- 66 ಲಕ್ಷ ರೂ. ವೆಚ್ಚದ ಸಿಸಿ ಕ್ಯಾಮರಾಗಳು ಎಲ್ಲಿ ?
- ಪೋಲಿಸ ಇಲಾಖೆಯ ವೆಚ್ಚ ಬರೊಬ್ಬರಿ 748 ಲಕ್ಷ ರೂ. ಗಳು
ಮೂಡಲಗಿ: 2021 ರಲ್ಲಿ ಬೆಳಗಾವಿಯ ಸುವರ್ಣ ಸೌಧದಲ್ಲಿ 10 ದಿವಸಗಳ ಕಾಲ ನಡೆಸಲಾದ ಚಳಿಗಾಲದ ಅಧಿವೇಶನದ ಸಮಯದಲ್ಲಿ ಅಧಿವೇಶನದ ಬಂದೋಬಸ್ತ ಕರ್ತವ್ಯ, ಭದ್ರತಾ ವ್ಯವಸ್ಥೆಗಾಗಿ ನಿಯೋಜನೆ ಮಾಡಲಾಗಿದ್ದ ಪೋಲಿಸ ಅಧಿಕಾರಿ / ಸಿಬ್ಬಂದಿಗಳ ಉಟೋಪಚಾರ ಮತ್ತು ವಸತಿ ವ್ಯವಸ್ಥೆಗೆ ಅಲ್ಲದೇ ಸಿ.ಸಿ. ಕ್ಯಾಮರಾಗಳನ್ನು ಅಳವಡಿಸುವುದು ಸೇರಿದಂತೆ ಪೋಲಿಸ ಇಲಾಖೆಯಿಂದ ಒಟ್ಟು 7,48,79,132=00 ರೂ. ಗಳು ವೆಚ್ಚವಾಗಿರುವ ಅಂಶವು ಮಾಹಿತಿ ಹಕ್ಕಿನಿಂದ ಬೆಳಕಿಗೆ ಬಂದಿರುವುದಾಗಿ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಹೇಳಿದ್ದಾರೆ.
ಪ್ರಕಟಣೆಯೊಂದರಲ್ಲಿ ಅವರು, ಅಧಿವೇಶನ ಸಮಯದಲ್ಲಿ ಭದ್ರತೆಗಾಗಿ 5 ಜನ ಎಸ್.ಪಿ. ಗಳು, 8 ಜನ ಹೆಚ್ಚುವರಿ ಎಸ್.ಪಿ. ಗಳು, 45 ಜನ ಡಿ.ವಾಯ್.ಎಸ್.ಪಿ. ಗಳು 93 ಜನ ಸಿ.ಪಿ.ಐ. ಗಳು, 204 ಜನ ಪಿ.ಎಸ್.ಐ. ಗಳು ಅಲ್ಲದೇ 4536 ಜನ ಪೋಲಿಸ ಪೇದೆಗಳನ್ನು ಬೇರೆ ಬೇರೆ ಜಿಲ್ಲೆಗಳಿಂದ ನಿಯೋಜನೆ ಮಾಡಲಾಗಿತ್ತು ಎಂದಿದ್ದಾರೆ.
ಪೋಲಿಸ ಇಲಾಖೆಯ ಪ್ರಮುಖ ವೆಚ್ಚಗಳ ವಿವರ ಇಂತಿದೆ:
ಅ.ನಂ, ವಿವರ ಹಾಗೂ ವೆಚ್ಚವಾದ ಹಣ
- ಕರ್ತವ್ಯನಿರತ ಪೋಲಿಸ ಅಧಿಕಾರಿ / ಸಿಬ್ಬಂದಿ ವಸತಿಗಾಗಿ ಮಾಡಲಾದ ವೆಚ್ಚ: 3,28,99,816=00
- ಊಟ, ಉಪಾಹಾರಕ್ಕಾಗಿ ಮಾಡಲಾದ ವೆಚ್ಚ ರೂ. 2,46,61,060=00
- ಭದ್ರತಾ ವ್ಯವಸ್ಥೆ (ಸಿ.ಸಿ. ಕ್ಯಾಮರಾ ವೆಚ್ಚ) 65,96,952=00
- 66 ಬಸ್‍ಗಳಿಗೆ ಪಾವತಿಸಲಾದ ಬಾಡಿಗೆ ಮೊತ್ತ ರೂ. 49,79,280=00
- ಇತರೆ ಬಾಬ್ತುಗಳ ವೆಚ್ಚ ರೂ. 58,02,024=00
ಒಟ್ಟು ವೆಚ್ಚವಾದ ಹಣ ರೂ. 7,48,79,132=00
ಇವುಗಳಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ವೆಚ್ಚದ ಉದ್ದೇಶವನ್ನು ನಮೂದಿಸದೇ ಇತರ ಬಾಬ್ತುಗಳಿಗಾಗಿ ಎಂದು 58,02,024=00 ರೂ. ಗಳನ್ನು ವೆಚ್ಚ ಮಾಡಲಾಗಿದೆ. ಇದು ಸಾರ್ವಜನಿಕರ ಹಲವಾರು ಅನುಮಾನಗಳಿಗೆ ಸಾಕ್ಷಿಯಾಗಿರುವುದು.
ಪ್ರತಿಸಲ ಬೆಳಗಾವಿಯಲ್ಲಿ ಅಧಿವೇಶನ ನಡೆಸುತ್ತಿರುವ ಸಮಯದಲ್ಲಿ ಪೋಲಿಸ ಇಲಾಖೆಯವರು ಸಿ.ಸಿ. ಕ್ಯಾಮರಾಗಳನ್ನು ಖರೀದಿಸುತ್ತಲೇ ಬಂದಿರುತ್ತಾರೆ ಅಧಿವೇಶನದ ನಂತರ ಲಕ್ಷಾಂತರ ರೂ. ಗಳ ಬೆಲೆಬಾಳುವ ಕ್ಯಾಮರಾಗಳು ಎಲ್ಲಿಗೆ ಸೇರುತ್ತವೆ ಎಂಬುದು ಯಕ್ಷ ಪ್ರಶ್ನೆಯಾಗಿರುವುದು. ಆದರೂ ಸಹ 2021 ರ ಅಧಿವೇಶನದಲ್ಲಿ 66 ಲಕ್ಷ ರೂ. ಗಳ ಸಿ.ಸಿ. ಕ್ಯಾಮರಾಗಳನ್ನು ಖರೀದಿಸಿದ ಇಲಾಖೆಯ ನಡೆಯನ್ನು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಊಟೋಪಚಾರಕ್ಕೆ ಎಂದು 246 ಲಕ್ಷ ರೂ. ವೆಚ್ಚ ಮಾಡಿದ್ದರೂ ಕೂಡಾ ಕಳೆದ ಅಧಿವೇಶನದ ಸಮಯದಲ್ಲಿ ಬಂದೋಬಸ್ತ ಸಲುವಾಗಿ ಆಗಮಿಸಿದ ಪೋಲಿಸರಿಗೆ ಸರಿಯಾಗಿ ಊಟದ ವ್ಯವಸ್ಥೆ ಮಾಡಿಲ್ಲವೆಂದು ಕರ್ತವ್ಯನಿರತ ಪೋಲಿಸರು ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾಗಿ ಮಾಧ್ಯಮಗಳು ವರದಿ ಮಾಡಿದ್ದನ್ನು ಜನರು ಇನ್ನೂ ಮರೆತಿರುವುದಿಲ್ಲ.
ಒಟ್ಟಾರೆಯಾಗಿ ಚಳಿಗಾಲದ ಅಧಿವೇಶನ ಸಲುವಾಗಿ ಸರ್ಕಾರ ಸಾಕಷ್ಟು ಹಣ ನೀಡುತ್ತಿದ್ದರು ಕೂಡಾ ಕರ್ತವ್ಯನಿರತ ಪೋಲಿಸರಿಗೆ ಸರಿಯಾದ ಊಟ ಹಾಗೂ ವಸತಿ ವ್ಯವಸ್ಥೆ ಸಿಗದೇ ಇರುವುದು ಹಣ ದುರ್ಬಳಕೆಯಾಗುತ್ತಿರುವುದಕ್ಕೆ ಸಾಕ್ಷಿಯಾಗಿದೆ.
ದಯವಿಟ್ಟು ಜಿಲ್ಲಾಡಳಿತ ಹಾಗೂ ಹಿರಿಯ ಪೋಲಿಸ ಅಧಿಕಾರಿಗಳು ಇನ್ನೂ ಮೇಲಾದರು ದುಂಡು ವೆಚ್ಚಕ್ಕೆ ಕಡಿವಾಣ ಹಾಕಿ ಪಾರದರ್ಶಕ ಲೆಕ್ಕ ಪತ್ರ ನೀಡಬೇಕೆಂದು ಸಾರ್ವಜನಿಕ ಆಶಯಾಗಿದೆ ಎಂದು ಭೀಮಪ್ಪ ಗಡಾದ ತಿಳಿಸಿದ್ದಾರೆ