ನೇಕಾರರ ಪರಿಸ್ಥಿತಿ ಗಂಭೀರ ತಿರುವು ತೆಗೆದುಕೊಳ್ಳುತ್ತಿದೆ! ಯಾವ ಹಂತ ತಲುಪುವದೊ ಗೊತ್ತಿಲ್ಲ!!

0
1740

ಮಾನ್ಯ ಮುಖ್ಯಮಂತ್ರಿಗಳೇ,

ನೇಕಾರಿಕೆ ಉದ್ಯೋಗದಲ್ಲಿ ತೊಡಗಿರುವ ರಾಜ್ಯದ ಲಕ್ಷಾಂತರ ಸ್ಥಿತಿ ಗಂಭೀರವಾಗತೊಡಗಿದೆ. ಕೊರೋನಾ ಲಾಕ್ ಔಟ್ ಹಿನ್ನೆಲೆಯಲ್ಲಿ ಕಳೆದ ಮೂರು ತಿಂಗಳುಗಳಿಂದ ವಿದ್ಯುತ್ ಮಗ್ಗಗಳನ್ನು ಅವಲಂಬಿಸಿರುವ ಲಕ್ಷಾಂತರ ಜನರು ಅಕ್ಷರಶಃ ಉಪವಾಸದ ದಿನಗಳನ್ನು ಕಳೆಯುತ್ತಿದ್ದಾರೆ. ಇದಕ್ಕೆ ಬೆಳಗಾವಿಯಲ್ಲಿ ಕಳೆದ ಒಂದು ವಾರದಿಂದ ನಡೆದಿರುವ ಕೆಲವು ಘಟನೆಗಳೇ ಸಾಕ್ಷಿಯಾಗಿವೆ.ಇದಕ್ಕಿಂತ ಬೇರೆಯ ಪುರಾವೆಗಳೇ ಬೇಕಾಗಿಲ್ಲ! ವಿದ್ಯುತ್ ಮಗ್ಗಗಳಲ್ಲಿ ತಯಾರಾಗಿ ಮಾರಾಟವಾಗದೇ ಉಳಿದಿರುವ ಲಕ್ಷ ಲಕ್ಷ ಸೀರೆಗಳು ಅವಲಂಬಿತರನ್ನು ದಿಕ್ಕೆಡಿಸಿವೆ.ಉಪವಾಸದ ದಿನಗಳಿಗೆ ನೂಕುತ್ತಿವೆ.

 

ಇತರ ಶ್ರಮಿಕರಾದ ಕ್ಷೌರಿಕರು,ದಿನಗೂಲಿಗಳು,ಅಗಸರು ತಮ್ಮ ತಮ್ಮ ಉದ್ಯೋಗಗಳನ್ನು ಆರಂಭಿಸಿದ್ದಾರೆ. ಆದರೆ ನೇಕಾರರ ಬದುಕು ಹಾಗಲ್ಲ.ಸಿದ್ಧವಾದ ಸೀರೆಗಳು ಮಾರಾಟವಾಗದೇ ಮಗ್ಗಗಳ ಯಂತ್ರಗಳು ತಿರುಗುವದಿಲ್ಲ. ಮಗ್ಗಗಳ ಮೇಲೆ ಅವಲಂಬಿತರಾದವರ ಹೊಟ್ಟೆ ತುಂಬುವದಿಲ್ಲ.

ಕಳೆದ ಮಂಗಳವಾರವೇ ಹುಕ್ಕೇರಿ ತಾಲೂಕಿನ ಯಮಕನಮರಡಿ ಬಳಿಯ ಆನಂದಪುರದ ಆರು ಮಗ್ಗಗಳ ಮಾಲಿಕ ,63 ವರ್ಷ ವಯಸ್ಸಿನ ಶಂಕರ ಶಡಿಶ್ಯಾಳ ನೇಣಿಗೆ ಶರಣಾಗಿದ್ದಾರೆ.ಇವರು ನೇಯ್ದು ತಯಾರಿಸಿದ 350 ಸೀರೆಗಳು ಮಾರಾಟವಾಗದೇ ಉಳಿದಿವೆ.ಬ್ಯಾಂಕು ಮತ್ತು ಹಣಕಾಸು ಸಂಸ್ಥೆಗಳಲ್ಲಿ ಇವರು ಮಾಡಿದ ಸಾಲ 8 ರಿಂದ 10 ಲಕ್ಷ ರೂ. ಬೆಳಗಾವಿಯ ವಡಗಾವಿಯ ಲಕ್ಷ್ಮೀ ನಗರದ 38 ವರ್ಷ ವಯಸ್ಸಿನ ಸುಜಿತ್ ಉಪ್ಪರಿ ಎಂಬ ಮಗ್ಗಗಳ ಕೂಲಿ ಕಾರ್ಮಿಕ ಎರಡು ದಿನಗಳ ಹಿಂದೆ ನೇಣಿಗೆ ಶರಣಾಗಿದ್ದು ಇಂದು ಶುಕ್ರವಾರ ಮುಂಜಾನೆ ಗೊತ್ತಾಗಿದೆ.

ಮೀಟರ್ ಬಡ್ಡಿಯ ಮೇಲೆ ಸಾಲ ನೀಡುವ ಖಾಸಗಿ ವ್ಯಕ್ತಿಗಳಿಂದ 25 ಸಾವಿರ ಸಾಲ ಪಡೆದಿದ್ದ ಸುಜಿತ್ ನಿಗೆ ಸಾಲ ನೀಡಿದವರು ಬಡ್ಡಿ ವಸೂಲಿಗಾಗಿ ತೀವ್ರ ಕಿರುಕಳ ನೀಡಿದ್ದರೆಂದು ಹೇಳಲಾಗುತ್ತಿದೆ.

ಮಗ್ಗಗಳು ಸ್ತಬ್ಧವಾಗಿದ್ದರಿಂದ ಸಾವಿರಾರು ನೇಕಾರರು ಒಪ್ಪೊತ್ತಿನ ಊಟಕ್ಕಾಗಿ ಪರದಾಡುತ್ತಿದ್ದಾರೆ.ಕೇಂದ್ರ ರೈಲು ಸಚಿವ ಸುರೇಶ ಅಂಗಡಿಯವರ ಕಚೇರಿಯ ಮುಂದೆ ಬೆಳಗಿನ ಜಾವದಿಂದಲೇ ಸರದಿಯಲ್ಲಿ ನಿಂತು ಆಹಾರ ಧಾನ್ಯದ ಕಿಟ್ ಗಾಗಿ ಕೈಚಾಚುತ್ತಿದ್ದಾರೆ. ಅಂಗಲಾಚುತ್ತಿದ್ದಾರೆ. ಪೋಲೀಸರಿಂದ ಲಾಟಿಯೇಟಿಗೆ ಗುರಿಯಾಗುತ್ತಿದ್ದಾರೆ!

ಆಹಾರ ಧಾನ್ಯ ಕಿಟ್ ಸಿಕ್ಕರೂ ಒಂದು ವಾರವೂ ಆಗುವದಿಲ್ಲ. ಇದು ಪರಿಹಾರವೂ ಅಲ್ಲ.ಮಗ್ಗಗಳು ಆರಂಭವಾಗುವಂತೆ ರಾಜ್ಯ ಸರಕಾರ ಯೋಜನೆಯೊಂದನ್ನು ರೂಪಿಸಲೇಬೇಕು. ಬೆಳಗಾವಿ, ಬಾಗಲಕೋಟೆ, ವಿಜಯಪುರ, ಯಾದಗಿರಿ ಮುಂತಾದ ಜಿಲ್ಲೆಗಳಲ್ಲಿ ಮಾರಾಟವಾಗದೇ ಉಳಿದಿರುವ 50 ಲಕ್ಷಕ್ಕೂ ಅಧಿಕ ಸೀರೆಗಳನ್ನು ಸರಕಾರವು ಜವಳಿ ಇಲಾಖೆಯ ಮೂಲಕವಾದರೂ ಖರೀದಿಸಬೇಕು.ಇಲ್ಲವೇ ಸೀರೆಗಳ ದಾಸ್ತಾನಿನ ಮೇಲೆ ಬಡ್ಡಿ ರಹಿತ ಸಾಲವನ್ನಾದರೂ ಕೊಡಬೇಕು.ಇಂತಹ ಕ್ರಮಗಳು ಮಾತ್ರ ನೇಕಾರರನ್ನು ಬದುಕಿಸಬಲ್ಲದೇ ಹೊರತು ತಾತ್ಕಾಲಿಕವಾದ ಆಹಾರ ಧಾನ್ಯದ ಕಿಟ್ ಪರಿಹಾರವಾಗಲಾರದು.

ನೇಕಾರಿಕೆ ಉದ್ಯೋಗಸ್ಥರು ಹೆಚ್ಚಾಗಿರುವ ಬೆಳಗಾವಿ ದಕ್ಷಿಣ, ಬೆಳಗಾವಿ ಗ್ರಾಮೀಣ, ಯಮಕನಮರಡಿ, ರಾಮದುರ್ಗ, ತೇರದಾಳ, ಗುಳೇದಗುಡ್ಡ, ದೊಡ್ಡಬಳ್ಳಾಪುರ, ತುರುವೆಕೆರೆ ಮತ್ತಿತರ ವಿಧಾನಸಭಾ ಮತಕ್ಷೇತ್ರಗಳ ಶಾಸಕರ ಸಭೆಯನ್ನು ತುರ್ತಾಗಿ ಕರೆದು ಚರ್ಚಿಸಬೇಕು.ಈ ಕೆಲಸ ಆದಷ್ಟು ಬೇಗವಾದರೆ ಮಾತ್ರ ಮುಂದಾಗಬಹುದಾದ ಸಂಭವನೀಯ ಅನಾಹುತಗಳನ್ನು ತಪ್ಪಿಸಬಹುದಾಗಿದೆ.

ತಾವು ರೈತರ ಮತ್ತು ನೇಕಾರರ ಪರವಾಗಿ ಹೋರಾಟ ಮಾಡುತ್ತಲೇ ಬಂದವರು. ಈ ಎರಡೂ ವರ್ಗಗಳ ಬಗ್ಗೆ ತಮಗೆ ಸಂಪೂರ್ಣ ತಿಳುವಳಿಕೆ ಇದ್ದೇ ಇದೆ. ಆದ್ದರಿಂದ ತಾವು ದಯವಿಟ್ಟು ಪರಿಸ್ಥಿತಿಯನ್ನು ಅರಿತುಕೊಂಡು ದಿಟ್ಟ ನಿರ್ಧಾರ ಕೈಕೊಳ್ಳುವಿರೆಂದು ನಂಬಿದ್ದೇವೆ.

ವಂದನೆಗಳು
ಅಶೋಕ ಚಂದರಗಿ