spot_img
spot_img

ಮರುಗಿದ ಜೀವಿಯ ದುಡ್ಡು ಸುಖ ನೀಡೀತೆ?

Must Read

- Advertisement -

ಈ ಮಾತು ಈಗ ನಿಜವಾಗುತ್ತಿದೆ. ಯಾರನ್ನು ನಾವು ಇಷ್ಟು ಶತಮಾನಗಳ ಕಾಲ ರಕ್ಷಕ ದೇವರೆಂದುಕೊಂಡು ಬಂದಿದ್ದೆವೋ ಅವರೆಲ್ಲ ಈಗ ಈ ಕೊರೋನಾ ಕಾಲದಲ್ಲಿ ಕೇವಲ ಸೈನಿಕರಾಗಿದ್ದಾರಷ್ಟೆ ಆದರೆ ರಕ್ಷಣೆಯ ಕೆಲಸ ಅವರಿಂದ ಆಗುತ್ತಿಲ್ಲ. ಈ ಮಾತು ಯಾಕೆ ಬಂತೆಂದರೆ ಒಂದೆರಡು ಉದಾಹರಣೆಗಳನ್ನು ನೋಡೋಣ ಬನ್ನಿ.

ಒಬ್ಬ ವ್ಯಕ್ತಿ ತನಗೆ ತೀವ್ರ ಎದೆ ನೋವೆಂದು ಖಾಸಗಿ ಆಸ್ಪತ್ರೆಗೆ ಬಂದು ಹಾರ್ಟ್ ಚೆಕ್ ಮಾಡಿ ಎನ್ನುತ್ತಾನೆ ಆತನಿಗೆ ಕೊರೋನಾ ಲಕ್ಷಣಗಳಾದ ಜ್ವರವಾಗಲಿ, ನೆಗಡಿ, ಕೆಮ್ಮು, ಕಫ ಯಾವುದೂ ಇಲ್ಲ. ತಕ್ಷಣವೇ ಆತನ ಹೃದಯದ ಚಿಕಿತ್ಸೆ ಕೈಗೊಳ್ಳಬೇಕು ಬೇರೆ ಮಾತೇ ಇಲ್ಲ. ಆದರೂ ಆತನಿಗೆ ಕೋವಿಡ್ ಟೆಸ್ಟ್ ಮಾಡಿಸಿಕೊಂಡು ಬರಲು ಹೇಳಲಾಗುತ್ತದೆ. ಅನಿವಾರ್ಯವಾಗಿ ಆತ ಕೋವಿಡ್ ಪರೀಕ್ಷೆಗೆಂದು ಸರ್ಕಾರಿ ಆಸ್ಪತ್ರೆಗೆ ಹೊರಡಲು ಆಸ್ಪತ್ರೆಯಿಂದ ಹೊರಗೆ ಬಂದು ಬೈಕ್ ಹತ್ತುವಷ್ಟರಲ್ಲಿ ತೀವ್ರ ಹೃದಯಾಘಾತದಿಂದ ನಿಧನ ಹೊಂದುತ್ತಾನೆ.

ಒಬ್ಬ ವ್ಯಕ್ತಿ ಮೊಣಕಾಲು ನೋವೆಂದು ವೈದ್ಯರ ಹತ್ತಿರ ಬಂದಾಗ ಮೊದಲು ಕೋವಿಡ್ ಪರೀಕ್ಷೆ ಮಾಡಬೇಕು ಎಂದು ಅವನನ್ನು ಗಾಡಿ ಹತ್ತಿಸಿಕೊಂಡು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆ. ಆತನ ಮನೆಯವರಿಗೂ ಏನು ಎತ್ತ ಎಂದು ತಿಳಿಯದಿದ್ದಾಗಲೇ ಆತನ ಹೆಣ ಮನೆಗೆ ಬರುತ್ತದೆ.

- Advertisement -

ಇನ್ನೊಬ್ಬ ಸಣ್ಣಗೆ ಜ್ವರ ಬಂದಿದ್ದರಿಂದ ತಪಾಸಣೆಗೆಂದು ದವಾಖಾನೆಗೆ ಹೋದರೆ ಎರಡೇ ದಿನಗಳಲ್ಲಿ ಆತನ ಹೆಣ ಕೂಡ ಮನೆಯವರ ಸುಪರ್ದಿಗೆ ಬರದೇ ನೇರವಾಗಿ ಮಸಣ ಸೇರುತ್ತದೆ.

ಇಂಥವೇ ಹಲವಾರು ಉದಾಹರಣೆಗಳು ಕೊರೋನಾ ಎಂಬ ಮಹಾಮಾರಿ ಕಾಲಿಟ್ಟಾಗಿನಿಂದ ನಮ್ಮ ನಿಮ್ಮೆಲ್ಲರ ಗಮನಕ್ಕೆ ಬರುತ್ತಿವೆ. ಇಲ್ಲಿ ಯಾರ ಹೊಣೆಗಾರಿಕೆಯಲ್ಲಿ ತಪ್ಪಿದೆ ಎಂಬುದು ಪ್ರಶ್ನೆ. ಒಬ್ಬ ರೋಗಿ ವೈದ್ಯರ ಹತ್ತಿರ ಬಂದಾಗ ಮೊದಲು ಆತನನ್ನು ಮಾನಸಿಕವಾಗಿ ಗಟ್ಟಿ ಮಾಡಿ ಆತನಿಗೆ ಟ್ರೀಟ್ಮೆಂಟ್ ಕೊಡುವುದು ನಾರಾಯಣ ರೂಪಿಯಾದ ವೈದ್ಯರ ಕರ್ತವ್ಯ. ಕೊರೋನಾ ಎಂಬುದು ಆತನಿಗೆ ದೃಢಪಟ್ಟಾಗ ಅದೇನು ಅಂಥ ಮಹಾರೋಗವಲ್ಲ ನಾವಿದ್ದೇವೆ. ಹೆದರಬೇಡ ಎಂದು ಆತನಿಗೆ ಧೈರ್ಯ ಹೇಳಿ ಉಪಚಾರ ಮಾಡುವುದೆಂಬುದನ್ನು ನಾವೆಲ್ಲರೂ ವೈದ್ಯರು, ಆರೋಗ್ಯ ಕಾರ್ಯಕರ್ತರಿಂದ ನಾವೆಲ್ಲ ನಿರೀಕ್ಷೆ ಮಾಡುತ್ತೇವೆ. ಆದರೆ ಈಗ ಆಗುತ್ತಿರುವುದೇನ?

ಈಗ ನೂರುಗಟ್ಟಲೆ ಸಾವುಗಳು ಸಂಭವಿಸುವುದರಲ್ಲಿ ವಾರಿಯರ್ಸ ಎಂದು ಕರೆಯಲ್ಪಡುವ ವೈದ್ಯರ, ಆರೋಗ್ಯ ಕಾರ್ಯಕರ್ತರ ಪಾತ್ರವನ್ನು ಹೇಗೆ ವಿಶ್ಲೇಷಿಸುವುದು ? ಮೊದಲನೆಯದು, ಕೊರೋನಾ ಇದೆ ಎಂದ ತಕ್ಷಣ ರೋಗಿಯ ತಲೆಯ ಮೇಲೆ ಆಕಾಶ ಬೀಳಿಸುವುದು, ಸಾಧ್ಯವಾದಷ್ಟು ಪ್ರಮಾಣದಲ್ಲಿ ದುಡ್ಡು ಪೀಕುವುದು, ೩ ಸಾವಿರದ ರೆಮ್ಡಿಸಿವಿರ್ ಔಷಧವನ್ನು ೨೭ ಸಾವಿರಕ್ಕೆ ಮಾರಿ ತಾನೇನೋ ಮಹದುಪಕಾರ ಮಾಡಿದೆನೆಂಬ ಭಾವನೆ ಮೂಡಿಸುವುದು, ಆಸ್ಪತ್ರೆಯಲ್ಲಿ ಬೆಡ್ ಇಲ್ಲ ಎಂದು ಮೊದಲು ಭಯ ಹುಟ್ಟಿಸಿ ಹಣ ಸಿಗುವಂತಿದ್ದರೆ ಬೆಡ್ ನೀಡುವುದು, ಪ್ರಾಣವಾಯುವಾದ ಆಮ್ಲಜನಕದ ಕೊರತೆ ತೋರಿಸಿ ರೋಗಿಯೇ ಎದೆ ಒಡೆದು ಸಾಯುವಂತೆ ಮಾಡುವುದು……

- Advertisement -

ಇವೇ ಮುಂತಾದ ಮಾನವೀಯತೆ ವಿರೋಧಿಯಾದ ಕೃತ್ಯಗಳು ಸೋ ಕಾಲ್ಡ್ ವಾರಿಯರ್ಸ್ ಗಳಿಂದ ನಡೆಯುತ್ತಿವೆ ಎಂದರೆ ತಪ್ಪಲ್ಲ. ಇವರು ಪರಿಸ್ಥಿತಿಯನ್ನು ಯಾವ ಮಟ್ಟಕ್ಕೆ ತಂದಿಟ್ಟಿದ್ದಾರೆಂದರೆ ಒಬ್ಬ ವ್ಯಕ್ತಿಗೆ ಕೊರೋನಾ ಪಾಸಿಟಿವ್ ಬಂದರೆ ಸಾಕು ಆತ ಆಸ್ಪತ್ರೆಯಿಂದ ಮನೆಗೆ ವಾಪಸಾದರೆ ಮರುಜನ್ಮ ಸಿಕ್ಕಂತೆ ಇಲ್ಲವಾದರೆ ವೈಕುಂಠವೋ, ಕೈಲಾಸವೋ….ಗತಿಯೇ.

ಎಲ್ಲಿಗೆ ಬಂದು ನಿಂತಿದೆ ಮಾನವೀಯತೆ ? ಯಾರನ್ನು ನಾವು ದೇವರೆಂದು ಪೂಜಿಸುತ್ತೇವೆಯೋ ಅವರೇ ಇಂದು ಸಾವಿನ ದಲ್ಲಾಳಿಗಳಾಗಿದ್ದು ಅತ್ಯಂತ ದುರಂತ. ದುಡ್ಡೆನ್ನುವುದು ಏನೇನೋ ಮಾಡಿಸುತ್ತದೆ ನಿಜ ಆದರೆ ಮಾನವೀಯತೆ, ದೈವತ್ವದಿಂದ ತುಂಬಿ ತುಳುಕಬೇಕಾಗಿದ್ದ ವ್ಯಕ್ತಿಗಳನ್ನೂ ಅದು ರಾಕ್ಷಸರನ್ನಾಗಿ ಮಾಡಿದೆಯೆಂದರೆ ದುಡ್ಡಿನ ಮಹಿಮೆ ಎಂಥದಿರಬೇಡ ! ಆದರೂ ದುಡ್ಡೆನ್ನುವುದನ್ನು ನಾವು ನ್ಯಾಯವಾಗಿ ಗಳಿಸಿದಾಗ ಮಾತ್ರ ಅದು ಒಳ್ಳೆಯ ಪರಿಣಾಮ ನಮ್ಮ ಜೀವನದ ಮೇಲೆ ಬೀರುತ್ತದೆಯಂತೆ. ಅನ್ಯಾಯದ ಗಳಿಕೆಯ ದುಡ್ಡು ಸೆರಗಿನ ಕೆಂಡದಂತೆ. ಆದರೇನು ಮಾಡುವುದು ? ಹೆಣಗಳ ಮೇಲೆ ದುಡ್ಡು ಗಳಿಕೆಗೆ ನಿಂತ ಮನುಷ್ಯ ( ?) ಇವ್ಯಾವುದನ್ನೂ ನೋಡುವ ಪರಿಸ್ಥಿತಿಯಲ್ಲಿ ಇರುವುದಿಲ್ಲ. ಆತನಿಗೆ ದುಡ್ಡೇ ಮುಖ್ಯ. ಈಗಿನ ಸಮಯದಲ್ಲಿ ದುಡ್ಡು ಬೇಕು ಅಷ್ಟೇ. ಅದು ಕೊರೋನಾ ಹೆಸರಿನಲ್ಲಿಯೇ ಆಗಲಿ, ಇನ್ಯಾವುದರ ಮೂಲಕವೇ ಆಗಲಿ.

ಆದರೆ…..

ತನ್ನ ಜೀವ ಸವೆಸಿ, ಜತನದಿಂದ ಕಾಯ್ದುಕೊಂಡು ಬಂದ ಹಣವನ್ನು ಒಂದಕ್ಕೆ ಹತ್ತರಷ್ಟು ಪ್ರಮಾಣದಲ್ಲಿ ವಿನಾಕಾರಣ ಅಯೋಗ್ಯರಿಗೆ ನೀಡಬೇಕಾಗುತ್ತದಲ್ಲ. ಆ ಸಮಯದಲ್ಲಿ ಆ ರೋಗಿಯಾದವನ ಮನಸ್ಸು ಮತ್ತು ಶರೀರದಲ್ಲಿ ಆಗುವ ಅಲ್ಲೋಲ ಕಲ್ಲೋಲವನ್ನು ಶಬ್ದಗಳಲ್ಲಿ ವರ್ಣಿಸಲಾಗುವುದಿಲ್ಲ. ಮೊದಲಾಗಿ ಆಸ್ಪತ್ರೆಯ ಬಿಲ್ ಮೊತ್ತ ಕೇಳಿಯೇ ಹೃದಯ ಒಡೆದುಕೊಂಡು ಬೆಡ್ ಮೇಲೆ ಮಲಗಿದ ವ್ಯಕ್ತಿ ಯಾವ ಆಧಾರದಿಂದ ಹುಷಾರಾಗಿ ಬರುತ್ತಾನೆಂದು ನಿರೀಕ್ಷಿಸುವುದು ? ತಾನು ಗಳಿಸಿದ ದುಡ್ಡನ್ನು ಆತ ತನಗಾಗಿ ಇಟ್ಡುಕೊಂಡಿರುವುದಿಲ್ಲ ತನ್ನ ಮಕ್ಕಳ ಭವಿಷ್ಯಕ್ಕಾಗಿ, ತಾನು ಸತ್ತರೆ ತನ್ನ ಕುಟುಂಬದ ರಕ್ಷಣೆಗಾಗಿ ಅಂತ ಗಳಿಸಿಟ್ಟಿದ್ದನ್ನು ಈಗ ತಾನೇ ತನಗಾಗಿ ರೋಗದ ರೂಪದಲ್ಲಿ ಕಳೆದುಕೊಳ್ಳಬೇಕಾಯಿತಲ್ಲ ಅದೂ ಒಂದಕ್ಕೆ ಹತ್ತು ಪಟ್ಟು ! ಆ ಜೀವಕ್ಕೆ ಹೇಗಾಗಿರಬೇಡ !

ಉಮೇಶ ಬೆಳಕೂಡ, ಮೂಡಲಗಿ

- Advertisement -
- Advertisement -

Latest News

ಕನ್ನಡಕ್ಕಾಗಿ ಇನ್ನೂ ಹೋರಾಡಬೇಕಾಗಿರುವುದು ವಿಷಾದನೀಯ – ಚಂದ್ರಶೇಖರ ಅಕ್ಕಿ

ಬೆಳಗಾವಿ ಜಿಲ್ಲಾ ೧೬ ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಸಂದರ್ಶನ ಮೂಡಲಗಿ - ಬೆಳಗಾವಿ ಜಿಲ್ಲಾ ೧೬ ನೇ ಸಾಹಿತ್ಯ ಸಮ್ಮೇಳನವು ಇದೇ ದಿ. ೨೩ , ೨೪...
- Advertisement -

More Articles Like This

- Advertisement -
close
error: Content is protected !!
Join WhatsApp Group