spot_img
spot_img

ಸಾಹಿತ್ಯಲೋಕದ ಧ್ರುವತಾರೆ, ಖ್ಯಾತ ಸಂಶೋಧಕ ಡಾ. ಬಿ.ವ್ಹಿ.ಶಿರೂರ

Must Read

- Advertisement -

ಇಂದು ನಾಡಿನ ಖ್ಯಾತ ವಿದ್ವಾಂಸರು,ಸಂಶೋಧಕರಾದ ಡಾ.ಬಿ.ವ್ಹಿ.ಶಿರೂರ ಗುರುಗಳ ಜನ್ಮದಿನ.ಈ ಇಳಿ ವಯಸ್ಸಿನಲ್ಲಿಯೂ ಅವರು ಕಂಪ್ಯೂಟರ್‍ನಲ್ಲಿ ಟೈಪಿಸುತ್ತ ಬರವಣಿಗೆ ಅಧ್ಯಯನ ಪೂರಕ ಗ್ರಂಥಗಳ ಪ್ರಕಟಣೆಯಲ್ಲಿ ತೊಡಗಿರುವರು.ನಮ್ಮ ಬದುಕಿನಲ್ಲಿ ನಮಗೆ ಅನೇಕ ಹಿರಿಯರು ಅವರ ವ್ಯಕ್ತಿತ್ವದ ಮೂಲಕ ಮಹನೀಯರಾಗಿ ಮನದಲ್ಲಿ ಉಳಿಯುತ್ತಾರೆ. ಅವರ ಆದರ್ಶದ ಬದುಕು ನಮಗೆ ದಾರಿದೀಪವಾಗುತ್ತದೆ. ಗಾಂಧಿವಾದಿ ಶಿರೂರ ವೀರಭದ್ರಪ್ಪನವರು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಆಡೂರಿನವರು. ಇವರು ಸ್ವಾತಂತ್ಯ ಹೋರಾಟಗಾರರು ಮತ್ತು ಕರ್ನಾಟಕ ಏಕೀಕರಣ ಹೋರಾಟಗಾರರು, ಮಾಜಿ ಶಾಸಕರು. ವಿಧಾನಸಭೆಯ ವಿರೋಧಪಕ್ಷದ ಉಪನಾಯಕರಾಗಿ, ಹೈದ್ರಾಬಾದ್ ಕರ್ನಾಟಕ ವಿಮೋಚನ ಹೋರಾಟಗಾರರಾಗಿ ಬದುಕಿ ಬಾಳಿದವರು. ಇವರು ಹರ್ಡೇಕರ್ ಮಂಜಪ್ಪನವರ ಜೀವನಚರಿತ್ರೆ, ಬಸರೀಗಿಡದ ವೀರಪ್ಪನವರ ಅಭಿನಂದನ ಗ್ರಂಥ ಹೊರತಂದವರು.

1932 ರಲ್ಲಿ “ಲೋಕವಾಣಿ” ಪತ್ರಿಕೆಯನ್ನು ಪ್ರಾರಂಭಿಸಿದರು. ಲೋಕಸೇವಾಸಂಘದ ಕಾರ್ಯದರ್ಶಿಯಾಗಿ, ಅದರ ಅಧ್ಯಕ್ಷರಾಗಿ ಅದೇ ಪಕ್ಷದಿಂದ ವಿಧಾನಸಭೆಯ ಸದಸ್ಯರಾಗಿ ಆಯ್ಕೆಯಾದ ಇವರದು ತ್ಯಾಗಮಯ ಬದುಕು, ಇಂದಿನ ರಾಜಕಾರಣಿಗಳಿಗೆ ಮಾದರಿ. ಸ್ವತಃ ಮಗಳ ಗಂಡ ತಪ್ಪು ಮಾಡಿದ್ದನ್ನು ಖಂಡಿಸಿದವರು ಇವರು.

ಇವರ ಆರು ಜನ ಮಕ್ಕಳಲ್ಲಿ ಎರಡನೆಯವರು ಡಾ.ಬಿ.ವ್ಹಿ.ಶಿರೂರವರು. ನಿಷ್ಟಾವಂತ ರಾಜಕಾರಣಿಯ ಮಗನಾಗಿ ಬದುಕಿನಲ್ಲಿ ಅನೇಕ ನೋವು ನಲಿವುಗಳನ್ನು ಉಂಡು, ನಿವೃತ್ತರಾಗಿ ಈಗ ಹುಬ್ಬಳ್ಳಿಯಲ್ಲಿ ವಿಶ್ರಾಂತ ಜೀವನ ಕಳೆಯುತ್ತಿರುವ ಸಂಶೋಧಕ ಡಾ. ಬಿ. ವ್ಹಿ. ಶಿರೂರ ಅವರ ಪರಿಚಯವಾದದ್ದು ಆತ್ಮೀಯ ಸಹೃದಯ ಸ್ನೇಹಿತ ಡಾ.ವ್ಹಿ.ಬಿ.ಸಣ್ಣಸಕ್ಕರಗೌಡರ ಅವರ ಮೂಲಕ. ನನ್ನ ‘ಪಯಣಿಗ’ ಕೃತಿಗೆ ಮುನ್ನುಡಿ ಬರೆದುಕೊಡುವಂತೆ ಹಿರಿಯರನ್ನು ಕೇಳಿಕೊಳ್ಳಲು ಅವರ ಮನೆಗೆ ಹೋದಾಗ ಮಹಡಿಯ ಮೇಲಿನ ಕೊಠಡಿಯಲ್ಲಿ ಕಂಪ್ಯೂಟರ್ ಮುಂದೆ ಕುಳಿತು ತಮ್ಮ ತಂದೆಯವರ ಕೃತಿಯನ್ನು ಟೈಪ್ ಮಾಡುತ್ತಿದ್ದರು. ಅವರು ಈ ವಯಸ್ಸಿನಲ್ಲಿ ಸ್ವತಃ ಟೈಪ್ ಮಾಡುತ್ತಿರುವುದನ್ನು ಕಂಡು ಅಚ್ಚರಿಯಾಯಿತು.

- Advertisement -

ಪ್ರೀತಿಯಿಂದ ಮಾತನಾಡಿಸಿದರು. ನನ್ನ ಕೃತಿಯ ಕುರಿತು ನಾನು ತಂದಿದ್ದ ಹೊತ್ತಿಗೆಯನ್ನು ಅವರ ಕೈಗೆ ನೀಡಿ ಆಶೀರ್ವದಿಸಲು ಕೋರಿದೆ. ನಗುಮೊಗದಿಂದ ಆಯಿತು, ಬರೆದು ಕಳಿಸುವೆ ಎಂದರು. ಕೇವಲ ಒಂದು ವಾರದೊಳಗೆ ನನ್ನ ಮೇಲ್‍ವಿಳಾಸಕ್ಕೆ ಮುನ್ನುಡಿ ಬರೆದು ಕಳಿಸಿದರು. ಅವರ ಆ ಕಾರ್ಯದಕ್ಷತೆ ಕಂಡು, ನಾನು ಏನೂ ಮಾತು ಹೊರಡದ ಮೂಕನಂತಾಗಿದ್ದೆ. ಚಿಕ್ಕ ಚೊಕ್ಕ ಮುನ್ನುಡಿಯದು. ಹಿರಿಯರ ಹಾರೈಕೆ ಅದರಲ್ಲಿತ್ತು. ಹಿರಿಯ ಅಧ್ಯಾಪಕರ ಮುನ್ನುಡಿ ದೊರೆಯಲು ಕಾರಣರಾದ ಡಾ.ವ್ಹಿ.ಬಿ.ಸಣ್ಣಸಕ್ಕರಗೌಡರನ್ನು ನೆನೆದಿದ್ದೆ.

ನಾನು ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಪಿಎಚ್.ಡಿ ಅಧ್ಯಯನಕ್ಕೆ ಸೇರಿದ ನಂತರ ನನಗೆ ಹಲವು ಸಂಗತಿಗಳ ಕುರಿತು ಗುರುಗಳ ಸಂಪರ್ಕ ಮಾಡಿ ಅನೇಕ ಸಂಗತಿಗಳನ್ನು ಅವರಿಂದ ಪಡೆದುಕೊಂಡೆನು.. ಆಗ ಡಾ.ಬಿ.ವ್ಹಿ.ಶಿರೂರ ಅವರ “ಸಂಶೋಧನ ಸ್ವರೂಪ”ವು ನಮಗೆ ಪಠ್ಯವೂ ಕೂಡ. ಇದರಿಂದ ಗುರುಗಳನ್ನು ಮತ್ತೆ ಮತ್ತೆ ನೆನಪಿಸುತ್ತ, ಅವರ ಬದುಕಿನ ಪುಟಗಳನ್ನು ನೋಡುತ್ತ ಸಾಗುತ್ತಿರುವೆ.ಮಾರ್ಚ 2 ಅವರ ಜನ್ಮದಿನ ಎಂಬುದನ್ನು ನೋಡಿದೆ. 80 ವರ್ಷ ಪೂರ್ಣಗೊಳಿಸಿ ರ 81 ವಸಂತಕ್ಕೆ ಕಾಲಿಡುವ ಈ ದಿನ ಗುರುಗಳ ವ್ಯಕ್ತಿತ್ವದ ಕುರಿತು ಕಿರು ಬರಹ ರೂಪಿಸಿದೆ.

ಡಾ.ಬಿ.ವ್ಹಿ.ಶಿರೂರ ಅವರು ಕನ್ನಡದ ಶ್ರೇಷ್ಠ ಪ್ರಾಧ್ಯಾಪಕರು; ಪಾಂಡಿತ್ಯ ಪರಂಪರೆಗೆ ಸೇರಿದ ಬಹುಮುಖ ವಿದ್ವತ್ತಿನ ಗಟ್ಟಿ ವಿದ್ವಾಂಸರು. ಇವರು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಪುಟ್ಟ ಗ್ರಾಮ ಆಡೂರಿನಲ್ಲಿ 2/3/1941 ರಲ್ಲಿ ಜನಿಸಿದರು. ಅದು ಬಸವ ಜಯಂತಿಯ ದಿನ. ಹೀಗಾಗಿ ಇವರ ಹೆಸರನ್ನು ಬಸವರಾಜ ಎಂದು ಇಟ್ಟರು.ಇವರ ತಂದೆಯವರು ಯಲಬುರ್ಗಾ ತಾಲೂಕಿನ ಮಾಜಿ ಶಾಸಕರಾದ ದಿವಂಗತ ವೀರಭದ್ರಪ್ಪ ಶಿರೂರ ಅವರು. ತಾಯಿ ಅಂದಾನಮ್ಮ. ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣವನ್ನು ಆಡೂರ, ಗದಗ, ಕೊಪ್ಪಳ, ಕುಕನೂರಿನಲ್ಲಿ ಪೂರೈಸಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ; ಪಿಎಚ್.ಡಿ. ಪದವಿ ಪಡೆದರು.

- Advertisement -

ಡಾ.ಬಿ.ವ್ಹಿ. ಶಿರೂರ ಅವರದು ಒಂದು ಮಾದರಿಯ ಮತ್ತು ತತ್ತ್ವಬದ್ಧ ಬದುಕು. ಅವರ ವೈಯಕ್ತಿಕ ಜೀವನ, ವೃತ್ತಿಜೀವನ, ಅಂತಿಮದಲ್ಲಿ ನಲಿವಿನಿಂದ ಕೂಡಿದ್ದರೂ, ಅವುಗಳ ಹಿಂದೆ ನೋವು ನಿರಂತರ ಶೃತಿ ಹಿಡಿದಿದೆ. ಎಳೆಯ ವಯಸ್ಸಿನಲ್ಲಿ ತಾಯಿ ಅಗಲಿದಳು, ಸಮಾಜಕ್ಕೆ ಶ್ರೀಮಂತ ಸೇವೆ ಸಲ್ಲಿಸಿ, ಮಗನಿಗೆ ಬಡತನ ಉಳಿಸಿ, ತಂದೆ ವೀರಭದ್ರಪ್ಪನವರು ಅಗಲಿದರು. ಮದುವೆಯಾದ ಹೊಸದರಲ್ಲಿ ಮಡದಿ ಅಗಲಿದಳು. ಮದುವೆ ಮಾಡಿದ ಹೊಸದರಲ್ಲಿ ಮಗ ಅಗಲಿದ. ಇದು ಇವರ ಜೀವನಗತಿ. ವೃತ್ತಿಜೀವನಕ್ಕೆ ಬಂದರೆ ಕಾಲೇಜಿನಲ್ಲಿ ಪ್ರಿನ್ಸಿಪಾಲ ಹುದ್ದೆಯನ್ನು ಮತ್ತೆ ಮತ್ತೆ ಏರುವದೂ, ಇಳಿಯುವದೂ ಇವರಿಗೆ ತಪ್ಪಲಿಲ್ಲ. ಅಲ್ಲಿಂದ ವಿಶ್ವವಿದ್ಯಾಲಯಕ್ಕೆ ಬಂದರೆ ಮುಖ್ಯಸ್ಥ ಹುದ್ದೆ ಕೊನೆಗೂ ತಪ್ಪಿ ಹೋಯಿತು. ಇಂಥ ಕತ್ತಲೆ-ಬೆಳಕುಗಳ ನಡುವೆಯೂ ಡಾ.ಬಿ.ವ್ಹಿ.ಶಿರೂರ ಅವರು ಶಿಕ್ಷಣದ ಶೋಷಕರಾಗಿ ಬೆಳೆಯದೆ, ಶ್ರಮಿಕರಾಗಿ ದುಡಿದÀರು.

ಡಾ.ಬಿ.ವ್ಹಿ. ಶಿರೂರ ಅವರ ಒಟ್ಟು ಬರವಣಿಗೆ ಜೈನ ಮತ್ತು ವೀರಶೈವ ಈ ಎರಡು ಧರ್ಮಗಳ ಸಾಹಿತ್ಯ ಸಂಸ್ಕøತಿಯನ್ನು ಕೇಂದ್ರೀಕರಿಸಿಕೊಂಡಿದೆ. ಎರಡರಲ್ಲೂ ಅವರದು ಸಮಾನ ಪ್ರಭುತ್ವ-ಪರಿಣತಿ-ಪರಿಶ್ರಮ. ಯಾವುದೇ ವಿಷಯವಿರಲಿ, ಆ ಕುರಿತು ವ್ಯಾಪಕವಾದ ಅಧ್ಯಯನ ನಡೆಸಿ, ವಿಪುಲವಾದ ಮಾಹಿತಿ ಸಂಗ್ರಹಿಸಿ, ವ್ಯವಸ್ಥಿತವಾಗಿ ಜೋಡಿಸಿ, ವಸ್ತುನಿಷ್ಠವಾಗಿ ನಿರೂಪಿಸುವದು ಅವರ ಬರವಣಿಗೆಯ ಕ್ರಮ. ಸೂತ್ರ ಬದ್ಧತೆ, ಶಾಸ್ತ್ರಶುದ್ಧತೆ ಅವುಗಳ ಲಕ್ಷಣ.

ಡಾ.ಬಿ.ವ್ಹಿ.ಶಿರೂರ ಅವರು ಶಾಸನ, ಪ್ರಾಚೀನ ಕಾವ್ಯ. ವಚನ ಸಾಹಿತ್ಯ, ಇತಿಹಾಸ, ಜೈನ, ವೀರಶೈವ ಧರ್ಮ ಮತ್ತು ಸಂಸ್ಕøತಿ ಶೋಧಗಳಂಥ ಗಡಚು-ಗಂಭೀರ ವಿಷಯಗಳಿಗೆ ಹೆಚ್ಚಿನ ಆದ್ಯತೆ ನೀಡಿ 60 ಕೃತಿಗಳನ್ನು ಹಾಗೂ 200ಕ್ಕೂ ಹೆಚ್ಚು ಲೇಖನಗಳÀನ್ನು ಕನ್ನಡ ಸಾಹಿತ್ಯಲೋಕಕ್ಕೆ ನೀಡಿರುವರು. ಇವರ ಬದುಕು ಮತ್ತು ಸಮಗ್ರ ಸಾಹಿತ್ಯವನ್ನು ಕುರಿತು ತಲಸ್ಪರ್ಶಿಯಾಗಿ ಅಧ್ಯಯನ ಮಾಡಿ, ವಸ್ತುನಿಷ್ಠವಾಗಿ ವಿಮರ್ಶಿಸಿ, ಸಮರ್ಥವಾಗಿ ಮೌಲ್ಯಮಾಪನವನ್ನು ಡಾ.ವ್ಹಿ.ಬಿ.ಸಣ್ಣಸಕ್ಕರಗೌಡ ಅವರು ಮಾಡಿರುವರು.

ವ್ಯಕ್ತಿ ಅಧ್ಯಯನದಲ್ಲಿ ಇದು ಯಶಸ್ವಿ ಗ್ರಂಥವಾಗಿದೆ. ಇಲ್ಲಿ ಡಾ.ವ್ಹಿ.ಬಿ.ಸಣ್ಣಸಕ್ಕರಗೌಡರ ಅವರ ಆಸಕ್ತಿ ಅದಮ್ಯ ಉತ್ಸಾಹ, ನಿರಂತರ ಅಧ್ಯಯನ ಮತ್ತು ನಿಶ್ಚಿತ ಛಲ ಎದ್ದುಕಾಣುವದು. ಸದ್ಯ ಸಾಹಿತ್ಯಕ್ಷೇತ್ರದಲ್ಲಿ ಸದ್ದು ಮಾಡುತ್ತಿರುವ ಈ ಶ್ರೇಷ್ಠ ಕೃತಿ ನೀಡಿದ ಹಿರಿಮೆ ಡಾ.ವ್ಹಿ.ಬಿ. ಸಣ್ಣಸಕ್ಕರಗೌಡರ ಅವರಿಗೆ ಸಲ್ಲುತ್ತದೆ.

ತಮಗೆ ಕಲಿಸಿದ ಗುರುಗಳ ಬಗೆಗೆ ಡಾ.ಬಿ.ವ್ಹಿ.ಶಿರೂರ ಅವರಿಗೆಅ ಪಾರವಾದ ಪ್ರೀತಿ, ಭಕ್ತಿ, ಗೌರವ. “ಡಾ.ಆರ್.ಸಿ.ಹಿರೇಮಠ ಮತ್ತು ಡಾ.ಎಂ.ಎಂ.ಕಲಬುರ್ಗಿ ಅವರಲ್ಲಿ ವಿಶೇಷ ನಿಷ್ಠೆ. ಅವರು ತಮಗೆ ಮಾಡಿದ ಸಹಾಯವನ್ನು ನಿತ್ಯ ನೆನೆಯುತ್ತಿರುತ್ತಾರೆ. ಎಂ.ಎ. ಪರೀಕ್ಷೆಯ ಪರಿಣಾಮ ಬರುವುದಕ್ಕಿಂತ ಪೂರ್ವದಲ್ಲಿಯೇ, ಜೀವನದಲ್ಲಿ ಒದಗಿದ ಆಘಾತವನ್ನು ಮರೆಯಲು 1965 ರಲ್ಲಿ ಮುಂಡರಗಿಗೆ ಹೋಗಿ, ಅಲ್ಲಿನ ಶ್ರೀ ಅನ್ನದಾನೀಶ್ವರ ಹೈಸ್ಕೂಲಿನಲ್ಲಿ ಸ್ವಲ್ಪ ದಿನ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದರು.

ಆದರ್ಶವಾದಿ ತಂದೆಗೆ ತಕ್ಕ ಮಗ

ಡಾ.ಬಿ.ವ್ಹಿ.ಶಿರೂರ ಅವರು ತಮ್ಮ ವೃತ್ತಿಯ ಮೊದಲ ತಿಂಗಳ ವೇತನವನ್ನು ತಂದೆಯವರಿಗೆ ಕೊಡಲು ಯಲಬುರ್ಗಿಗೆ ಬಂದರು. ರಾಜಕಾರಣಿಯಾಗಿದ್ದ ಇವರ ತಂದೆ ಆ ದಿನ ಪಕ್ಷದ ಕಚೇರಿಯಲ್ಲಿ ಕುಳಿತಿದ್ದರು. ಇವರು ಬಂದು ತಂದೆಗೆ ನಮಸ್ಕರಿಸಿ ಮೊದಲ ತಿಂಗಳ ವೇತನವನ್ನು ಅವರ ಮುಂದೆ ಇರಿಸಿ ತಗೆದುಕೊಳ್ಳುವಂತೆ ವಿನಂತಿಸಿದರು. ಆಗ ಇವರ ತಂದೆ ಅದನ್ನು ತಗೆದು ಇವರ ಕೈಗೆ ಕೊಡುತ್ತ “ನಿನ್ನದೇ ಆದ ಸಂಸಾರ ನಿರ್ವಹಣೆಯ ಜವಾಬ್ದಾರಿ ನಿನ್ನ ಮೇಲಿದೆ. ಇದನ್ನು ನೀನೇ ತಗೆದುಕೊ” ಎಂದು ಹರಸಿ ಕಳಿಸಿಕೊಟ್ಟರಂತೆ. ಶಾಸಕರಾಗಿದ್ದ ತಂದೆ ತಮ್ಮ ಮಕ್ಕಳನ್ನು ಅವರ ಸ್ವಂತ ಕಾಲ ಮೇಲೆ ನಿಂತು ಬದುಕುವುದನ್ನು ರೂಢಿಸಿದ್ದಲ್ಲದೇ ಜವಾಬ್ದಾರಿಗಳಲ್ಲಿ ನೈತಿಕತೆಯನ್ನು ತಮ್ಮ ಬದುಕಿನ ಆದರ್ಶದ ಮೂಲಕ ರೂಢಿಸಿದ್ದರು ಎಂಬುದಕ್ಕೆ ಇದು ನಿದರ್ಶನ. ಇಂದಿನ ಸಮಾಜದಲ್ಲಿ ನೌಕರಿ ಸಿಕ್ಕರೆ ಮನೆಯನ್ನು ಊರನ್ನು ಹೊರಳಿ ನೋಡದ ಜನರೇ ಹೆಚ್ಚಿರುವಾಗ ತಂದೆಯ ಆದರ್ಶವನ್ನು ತಮ್ಮ ಬದುಕಿನುದ್ದಕ್ಕೂ ರೂಢಿಸಿಕೊಂಡು ಬದುಕುವ ಮೂಲಕ ಆದರ್ಶವಾದಿ ತಂದೆಗೆ ತಕ್ಕ ಮಗನಾಗಿ ಶಿರೂರ ಗುರುಗಳು ನಮಗಿಂದು ಮಾದರಿ.

ವೃತ್ತಿ ಬದುಕಿನ ಮಜಲುಗಳು

ಎಂ.ಎ.ಅಂತಿಮ ವರ್ಷದ ಫಲಿತಾಂಶ ಬಂದು ಅದೇ ವರ್ಷ ಕನ್ನಡ ಅಧ್ಯಯನ ಪೀಠದಲ್ಲಿ ವಚನ ವಾಙ್ಮಯವಿಭಾಗದಲ್ಲಿ ಸಹಾಯಕ ಸಂಶೋಧಕರಾಗಿ ನಿಯುಕ್ತಗೊಂಡರು. ಈ ಕೆಲಸ ಕ್ಷಣಿಕವೆಂದು ಅರಿತು ಈ ಕೆಲಸಕ್ಕೆ ವಿದಾಯ ಹೇಳಿದರು. 27-6-1966 ರಲ್ಲಿ ಅದೇತಾನೇ ಪ್ರಾರಂಭವಾದ ನರೇಗಲ್‍ದ ಶ್ರೀ ಅನ್ನದಾನೀಶ್ವರ ಮಹಾವಿದ್ಯಾಲಯದಲ್ಲಿ ಕನ್ನಡ ಅಧ್ಯಾಪಕರಾಗಿ ನೇಮಕಗೊಂಡರು.

ಇದರಿಂದ ಡಾ.ಬಿ.ವ್ಹಿ.ಶಿರೂರ ಅವರಿಗೆ ವೃತ್ತಿಜೀವನದ ಭದ್ರತೆ ದೊರೆತಂತಾಯ್ತು. ಡಾ.ಡಿ.ಎಸ್.ಕರ್ಕಿ ಅಂತವರು ಈ ಕಾಲೇಜಿನ ಪ್ರಥಮ ಪ್ರಾಚಾರ್ಯರಾಗಿದ್ದುದರಿಂದ ಡಾ.ಬಿ.ವ್ಹಿ.ಶಿರೂರ ಅವರಿಗೆ ವೃತ್ತಿಯಲ್ಲಿ ಬೆಳೆಯಲು ಸಹಾಯಕವಾಯಿತು. ಕಬ್ಬಿಣದ ಕಡಲೆಯಂತಿರುವ ಶಬ್ದಮಣಿದರ್ಪಣವನ್ನು ಅತ್ಯಂತ ಸರಳ ರೂಪದಲ್ಲಿ ವಿದ್ಯಾರ್ಥಿಗಳ ಮನಮುಟ್ಟುವಂತೆ ಬೋಧಿಸುವ ಇವರ ಪ್ರಾವಿಣ್ಯವನ್ನು ಇಂದಿಗೂ ಇವರ ವಿದ್ಯಾರ್ಥಿಗಳು ನೆನೆಯುತ್ತಾರೆ. ಮುಂದೆ 1974 ರಲ್ಲಿ ಪ್ರಾಚಾರ್ಯರಾಗಿ ಅನ್ನದಾನೀಶ್ವರ ಮಹಾವಿದ್ಯಾಲಯದಲ್ಲಿ ನೇಮಕಗೊಂಡರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ವಸತಿ ವ್ಯವಸ್ಥೆ, ಪ್ರಸಾದನಿಲಯದಲ್ಲಿ ಉತ್ತಮ ಊಟದ ವ್ಯವಸ್ಥೆ, ಉತ್ತಮ ಗುಣಮಟ್ಟದ ಶಿಕ್ಷಣ, ಅಲ್ಲದೆ ಇನ್ನಿತರ ಹಲವಾರು ಯೋಜನೆಗಳನ್ನು ಹಾಕಿಕೊಂಡು ಕಾರ್ಯರೂಪಕ್ಕೆ ತರುತ್ತಿದ್ದಂತೆ ಈ ಎಲ್ಲ ಸುಧಾರಣೆಗಳು ಹಲವರಿಗೆ ಹಿಡಿಸದಾಯಿತು. ಪ್ರಾಚಾರ್ಯಹುದ್ದೆಯಲ್ಲಿ ಬದಲಾವಣೆಯಾಯಿತು. ಅದ್ಯಾವುದನ್ನೂ ಲಕ್ಷಿಸದೆ ಡಾ. ಶಿರೂರ ಅವರು ತಮ್ಮ ವೃತ್ತಿಯಲ್ಲಿ ಮುಂದುವರೆದರು.

1985 ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ ಜೈನ ಸಾಹಿತ್ಯದ ಪ್ರವಾಚಕರಾಗಿ ಸೇರ್ಪಡೆಗೊಂಡರು. ಇಲ್ಲಿಯೂ ಶನಿಕಾಟ ಇವರಿಗೆ ತಪ್ಪಲಿಲ್ಲ. ಯಾವ ಜೇಷ್ಠತೆಯನ್ನೂ ಲಕ್ಷಿಸದೆ 1987 ರಲ್ಲಿ ಇವರನ್ನು ಬೆಳಗಾವಿಗೆ ವರ್ಗಗೊಳಿಸಿದರು. ಅಲ್ಲಿ ಇವರು ವಿದ್ಯಾರ್ಥಿಗಳಿಗೆ ಪಂಪಭಾರತ, ಸಂಶೋಧನದಂಥ ವಿಷಯಗಳನ್ನು ಬೋಧಿಸತೊಡಗಿದರು. ಪರಿಣಾಮವಾಗಿ “ಸಂಶೋಧನ ವ್ಯಾಸಾಂಗ” ಎಂಬ ಕೃತಿ ಹೊರಬಂದಿತು. ಈ ಕೃತಿಗೆ ಮೈಸೂರು ವಿಶ್ವವಿದ್ಯಾಲಯದ ತಿ.ನಂ.ಶ್ರೀ ಪ್ರತಿಷ್ಠಾನದ ಪ್ರಶಸ್ತಿ ಕೂಡ ಲಭಿಸಿತು. ಹಾ. ಮಾ. ನಾಯಕ ಅವರು ಈ ಕೃತಿ ನೋಡಿ ಮೆಚ್ಚುಗೆ ವ್ಯಕ್ತಪಡಿಸಿ ‘ಈ ಕೃತಿ ಚಿಕ್ಕದಾಗಿದೆ. ಇನ್ನಷ್ಟು ಮಾಹಿತಿ ಸಂಗ್ರಹಿಸಿ ಬೆಳೆಸಿ’ ಎಂದು ಸಲಹೆ ನೀಡಿದರು. ಆಗಲೇ ಇದನ್ನು ಪರಿಷ್ಕರಣೆ ಮಾಡಿ “ಸಂಶೋಧನೆ ಸ್ವರೂಪ” ಎಂಬ ಶಿರೋನಾಮೆಯಿಂದ ಹೊರ ತಂದರು. ಇದು ಇಂದಿಗೂ ಬೇಡಿಕೆಯ ಕೃತಿಯಾಗಿದೆ.

ಇದೇ ಅವಧಿಯಲ್ಲಿ “ರತ್ನಕರಂಡಕದ ಕಥೆಗಳು” ಗ್ರಂಥವನ್ನು ಶ್ರಮವಹಿಸಿ ಸಂಪಾದಿಸಲು ಅದು ವಿಶ್ವವಿದ್ಯಾಲಯದಿಂದ 1993 ರಲ್ಲಿ ಪ್ರಕಟವಾಯಿತು. ಇದು ರಾಜ್ಯ ಸಾಹಿತ್ಯಅಕಾಡಮಿಯ ಪ್ರಶಸ್ತಿ ಮತ್ತು ಹೊಂಬುಜದ ದೇವೇಂದ್ರಕೀರ್ತಿ ಭಟ್ಟಾರಕರ ಪ್ರಶಸ್ತಿಗಳನ್ನು ಪಡೆಯಿತು. 1992 ದೊರೆಯಬೇಕಿದ್ದ ಕನ್ನಡ ಅಧ್ಯಯನಪೀಠದ ಪ್ರಾಧ್ಯಾಪಕ ಹುದ್ದೆ, ಕೆಲವು ಸಂಚುಕೋರರ ಸಂಚಿನಿಂದ ದೊರೆಯದೆ, 1994ರಲ್ಲಿ ದೊರೆಯಿತು. ಇದರಿಂದ ಸಿಗಬೇಕಿದ್ದ ವಿಭಾಗದ ಮುಖ್ಯಸ್ಥ ಹುದ್ದೆ ತಪ್ಪಿಹೋಯಿತು. ಇದ್ಯಾವುದಕ್ಕೂ ಪರಿತಪಿಸದೆ ಅವರು ಸಮಯಕ್ಕೆ ಸರಿಯಾಗಿ ತರಗತಿಗಳನ್ನು ತಗೆದುಕೊಂಡು ಪಾಠ ಮಾಡುತ್ತಿದ್ದ ರೀತಿ ಅನುಕರಣೀಯವಾಗಿದ್ದವು.

ಇವರ ಮಾರ್ಗದರ್ಶನದಲ್ಲಿ ಹದಿನೆಂಟಕ್ಕೂ ಹೆಚ್ಚು ಸಂಶೋಧನ ಮಹಾಪ್ರಬಂಧಗಳು, ಹನ್ನೊಂದು ಎಂ.ಫಿಲ್. ಪ್ರಬಂಧಗಳು ಹೊರಬಂದವು. ನಿಸ್ವಾರ್ಥ ಕಾಯಕವನ್ನು ಪೂರೈಸಿದ ಬಿ.ವ್ಹಿ.ಶಿರೂರವರು 31-3-2000 ರಂದು ವೃತ್ತಿಯಿಂದ ನಿವೃತ್ತರಾದರು. 35 ವರ್ಷಗಳ ಕಾಲ ಅವಿರತವಾಗಿ ದುಡಿದು ಶಿಕ್ಷಣರಂಗಕ್ಕೆ, ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಹೊಸ ಛಾಪು ಮೂಡಿಸಿದ ಡಾ.ಬಿ.ವ್ಹಿ.ಶಿರೂರ ಅವರು ಕನ್ನಡದ ಒಬ್ಬ ಶ್ರೇಷ್ಠ ಸಂಶೋಧಕರೆಂದು ನಿಸ್ಸಂದೇಹವಾಗಿ ಹೇಳಬಹುದು.

ನಿವೃತ್ತಿ ನಂತರವೂ 6-7ವರ್ಷಗಳ ವರೆಗೆ ‘ಕರ್ನಾಟಕದ ಶೈವಶಾಖೆಗಳು’ ಎಂಬ ಯು.ಜಿ.ಸಿ. ಪ್ರಾಜೆಕ್ಟ ತಗೆದುಕೊಂಡು, ಪ್ರತಿದಿನ ವಿಭಾಗಕ್ಕ ಬಂದು ಓದು ಬರಹದಲ್ಲಿ ತೊಡಗಿ, ಸಂಶೋಧನ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿದ್ದರು.
ಕೌಟುಂಬಿಕ ಬದುಕು
ಪ್ರತಿಯೊಬ್ಬರ ಕೌಟುಂಬಿಕ ಬದುಕು ಒಂದೊಂದು ರೀತಿಯಲ್ಲಿರುತ್ತದೆ. ಅದು ನೆನಪಿನ ಬುತ್ತಿ ಕೂಡ. ಹಾಗೆಯೇ ಶಿರೂರ ಗುರುಗಳ ಬದುಕಿನಲ್ಲಿ ಎಂ.ಎ ವ್ಯಾಸಾಂಗ ಮಾಡುವಾಗಲೇ 1963 ರಲ್ಲಿ ಶಿವಪುತ್ರಾದೇವಿಯೊವರೊಡನೆ ವಿವಾಹವಾಯಿತು. ದೇವರು ಇವರ ದಾಂಪತ್ಯ ಜೀವನವನ್ನು ಬಹಳ ದಿನ ಉಳಿಸಿಕೊಡಲಿಲ್ಲ. ಪತ್ನಿ ಪ್ರಸವ ವೇದನೆಯಲ್ಲಿ ನಿಧನರಾದರು. ಆಗವರು ಎಂ.ಎ. ಅಂತಿಮ ಪರೀಕ್ಷೆಯ ಮೂರನೆಯ ಪತ್ರಿಕೆಯನ್ನು ಬರೆದಿದ್ದರು. ಈ ಸುದ್ದಿ ಅವರ ಬದುಕಿನಲ್ಲಿ ಬರಸಿಡಿಲಿನಂತೆ ಕಾರ್ಮೋಡದಂತೆ ಬಂದು ಎರಗಿತ್ತು. ಆಗ ಉಳಿದಿದ್ದ ಇವರ ಮಗ ಶಿವಪ್ರಸಾದನನ್ನು ಅಮ್ಮನ ಮನೆಯಲ್ಲಿ ಬಿಟ್ಟು ವ್ಯಾಸಂಗಕ್ಕೆ ಅಣಿಯಾದರು. ಇವನು ದೊಡ್ಡವನಾಗಿ ಬೆಳೆದ ನಂತರ ಅವನ ಇಚ್ಚೆಯ ಮೇರೆಗೆ ಮದುವೆ ಮಾಡಿದರು. ಇಲ್ಲಿಯೂ ದುರ್ವಿಧಿ ಇವರ ಮನಸ್ಸಿಗೆ ಮತ್ತೊಂದು ಪೆಟ್ಟು ನೀಡಿತು. ಮದುವೆಯಾದ 21 ದಿನದಲ್ಲಿಯೆ ಬದಾಮಿ ಬನಶಂಕರಿ ಹೊಂಡದಲ್ಲಿ ಈಜಲು ಹೋಗಿ ಅವನು ಆಹುತಿಯಾದ. ಹೀಗೆ ದುರಂತದ ಹಿಂದೆ ದುರಂತದ ದಿನಗಳಲ್ಲಿಯೆ ತಮ್ಮ ಬದುಕನ್ನು ಕಟ್ಟಿಕೊಂಡವರು ಶಿರೂರ ಗುರುಗಳು.
1965 ರಲ್ಲಿ ಗದುಗಿನ ಶ್ರೀ ವೀರಭದ್ರಪ್ಪ ಕವಲೂರ ಇವರ ಪುತ್ರಿ ಶೋಭಾದೇವಿಯವರೊಡನೆ ಇವರ ವಿವಾಹ ಜರುಗಿತು ಇವರ ಈ ವೈವಾಹಿಕ ಬದುಕಿನಲ್ಲಿ ಮೂರು ಮಕ್ಕಳ ಜನನವಾಯಿತು. ಹಿರಿಯ ಮಗ ಮಹೇಶ ಐ.ಎಫ್.ಎಸ್ ಪಾಸು ಮಾಡಿ ಸದ್ಯ ಬೆಂಗಳೂರಿನಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಎರಡನೆಯ ಮಗ ಮಹೇಂದ್ರ ಬಿ.ಇ. ಸಿವಿಲ್ ಮಾಡಿ ಹುಬ್ಬಳ್ಳಿಯಲ್ಲಿಯೇ ತಂದೆಯೊಡನೆ ವಾಸವಾಗಿದ್ದು, ಕ್ಲಾಸ್ ಒನ್ ಗುತ್ತಿಗೆದಾರರಾಗಿದ್ದಾರೆ. ಮೂರನೆಯ ಸುಪುತ್ರ ಮೋಹನ್ ಬಿ.ಇ. ಪದವಿ ಪಡೆದು ಅಮೇರಿಕಾದಲ್ಲಿ ಇನ್ಪೋಸಿಸ್‍ದಲ್ಲಿ ಕೆಲಸ ಮಾಡುತ್ತಿದ್ದಾರೆ.
ಇಂದಿಗೂ ಬೇಡಿಕೆಯ ಕೃತಿ “ಸಂಶೋಧನ ಸ್ವರೂಪ”
“ಸಂಶೋಧನೆ” ಎನ್ನುವುದು ಸತ್ಯದ ಕಡೆಗೆ ಸಾಗುವ ಒಂದು ನಿರಂತರ ಪ್ರಕ್ರಿಯೆ, ಬೌದ್ಧಿಕ ಚಟುವಟಿಕೆ. ಈ ಸಂಶೋಧನೆ ಕೈಗೊಳ್ಳಲು ಮುಂದಾಗುವ ವಿದ್ಯಾರ್ಥಿಗಳಿಗೆ ಸಂಶೋಧನೆಯ ವಿಧಿವಿಧಾನಗಳನ್ನು ತಿಳಿಸುವ ಒಂದು ಮಹತ್ವದ ಗ್ರಂಥ”ಸಂಶೋಧನಸ್ವರೂಪ”. ಸಂಶೋಧಕನ ಗುಣಲಕ್ಷಣಗಳು. ಸಂಶೋಧನೆಯ ಸ್ವರೂಪ. ವಿಷಯ ಆಯ್ಕೆ. ವಿಷಯ ಸಂಗ್ರಹ ಇತ್ಯಾದಿ ಒಳಗೊಂಡಂತೆ ಒಬ್ಬ ಸಂಶೋಧಕ ಕೈಗೊಳ್ಳಬೇಕಾದ ಸಂಶೋಧನೆಗೆ ಏನು ಬೇಕು ಎಂಬುದನ್ನು ಈ ಗ್ರಂಥ ಒಳಗೊಂಡಿದೆ. ಈ ವರೆಗೆ ಒಂಬತ್ತು ಆವೃತ್ತಿಗಳನ್ನು ಹೊಂದಿರುವ ಈ ಕೃತಿ ಪಿ.ಎಚ್.ಡಿ ಮಾಡುವವರಿಗೆ ಒಳ್ಳೆಯ ಆಕರ ಗ್ರಂಥ.
ಪಠ್ಯ ಗ್ರಂಥಗಳು
ಡಾ.ಬಿ.ವ್ಹಿ.ಶಿರೂರ ಅವರು ತಮ್ಮ ಬೋಧನಾನುಭವದ ಹಿನ್ನಲೆಯಲ್ಲಿ ವಿದ್ಯಾರ್ಥಿಗಳನ್ನು ಗಮನದಲ್ಲಿರಿಸಿಕೊಂಡು ಒಂದು ವರ್ಷದ ಅವಧಿಗೆ ಬೇಕಾಗುವ ವಿಷಯಗಳನ್ನು ಆಯ್ಕೆ ಮಾಡಿಕೊಂಡು ರಚಿಸಿದ ಪಂಚವಟಿ.(1978 ರಿಂದ 1979 ರ ವರೆಗೆ ಕರ್ನಾಟಕ ವಿಶ್ವವಿದ್ಯಾಲಯದ ಬಿ.ಎಸ್.ಸಿ ಭಾಗ 1 ಕ್ಕೆ) ನಳಚರಿತ್ರೆ ಸಂಗ್ರಹ(1981 ರಿಂದ 1984 ರ ವರೆಗೆ ಕರ್ನಾಟಕ ವಿಶ್ವವಿದ್ಯಾಲಯದ ಬಿ.ಎ. ಭಾಗ 1 ಕ್ಕೆ) ಮತ್ತು ಬಸವಣ್ಣನವರ ವಚನವಾಹಿನಿ (1989 ರಿಂದ 1992 ರ ವರೆಗೆ ಕರ್ನಾಟಕ ವಿಶ್ವವಿದ್ಯಾಲಯದ ಬಿ.ಎ. ಭಾಗ 3 ಕ್ಕೆ) ಗ್ರಂಥಗಳು ಇಂದಿಗೂ ಮಾದರಿ ಪಠ್ಯಗಳಾಗಿ ವಿದ್ಯಾರ್ಥಿಗಳ ಮತ್ತು ವಾಚಕರ ಮೆಚ್ಚುಗೆಗೆ ಪಾತ್ರವಾಗಿವೆ.
ಸಂದ ಗೌರವ
ಇವರ ಅಭಿಮಾನಿಗಳೆಲ್ಲ ಸೇರಿ 15-2-2002 ರಂದುಸುಮಾರು 850 ಪುಟದ “ಸಿರಿಸಂಪದ” ಎಂಬ ಅಭಿನಂದನ ಗ್ರಂಥವನ್ನು ಅರ್ಪಿಸಿ ಸನ್ಮಾನ ಮಾಡಿದ್ದು ಅರ್ಥಪೂರ್ಣ. ಕೊಪ್ಪಳಜಿಲ್ಲಾ ಸಾಹಿತ್ಯ ಪರಿಷತ್ತು 2004ರಲ್ಲಿ ಇವರಿಗೆ ಕೊಪ್ಪಳಜಿಲ್ಲಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ನೀಡಿ ಗೌರವಿಸಿತು. ಇವರಿಗೆ ಜ.ಚ.ನಿ ಪ್ರಶಸ್ತಿ. ಹಲಸಂಗಿ ಗೆಳೆಯರ ಬಳಗದ ಪ್ರಶಸ್ತಿ (2016)ಗಳೂ ಬಂದಿವೆ. ಕರ್ನಾಟಕ ಇತಿಹಾಸ ಅಕಾಡಮಿಯು 2005 ಸಪ್ಟಂಬರ 9.10.11 ರಂದು ಸೇಡಂದಲ್ಲಿ ನಡೆದ ಅಖಿಲ ಕರ್ನಾಟಕ ಇತಿಹಾಸ ಸಮ್ಮೇಳನದ ಅಧ್ಯಕ್ಷ ಸ್ಥಾನ ನೀಡಿ ಗೌರವಿಸಿತು. ಕರ್ನಾಟಕ ವಿಶ್ವವಿದ್ಯಾಲಯವು ಡಾ.ಆರ್.ಸಿ.ಹಿರೇಮಠ ಅಧ್ಯಯನ ಪೀಠದಲ್ಲಿ 2017 ರಂದು ಜರುಗಿದ ‘ಸಂಸ್ಕøತಿ ಸಮ್ಮೇಳನ’ದ ಅಧ್ಯಕ್ಷತೆ, 2015ರಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿ ಇದು ಸುತ್ತೂರಿನಲ್ಲಿ ಜರುಗಿದ ಹಸ್ತಪ್ರತಿ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನ ನೀಡಿ ಗೌರವಿಸಿವೆ. ಹೀಗೆ ವ್ಯಕ್ತಿ ಮಾಡಿದ ಸಾಧನೆ ಬಯಸದೇ ಬಂದ ಭಾಗ್ಯಗಳಿವು.
ಒಟ್ಟಾರೆಯಾಗಿ ನಿವೃತ್ತರಾಗಿಯೂ ಕನ್ನಡ ಸಾಹಿತ್ಯ-ಸಂಸ್ಕøತಿಯ ಕೊಂಡಿಯಾಗಿ ನಿರಂತರ ಬರವಣಿಗೆಯಲ್ಲಿ ಸಂಶೋಧನೆಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡು ಬದುಕನ್ನು ನಡೆಸುತ್ತಿರುವ ಗುರುಗಳಂತವರು ಅಪರೂಪ. ಸರ್ಕಾರ ಇವರ ಸೇವೆಯನ್ನು ಗುರುತಿಸಿ ಸರಕಾರ ಪಂಪ, ನಾಡೋಜ ಪ್ರಶಸ್ತಿಗೆ ಅರ್ಹರಾದ ಇವರಿಗೆ ರಾಜ್ಯೋತ್ಸವದಂತ ಪ್ರಶಸ್ತಿ ಸಿಗದಿರುವದು ದುರದುಷ್ಟಕರ. ಸರಕಾರ ಇನ್ನೂ ಮುಂದಾದರೂ ಇವರ ಸಾಹಿತ್ಯ ಸಾಧನೆಯನ್ನು ಗುರುತಿಸಿ ಗೌರವಿಸಬೇಕು. ಸಂಶೋಧಕರ ಪರಂಪರೆಯಲ್ಲಿ ಮುನ್ನಡೆದು ವಿದ್ವತ್‍ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿರುವ ಗುರುಗಳ ಬದುಕಿನ ಹಲವು ಘಟ್ಟಗಳನ್ನು ಈ ಪುಟ್ಟ ಬರಹದಲ್ಲಿ ರೂಪಿಸಿರುವೆ. ಅವರ ವಿದ್ವತ್‍ಪರಂಪರೆಗೆ ಇದು ಏನೂ ಸಾಲದು. ಇವರ  ನನ್ನಂತಹ ಅನೇಕ ವಿದ್ಯಾರ್ಥಿಗಳು ಪಡೆಯುತ್ತಿರುವುದಕ್ಕೆ ನಾನು ಧನ್ಯ.


ವಾಯ್.ಬಿ.ಕಡಕೋಳ
ಶಿಕ್ಷಕ ಸಂಪನ್ಮೂಲ ವ್ಯಕ್ತಿಗಳು
ಮಾರುತಿ ಬಡಾವಣೆ ಸಿಂದೋಗಿ ಕ್ರಾಸ್
ಮುನವಳ್ಳಿ-591117
ಸವದತ್ತಿ ತಾಲೂಕು ಬೆಳಗಾವಿ ಜಿಲ್ಲೆ
8971117442 7975547298

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

  ಯಾರವನು ನೀನೆಂದು ಜನ‌ ನಿನ್ನ ಕೇಳಿದರೆ ಆ ಪ್ರಶ್ನೆಗುತ್ತರವ ಹೀಗೆ ಹೇಳು ಕ್ರಿಸ್ತನವ ಕೃಷ್ಣನವ ಬುದ್ಧನವ ಬಸವನವ ಎಲ್ಲರವ ನಾನೆನ್ನು‌- ಎಮ್ಮೆತಮ್ಮ ಶಬ್ಧಾರ್ಥ ಯಾರವನು = ಯಾವ ಕುಲಜಾತಿಮತಪಂಥಕ್ಕೆ ಸೇರಿದವನು ತಾತ್ಪರ್ಯ ಜನಗಳು ನಿನ್ನ ಕುಲ‌...
- Advertisement -

More Articles Like This

- Advertisement -
close
error: Content is protected !!
Join WhatsApp Group