ದಸರಾ ಕವನಗಳು ( ಸುಮಾ ಗಾಜರೆ, ರತ್ನಾ ಅಂಗಡಿ )

Must Read

“ನವ ಆರಾಧನೆ “

ಹಿಂದೂ ಧರ್ಮದ ಸುಂದರ ಸಂಸ್ಕೃತಿ
ನಾಡಿನ ಹೆಮ್ಮೆಯ ನವರಾತ್ರಿ
ಮೈಸೂರು ದಸರೆಯ ಉನ್ನತ ಕೀರುತಿ
ತಾಯಿ ಚಾಮುಂಡೇಶ್ವರಿಗೆ ಹೊನ್ನಿನಾರುತಿll

ವಿಜಯದಶಮಿಯ ಭವ್ಯ ದಸರ
ನಾಡಿನೆಲ್ಲೆಡೆ ಸಡಗರ ಸುಂದರ
ನವ ದಿನವೂ ಸಂತಸ ಸಂಭ್ರಮ
ವಿಶಿಷ್ಟ ವೈಭವ ಅನನ್ಯ ಅನುಪಮll

ದುರ್ಗಾ ಶೈಲಪುತ್ರಿ ಬ್ರಹ್ಮಚಾರಿಣಿ
ಚಂದ್ರಕಾಂತ ಕೂಷ್ಮಾಂಡ ಕಾತ್ಯಾಯಿನಿ
ಸ್ಕಂದಮಾತಾ ಮಹಾಗೌರಿ ಸಿದ್ಧಿದಾತ್ರಿ
ನವ ರೂಪಗಳ ತಾಯಿ ಕಾಳರಾತ್ರಿ ll

ತಾಮಸಿಕ ಅಸುರ ಗುಣಗಳ ದಮನ
ಅಭಯ ಹಸ್ತ ನೀಡುವ ಮಾತೆಗೆ ನಮನ
ನವ ದಿನಗಳು ದೀಪದ ಪ್ರಜ್ವಲನ
ದೇವಿಮಹಾತ್ಮೆಯ ಪುರಾಣ ವ್ಯಾಖ್ಯಾನll

ಮಹಿಷಾಸುರನ ದುಷ್ಟಸಂಹಾರ
ಪಾರ್ವತಿಯ ನವದುರ್ಗೆಯ ಅವತಾರ
ದಶ ದಿನದ ಗೆಲುವಿನ ಆಚರಣೆ
ಹೆಸರಾಯಿತು ವಿಜಯದಶಮಿ ಜಾಗರಣೆll

ವಿಜಯದ ಹಬ್ಬದ ದೀಪದ ಅಲಂಕಾರ
ನೋಡಲು ಸುಂದರ ನಯನ ಮನೋಹರ
ಜಗನ್ಮಾತೆಗೆ ಭಕ್ತಿಭಾವದ ಉಪಾಸನೆ
ಭಾರತ ಸಂಸ್ಕೃತಿ ಪರಂಪರೆಯ ಆರಾಧನೆll

ಜಯ ಜಯ ತಾಯಿ ಪಾರ್ವತಿ
ಬೆಳಗುವೆವು ನಿನಗೆ ಆರುತಿ ll

🍀🌹☘️🌹☘️🌹☘️🌹☘️🌹☘️🌹☘️

ಶ್ರೀಮತಿ ಸುಮಾ ಗಾಜರೆ,ಶಿಕ್ಷಕಿ ವಿಜಯಪುರ
7892270924


ಸಂಭ್ರಮದ ನಾಡಹಬ್ಬ ದಸರಾ

ನಾಡಿಗೆ ಬಂತು ಸಂಭ್ರಮದ ದಸರಾ ಹಬ್ಬ
ಶಕ್ತಿದೇವತೆ ಪೂಜಿಪ ಪಾವನ ಧಾಮಿ೯ಕ ಹಬ್ಬ
ದೇವಿಪರಾಯಣ ದೀಪರಾಧನೆ ಭಕ್ತಿ ವೈಭವ
ನವರೂಪ ನವ ಅವತಾರದ ಮಾತೆ ಶಕ್ತಿದೈವ

ಜಯ ಜಯ ಜಯಹೇ ಚಾಮುಂಡೇಶ್ವರಿ
ಜಗದ ಜನರ ಪೊರೆಯುವ ಪರಮೇಶ್ವರಿ
ಕರಮುಗಿದ ಭಕ್ತರ ಕಾಯುವ ಮಹೇಶ್ವರಿ
ಭುವಿಯ ಸಂಕಟ ಪರಿಹರಿಸು ಭುವನೇಶ್ವರಿ

ಲೋಕಶಕ್ತಿ ಮಾತೆ ತ್ರಿಭುವನ ಪೋಷಿಣಿ
ಅಖಿಲ ಚರಾಚರ ಜನನಿ ನಾರಾಯಣಿ
ನಾಗಕಂಕಣ ನಟರಾಜ ಮನೋಹರಿ
ಹಿಮಗಿರಿ ತನಯೆ ಹೇ ಮಹಾಶಕ್ತಿ ಈಶ್ವರಿ

ಮಹಿಷಾಸುರ ಮದಿ೯ನಿ ದುಷ್ಟರ ಸಂಹಾರಿ
ಶಿಷ್ಟರ ರಕ್ಷಿಸುವ ಶೈಲಸುತೆ ಚಾಮುಂಡೇಶ್ವರಿ
ರಕ್ತಬೀಜಾಸುರನ ಕೊಂದ ರೌದ್ರರೂಪಿಣಿ
ಶಂಭು ನಿಶುಂಭ ಸಂಹಾರ ದುಗೆ೯ ಸ್ವರೂಪಿಣಿ

ನವರಾತ್ರಿ ನವರೂಪದಿ ಪೂಜಿಪ ನವಶಕ್ತಿಧಾತೆ
ಬೆಟ್ಟದಿ ನೆಲಿಸಿಹ ಭಕ್ತರ ಅಭಯದ ಮಾತೆ
ಮೈಸೂರು ನಗರದ ಶಕ್ತಿಯ ಅಧಿದೇವತೆ
ಅಂಬೆ ಅಂಬೆ ಜಗದಂಬೆ ನೀ ಜಗನ್ಮಾತೆ

ಸಿಂಹವಾಹನಿ ಚಾಮುಂಡಿ ಪರಮ ಪಾವನಿ
ಭಕ್ತರನು ಅಭಯದಿ ಹರಿಸು ಕಾತ್ಯಾಯನೀ
ನವಶಕ್ತಿ ಸುಶೋಭಿತೆ ನವರೂಪ ಶಕ್ತಿದಾಯನೀ
ಜಗಕೆ ಸಮೃದ್ಧಿ ನೀಡು ತಾಯಿ ಚಾಮುಂಡೇಶ್ವರಿ

ಕಾರುಣ್ಯಮೂತಿ೯ ಭಕ್ತರ ಕಾಪಾಡು ಶಕ್ತಿಧಾತೆ
ನಾಡಿಗೆ ಬಂದ ಸಂಕಷ್ಟಗಳ ಕಳೆ ದುಗಾ೯ಮಾತೆ
ಬನ್ನಿ ಕೊಟ್ಟು ಸ್ನೇಹ ಭಾವೈಕತೆ ಸಾರುವ ಹಬ್ಬ
ನವರಾತ್ರಿ ಶಕ್ತಿವೈಭವ ಸಂತಸ ಸಡಗರದ ಹಬ್ಬ

ರತ್ನಾ ಎಂ ಅಂಗಡಿ
ಹುಬ್ಬಳ್ಳಿ

Latest News

ಕವಿಗೋಷ್ಠಿಗೆ ಆಹ್ವಾನ

ಮೂಡಲಗಿ - ಫೆ.೧ ರಂದು ರವಿವಾರ ಮುಂಜಾನೆ ೧೦ ಘಂಟೆಗೆ ಕನ್ನಡ ಸಾಹಿತ್ಯ ಪರಿಷತ್ತು ,ಮೂಡಲಗಿ ಹಾಗೂ ಎಮ್ ಐ ಕೆ ಪಿ ಯು ಕಾಲೇಜು,...

More Articles Like This

error: Content is protected !!
Join WhatsApp Group