ಪ್ರೊ. ವಿಜಯಲಕ್ಷ್ಮಿ ಪುಟ್ಟಿಯವರ ಕವನಗಳು

Must Read

ಕವನ ಬರೆಯಬೇಕೆಂದಾಗ

ಗೆಳೆಯರೇ
ಇದೆ ಮೊದಲಲ್ಲ
ನಾನು ಕವನ
ಬರೆಯಬೇಕೆಂದಿರುವುದು
ನಾನು ಕವನ ಬರೆಯುವದು
ಸರಳ ಸಹಜ
ನಾನು ಬಿದ್ದು ಅತ್ತಾಗ
ಅಮ್ಮ ಅಪ್ಪಿ ಸಂತೈಸಿದಾಗ
ಒಳಗೊಳಗಿನ ದುಖ ಕಳಚಿ
ನಗೆಯ ಅಲೆಯು ಹೊಮ್ಮಿದಾಗ
ಕವನ ಬರೆಯಬೇಕೆಂದಿದ್ದೆ.

ಹುಟ್ಟು ಹಬ್ಬಕೆ
ಹೊಸಬಟ್ಟೆ ಕೊಟ್ಟು
ಅಪ್ಪ ಹಣೆಗೆ ಮುತ್ತಿಟ್ಟಾಗ
ಅಣ್ಣ ತಮ್ಮ ಕೀಟಲೆ ಮಾಡಿ
ಮತ್ತೆ ಸಮಾಧಾನ ಹೇಳಿದಾಗ
ಶಾಲೆಯಲಿ ಸನ್ಮಾನ
ಹೆಚ್ಚು ಅಂಕ ಗುಣಗಾನ
ಎಲ್ಲೆಡೆ ಪ್ರಶ೦ಸೆ ಪಡೆದಾಗ
ಕವನ ಬರೆಯ ಬೇಕೆಂದಿದ್ದೆ

ಬಾಲ್ಯ ಯೌವನಕೆ ತಿರುಗಿ
ಹಸಿ ಕನಸುಗಳ ಭೇಟೆಯಾಡಿ
ಮೊಟ್ಟ ಮೊದಲು
ಪ್ರೇಮ ಪತ್ರ ಸಿಕ್ಕಾಗ
ರೆಕ್ಕೆ ಬಿಚ್ಚಿ
ಕಾಡಿನ ಕೋಗಿಲೆಯಂತೆ
ಹಾಡಬೇಕೆ೦ದಿದ್ದೆ

ಹಬ್ಬ ಸಂತಸ ನೆಮ್ಮದಿ
ಗಳಿಗೆ ಗೂಡುಕಟ್ಟಿ ನಕ್ಕಾಗ
ಮುಂದೆ
ಮದುವೆಯಾಯಿತು
ಮಕ್ಕಳಾದರು .
ಎಲ್ಲವನ್ನೂ ದಾಖಲಿಸಲು
ಕವನ ಬರೆಯಬೇಕೆಂದಿದ್ದೆ

ಈಗ ಅಪ್ಪಿ ಮುದ್ದಾಡಿದ
ಅಪ್ಪ ಇಲ್ಲ .
ಅಣ್ಣ ತಮ್ಮ
ತಮ್ಮ ತಮ್ಮ ಕೆಲಸದಲಿ
ಯಜಮಾನರು ಕೆಲಸ
ಹೊಲ ಮನೆ ಓಡಾಟ
ದೂರದ ಊರಿನ ಮಕ್ಕಳು
ಕಳೆದ ಬಾಲ್ಯದ ನೆನಪು
ಈಗ ನಾನು ಒಂಟಿ

ಆದರೆ
ಭಾವನೆಗಳು ಕಾಡುತ್ತವೆ
ಬರೆಯುತ್ತೇನೆ ನನ್ನ ಕವನವ
ಸ್ನೇಹ ಪ್ರೇಮ ಭಾವದ
ಸಿಹಿ ಬುತ್ತಿಯ ಬಿಚ್ಚಿ


ಆರತಿ

ನೀನು ನಾನು
ಗೆಳೆಯ ಗೆಳತಿ
ಒಲುಮೆ ನಲುಮೆಯ
ಆರತಿ
ಒಪ್ಪಿಕೊಂಡವು
ನಮ್ಮ ಮನಗಳು
ಸ್ನೇಹ ಸಂತಸ ದೀಪ್ತಿಯು
ಏಕೆ ಕದನ ?
ಬೇಡ ಬೇಸರ
ತಂಟೆ ಸಾಕು
ದೂರ ವಾರ್ತೆ ನೂಕು
ಅರಿತು ನಡೆಯುವ
ನಾನು ನೀನು
ನಿತ್ಯಹರುಷದ ಕೀರ್ತಿಯು
ಕಷ್ಟ ಸುಖಕೆ
ಗಟ್ಟಿಗೊಳ್ಳಲಿ
ದೂರ ಸಾಗುವ ರೀತಿಯು
ನೋವ ಮರೆತು
ನಲಿವು ಬರಲಿ
ಭಾವ ಹಂಚುವ ನೀತಿಯು
ದುಗುಡ ಬಿಟ್ಟು
ಕೂಡಿ ಬದುಕುವ
ಪ್ರೀತಿ ನಮ್ಮಯ ಆಸ್ತಿಯ .
ನಾನು ನೀನು ಗೆಳೆಯ ಗೆಳತಿ
ಸ್ನೇಹ ಚಿಲುಮೆಯ ಆರತಿ


ಬಂಡೇಳುತ್ತಿದೆ ಮನ

ಸೀತೆ ತಾರಾ
ಮಂಡೋದರಿ
ಸಾವಿತ್ರಿ ಅಹಲ್ಯೆ
ಗಾಂಧಾರಿ ಊರ್ಮಿಳೆ
ಏಕಿ ವನವಾಸ
ಅಗ್ನಿಪರೀಕ್ಷೆ ?
ಏಕೆ ಹೆಣ್ಣಿಗೆ
ಕ್ರೂರ ಶಿಕ್ಷೆ ?
ದ್ರೌಪದಿಯ ವಸ್ತ್ರ
ಕಳಚಿತು
ಕುಂತಿಯ
ವ್ಯರ್ಥ ಪ್ರಲಾಪ
ಏಕೆ ಬರಲಿಲ್ಲ
ನೆರವಿಗೆ ಪಾಂಡವರು ?
ರಾಮ ಬಸುರಿ ಸೀತೆಯ
ಅಡವಿಗೆ ಅಟ್ಟಿದ
ರಾವಣ ಸಾವು ರಕ್ತ ತಿಲಕ.
ಉರ್ಮಿಳೆಗೆ ಬೇಸರ.
ಇಲ್ಲ ಸೌಜನ್ಯ
ದಾಕ್ಷಿಣ್ಯದ ಮಾತು .
ದೆಹಲಿಯಲ್ಲಿ ನಿರ್ಭಯಳ
ಅತ್ಯಾಚಾರ ಕೊಲೆ
ಇಲ್ಲ ಅವರಿಗೆ ಶಿಕ್ಷೆ
ಹೆಂಗುಸುಗಳ ಮೇಲೆ
ಕಾಮುಕರ ಅಟ್ಟಹಾಸ .
“ಯತ್ರ ನಾರಿ ಪೂಜ್ಯಂತೆ ,,,,,,,,,,,”
ಹುಸಿ ಆಷಾಢಭೂತಿಗಳ ಮಾತು.
ಸಿಡಿದೆಳುತ್ತಿದೆ ಶತಮಾನದ ಮೌನ
ಬುಗಿಲೆದ್ದಿದೆ ಆಕ್ರೋಶ .
ಹೆಪ್ಪುಗಟ್ಟಿದ ಕರಾಳ ನೋವು .
ದಾಟಿ ಸಾಗಿರುವೆವು
ಬದುಕು ಸಾವು .
ಹುಟ್ಟಡಗಿಸುವೆವು
ಕ್ರೂರ ಮೃಗಗಳ
ಹೊಸ ಬದುಕಿನ ಮಹಿಳೆಗೆ .
ಕೊನೆಗೊಳ್ಳಲಿ ಸ್ತ್ರೀ ಶೋಷಣೆ
ಬಂಧನ ಸಂಕೋಲೆ
ಸಮತೆ ಪಥ ದಾರಿಗೆ ಹೆಜ್ಜೆ .
ಬಂಡೇಳುತ್ತಿದೆ ಮನ
ಮನದ ತಳಮಳ


 ನಮ್ಮ ಜನ

ಮನ ಬಿಚ್ಚಿ ನಿಂತಿರುವೆ
ನನ್ನ ಮುಗ್ಧ
ಭಾವಗಳ ಅನಾವರಣ .
ಒಳಗೊಳಗೆ ಕುದಿದ
ಬೆಂದ ಬಳಲಿದ ಕಾಯ
ಅವ್ಯಕ್ತ ನಿರ್ಭಾವ
ಕಾಸಿ ಬೆಂಕಿಯ ಕುಲುಮೆ
ಪ್ರೀತಿ ಪ್ರೇಮ ಒಲುಮೆ
ಹೊರ ಹಾಕಲು
ಬೇಕಿತ್ತು
ನಿನ್ನ ಸ್ಫೂರ್ತಿ
ಪದಗಳ ಕಾರಣ .
ಸ್ತ್ರೀ ಸ್ವಾತ೦ತ್ರದ ಹರಣ
ನಿತ್ಯ ಶಿಶುಗಳ ಮರಣ .
ದೊಂಬಿ ಅತ್ಯಾಚಾರ
ಕೊಲೆ ದಾರುಣ
ನಿಶ್ಯಬ್ದ ಸ್ಮಶಾನ ಮೌನ
ಹೆಣ್ಣಿಗೆ ಎಂತಹ
ಮಾನ ಸನ್ಮಾನ
ಕೈ ಕಾಲಿಗೆ
ಬೇಡಿಗಳ ಬಂಧನ .
ಹೆಣ್ಣು ಕಲಿತರೆ
ಶಾಲೆಯು ತೆರೆದಂತೆ .
ಅರ್ಥವಿಲ್ಲದ ಘೋಷಣೆ .
ಬೇಕಿಲ್ಲ ಇವರ ಕರುಣೆ .
ಕೊನೆಯಾಗಲಿ
ಹೆಣ್ಣು ಮಕ್ಕಳ
ಶೋಷಕರ ದಿನ
ಇಲ್ಲದಿರೆ
ಬಂಡೆಳುವುದು
ನಮ್ಮ ಜನ

 

ಪ್ರೊ.ವಿಜಯಲಕ್ಷ್ಮಿ ಪುಟ್ಟಿ HoD English. MMS college Belagavi

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group