ಬ ಹುಶಃ ಅದು ತೊಂಭತ್ತರ ದಶಕದ ಮಾತು “ಕೇಳಿ ಪ್ರೇಮಿಗಳೇ…ಒಬ್ಬಳು ಸುಂದರಿ ಇದ್ದಳು” ಅನ್ನುತ್ತ ಪರದೆಯ ಮೇಲೆ ರವಿಚಂದ್ರನ್ ನಟನೆಯ ಹಾಡು ತೇಲಿ ಬರುತ್ತಿದ್ದರೆ ಕಾರಣಾಂತರಗಳಿಂದ ಪ್ರೀತಿಗೆ ಮೋಸವಾಗಿದ್ದ ಹುಡುಗರು ತಮ್ಮ ಪ್ರೇಯಸಿಯನ್ನ ನೆನೆದು ಹಾಡುತ್ತಿದ್ದ ಹಾಡು ಅದು….ಅದರ ಜೊತೆಗೆ ಚಿತ್ರನಟ ಸುನೀಲ್ ಮತ್ತು ಅಳುಮುಂಜಿ ಪಾತ್ರಗಳಿಗೆ ಜೀವ ತುಂಬುತ್ತಿದ್ದ ಖ್ಯಾತಿಯ ಶೃತಿ ಅವರನ್ನು ತೆರೆಗೆ ಪರಿಚಯಿಸಿದ ಮೊದಲ ಸೂಪರ್ ಹಿಟ್ ಸಿನೆಮಾ ಶೃತಿ ಚಿತ್ರದ ಹಾಡು “ಹಾಡೊಂದು ನಾ ಹಾಡುವೆನು ಹೃದಯ ರಾಗದಲ್ಲಿ” ಅನ್ನುವ ಹಾಡಿನಲ್ಲಿ ನಟ ತಾನೊಬ್ಬ ಬೆಸ್ಟ್ ಸಿಂಗರ್ ಆಗಬೇಕು,ಅಂತ ಹೊರಡುವ ಕಥಾ ಹಂದರವಿದ್ದ ಸಿನೆಮಾ ಅದು.
ಹೀಗೆ ಏಟೀಸ್ ಮಾಡಲ್ಲುಗಳ ನೆನಪಿನ ಅಲ್ಬಮ್ಮಿನಲ್ಲಿ ಹುಡುಕುತ್ತ ಹೊರಟರೆ ವರನಟ ಡಾಕ್ಟರ್ ರಾಜ್ ಕುಮಾರ್ ನಟನೆಯ ಸನಾದಿ ಅಪ್ಪಣ್ಣ, ಇನ್ನೊಂದು ಕಡೆ ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯದ ಹಠವಾದಿ,ರಾಮಾಚಾರಿ,ಮತ್ತು ಚೋರ ಚಿತ್ತ ಚೋರ ಸಿನೆಮಾದ ಆರ್ಕೆಸ್ಟ್ರಾ ಸಿಂಗರ್ ಪಾತ್ರ ಹಾಗೂ ರಾಘವೇಂದ್ರ ರಾಜಕುಮಾರ್ ಅಭಿನಯದ ಅನುರಾಗದ ಅಲೆಗಳು ಸಿನೆಮಾ ಜೊತೆಗೆ ಬಹುತೇಕ ಸಿನಿ ರಸಿಕರ ಮನ ಮಿಡಿಯುವ ಹಾಡುಗಳನ್ನು ಹೊತ್ತು ತಂದ ಹಾಗೂ ಈಗಲೂ ಜನರು ಆಗಾಗ ಗುಣ ಗುಣಿಸುವ ಹಾಡುಗಳಲ್ಲಿ ಮುಖ್ಯವಾಗಿ ಒಲಿದ ಶೃತಿಗಳು ಒಂದಾದ ಮೇಲೆ ಮನಸು ಮನಸು ಸೇರಲು ಈ ಬಾಳೆ ನವನೀತ…,ಹಾಡಿನೊಂದಿಗೆ ಬಂದ ಗಜಪತಿ ಗರ್ವಭಂಗ,ಡಾಕ್ಟರ್ ವಿಷ್ಣುವರ್ಧನ ಅಭಿನಯದ ಪರ್ವ ಸಿನೆಮಾದ ಒಂದಕ್ಕಿಂತ ಒಂದು ಸೂಪರ್ ಹಿಟ್ ಹಾಡುಗಳು,ರಘುವೀರ ಅಭಿನಯದ ಚೈತ್ರದ ಪ್ರೇಮಾಂಜಲಿ ಮತ್ತು ಸುಂದರಕಾಂಡ ಸಿನೆಮಾದ ಹಾಡುಗಳು ಹಾಗೂ ಕನ್ನಡದ ನೆಸ್ಟ್ ಕಾಮಿಡಿಯನ್ ನಟ,ನಿರ್ದೇಶಕ, ನಿರ್ಮಾಪಕ ಕಾಶಿನಾಥ ಅವರ ಅಭಿನಯದ ಲವ್ ಮಾಡಿನೋಡು,ಮತ್ತು
ರಮೇಶ್ ಅರವಿಂದ ಅಭಿನಯದ ಕುಶಲವೇ ಕ್ಷೇಮವೇ…..,ಸೇರಿದಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ ಅಭಿನಯದ ನಮ್ಮ ಪ್ರೀತಿಯ ರಾಮು ಮತ್ತು ಎಂದೂ ಮರೆಯಲಾಗದ ಸಿನೆಮಾ ಲಾಲಿ ಹಾಡು,ಅಷ್ಟೇ ಅಲ್ಲದೆ ನಾಗತೀಹಳ್ಳಿ ಚಂದ್ರಶೇಖರ ನಿರ್ದೇಶನದ ಅಮೇರಿಕ ಅಮೆರಿಕ,ಚಿತ್ರದ ಯಾವ ಮೋಹನ ಮುರಳಿ ಕರೆಯಿತೋ ದೂರ ತೀರಕೆ ನಿನ್ನನು ಹಾಡು ಹೀಗೆಯೆ ಮತ್ತೊಂದು ಸಿನೆಮಾ
ಒಲವೇ ಜಿವನ ಲೆಕ್ಕಾಚಾರದ ಬಾಳು ಮೂರೇ ದಿನ ಭಾಳ ಜೋಪಾನ…. ಹಾಡುಗಳು ಸೇರಿದಂತೆ ಕನ್ನಡ ಚಿತ್ರರಂಗದಲ್ಲಿ ಆರ್ಕೆಸ್ಟ್ರಾ ಸಿಂಗರ್,ಮ್ಯೂಜಿಷಿಯನ್,ಪಾತ್ರಗಳ ನಟನೆಯ ಮೂಲಕವೇ ನಟ ನಟಿಯರು ಚಿತ್ರರಂಗದಲ್ಲಿ ಹೆಸರು ಮಾಡಿ ವೀಕ್ಷಕರಿಗೆ ಹುಚ್ಚು ಹಿಡಿಸಿದ ಅಸಂಖ್ಯಾತ ಸಿನೆಮಾಗಳು ನಮ್ಮ ಗಮನ ಸೆಳೆಯುತ್ತವೆ.
ಇದೆಲ್ಲ ಒಂದು ಕಾಲದಲ್ಲಿ ಸೂಪರ್ ಹಿಟ್ ಅನ್ನಿಸಿಕೊಂಡ ಸಿನೆಮಾಗಳ ಕ್ಯಾರೆಕ್ಟರ್,ಕ್ಯಾಚೀ ರೈಟಿಂಗ್, ಬೆಸ್ಟ್ ಸಿಂಗಿಂಗ್ ಮತ್ತು ಅಲ್ಟಿಮೇಟ್ ಯಾಕ್ಟಿಂಗ್ ಅಂತ ಅನ್ನಿಸಿಕೊಂಡ ಬಹುತೇಕ ಸಿನೆಮಾಗಳ ಕಥೆ ಆದರೆ ನಿಜ ಜೀವನದಲ್ಲಿ ಹವ್ಯಾಸಿ ಕಲಾವಿದರಾಗಿ ಹಾಡುಗಾರಿಕೆಯನ್ನೋ, ಪ್ಯಾಡ್,ತಬಲಾ, ಕ್ಯಾಸಿಯೋ,ಮತ್ತು ಕೊಳಲು ವಾದನಗಳ ಜೊತೆಗೆ ಸಂಗೀತದ ಹತ್ತಾರು ಇನಸ್ಟ್ರೂಮೆಂಟ್ ಗಳನ್ನು ನುಡಿಸುವದನ್ನು ಕಲಿತವರಿಂದ ಹಿಡಿದು ಅದರಲ್ಲೇ ಬಿ ಮ್ಯೂಜಿಕ್,ಎಮ್ ಮ್ಯೂಜಿಕ್ ಗಳನ್ನು ಕಲಿತು ಡಾಕ್ಟರೇಟ್ ಪಡೆವರವರೆಗೆ ಹಾಗೂ ಸಂಗೀತ ಕ್ಷೇತ್ರದಲ್ಲಿ ಜೂನಿಯರ್ ,ಸೀನಿಯರ್ ವಿದ್ವತ್ ಮತ್ತು ಅಲಂಕಾರ ಪರೀಕ್ಷೆಗಳನ್ನು ಮುಗಿಸಿದ ಮಹಾನ್ ಕಲಾವಿದರ ತನಕ ಹಲವಾರು ಪ್ರತಿಭೆಗಳು ಭಾಷೆಯ ಹಂಗಿಲ್ಲದೆ ಜನರಿಂದ ಶಬ್ಬಾಶಗಿರಿ ಗಿಟ್ಟಿಸಿಕೊಂಡದ್ದೂ ಇದೆ.
ಅವರಲ್ಲಿ ಪ್ರಮುಖವಾಗಿ ಹಿಂದೂಸ್ತಾನಿ ಸಂಗೀತದ
ಪಂಚಾಕ್ಷರಿ ಗವಾಯಿ, ಪುಟ್ಟರಾಜ ಗವಾಯಿ,ಗಂಗೂ ಬಾಯಿ ಹಾನಗಲ್,ಪಂಡಿತ್ ವೆಂಕಟೇಶ ಕುಮಾರ್ ಮತ್ತು ಪಂಡಿತ್ ರಸೀದ್ ಖಾನ್,ಅಲಿ ಅಕ್ಬರ್ ಖಾನ,ವೆಂಕಟೇಶ್ ಕುಮಾರ್,ವಿನಾಯಕ ತೊರವಿ ಅವರ ತನಕ ಹಾಗೂ ಸರೋದ್ ಮಾಂತ್ರಿಕ ರಾಜೀವ್ ತಾರಾನಾತ್, ತಬಲಾ ಮಾಂತ್ರಿಕ ಝಾಕೀರ್ ಹುಸೇನ್ ಮತ್ತು ಶಹನಾಯಿ ಮಾಂತ್ರಿಕ ಬಿಸ್ಮಿಲ್ಲಾಖಾನ್,ರಿಂದ ಹಿಡಿದು ಗಝಲ್ ಗಾಯನದ ಮೂಲಕವೇ ಜಗದ್ವಿಖ್ಯಾತರಾದ
ನುಸ್ರತ್ ಫತೇಹ್ ಅಲಿ ಖಾನ್ , ಅಮಾನತ್ ಅಲಿ ಖಾನ್ , ಬೇಗಂ ಅಖ್ತರ್, ತಲತ್ ಮಹಮೂದ್ , ಮೆಹದಿ ಹಸನ್ , ಅಬಿದಾ ಪರ್ವೀನ್ , ಜಗಜಿತ್ ಸಿಂಗ್ , ಫರೀದಾ ಖಾನಮ್ ಮತ್ತು ಉಸ್ತಾದ್ ಗುಲಾಮ್ ಅಲಿ , ಮೊಯಿನುದ್ದೀನ್ ಅಹಮದ್,ಪಂಕಜ್ ಉದಾಸ್,
ಹರಿಹರನ್ ಮತ್ತು ಕನ್ನಡದ ಗಝಲ್ ಗಾಯಕರಾದ ರವೀಂದ್ರ ಹಂದಿಗನೂರು, ತನಕ ಜಗತ್ತನ್ನು ತಮ್ಮ ಹಾಡುಗಾರಿಕೆ ಮತ್ತು ಸಂಗೀತದ ಮೂಲಕ ಬೆರಗುಗೊಳಿಸಿದ ಅದೆಷ್ಟೋ ಮಹಾನ್ ಚೇತನಗಳು ಇಂದು ನಮ್ಮೊಂದಿಗೆ ಇಲ್ಲ ಅನ್ನುವ ಕೊರಗಿನೊಂದಿಗೆ ನಾನು ಹೇಳ ಹೊರಟಿರುವದು ಸರ್ಕಾರದಿಂದ ಅಸಡ್ಡಗೆ ಒಳಗಾದ ಸಂಗೀತ ಕಲಾವಿದರ ಬಗ್ಗೆ.
ದುರಂತವೆಂದರೆ ಒಂದು ಕಾಲದಲ್ಲಿ ಇಂತಹ ಸಿನೆಮಾ ನೋಡಿಕೊಂಡು ಆ ಹಾಡುಗಳ ಟ್ರ್ಯಾಕ್ ಮ್ಯೂಜಿಕ್ ಇಲ್ಲದೆಯೂ ಹಾಡುವಾಗ “ಏ ತಮ್ಮ ಚಂದ್ ಹಾಡ್ತಿ ನೋಡು ಅನ್ನಿಸಿಕೊಂಡು,ತಂಗೀ ಭಾಳ ಚಂದ್ ಧ್ವನಿವಾ ನಿಂದು ಮತ್ ಮತ್ ಕೇಳು ಹಂಗ್ ಐತಿ ನೋಡವಾ ಹಾಡುದು ಬಿಡಬ್ಯಾಡ ಮುಂದವರಸು” ಅಂದವರ ಮಾತನ್ನೇ ಪ್ರೇರಣೆಯಾಗಿ ತೆಗೆದುಕೊಂಡು ಹೆಸರು ಮಾಡುವ ಬಯಕೆ ಇಂದಲೋ,ತಾವೂ ಕೂಡ ಸಂಗೀತ ಶಿಕ್ಷಕರಾಗಿ ಒಂದಷ್ಟು ಗೌರವದ ಬದುಕು ಕಟ್ಟಿಕೊಳ್ಳಬಹುದು ಅನ್ನುವ ಆಸೆಯಿಂದಲೋ ವಿದ್ಯಾದೇವಿ ಸರಸ್ವತಿಯ ಆರಾಧಕರಾಗಿ ನಿಂತ ಅದೆಷ್ಟೋ ಜೀವಗಳ ದುರಂತದ ಕಥೆಯನ್ನು ಖಂಡಿತ ನಿಮಗೆಲ್ಲ ಪರಿಚಯಿಸಲೇ ಬೇಕು.
ಕಳೆದ ಹಲವಾರು ದಶಕಗಳಿಂದ ಶಾಲೆಗಳಲ್ಲಿ ಆಗಸ್ಟ್ ಹದಿನೈದು, ಜನೇವರಿ ಇಪ್ಪತ್ತಾರು, ಶಾಲೆಯ ವಾರ್ಷಿಕೋತ್ಸವದ ದಿನಗಳಂದು ಹಾರ್ಮೋನಿಯಂ, ಪೇಟೆ,ತಬಲಾ ಹಿಡಿದು ಮಕ್ಕಳನ್ನು ಒಂದು ಚಂದದ ಹಾಡಿಗೆ,ಡ್ಯಾನ್ಸಿಗೆ ಸಿದ್ದಪಡಿಸುವ ಸಂಗೀತ ವಿದ್ಯಾ ಪಾರಂಗತರು ಉಳಿದ ದಿನಗಳಲ್ಲಿ ಯಾರದೋ ಮನೆಯ ಮದುವೆ,ಸೀಮಂತ,ಹುಟ್ಟುಹಬ್ಬಗಳಲ್ಲಿ ಹೊಟ್ಟೆಪಾಡಿಗಾಗಿ ಹಾಡುವ ಪರಿಸ್ಥಿತಿ ಎದುರಾಗಿರುವದು ಬಹುತೇಕ ಜನರು ಮರೆತೇ ಬಿಟ್ಟಿದ್ದಾರೆ.
ಹಾಡುಗಾರ ಗಾಯಕ ಅಥವಾ ಗಾಯಕಿ ಒಬ್ಬರು ತಮ್ಮ ನೆಚ್ಚಿನ ಗೀತೆಗಳನ್ನು ಪ್ರಸ್ತುತ ಪಡಿಸಿದಾಗ ಒನ್ಸ್ ಮೋರ್ ಅನ್ನುವ,ಜೋರಾಗಿ ಚಪ್ಪಾಳೆ ತಟ್ಟುವ,ಬಾಯಿಗೆ ಅಡ್ಡ ಬೆರಳಿಟ್ಟು ವಿಷಲ್ ಹೊಡೆದು, ಒಂದಷ್ಟು ಖುಷಿಯಿಂದ ಐವತ್ತು, ನೂರರಿಂದ ಹಿಡಿದು ಐನೂರರ ತನಕ ಮುಯ್ಯಿ ಕೊಟ್ಟು ಮತ್ತೆ ಅದೇ ಹಾಡನ್ನು ಹಾಡಿಸುವ ಕಲಾ ಆರಾಧಕರಿಗೆ ತಿಳಿಯದ ವಿಷಯವೆಂದರೆ ಬಹುತೇಕ ಕಲಾವಿದರ ಬದುಕು ಇಂದು ನೀರ ಮೇಲಿನ ಗುಳ್ಳೆಯಂತಾಗಿದೆ.ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಅನ್ನುವಂತೆ ಅಂತರಾಳದೊಳಗೆ ಕರಗದ ನೋವು ತುಂಬಿಕೊಂಡು ಭಾವಗೀತೆಗಳಿಗೆ ಭಾವ ತುಂಬುವ,ಯಾವುದೋ ಒಂದು ಹಾಡನ್ನು ಸುಶ್ರಾವ್ಯವಾಗಿ ಹಾಡಿದರೂ ಕೂಡ ಅವರ ಬದುಕಿನ ತಾಳ ಮತ್ತು ತಂತಿಗಳು ಅದು ಯಾವಾಗಲೋ ದಿಕ್ಕು ತಪ್ಪಿವೆ ಅನ್ನುವದು ಕೂಡ ಅಷ್ಟೇ ನಿಜ.
ಮದುವೆ ಸೀಜನ್ನುಗಳಲ್ಲಿ ಅವರೆಲ್ಲ ಬ್ಯೂಜಿ ಅನ್ನಿಸಿದರೂ ಕೂಡ ವರ್ಷದ ಮುನ್ನೂರ ಅರವತ್ತೈದು ದಿನಗಳಲ್ಲಿ ಒಂದೆರಡು ತಿಂಗಳು ಕೆಲಸ ಪಡೆಯುವ, ಮತ್ತು ಅಷ್ಟರಲ್ಲೇ ಸಿಕ್ಕಷ್ಟು ಗೌರವ ಧನದಿಂದ ಬದುಕು ಸಾಗಿಸುವ ಕಲಾವಿದರಿಂದ ಹಿಡಿದು ಒಂದು ಹಾಡು ಹಾಡಲು,ರಾಗ ಸಂಯೋಜನೆ ಮಾಡಲು ಲಕ್ಷಗಳ ಸಂಭಾವಣೆ ಪಡೆಯುವ ಬೆರಳೆಣಿಕೆಯ ಅದೃಷ್ಟವಂತರ ನಡುವೆ ಬಹುತೇಕ ನಮ್ಮ ಕಣ್ಣಿಗೆ ಕಾಣದೇ ಉಳಿಯುವ ಬದುಕೆಂದರೆ ಅದು ಸಂಗೀತ ಕಲಾವಿದರ ತೆರೆಯ ಹಿಂದಿನ ಬದುಕು ಅಂದರೆ ಬಹುಶಃ ತಪ್ಪಾಗಲಿಕ್ಕಿಲ್ಲ.
ಬಣ್ಣದ ಲೋಕ,ರಂಗಭೂಮಿ, ಮತ್ತು ಸಂಗೀತ ಕ್ಷೇತ್ರದಲ್ಲಿ ಬಹುತೇಕ ಹೆಸರು ಮಾಡಿದ ಕಲಾವಿದರಲ್ಲಿ ಎಷ್ಟೋ ಜನ ತೆರೆಯ ಮೇಲೆ ಕಾಣುವ ಖುಷಿಗಿಂತ ನಿಜ ಜೀವನದಲ್ಲಿ ಅನುಭವಿಸುವ ನೋವುಗಳೇ ಹೆಚ್ಚು.
ಅವರ ಕಲೆಯನ್ನು ಕಂಡು ಅವರಿಗೂ ಒಂದಷ್ಟು ಅಭಿಮಾನಿಗಳು ಅಂತ ಹುಟ್ಟಿಕೊಂಡರೂ ಕೂಡ ಅದು ಕ್ಷಣಿಕ, ಒಂದೊಮ್ಮೆ ಅವಕಾಶಗಳು ತಾವಾಗೇ ಒಲಿದು ಬಂದರೂ ಕೂಡ ಅಂತಹ ಅವಕಾಶಗಳೂ ಕೂಡ ಆಗಿನ ಮಟ್ಟಿಗೆ ಸಿಕ್ಕ ಚಿನ್ನದ ಸಿಂಹಾಸನವಷ್ಟೇ ಆ ಬಳಿಕ ಕೆಳಗೆ ಇಳಿಯಲೇ ಬೇಕು ಅನ್ನುವದು ಬಹುತೇಕ ಜನರಿಗೆ ತಿಳಿಯದೇ ಉಳಿಯುವ ವಿಷಯವೇ ಸರಿ.
ಈಗಾಗಲೇ ಡಿ ಎಡ್,ಸಿ ಪಿ ಎಡ್,ಎಮ್ ಎ,ಎಮ್ ಎಡ್,ಡಿ ಎಮ್ ಸಿ ಅಂತಹ ಕೋರ್ಸುಗಳ ಜೊತೆಗೆ ಸಂಗೀತವನ್ನೆ ಉಸಿರಾಗಿಸಿಕೊಂಡು ಕಲಾದೇವತೆಯನ್ನು ಆರಾಧಿಸುತ್ತ ತಮ್ಮ ಕಲೆಯನ್ನೇ ನಂಬಿ ಬದುಕುತ್ತಿರುವ ಅದೆಷ್ಟೋ ಕಲಾವಿದರು ತಾವು ಕೂಡ ಶಿಕ್ಷಕರಾಗಿ ಮಕ್ಕಳಿಗೆ ಆ ವಿದ್ಯೆಯ ಧಾರೆ ಎರೆಯುವ ಕನಸು ಕಂಡಿದ್ದರೂ ಕೂಡ ಹಲವಾರು ದಶಕಗಳಿಂದ ಖಾಲಿ ಉಳಿದ ಸಂಗೀತ ಶಿಕ್ಷಕರ ನೇಮಕಾತಿ ಮತ್ತು ಬದಲಾಗುತ್ತಿರುವ ಶಿಕ್ಷಣ ಪಧ್ಧತಿಯ ನಡುವೆ ಅದೆಷ್ಟೋ ಜನರ ಕನಸುಗಳು ಭಗ್ನವಾಗುತ್ತಿದ್ದು ಸರ್ಕಾರ ಕೂಡಲೇ ಸಂಗೀತ ಶಿಕ್ಷಕರ,ಚಿತ್ರಕಲಾ ಮತ್ತು ದೈಹಿಕ ಶಿಕ್ಷಕರ ನೇಮಕಾತಿಯ ಮೂಲಕ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗುವ ಶಿಕ್ಷಣ ಪದ್ಧತಿಯನ್ನು ಅಳವಡಿಸಿಕೊಂಡು ಮತ್ತಷ್ಟು ಜನರಿಗೆ ಉದ್ಯೋಗ ಅವಕಾಶ ಕೊಟ್ಟು ಬದುಕಿಗೆ ಆಸರೆ ಆದೀತು ಅನ್ನುವ ನಂಬಿಕೆಯಲ್ಲಿ ಇಂದಿಗೂ ಜಾತಕ ಪಕ್ಷಿಯಂತೆ ಕಾಯುತ್ತಿರುವ ಅದೆಷ್ಟೋ ನಿರುದ್ಯೋಗಿ ಜನರಿಗೆ ನನ್ನ ಈ ಲೇಖನವನ್ನ ಅರ್ಪಿಸುತ್ತಿದ್ದೇನೆ.
ಜನಪದ ಹೆಸರಿನಲ್ಲಿ ಡಬಲ್ ಮೀನಿಂಗ್ ಹಾಡು ಹಾಡುವ,ಒಂದು ಸಿನೆಮಾ ಸಾಹಿತ್ಯವನ್ನೇ ತಿರುಚಿ ಬರೆದು,ಅಶ್ಲೀಲವಾಗಿಸುವ ಜನರ ನಡುವೆ ಸಂಗೀತ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ಕೊಟ್ಟು ಸಂಗೀತದ ಘನತೆ ಮತ್ತು ಪಾವಿತ್ರ್ಯತೆ ಕಾಪಾಡಿದ ಅದೆಷ್ಟೋ ಜನರ ಹೊಟ್ಟೆಗೆ ಇಂದು ತಣ್ಣೀರ ಬಟ್ಟೆಯೇ ಗತಿಯಾಗಿರುವದು ದುರಂತವೇ ಸರಿ.
ಕಲೆಯನ್ನು ಆರಾಧಿಸುವವರು ಕಲಾವಿದರನ್ನು ಗೌರವಿಸುವಂತಾದರೆ ಸಾಕು ಅನ್ನುವ ಮಾತಿನೊಂದಿಗೆ
ಸರ್ವೇಜನಾಹ ಸುಖಿನೋಭವಂತು….ಏನಂತೀರಿ?
ದೀಪಕ ಶಿಂಧೇ
9482766018