ಮಕ್ಕಳ ಕಥನ ಕಾವ್ಯ
ಮಾಡಿದ ತಪ್ಪನು ನೆನೆದು
ಆವಾಗ ನಾನು ಚಿಕ್ಕವ
ಮಳೆ ಚಳಿ ಲೆಕ್ಕಿಸದೆ
ಹೊಳೆ ಹಳ್ಳ ಈಜಾಡಿ
ಆಡು ಪಾಡುವ ಜೀವ
ಗುಡ್ಡ ಗವಾರ ತಿರುಗಿದವ
ಗಿಡ ಗಂಟೆ ಏರಿದವ
ಜೇನ ರುಚಿ ಸವಿದವ
ಬಾಲ ಲೋಕದಲಿ
ನನ್ನ ನಾನೇ ಮರೆತವ
ಹುಂಬ ಭಾವ
ಹಲವು ನಿಲುವ
ಮನಸು ಹರಿದಡೆ
ಹೂಗನಸು ಕಾಣೋ ಜೀವ
ಆವಾಗ ನಾನು ಚಿಕ್ಕವ
ಹುಚ್ಚುಚ್ಚು ಭಾಷೆಯಲಿ
ಬಗರಿ ಗಿಚ್ಚಾಡುತ
ವಿಕಾರದಿ ನಗುತಲಿ
ಹಸಿವು ತವಕ ನೀಗುತ
ಹುಸಿಯ ಬಯಕೆ ತೇಲುತ
ಮೃದು ಮಾತಿನಲಿ
ಅಪ್ಪನು ಕರೆದನಂದು
ಎತ್ತುಗಳ ಮೇಯಿಸಲು
ಸರದಿಯು ನಿಂದು
ಅಡಿಗಡಿಗೆ ಹುಷಾರು ಎಂದು
ಗುಲಿಕಿದವು ಜೇಬಲಿ
ಬಗರಿ ಗೋಲಿ ಗಜುಗ
ಜಾಳಿಗೆ ಜಯದ ಭೇರಿ
ಎತ್ತುಗಳ ಜೊತೆ ನಾನೊಬ್ಬ
ಸವಾರಿಯಂತೆನಗದು ಹಬ್ಬ
ನಲಿದುಲಿದು ಬೆಡಗಿನಲಿ
ಎತ್ತಿಡಿದೆ ಬುತ್ತಿಯನು
ಎತ್ತುಗಳ ಮೈದಡವಿ
ಬಾರಕೋಲು ಸೊಬಗಿನಲಿ
ಹೆಗಲೇರಿತು ಗತ್ತಿನಲಿ
ತಂಬೆಳಗು ಗಾವು
ತೊರೆದಿರೆ ಬಿಗುವು
ಎಳೆಗಾಳಿಯೊಡಗೂಡಿ
ಎತ್ತುಗಳು-
ಹಿರಿದಿರಿದು ನೆಂಬಲು
ತಪ್ಪಡಿಗೆ ಮೇವು
ಮೋಡದ ಮರೆಯೊಳಗೆ
ರವಿ ಬರೆ ನೆತ್ತಿಗೆ
ಹಸಿವು ಭಾವ ಹುಟ್ಟಿ
ಕನವರಿಕೆ ನಡುವೆ
ನುರಿತವು ರೊಟ್ಟಿ
ಗಾವುದ ದೂರ
ತಲೆ ಎತ್ತದೆ
ಹದ್ದು ಬಸ್ತಿನಲಿ
ನೆಮ್ಮುತ ಮುದದಿ
ಮೇಯುತಿದ್ದವು
ಎತ್ತುಗಳು
ಬದುವಿನ ಎದೆಯಲಿ
ಗೌಡನ ಸಿರಿ ಶಿಖರ
ಎಡ ಬಲ ಸಡಗರ
ತೊಡಿಸಿದ ಬುವಿಗೆ
ಹಸಿರ ಛತ್ರಿಯಾಕಾರ
ಬೆಳೆದು ನಿಂತಿದೆ ಹೊಲವು
ಎಳೆತನದ ಬೆಳೆಯು
ಹಸಿರು ಕಳೆ ಮೈದಾಳಿ
ಹರೆಯ ಬರುತಿದೆ
ಗೌಡನೊಲದ ಚೆಲುವು
ಗೌಡನ ಮೀಸೆಯಂತೆ
ನಿಚ್ಚಳ ಬಿರಸು
ಹಣಹಣಕಿಸಿ ಮುಸುಕು
ಕೆಣಕೆಣಕಿಸುವ ಕಣ್ಣಸಿವು
ಹಸಿರೊದ್ದ ಬೆಳಸು
ಬಳಿಕ -ನಾನು
ಜಾಳಿಗೆ ತೆಗೆದು
ಬಗರಿಗೆ ಸುತ್ತಿ
ಬಗೆಯಲಿ ನೆಗೆದು
ಆಟದಲಿ ಮುಳುಗಿದೆ
ಅದೆಷ್ಟೋ ಹೊತ್ತು
ಆಡಿ ಪಾಡಿದ ನೆಲವು
ಕೂಗಿ ಬೀಗಿದ ಗೆಲವು
ಅರಿವು ಮರುಳಾಗಿ
ಅರಳು ಮರವು
ದಿಗ್ಗನೆದ್ದು ನೋಡಿದೆ
ಲಗ್ಗೆ-ಸುಲಿಗೆ
ಒಂದೇ ಉಸಿರಿಗೆ
ದಗ್ಗಧೂಳಿ ಮೇಯಲು
ಗೌಡನ ಹೊಲದೊಳು
ಎದ್ದೆನೋ…ಬಿದ್ದೆನೋ.
ಭಯದಿ ಬೆಂದೋಡಿ
ಎತ್ತುಗಳಿತ್ತ ತಿರುವಲು
ಕತ್ತನೆತ್ತಿ ನೋಡಿದೆ
ಕೂಗಳತೆ ದೂರದಿ ಭೂತ!
ಸತ್ತೆನೋ..ಸತ್ತೆನು
ಹವನ ಹೋಮ ಮಾಡುವ
ನರ ನೂಲು ಒಸೆದು
ಮರಕೆ ನೇತಾಕುವ
ಗೌಡನಿವತ್ತು ಉಳಿಸನು
ಶಂಕೆ ಬರದಂತೆ
ಬಾಯಾರಿದಂತೆನಿಸಿ
ಮೈ ಕೈಗೆ ಮೆತ್ತಿದೆ ಕೆಸರುನು
ಪಾತಾಳಕ್ಕಿಳಿದಂತೆ
ಪಾಪಸಕಳ್ಳಿಗೆ ಸಿಕ್ಕಂತೆ
ನಟಿಸಿದೆ
ಭಸ್ಮಾಸುರ ತೆರದಿ ಉರಿದು
ಒಳಗೊಳಗೆ ಕುದಿದು
ಎಡಬಿಡದೆ ಗೌಡನು
ಹಲ್ಲನು ಕಡಿಯುತ
ಮತ್ತೇರಿ ಬಂದನು
ಯವ್ವೋ..ಯಪ್ಪೋ..?
ಎನ್ನುತ ನರಳುತ
ಚಿನ್ನಾಟ ತೆಗೆದವು
ಎತ್ತುಗಳು
ಎತ್ತೆತ್ತಿ ಇರಿದು
ಮುಗಿಲ ನೆತ್ತಿಗೆ ತೂರಿದವು
ಮುಖವನು ನೆಲಕಿಟ್ಟು
ಕಣ್ಣೀರ ಕೋಡಿಯರಿಸಿ
ತಲೆವಾಗಿ ಹೊಟ್ಟೆಯಿಡಿದು
ಅತಿ ದುಃಖದಿ ಕ್ಷಮೆ ಬೇಡಿ
ರೋದಿಸುತ ಮಿಡಿದೆನು
ಪುಣ್ಯಾತ್ಮನೆ….!
ಕಾಪಾಡು
ಮಡಿಲೊಳ ತುಂಬಿಕೊ
ಎಂದೆನುತ…..
ದೇಹವನು ಒಡಮುರಿದು
ತಲೆಗೆಡವಿ ಉರುಳಿದೆನು
ಅದೇನೋ..ಎಂತೋ..
ಗೌಡನ ಮೃದುತನ ಬಾದಿಸಿ
ದಾತನಂತೆ ಸೋತನು
ಮಲಗಿಸಿಕೊಂಡನು ಹೆಗಲಿಗೆ
ಜತನದಿ ತತ್ತರಿಸಿ
ಎತ್ತಿಕೊಂಡ ಭರದಲಿ
ಆಹಾ…! ನೋವು ಎಂಬಂತೆ
ಕ್ಷೀಣತನದಿ ನಟಿಸಿದೆ
ಬೆನ್ನನು ಸವರುತ
ದುಮ್ಮಾನದಿ ಮರುಗಿದ
ಜಾಣತನದಿ ಕಪಟಿಗಿವ
ಆಪತ್ತು ತೊಲಗಿತು
ಅರಿತೊ ಅರಿಯದೊ
ಮಾಡಿದಪರಾಧವು ನನ್ನದು
ಆವಾಗ ನಾನು ಚಿಕ್ಕವ
ಮೊನ್ನೆ ತಾನೆ
ಗೌಡನ ನಿಸ್ತೇಜ ಕಣ್ಣು
ಮನ ದಣಿಯದ ಕಳೆಯ
ಎಳೆ ಮಗುವ ಹಾಗೆ
ತಿಳಿ ಮೌನದ ಹೃದಯಿ
ಸಂತಸದಿ ಹೇಳಿದೆನು
ಹೊಲದ ಕಥೆಯ
ಮಾಯವೋ….
ಮೋಹವೋ…..
ಗೊಳ್ಳೆಂದು ನಗು ನಗುತ
ಎಲ್ಲರನೂ ನಗಿಸುತ
ಬಾಲಚಂದ್ರನ ಹೊನಲು ನುಂಗಿ
ಯೋಗ ನಿದ್ರೆ ತಳೆದ
ಶರಶ್ಚಂದ್ರ ತಳ್ಳಿ ಕುಪ್ಪಿಗುಡ್ಡ