ರವಿವಾರದ ಕವನಗಳು

Must Read

ಪ್ರಿಯದರ್ಶಿನಿಗೆ…

ಬೆಡಗು ಬೆರಗಿನ ಹಾಯ್ ಹಲೋಗಳ ಮಧ್ಯೆ
ಅಂದು ನಾ ನಿನ್ನ ಗುರುತಿಸಿದೆ
ನನಗೂ ನಿನಗೂ ಇಲ್ಲ
ಯಾವ ಜನ್ಮದ ನಂಟು
ಆದರಿದೋ ಬಿದ್ದಿದೆ
ನಮ್ಮ ಸ್ನೇಹಕ್ಕೆ ಗಂಟು

ನೀಳದ ನವಿರಾದ
ಆ ಕೇಶರಾಶಿ
ಸೆಳೆಯುತಿರೆ ನಯನಗಳು
ಸ್ನೇಹ ಸೂಸಿ
ಚೈತನ್ಯ ಪುಟಿಯುವ
ಸೌಮ್ಯ ವದನ
ಲತೆಯ ಸೊಬಗಿನ ಭಾವ
ಬಂಧುರದ ಸದನ

ಸ್ನೇಹ ಸಂಪತ್ತಿಗೆ
ನೀ ಮಾರ್ಗದರ್ಶಿ
ಅರಳಿದ ಕಣ್ಣುಗಳೇ
ಹೇಳುತಿವೆ ಸಾಕ್ಷಿ
ಮನನೋಯಿಸುವವರ
ಕಂಡು ನೀನು
ಬೇನೆ ಬೇಸರಿಕೆಗಳು
ಬಾರದೇನು?

ನಿನ್ನ ನುಡಿಯಲಿ
ಜೇನಿನಮೃತದ ಸವಿಯು
ನಿನ್ನ ಬಣ್ಣಿಸಲೆಂದೇ
ಆಗುವೆನು ಕವಿಯು
ಗೆಳತಿಯೇ ಹಾರೈಸುವೆ
ನಾನು ಇಂದು
ಸ್ನೇಹದ ಲತೆಯು ತಾ
ಪಲ್ಲವಿಸಲೆಂದು

ಶೈಲಜಾ.ಬಿ. ಬೆಳಗಾವಿ


ಬಾಳ ದೋಣಿ

ಬಾಳ ದೋಣಿ ಸಾಗಿದೆ
ಭರವಸೆಯ ತೆರೆಯ ಮೇಲೆ

ನೀರ ಅಲೆಯ ಉಂಗುರ
ಸುತ್ತು ಹಾಕಿ ಬಂದಂತೆ
ಬಾಳ ಪಥವು ಸಾಗಿದೆ
ಅದರ ತೆರದಿ ಸುತ್ತುತ್ತ.

ನಾನು ನೀನು ಅವರು
ಇವರು ಇಲ್ಲ ನಿನ್ನವರು
ಬರಿ ಮೌನ ರಾಗಗಳು
ಮೂಡಿವೆ ಎಲ್ಲರಲೂ

ಸಿರಿ ಸಂಪದ ಬೇಡವೆ
ಜಾಲಿ ಜೀವನ ಮನ
ಮುದುಡಿಸದೆ ಹೆಜ್ಜೆಇಡಿ
ಮನದಿ ತಲ್ಲಣ ನೂಕಿಬಿಡಿ.

ನಿನ್ನ ಜೊತೆ ನಾನು
ನನ್ನಜೊತೆ ನೀನು
ಜೀವನ ಹಾಲು ಜೇನು
ಇರಲಿ ಜೀವಕ್ಕೆ ಜೀವ ನೀನು

ದೋಣಿ ಸಾಗಲೆಬೇಕು
ಬದುಕು ದಡಸೇರಲೇ ಬೇಕು
ಪ್ರೀತಿ ಶುದ್ದವಾಗಿರಬೇಕು
ನಾನೀನು ಜೊತೆ ಇರಬೇಕು.

ಲಲಿತಾ ಕ್ಯಾಸನ್ನವರ


ತ್ಯಾಗವೇ ಜೀವನ

(ಹೋಲಿಕೆ..ಒಂದೇ ಕುಂಡದ ಎರಡು ಗಿಡ, ಅಣ್ಣ ತಮ್ಮ ಅಕ್ಕತಂಗಿ, ಗಂಡ ಹೆಂಡತಿ, ಗುರು ಶಿಷ್ಯ)

*ನಾನೋ ನೀನೋ ಅನ್ನುತಲಿದ್ದವು*
*ಒಂದೇ ಕುಂಡದಿ ಎರಡು ಗಿಡ*
*ಇರುವುದರಲ್ಲೇ ಬದುಕಲೆ ಬೇಕು*
*ಸೊರಗಿತು ಒಂದರ ಬೇರ ಬುಡ//೧//*

*ಹುಯ್ಯುವ ನೀರದು ಎರಡಕು ಅಹುದೂ*
*ಸಣಕಲು ಗಿಡದಾ ಬೇರೆಲ್ಲಿ???*
*ಸಣಕಲು ಆದ ಗಿಡವೂ ಅಂದಿತು*
*ನಾನೂ ಹರಡಲು ಜಾಗವೆಲ್ಲಿ???//೨//*

*ನನ್ನದೆ ಉಸಿರನು ನೀನೇ ತೆಗೆದುಕೋ*
*ನಿನ್ನದೆ ಬೇರದೋ ಹರಡಲಿಲ್ಲೀ*
*ತ್ಯಾಗದಿ ಎಲ್ಲವ ನಿನಗೇ ಬಿಡುವೆನು*
*ನೀನೇ ಬೆಳೆಯುತ* *ಹೋಗಿಲ್ಲೀ//೩//*

*ನಾನೇ ನಿನಗಿದೊ ಗೊಬ್ಬರವಾಗುವೆ*
*ನನ್ನಯ ಸತ್ವವ ಹೀರಿಲ್ಲಿ…*
*ಪರಿಮಳ ಹೂವನು ಬಿಡುತಲಿ ನೀನೂ*
*ದೇವರ ಪೂಜೆಗೆ ಸೇರಿಲ್ಲೀ/*

ಶಾಂತಾ ಕುಂಟಿನಿ (ಶಕುಂತಲಾ)


ಒಂದು ಭಾವಗೀತೆ

*ಮೌನಿಯಾದೆ ಏಕೆ ನೀನು*
*ನನ್ನ ಒಳಗೆ ಇಲ್ಲವೇ??*
*ಬಂದ ದಾರಿ ಏಕೆ ಮರೆತೆ*
*ಮರಳಿ ಬರುವುದಿಲ್ಲವೇ/೧*

*ಅಂದುಯಾಕೆಬಂದೆನೀನು*
*ಹೇಳಿ ಹೋಗು ಕಾರಣ??*
*ಇಲ್ಲಿ ನಿಲ್ಲದಿರಲು ಎನ್ನ*
*ಮನಸಿಗೇಕೆ ತೋರಣ//೨//*

*ಸಾಕು ಎಂಬ ಬದುಕಿಗಿಲ್ಲಿ*
*ಬಂದೆಯಂದು ಬೆಳಕಿನಂತೆ*.
*ಉರಿಸಿಹೋದಎನ್ನಮನದ*
*ಭಾವದೀಪಉರಿಯಿತಿಲ್ಲಿ/೩*

*ಹಾಡಿ ನಲಿದ ವೇಳೆಯಲ್ಲಿ*
*ಮಿಂಚಿ ಹೋದ ಸ್ನೇಹ ಬಳ್ಳಿ*
*ಕಡಿಯಬೇಡ ಒಲವ ಇಲ್ಲಿ*
*ತಂಪನೆರೆಬಾ ಮಾತಿನಲ್ಲಿ/೪*

ಶಾಂತಾ ಕುಂಟಿನಿ

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group