ಪರಿಹಾರಕೆ ರೇಷಿಮೆಯ ಮನ ಮರುಗಿ ತಡಕಾಡಿದೆ
ಪಿಷ್ಟ ಹೊತ್ತು ಕುಚೇಷ್ಟೆ ಮಾಡುವವರ ನೋಡದಾಗಿದೆ.

ರೇಷ್ಮಾ ಕಂದಕೂರ
ಶಿಕ್ಷಕಿ ಸಿಂಧನೂರ


ಗಜಲ್

ಆ ಮಳೆಗೆ ಕನಸುಗಳು ಕುಡಿ ಒಡೆಯಬಹುದೆಂದು ಕಾಯುತಿರುವೆ
ಮೊಳಕೆ ಗಿಡವಾಗಿ ಹೂ-ಹಣ್ಣು ಬಿಡಬಹುದೆಂದು ಕಾಯುತಿರುವೆ

ನಿತ್ಯಬದುಕಿನ ಜಂಜಾಟಗಳಿಗೆ ತಂಪೆರೆವ ಸುಖದ ಕಾತರತೆ
ಕಷ್ಟಗಳ ಕೊಳೆ ಕೊಚ್ಚಿ ಹೋಗಬಹುದೆಂದು ಕಾಯುತಿರುವೆ

ದುಃಖ-ದುಮ್ಮಾನಗಳ ತೆಕ್ಕೆಗೆ ಹಾಕಿಕೊಂಡು ಸಾಗುವ ನಿರೀಕ್ಷೆ
ನದಿ-ಕಡಲು ಸೇರಿ ಸಮಾಧಾನ ತರಬಹುದೆಂದು ಕಾಯುತಿರುವೆ

ಸೋನೆಮಳೆಗೆ ಎದೆಯೊಳಗೆ ಹಕ್ಕಿಗಳು ಗೂಡುಕಟ್ಟುವ ತವಕ
ಹೃದಯ ಕೋಗಿಲೆ ಇಂಪಾಗಿ ಉಲಿಯಬಹುದೆಂದು ಕಾಯುತಿರುವೆ

ಮಧುಮಾಸದುತ್ಸಾಹ ಉಸಿರುಸಿರಲಿ ತುಂಬಿ ಉಲ್ಲಾಸಗೊಂಡತೆ `ಗಿರಿ’
ಬಂಜರೆದೆ ಹದಗೊಂಡು ನಾಳೆಗೆ ಅರಳಬಹುದೆಂದು ಕಾಯುತಿರುವೆ

ಮಂಡಲಗಿರಿ ಪ್ರಸನ್ನ ರಾಯಚೂರು

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group