ಗಜ಼ಲ್ ಗಳು

Must Read

ಕಿತ್ತಾಡಿಕೊಂಡರೋ ಕಿತ್ತಿ ಹಿಡಿದುಕೊಂಡರೋ ಗೊತ್ತಾಗಲಿಲ್ಲ ನನಗೆ

ಪ್ರತಿಪಾದಿಸಿದರೋ ಆಪಾದಿಸಿದರೋ ಗೊತ್ತಾಗಲಿಲ್ಲ ನನಗೆ

ಮೈಕುಗಳು ಮೌನವಾಗಿವೆ ಮಂಕು ಮಾತು ಕೇಳಿ
ಕರೆದರೋ ವದರಿದರೋ ಗೊತ್ತಾಗಲಿಲ್ಲ ನನಗೆ

ಇತಿಹಾಸದ ಪುಟಗಳ ಮೇಲೆ ಕೆಸರು ಸಾರಿಸುತಿಹರು
ಮುದ್ದುಮುಖಗಳೋ ಮುಖವಾಡಗಳೋ ಗೊತ್ತಾಗಲಿಲ್ಲ ನನಗೆ

ಘನತೆ ಗೌರವ ಮೂರು ಕಾಸಿಗೆ ಹರಾಜಾಗುತ್ತಿದೆ
ರಕ್ಷಿಸುವರೋ ಭಕ್ಷಿಸುವರೋ ಗೊತ್ತಾಗುತ್ತಿಲ್ಲ ನನಗೆ

ಸಂವಿಧಾನ ಒಂದೇ, ವಿಧಾನ ಬದಲಾಗುತ್ತಿದೆ ‘ಅಮರ’
ಪ್ರಧಾನವೋ ಪಾಪವೋ ಗೊತ್ತಾಗುತ್ತಿಲ್ಲ ನನಗೆ

✍️ ಅಮರೇಶ ಎಂಕೆ


ಎದೆಯ ಅಗಾಧ ಒಲವಿಗೆ ಮಾತು ಬೇಕಿಲ್ಲ

ನಲಿವು ತುಂಬಿದ ಒಡಲಿಗೆ ಮಾತು ಬೇಕಿಲ್ಲ

ಹೂವು ದಿನವೂ ಅರಳಿ ನಗುತ್ತದೆ ಗಿಡದಲಿ
ಬದುಕುವ ಛಲದ ನಿಲುವಿಗೆ ಮಾತು ಬೇಕಿಲ್ಲ

ಸುಂದರವಾದ ಮೊಗ ಅಷ್ಟೇ ಎಲ್ಲವನು ಗೆಲ್ಲದು
ಆಂತರ್ಯದ ಅಪಾರ ಚೆಲುವಿಗೆ ಮಾತು ಬೇಕಿಲ್ಲ

ಮನದ ನೋವುಗಳು ಇರುವಂತೆ ಇರಲಿ ಬಿಡು
ವಿಶಾಲ ಆಗಸದಂಥ ಮನಸಿಗೆ ಮಾತು ಬೇಕಿಲ್ಲ

ನಾಲಗೆಯ ಹಗೆತನ ಬತ್ತಿಸಿವೆ ಪ್ರೀತಿಸೆಲೆ ‘ಗಿರಿ’
ಮಿಡಿವ ಹೃದಯಗಳ ಬೆಸುಗೆಗೆ ಮಾತು ಬೇಕಿಲ್ಲ

– ಮಂಡಲಗಿರಿ ಪ್ರಸನ್ನ


ದಿನದ ಬದುಕಿಗಿಂತ ಸಾವು ದೊಡ್ಡದೆನಲ್ಲ ಬಿಡು ಗೆಳೆಯ.
ಹಸಿವ ಚೂರಿ ಚುಚ್ಚುತಿದೆ ನೋವು ಸಾಯುತಿಲ್ಲ ಬಿಡು ಗೆಳೆಯ..

ಹಸಿದ ತುಟಿಗಳು ಹನಿಗಾಗಿ ಹಪಹಪಿಸಿವೆ,
ಬಿದ್ದ ಮಳೆಯು ಕೊಚ್ಚಿ ಸಾಗರ ಸೇರುತ್ತಿದೆಯಲ್ಲ ಬಿಡು ಗೆಳೆಯ.

ಏನಿದೆ ಹೇಳಿ ಬರೀ ಧರ್ಮದ ಜಾತಿಯ ಮಂದೆ.
ಪ್ರಾಣಿ ಪ್ರೀತಿಗಿಂತ ಮನುಷ್ಯ ಪ್ರೀತಿ ಕಾಣುತ್ತಿಲ್ಲ ಬಿಡು ಗೆಳೆಯ..

ಅದೇ ಹಗಲು, ಅದೇ ಇರುಳು ನರಳಾಟ.
ಬದುಕಿಗಾಗಿ ಬಿದ್ದವರ ಗೋಳಾಟ ನೋಡಲಾಗುತ್ತಿಲ್ಲ ಬಿಡು ಗೆಳೆಯ..

ಈಗೀಗ ಪಾಪದ ಮಹಲು ಗಳು ಮೈನೆರೆಯುತ್ತಿವೆ.
ಗುಡಿಸಲಲಿ ಕಾಮಕ್ಕೆ ಕುಣಿಕೆಯಾದ ಸೀತೆಯರನು ಯಮಹನು ತಡೆಯಲಾಗುತ್ತಿಲ್ಲ ಬಿಡು ಗೆಳೆಯ..

ಯಲ್ಲಪ್ಪ ಮಲ್ಲಪ್ಪ ಹರ್ನಾಳಗಿ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group