- Advertisement -
“ಹಳ್ಳೀ ಸೊಬಗು-ಪಟ್ಣದ ಬೆಡಗು”
ತಿಂಗಳೂಟವ ಬಿಟ್ಟು
ತಂಗಳಿನ ಆಸೆಗೆ
ಕಂಗಳು ಕೋರೈಸಲು
ಹೊರ ಬಂದೆ ಈಚೆಗೆ
ಗಗನಚುಂಬಿತ ಮನೆಯು
ಝಗಮಗಿಸೋ ದೀಪಗಳು
ಹೊಸ ಬಗೆಯ ದಿನಚರ್ಯವು
ಹೊಸಿಲಿರದ ಹೊಸ ಮನೆಯು
ಹುಸಿ ಪ್ರೀತಿ, ಹೊಸ ನೀತಿ
ಹಿಂಡಿನಲ್ಲಿ ಉಂಡು
ಅದು ಎಷ್ಟೋ ದಿನವಾಯ್ತು
ಬಂಡು ಬಾಳಿಗೆ ಮನವು
ರೋಸಿ ಹೋಯ್ತು
ಹಸಿ ಬೆಣ್ಣೆ,ಹಸು ಗಿಣ್ಣ
ಕೆನೆಮೊಸರು ಬಿಸಿ ರೊಟ್ಟಿ
ಕಸಬೆಂಡೆ ಉಪ್ಪಿನಕಾಯಿ
ಮೆಂತ್ಯ ಮೆಣಸಿನ ಕಾಯಿ
ಹಪ್ಪಳ ಸಂಡಿಗೆ
ಶೇಂಗಾ ಹೋಳಿಗೆ ತುಪ್ಪ
ತರತರಹದ ಚಟ್ನಿಪುಡಿ
ನವಣೆಕ್ಕಿ ಹುಳಿಬಾನ
ಇವುಗಳಿಗೆ ಸಮನಲ್ಲಾ
ಪಂಚಭಕ್ಷ ಪರಮಾನ್ನ..!!
ಕೆಸರೊಳಗೆ ಕೊಸರಾಡಿ
ಕೆಸರಾಟವನು ಆಡಿ
ನದಿ ಸ್ನಾನ, ಝರಿ ಪಾನ
ನಿಸರ್ಗದ ವರದಾನ
ಹೊಳೆ ದಂಡೆಯ ಮರಳಲಿ
ಮನೆಯ ಕಟ್ಟುವ ಆಟ
ಅಮ್ಮನ ರೊಟ್ಟಿಯ ಬುತ್ತಿ
ಬಿಚ್ಚಿ ಮಾಡಿದ ಊಟ
ಮನೆಯ ಹೊರ ಅಂಗಳದಿ
ಬೆಳದಿಂಗಳೂಟ..!
ಯಾಕೆ ತೊರೆದೆವೋ ಆ
ಹಳ್ಳಿಯ ಸೊಬಗ
ಸಾಕು ಸಾಕಾಯ್ತೆಮಗೆ
ಪಟ್ಟಣದ ವೈಭೋಗ…!!
✍️ ಕಮಲಾಕ್ಷಿ ಕೌಜಲಗಿ
(ಸೂರ್ಯ ಕಮಲ)
ಈ ಪದ್ಯ ತುಂಬಾ ಹಿಡಿಸಿತು. ಒಳ್ಳೆ ಬರವಣಿಗೆ ಇದೆ ನಿಮ್ಮ ಒಳಗೆ. ಟಿಸಿಲೊಡೆಯಲಿ.