ಗುರುವಿಗೆ…
ಗುರುವೇ…ವರಗುರುವೇ…
ಮಹಾಗುರುವೇ…ಪರಮಗುರುವೇ…ಸದ್ಗುರುವೇ…
ನಿನಗೆ ಶರಣು,ಸಾವಿರದ ಶರಣು….
ಜಗವ ಕಾಣುವ ಮೊದಲೇ
ಅದರರಿವು ಇತ್ತವ ನೀನು…
ಹಸಿದಡೆ ಉಣ್ಣುವುದು,
ದಣಿದಡೆ ಮಲಗುವುದು,
ಸೂರ್ಯ ಚಂದ್ರರ ನೋಡಿ
ನಕ್ಕು ನಲಿದಾಡುವುದು
ತೊಟ್ಟಿಲಲಿ ಮಲಗಿದವಗೆ
ಎಲ್ಲಾ ಪ್ರೀತಿಯನಿತ್ತವ ನೀನು….
ಗುರುವೇ ನಿನಗೆ ಶರಣು..
ಅಮ್ಮನೇ ಮೊದಲಾದ
ಬಂಧುಗಳ ತೋರಿದೆ ನೀನು
ಗಿಡ ಮರ ಬಳ್ಳಿಗಳ
ಕಾಣಲು ಕಲಿಸಿದೆ ನೀನು
ಓದು ಬರಹದಲಿ
ಬ್ರಹ್ಮಾಂಡವ ತೋರಿದೆ ನೀನು…
ನೂರು ದಾರಿಗಳಲ್ಲಿ
ಬದುಕನು ಕಲಿಸಿದೆ ನೀನು…
ಗುರುವೇ ನಿನಗೆ ಶರಣು….
ನಾನಾರೆಂಬುವ ಮಾತು
ಮರೆತು ಸಾಯುವ ಜಗಕೆ
ಪರಿಪರಿಯಾಗಿ ಅರುಹುವ
ಕರುಣಾಳು ನೀನೇ…
ಎಲ್ಲವೂ ನಾನೇ..
ಜಗವೆಲ್ಲವೂ ನನ್ನಿಂದೆ
ಎಂಬೀ ಬರೀ ಗುಡುಗಿನ
ಸದ್ದಡಗಿಸಿದ ಗುರುವೇ…
ನಾನೆಂಬುದು ಇಲ್ಲಿಲ್ಲ…
ಯಾವುದೂ ನಿನ್ನಿಂದಲ್ಲ
ಹರನ ಕರುಣೆಯೇ
ನರರೂಪದ ನೀನೆಂದು
ಅರುಹಿದ ಸುರಗುರುವೇ
ನಿನಗೆ ಶರಣು….
ನೂರು ಜನ್ಮವ ತೊಡೆದು
ಹರಜನ್ಮವ ತಾಳುವುದಕೆ
ಸಕಲ ಜೀವಕೆ ಎಲ್ಲ
ಪ್ರೀತಿಯನುಣಿಸುವುದಕೆ
ಬರೀ ಮಾನವನೆಂಬುದ ಅಳಿಸಿ,
ಮಹಾದೇವನಾಗಿಸಿದ
ಗುರುವೇ ನಿನಗೆ ಶರಣು…
ತಾಯಿಯಾಗಿ ಕಲಿಸಿ
ತಂದೆಯಾಗಿ ಸಲಹಿ
ಓದಲು ಶಾಲೆಗೆ ಕರೆಸಿ
ತಿದ್ದಿ ತೀಡಿ ಬರೆಸಿ
ಬುದ್ಧಿಯನು ಹರಹುತ್ತ
ಶುದ್ಧ ಜ್ಞಾನದಿಂದ
ಬುದ್ಧನಾಗಿಸಿದ ಗುರುವೇ
ಶರಣು ನಿನಗೆ ಶರಣು….
ನಂದಾದೀಪವು ನೀನು,
ಬರೀ ಹಣತೆಯು ನಾನು
ಎಣ್ಣೆ ಬತ್ತಿಯನಿಕ್ಕಿ
ನಿನ್ನಂತಾಗಿಸಿದ
ಗುರುವೇ ಮಹಾಗುರುವೇ
ಶರಣು ನಿಮಗೆ ಶರಣು
ಸಾವಿರದ ಶರಣು…
*ಕೆ.ಶಶಿಕಾಂತ*
ಗುರು ಪೂರ್ಣಿಮಾ
ನಮಗೆ ಉಸಿರು ನೀಡಿದ ತಾಯಿ
ಉಸಿರಿಗೆ ಹೆಸರನ್ನು ಕೊಟ್ಟ ತಂದೆ
ನಿಮ್ಮ ಪ್ರೇಮ ಬಂಧನದಲ್ಲಿ
ಬೆಳೆದ ಕುಸುಮಗಳು ನಾವು
ಕಣ್ಣು ಕಂಡ ಮೊದಲ ಗುರು ನೀವು
ನಿಮಗಿದೋ ನನ್ನ ನಮನ.
ಬಾಲ್ಯದಲಿ ತುಂಟಾಟ ಮಾಡುತ್ತಾ
ಶಾಲೆಯ ಹೆಸರು ಕೇಳಿ ಅಳುತ್ತಾ ಕರೆಯುತ್ತಾ
ಕೊಸರಾಡಿ ಹೋದವರು ನಾವು
ಕೈ ಹಿಡಿದು ಅಕ್ಷರವ ತೀಡಿ ತಿದ್ದಿ
ರಮಿಸಿ ಓಲೈಸಿ ದಂಡಿಸಿ
ಜೀವನಕೆ ಭದ್ರ ಬುನಾದಿ ಹಾಕಿದ
ಗುರುಗಳಿಗೆ ನನ್ನ ನಮನ
ಹೆಜ್ಜೆ ಹೆಜ್ಜೆಗೂ ಬುದ್ದಿ ಮಾತನು ಹೇಳಿ
ನಡೆ ನುಡಿಯ ತಿದ್ದಿದ
ಬದುಕಲ್ಲಿ ಉತ್ಸಾಹ ತುಂಬಿದ
ಸಕಲ ಸ್ನೇಹಿತಕುಲಕೆ
ನನ್ನ ಹೃದಯಾಳದ ನಮನ.
ಗುರಿ ಇರಬೇಕು ಮುಂದೆ
ಗುರುವಿರಬೇಕು ಬೆನ್ನ ಹಿಂದೆ
ಇದ್ದರೆ ಅದುವೇ ನಾಕ
ನಮ್ಮ ಜೀವನ ಸಾರ್ಥಕ.
*ಭಾರತಿ ಮದಭಾವಿ*

