ಆ ಕಾಶದೆತ್ತರಕ್ಕೆ ಮರ ಬೆಳೆದರೂ ಅದನ್ನು ಅಷ್ಟೆತ್ತರಕ್ಕೆ ಬೆಳೆಸಿದ ಬೇರು ಮಾತ್ರ ಭೂಮಿಯ ಆಳದಲ್ಲಿರುತ್ತದೆ. ಇದು ವಾಸ್ತವ ಚಿತ್ರಣ. ಮರದ ಬೇರುಗಳು ಹಳೆಯದಾದಷ್ಟು ಆಳವಾದಷ್ಟು ಆ ಮರದಲ್ಲಿ ಮೊಳೆಯುವ ಚಿಗುರು ಬಹಳ ಸೊಗಸು. ಹಾಗೆಯೇ ನಾವು ಸಹ ನಮ್ಮ ಸಂಸ್ಕೃತಿಯ ತತ್ವವನ್ನು ಸತ್ವವನ್ನು ಉಳಿಸಿಕೊಂಡು ಹೋದಷ್ಟು ಜೀವನ ಸೊಗಸು. ಅಷ್ಟೇ ಅಲ್ಲ ಜಗತ್ತಿನ ಯಾವ ವಸ್ತುವನ್ನು ಪ್ರೀತಿಯ ದೃಷ್ಟಿಯಲ್ಲಿ ನೋಡುವುದರಿಂದ ನೋಡಿದ ವಸ್ತು ವ್ಯಕ್ತಿನಿಷ್ಟತೆಯಲ್ಲಿ ಕರಗಿ ಹೋಗುತ್ತದೆ. ಜಗತ್ತಿನ ವಸ್ತುಗಳನ್ನು ಇದ್ದ ಹಾಗೆಯೇ ನೋಡಲು ಬುದ್ಧಿವಂತಿಕೆ ಬೇಕಾಗುತ್ತದೆ.
ಇತ್ತೀಚಿನ ದಶಕಗಳಲ್ಲಿ ತಂತ್ರಜ್ಞಾನದಲ್ಲಿ ಜ್ಞಾನ, ವಿಜ್ಞಾನದಲ್ಲಿ, ಸಂಶೋಧನೆಗಳಲ್ಲಿ, ಆವಿಷ್ಕಾರಗಳಲ್ಲಿ ಕ್ರಾಂತಿ ಉಂಟಾಗಿದೆ. ಮನರಂಜನೆಗೆ ಮತ್ತು ಐಶಾರಾಮಿ ಜೀವನಕ್ಕೆ ಸಂಬಂಧಿಸಿದಂತೆ ಸಾಕಷ್ಟು ಎನಿಸುವಷ್ಟು ಅನುಭವವಾಗುತ್ತಿದೆ. ಕಾಲು ನೆಲದ ಮೇಲಿದ್ದರೂ ಕಣ್ಣು ಆಕಾಶದತ್ತ ನೋಡುತ್ತಿರುತ್ತದೆ. ಆಗಸದತ್ತ ನೆಟ್ಟ ದೃಷ್ಟಿಯಿಂದ ಮತ್ತೆ ಮತ್ತೆ ನಿರೀಕ್ಷೆಗಳು ಗರಿಗೆದರುತ್ತವೆ.
ಮಕ್ಕಳಿಂದ ಹಿಡಿದು ವೃದ್ಧರವರೆಗೆ ಪ್ರತಿಯೊಬ್ಬರಿಗೂ ಆಗಸದೆತ್ತರಕ್ಕೆ ಹಾರುವುದೆಂದರೆ ಸಂತಸ ಉಲ್ಲಾಸ ಆದ್ದರಿಂದಲೇ ಆಗಸದಲ್ಲಿ ವಿಮಾನದ ಸದ್ದು ಕೇಳಿದರೆ ಸಾಕು ನಭದಲ್ಲಿ ಚಿಕ್ಕದಾಗಿ ಕಾಣುವ ವಿಮಾನಕ್ಕೆ ಕೈ ಮಾಡುವ ಮಕ್ಕಳನ್ನು, ವಿಮಾನ ಯಾನ ಮಾಡಿದವರು ಸಹ ಹೊರಗೆ ಬಂದು ಹರ್ಷಿಸುವವರನ್ನು ನೋಡಿಯೇ ಇರುತ್ತೇವೆ. ಮೂಲತಃ ಮನುಷ್ಯನಿಗೆ ಮೇಲೆತ್ತರಕ್ಕೆ ಏರುವುದೆಂದರೆ ಎಲ್ಲಿಲ್ಲದ ಕೌತುಕ. ತನ್ನ ಅನೇಕಾನೇಕ ಕಲ್ಪನಾಲೋಕದ, ಮಾಯಾಲೋಕದ ಕನಸುಗಳನ್ನು ವಾಸ್ತವಿಕತೆಗೆ ಇಳಿಸಿದ್ದಾನೆ ಮನುಷ್ಯ.
ಅದರ ಫಲವೇ ನಾವೀಗ ವಾಸಿಸುವ ಜಗತ್ತು.
ವಿಮಾನದ ಆವಿಷ್ಕಾರ ವಿಶ್ವವನ್ನು ಸಣ್ಣದಾಗಿಸಿತು. ಹೀಗೆ ಬೌದ್ಧಿಕವಾಗಿ ಮೇಲಕ್ಕೆ ಹಾರುವ ಭರದಲ್ಲಿ ಭಾವನಾತ್ಮಕವಾಗಿ ನೆಲದ ಬೇರುಗಳನ್ನು ಮರೆಯುವುದು ಖಂಡಿತ ಅಪಾಯಕಾರಿ. ಮಾನವ ನಿರ್ಮಿಸಿದ ಬಹು ಸಂಖ್ಯೆಯ ದಾಖಲೆಗಳು ಇತಿಹಾಸದ ಪುಟಗಳಲ್ಲಿ ಸೇರಿದ್ದು, ಕಂಡು, ಕೇಳಿ ಬೆರಗಾಗುತ್ತೇವೆ. ನೆಲಕ್ಕೆ ಕಾಲು ಹಚ್ಚದ ಹಾಗೆ ಕುಣಿಯುತ್ತವೆ. ಸಂಸ್ಕೃತಿ ಸಂಸ್ಕಾರದ ಬೇರುಗಳ ಕಾವು ಹೃದಯ ಮತ್ತು ಮನಸ್ಸಿನಲ್ಲಿ ಪ್ರತಿಧ್ವನಿಸಬೇಕು. ಶೋಕಿಯ ಹೆಸರಲ್ಲಿ ಹೇಳಬೇಕಾದ್ದನ್ನು ಹೇಳಲಾಗದೇ ನೀರಿನಿಂದ ಹೊರತೆಗೆದ ಮೀನಿನಂತೆ ಚಡಪಡಿಸುವ ಸ್ತಿತಿ ಉಂಟಾಗುತ್ತದೆ. ತನ್ನಷ್ಟಕ್ಕೆ ತನ್ನನ್ನು ಬಿಟ್ಟಲ್ಲಿ ನೀರಿನಂತೆ ಮಾನವನ ಮನಸ್ಸು ಕೆಳಗಡೆಗೆ ಕಷ್ಟದಿಂದ ಸುಖದ ಕಡೆಗೆ ಹರಿಯುತ್ತದೆ. ಮರದ ಬೇರುಗಳ ನಿರ್ಲಕ್ಷಿಸಿ ಹೂ ಹಣ್ಣು ಟೊಂಗೆಗಳು ಹುಲುಸಾಗಿ ಬೆಳೆಯಲಿ ಎಂದು ವಿಚಾರ ಮಾಡುವುದು ಮೂರ್ಖತನ. ಬೇರು ಮರೆತು ಹೂ ಹಣ್ಣು ನಿರೀಕ್ಷಿಸುವುದೆಂದರೆ ಹೊಟ್ಟಿನ ಬಣಿವೆಯಲ್ಲಿ ಸೂಜಿಯನ್ನು ಹುಡುಕಿದಂತೆ. ಬಾನನ್ನು ಮುಟ್ಟುವಂತೆ ಹಾರುವ ಗಾಳಿಪಟದ ಸೂತ್ರ ಕೆಳಗೆ ಇರುತ್ತದೆ. ಅದನ್ನು ಮರೆತರೆ ಗಾಳಿಪಟ ಕಸದ ಡಬ್ಬಿ ಸೇರಬೇಕಾಗುತ್ತದೆ. ಅರಿತು ನಡೆದರೆ ಸ್ವರ್ಗ ಸುಖ ಅಲ್ಲವೇ?
===============
ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ ೯೪೪೯೨೩೪೧೪೨