ಕೊರೋನಾ ಎಂಬ ಮಹಾಮಾರಿಯ ವಿರುದ್ಧ ಹೋರಾಡಲು ಮುಖಕ್ಕೆ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತ್ಯಂತ ಪರಿಣಾಮಕಾರಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ.
ಇವು ವೈರಾಣು ಒಬ್ಬರಿಗೆ ಹರಡದಂತೆ ಸಹಕಾರಿಯಾಗುತ್ತವೆ. ಆದರೆ ಎಲ್ಲ ಮಾಸ್ಕ್ ಗಳು ಹಾಗಲ್ಲ.
ಪ್ರತಿದಿನ ನೀವು ಮನೆಯಿಂದ ಹೊರಬರಬೇಕಾದರೆ ಮಾಸ್ಕ್ ಧರಿಸಲೇಬೇಕು. ಪೊಲೀಸರು ಕೂಡ ಮಾಸ್ಕನ್ನು ಕಡ್ಡಾಯ ಮಾಡಿ ಬಿಟ್ಟಿದ್ದಾರೆ. ಆದ್ದರಿಂದ ಮಾಸ್ಕ್ ಧರಿಸಲೇಬೇಕು. ಆದರೆ WHO ಶಿಫಾರಸು ಮಾಡಿದಂತೆ ಮಾಸ್ಕ್ ಎನ್ನುವುದು ಮೂರು ಪದರಗಳನ್ನು ಹೊಂದಿರಬೇಕು ಎಂಬುದನ್ನು ನೀವು ತಿಳಿದಿರಬೇಕು. ಶೇ. 100 ರಷ್ಟು ಕಾಟನ್ ಮಾಸ್ಕ್ ಗಳು ಕೋವಿಡ್19 ವಿರುದ್ಧ ರಕ್ಷಣೆ ಮಾಡಿಕೊಳ್ಳಲು ತುಂಬ ಉಪಯುಕ್ತ ಎಂದು ಅಧ್ಯಯನವೊಂದು ಹೇಳಿದೆ. ಅಲ್ಲದೆ ನಿಮ್ಮ ಮಾಸ್ಕ್ ನಿಮ್ಮ ಮುಖಕ್ಕೆ ಸರಿಯಾಗಿ ಹೊಂದಾಣಿಕೆಯಾಗಬೇಕು. ಅದು ನಿಮ್ಮ ಎರಡೂ ಗಲ್ಲಗಳನ್ನು ಮುಚ್ಚಿ ಕೆಳಗದ್ದವನ್ನೂ ಮುಚ್ಚುವಂತಿರಬೇಕು. ತುಂಬ ಸಡಿಲವಾಗಿರುವ ಮಾಸ್ಕ್ ಆಗಿದ್ದರೆ ಉಪಯೋಗಕ್ಕೆ ಬಾರದಿರಬಹುದು. ತುಂಬ ಬಿಗಿಯಾಗಿದ್ದರೆ ಉಸಿರಾಟದ ತೊಂದರೆ ಬರಬಹುದು ಆದ್ದರಿಂದ ಮಾಸ್ಕ್ ಸರಿಯಾದ ಅಳತೆಯಲ್ಲಿರುವಂತೆ ನೋಡಿಕೊಳ್ಳುವುದು ಅಗತ್ಯ.
ಮಾಸ್ಕ್ ಬಗ್ಗೆ ಕೆಲವು ಉಪಯುಕ್ತ ಸಲಹೆಗಳನ್ನು ಪರಿಗಣಿಸಬಹುದು:
೧) ಮಾಸ್ಕ್ ಹಾಕಿಕೊಂಡ ಮೇಲೆ ಅದನ್ನು ಮೇಲಿಂದ ಮೇಲೆ ಮುಟ್ಟಬಾರದು. ಹಾಗೆ ಮುಟ್ಟುವುದರಿಂದ ಸೋಂಕು ಹೆಚ್ಚಾಗುವ ಸಂಭವವಿದೆ ಇದರಿಂದ SARS- COV- 2 ಸೋಂಕು ತಲೆಹಾಕುತ್ತದೆ. ಅದಕ್ಕಾಗಿ ಮುಖ ಮುಟ್ಟಿಕೊಳ್ಳುವ ಚಟ ಇದ್ದರೆ ಈಗಲೇ ಬಿಟ್ಟುಬಿಡಿ.
೨) ಸೋಂಕಿನ ಕಣಗಳು ಎಲ್ಲ ವಸ್ತುಗಳ ಮೇಲೆ ಕುಳಿತಿರುತ್ತವೆ. ಮಾಸ್ಕ್ ಗಳೂ ಇದಕ್ಕೆ ಹೊರತಾಗಿಲ್ಲ. ಇಡೀ ದಿನ ಒಂದೇ ರೀತಿಯ ಹಾಗೂ ಬಿಟ್ಟೂ ಬಿಡದೆ ಮಾಸ್ಕ್ ಧರಿಸುವುದರಿಂದ COVID ಕಣಗಳು ಸೇರುವ ಅಪಾಯವಿದೆ.
೩) ಬೇಸಿಗೆಯ ದಿನಗಳಲ್ಲಷ್ಟೇ ಅಲ್ಲದೆ ಯಾವಾಗಲೂ ಮಾಸ್ಕ್ ಹಾಕುವುದರಿಂದ ಬೆವರಿನಿಂದ ಅದು ತೋಯಬಹುದು. ಆದರೆ ತೋಯ್ದ ಮಾಸ್ಕ್ ವೈರಸ್ ಹೆಚ್ಚಾಗಲು ಕಾರಣವಾಗುತ್ತದೆ. ಆದ್ದರಿಂದ ಮಾಸ್ಕ್ ಹಸಿಯಾಗಿದ್ದರೆ ಬೇಗ ಅದನ್ನು ತೆಗೆದುಹಾಕಿ ಬೇರೆ ಒಂದು ಫ್ರೆಶ್ ಮಾಸ್ಕ್ ಹಾಕಿಕೊಳ್ಳಿ.
೪) ಮೂಗು ಮುಚ್ಚಿರಲೇಬೇಕು. ಕೆಲವರು ಮಾಸ್ಕನ್ನು ಮೂಗಿನ ಕೆಳಗೇ ಧರಿಸಿರುತ್ತಾರೆ. ಆದರೆ ಮೂಗು ಮುಚ್ಚಿರುವುದು ತುಂಬಾ ಅಗತ್ಯ. ಉಸಿರಾಟದಿಂದಲೇ ಸೋಂಕು ತಗಲುವ ಅಪಾಯ ಜಾಸ್ತಿ. ಆದ್ದರಿಂದ ಮೂಗು ತೆರೆದ ಮಾಸ್ಕ್ ಧರಿಸಿ ಉಪಯೋಗವಿಲ್ಲ
೫) ಮಾತಾಡುವಾಗ ಮಾಸ್ಕನ್ನು ಕೆಳಗೆ ಜಗ್ಗಿ ಮಾತನಾಡುವುದು ಅಪಾಯಕ್ಕೆ ಆಹ್ವಾನ ಕೊಟ್ಟಂತೆ. ಎದುರಿಗಿನ ವ್ಯಕ್ತಿ ಸೋಂಕಿತನಾಗಿದ್ದರೆ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆ ಆದ್ದರಿಂದ ಮಾತಾಡುವಾಗ ಮಾಸ್ಕ್ ಹಾಕಿಕೊಂಡೇ ಮಾತನಾಡಿ.
೬) ಮಾಸ್ಕ್ ಹಾಕಿಕೊಂಡ್ರಿ ಆದರೆ ಅದನ್ನು ತೆಗೆಯುವಾಗ ಹುಷಾರು ! ಅದರಲ್ಲೇನಿದೆ ಎನ್ನಬೇಡಿ. ಮಾಸ್ಕನ್ನು ಹೇಗೆಂದರೆ ಹಾಗೆ ತೆಗೆಯಬಾರದು. ಅದರ ಎಲಾಸ್ಟಿಕ್ ಕಿವಿಯ ಹಿಂದೆ ಇರುತ್ತದೆ ತಾನೆ? ಮಾಸ್ಕ್ ತೆಗೆಯುವಾಗ ನಿಮ್ಮ ಕೈ ಮುಖವನ್ನು ಟಚ್ ಮಾಡಲೇಬಾರದು. ಇದರಿಂದ ಸೋಂಕು ತಗಲುವ ಅಪಾಯವಿದೆ. ಅದಕ್ಕಾಗಿ ಮಾಸ್ಕ್ ತೆಗೆದು ಸೋಂಕು ನಿವಾರಣೆ ಮಾಡಿ ಆಮೇಲೆ ಮತ್ತೆ ಧರಿಸಬಹುದು.
೭) ಮಾಸ್ಕ್ ಸೋಂಕು ನಿವಾರಣೆಯಾಗಬೇಕಾದರೆ ಸೋಪು ಹಚ್ಚಿ ಚೆನ್ನಾಗಿ ತಿಕ್ಕಿ ಬಿಸಿ ನೀರಿನಲ್ಲಿ ತೊಳೆಯಬೇಕು. ಆಮೇಲೆ ಐದು ನಿಮಿಷ ಇಸ್ತ್ರಿ ಮಾಡಬೇಕು. ನಂತರ ಧರಿಸಬಹುದು. ಯಾವುದೇ ಕಾರಣಕ್ಕೂ ಈ ಪದ್ಧತಿಯನ್ನು ಬಿಡಬೇಡಿ.
ಕೋವಿಡ್ 19 ರ ಕಾಲದಲ್ಲಿ ನಾವು ಎಷ್ಟು ಎಚ್ಚರಿಕೆಯಿಂದ ಇದ್ದರೂ ಕಡಿಮೆಯೇ. ಅದು ಯಾವ ರೂಪದಲ್ಲಿ, ಯಾರ ರೂಪದಲ್ಲಿ ಬರುತ್ತದೆಯೋ ಗೊತ್ತಿಲ್ಲ. ಆದ್ದರಿಂದ ನಮ್ಮ ಹಾಗೂ ಪರಿವಾರದವರ ರಕ್ಷಣೆಗಾಗಿ ನಾವು ಹೆಜ್ಜೆ ಹೆಜ್ಜೆಗೂ ಎಚ್ಚರವಾಗಿಬೇಕಾಗುತ್ತದೆ. ಅವುಗಳಲ್ಲಿ ಈ ಮಾಸ್ಕ್ ಧರಿಸುವುದೂ ಒಂದು ಸರಿಯಾದ ಹೆಜ್ಜೆ.
ಮಾಸ್ಕ್ ಧರಿಸಿ, ಅಂತರ ಕಾಪಾಡಿ, ಕೊರೋನಾ ಸೋಲಿಸಿ