spot_img
spot_img

ಕನ್ನಡದ ಖ್ಯಾತ ಸಾಹಿತಿ ದೇವುಡು ನರಸಿಂಹಶಾಸ್ತ್ರಿ ಅವರ ಜನುಮ ದಿನ

Must Read

- Advertisement -

ಕನ್ನಡ ಸಾಹಿತ್ಯಲೋಕದ ಮಹತ್ಕಾದಂಬರಿಗಳಾದ  ‘ಮಹಾಬ್ರಾಹ್ಮಣ’, ‘ಮಹಾಕ್ಷತ್ರಿಯ’, ‘ಮಹಾದರ್ಶನ’, ‘ಮಯೂರ’, ‘ಅಂತರಂಗ’ ಮುಂತಾದವನ್ನು ಸೃಷ್ಟಿಸಿದವರು ದೇವುಡು ನರಸಿಂಹ ಶಾಸ್ತ್ರಿಗಳು.

ರಂಗಭೂಮಿ ಮತ್ತು ಚಲನಚಿತ್ರಗಳಲ್ಲೂ ದೇವುಡು ಕೆಲಸ ಮಾಡಿದವರು. ಮೈಸೂರಿನಲ್ಲಿ ರಾಜಪುರೋಹಿತರೂ, ಆಸ್ಥಾನ ಪಂಡಿತರೂ ಎಂದು ಹೆಸರುವಾಸಿಯಾದ ವಂಶದಲ್ಲಿ ಡಿಸೆಂಬರ್ 27, 1897ರಂದು ದೇವುಡು ಜನಿಸಿದರು. ಇವರ ತಂದೆ 1880ರಲ್ಲಿ ಸ್ಥಾಪನೆಯಾದ ಲಕ್ಷ್ಮೀನರಸಿಂಹ ಪ್ರೆಸ್ ಸ್ಥಾಪಕರಲ್ಲಿ ಒಬ್ಬರಾದ ವೇದಶಾಸ್ತ್ರ ಸಂಪನ್ನರು.

ದೇವುಡು ಹನ್ನೆರಡು ವರ್ಷಗಳ ವಯಸ್ಸಲ್ಲೇ ರಾಮಾಯಣ, ಭಾರತ, ಭಾಗವತ, ಬ್ರಹ್ಮಾಂಡ ಪುರಾಣಗಳನ್ನು ಓದಿ ಮುಗಿಸಿದ್ದರು. ತಮ್ಮ ಐದನೇ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡರೂ ತಮ್ಮ ಮನೆತನದ ಹಿರಿಮೆ-ಗರಿಗಳನ್ನು, ಆಚಾರ-ಸಂಪ್ರದಾಯಗಳನ್ನು ತಮ್ಮ ವ್ಯಕ್ತಿತ್ವದಲ್ಲಿ ಬೆಳೆಸಿಕೊಂಡರು. 

- Advertisement -

ಹೆಂಗಸರು ಹೇಳುವ ಹಾಡುಗಳನ್ನು ಕೆಳುವುದರಲ್ಲೂ ಆಸಕ್ತಿ ಮತ್ತು ಉತ್ಸಾಹ ಅವರಿಗಿತ್ತು. 1912ರ ವೇಳೆಗೇ ಛಂದಸ್ಸು, ವ್ಯಾಕರಣಗಳನ್ನು ಕಲಿತು ಪದ್ಯಗಳನ್ನು ರಚಿಸಿದರು. ಒಂದು ಕಡೆ ವ್ಯಾಸಂಗ ಮತ್ತೊಂದು ಕಡೆ ನಾಟಕಗಳಿಗೆ ಹಾಡು ಬರೆದು ನಟಿಸುವುದು ಜೊತೆಜೊತೆಯಲ್ಲಿ ಸಾಗಿ ರಂಗಭೂಮಿಯ ಪರಿಚಯವಾಯಿತು. 

ವೈದಿಕ ವಿದ್ಯೆ ಕಲಿತವರಾಗಿದ್ದರೂ ಮುಂದೆ 1917-1922ರ ಅವಧಿಯಲ್ಲಿ ಅದ್ಯಯನನಿರತರಾಗಿ ಬಿ.ಎ. ಎಂ.ಎ ಪದವಿಗಳನ್ನು ಪಡೆದರು. ಕನ್ನಡ ಸಾಹಿತ್ಯಲೋಕದ ಮತ್ತೋರ್ವ ವಿದ್ವಾಂಸ ವಿ.ಸೀ ಅವರು ಇವರ ಸಹಪಾಠಿಗಳಾಗಿದ್ದರು. ಡಾ. ರಾಧಾಕೃಷ್ಣನ್, ಪ್ರೊ.ಎಂ. ಹಿರಣ್ಣಯ್ಯ ಅಂತಹ ಮಹನೀಯರು ಇವರ ಗುರುಗಳು.  1923-24ರಲ್ಲಿ ಒಂದು ವರ್ಷ ಮೈಸೂರಿನ ಸದ್ವಿದ್ಯಾಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಕಾರ್ಯನಿರ್ವಹಿಸಿದರು. 

ಸ್ವತಂತ್ರ ಪ್ರವೃತ್ತಿಯವರಾದ ದೇವುಡು ಅದನ್ನು ಬಿಟ್ಟು ತಿ.ತಾ ಶರ್ಮ ಅಂತಹ ಗೆಳೆಯರ ಒತ್ತಾಸೆಯ ಮೇರೆಗೆ 1925ರಲ್ಲಿ ಬೆಂಗಳೂರಿಗೆ ಬಂದರು.  

- Advertisement -

ದೇವುಡು ಅವರಿಗೆ ಬರೆಯುವ ತವಕವಿದ್ದರೂ ಪುಸ್ತಕವನ್ನು ಕೊಂಡು ಓದುವ ಜನಾಭಿರುಚಿ ಕಾಣದೆ ಅಕ್ಷರ ಪ್ರಚಾರ ಕೈಗೊಂಡರು. ಇವರ ಕೆಲಸಕ್ಕೆ ಸರ್ಕಾರ ಕೂಡ ಕೈಜೋಡಿಸಿತು. ಕೆಂಪೇಗೌಡ ರಸ್ತೆಯಲ್ಲಿ ‘ಆರ್ಯ ವಿದ್ಯಾ ಶಾಲೆ’ಯನ್ನು ಸ್ಥಾಪಿಸಿದ್ದು ದೇವುಡು ಅವರ ಮೊದಲ ಮಹಾಸಾಧನೆ. ಅಲ್ಲಿ ಮುಖ್ಯೋಪಾಧ್ಯಾಯರಾಗಿ ಐದು ವರ್ಷಗಳ ಕಾಲ ತಮ್ಮ ಸ್ವತಂತ್ರ ವಿಚಾರಗಳು ಕಾರ್ಯಾಗತವಾಗಲು ಶ್ರಮಿಸಿದರು.

ಮಕ್ಕಳ ವಿದ್ಯಾಭ್ಯಾಸದ ಮಟ್ಟ ಮೇಲಕ್ಕೆತ್ತಲು ‘ಮಕ್ಕಳ ಪುಸ್ತಕ’ ಮುಂತಾದ ಪ್ರಕಟಣೆ ಮಾಡಿದರು. ಪಂಜೆ ಮಂಗೇಶರಾಯರು ದೇವುಡು ಅವರ ಕಾರ್ಯದ ಬಗ್ಗೆ ಅಪಾರ ಅಭಿಮಾನ ಹೊಂದಿದ್ದರು. ಈ ಅವಧಿಯಲ್ಲೇ ದೇವುಡು ‘ನವಜೀವನ’ ಪತ್ರಿಕೆಯ ಸಂಪಾದಕರಾಗಿ ದುಡಿದರು. ಕನ್ನಡ ದಿನಪತ್ರಿಕೆಗಳಲ್ಲಿ ಧಾರಾವಾಹಿ ಪ್ರಕಟಿಸುವ ರೂಢಿ ಪ್ರಾರಂಭವಾದದ್ದು ‘ನವಜೀವನ’ ಪತ್ರಿಕೆಯಲ್ಲಿ.  

1926ರಲ್ಲಿ ಅಮೆಚೂರ್ ಕಂಪನಿಯ ಸದಸ್ಯರಾಗಿ ನಟಶ್ರೇಷ್ಠರಾದ ರಾಘವಾಚಾರ್ಯರ ಆತ್ಮೀಯರಾಗಿ ನಚಿಕೇತ, ಮಂಡೋದರಿ, ರಾಮಕೃಷ್ಣ, ಮಾರ್ಕಂಡೇಯ, ಯಶೋಧರಾ ನಾಟಕಗಳಲ್ಲಿ ಪ್ರಧಾನ ಭೂಮಿಕೆಯಲ್ಲಿ ರಂಜಿಸಿದರು. ರಂಗನಟನೆ ದೇವುಡುರವರನ್ನು ಚಲನಚಿತ್ರ ಕ್ಷೇತ್ರಕ್ಕೂ ಕರೆತಂದಿತು. ಕೆಲವು ಗೆಳೆಯರೊಡನೆ ಧ್ರುವಕುಮಾರ, ಚಿರಂಜೀವಿ ಚಿತ್ರಗಳನ್ನು ಹೊಸ ತಂತ್ರಗಳಿಂದ ನಿರ್ಮಿಸಿದರು. 

ಸಿನಿಮಾ ಉದ್ದಿಮೆಯನ್ನು 1930ರ ವೇಳೆಗೆ ಬಿಟ್ಟು  ಶ್ರೀ ಎಸ್. ಜಿ ಶಾಸ್ತ್ರಿ ಅವರ ಸಲಹೆಯ ಮೇರೆಗೆ ವಿಶ್ವವಿದ್ಯಾನಿಲಯದಲ್ಲಿ ಕರ್ನಾಟಕ ಸಂಸ್ಕೃತಿ ಕುರಿತು ಉಪನ್ಯಾಸಗಳನ್ನು ನೀಡಲು ಪ್ರಾರಂಭಿಸಿದರು. ಕರ್ನಾಟಕ ಪರಿಷತ್ಪತ್ರಿಕೆಯಲ್ಲಿ ಮೂಡಿಬಂದ ಈ ಉಪನ್ಯಾಸಗಳು  1935ರಲ್ಲಿ ಪುಸ್ತಕವಾಗಿ ಹೊರಹೊಮ್ಮಿತು. ಸಂಸ್ಕೃತ ವಿದ್ಯಾಸಮಿತಿ, ಪಠ್ಯಪುಸ್ತಕ ಸಮಿತಿಗಳಲ್ಲೂ ದೇವುಡು ಶ್ರಮಿಸಿದ್ದಾರೆ. ‘ಮೂಲ ಸಂಸ್ಕೃತ’ ಎಂಬ ಪುಸ್ತಕ ಬರೆದು ಸಂಸ್ಕೃತ ಭಾಷೆ ಹೆಚ್ಚು ಜನ ಕಲಿಯಲು ಆಶಿಸಿದರು.  ಅಖಿಲ ಭಾರತ ಸಂಸ್ಕೃತ ಸಮ್ಮೇಳನದಲ್ಲಿ ರಾಜ್ಯದ ಪ್ರತಿನಿಧಿಯಾಗಿದ್ದರು.  

ದೇವುಡು ಅವರು ತಮ್ಮ ಕೊನೆಯ ವರ್ಷಗಳಲ್ಲಿ  ಅನಾರೋಗ್ಯದಿಂದ ಬಳಲಬೇಕಾಗಿ ಬಂತು. 1962ರ ಅವರ ಮರಣದ ವರ್ಷವೇ ಅವರ ‘ಮಹಾಕ್ಷತ್ರಿಯ’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತು. ಹಸ್ತಪ್ರತಿಯ ರೂಪದಲ್ಲಿದ್ದ ‘ಮಹಾದರ್ಶನ’ ಮೇರುಕೃತಿ 1967ರಲ್ಲಿ ಪ್ರಕಾಶನಗೊಂಡಿತು.
ಶಾಸ್ತ್ರ ವಿಷಯಗಳಿಂದ ಹಿಡಿದು ಸಾಮಾಜಿಕ

ವಿಷಯದವರೆಗೆ ದೇವುಡು ಅವರ ಬರವಣಿಗೆಯ ವೈವಿಧ್ಯ ಹರಡಿದೆ. ವೇದೋಪನಿಷತ್ತುಗಳ ಪಾಂಡಿತ್ಯವೂ, ನವೀನ ಜನಜೀವನ ದೃಷ್ಟಿಯೂ ಅವರ ಸಾಹಿತ್ಯಸೃಷ್ಟಿಗೆ ಬೆನ್ನೆಲುಬಾಗಿದೆ.  

ವಾಸಿಷ್ಠ ರಾಮಾಯಣವೆಂದು ಹೆಸರಾದ ‘ಯೋಗವಾಸಿಷ್ಠ’ವು ಅದ್ವೈತ ಸಿದ್ಧಾಂತಕ್ಕೆ ಸೇರಿದ ಗ್ರಂಥ.  ವಸಿಷ್ಠರು ಶ್ರೀರಾಮನ ಚಿತ್ತ ಶಾಂತಿಗೆಂದು ಬ್ರಹ್ಮನು ಉಪದೇಶಿಸಿದ ಜ್ಞಾನವಿದ್ಯೆಯನ್ನು ಹೇಳಿದರೆಂದು ಪ್ರತೀತಿ.  ಇಂಥ ಗ್ರಂಥದ ಸುಲಭ ಕನ್ನಡ ಅನುವಾದದ ಪ್ರಕಟಣೆಗೆ ದೇವುಡು ದುಡಿದಿದ್ದಾರೆ.

‘ಮೀಮಾಂಸ ದರ್ಪಣ’ ಎಂಬ ಗ್ರಂಥವು ಅವರ  ವೇದಾಂತ ಪೂರ್ವಮೀಮಾಂಸೆಗಳ  ನೈಷ್ಠಿಕ ಅಭ್ಯಾಸಕ್ಕೆ ಕೈಗನ್ನಡಿಯಂತಿದೆ. ‘ಸಂಗ್ರಹ ರಾಮಾಯಣ’ ಎಂಬುದು ವಾಲ್ಮೀಕಿಯ ಮಾತುಗಳಲ್ಲೇ ರಾಮಾಯಣದ ಕಥೆಯನ್ನು ಸುಂದರವಾಗಿ ಸಂಗ್ರಹಿಸಿರುವ ಕೃತಿ.

 ‘ಮಹಾಭಾರತದ ಮಹಾಪುರುಷರು’ ಎಂಬುದೂ ವ್ಯಾಸರ ಮಹಾಕಾವ್ಯ ಮಹಾಭಾರತದ ಬಗೆಗಿನ ಇವರ ಭಕ್ತಿಪ್ರೀತಿಗೆ ದ್ಯೋತಕವಾಗಿ ಕನ್ನಡದಲ್ಲಿ ಅವತರಿಸಿದೆ.

1933ರಲ್ಲಿ ದೇವುಡು ನರಸಿಂಹ ಶಾಸ್ತ್ರಿಗಳು ಮಾಡಿದ ಉಪನ್ಯಾಸಗಳ ಸಂಕಲನ ‘ಕರ್ನಾಟಕ ಸಂಸ್ಕೃತಿ’ ಎಂಬುದು. ಕರ್ನಾಟಕದ ನಾನಾ ಕುಲಗಳ ಆಚಾರ ವ್ಯವಹಾರಗಳು, ಹಾಡು-ಕಥೆ-ಗಾದೆ ಒಗಟುಗಳು, ವಿದ್ಯೆ-ವಿಹಾರ-ವಿನೋದಗಳು, ವಿಶೇಷ ಪದ್ಧತಿಗಳು ಮುಂತಾದವನ್ನೂ ಅವುಗಳಲ್ಲಿ ಅಂತರ್ಗತವಾಗಿರುವ ಸಂಸ್ಕೃತಿಯ ಸಾರವನ್ನು ನಿದರ್ಶನಗಳ ಸಹಿತ ವಿಮರ್ಶನ ದೃಷ್ಟಿಯಿಂದ ನೋಡಿರುವುದು ಇಲ್ಲಿನ ವಿಶೇಷ.  ಅಂದಿನ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಮುಂತಾದ ಗಣ್ಯರಿಂದ ಪ್ರಶಂಸೆ ಗಳಿಸಿದ ದೇವುಡು ಅವರ ಈ ಕೃತಿ ಆಳವಾದ ಸಂಶೋಧನೆಯ ಪರಿಣಾಮವಾಗಿ ರೂಪು ತಳೆದ ಒಂದು ಆಕರಗ್ರಂಥ ಎನ್ನಬಹುದು.

ಕಾದಂಬರಿ, ಈ ಯುಗದ ಅತ್ಯಂತ ಜನಪ್ರಿಯ ಸಾಹಿತ್ಯ ಪ್ರಕಾರ.  ಸಮಕಾಲೀನ ಜೀವನ ಚಿತ್ರಣಕ್ಕೆ, ಶೈಲಿ ಹಾಗೂ ವಸ್ತುವಿನಲ್ಲಿ ಅನಿರ್ಬಂದಿತ ಸ್ವಾತಂತ್ರ್ಯ, ಸೊಗಸನ್ನು ಮೆರೆಸಲು ಹೇಳಿ ಮಾಡಿಸಿದ ರೂಪ ಕಾದಂಬರಿ.  ದೇವುಡುರವರು ತಮ್ಮ ಪ್ರತಿಭಾ ಆವಿಷ್ಕಾರದಿಂದ ಚಾರಿತ್ರಿಕ, ಪೌರಾಣಿಕ ಮತ್ತು ಸಾಮಾಜಿಕವಾದ ಹಲವು ಕಾದಂಬರಿಗಳನ್ನು ನಿರ್ಮಿಸಿ ಕಾದಂಬರಿ ಕ್ಷೇತ್ರದಲ್ಲಿ ಮಹತ್ವದ ಸ್ಥಾನ ಗಳಿಸಿದ್ದಾರೆ.

‘ಮಯೂರ’ ಎಂಬ ಚಾರಿತ್ರಿಕ ಕಾದಂಬರಿ ಕಳೆದ ಶತಮಾನದ ಮೂರನೇ ದಶಕದಲ್ಲಿ ಬೆಳಕು ಕಂಡ ಭವ್ಯಕೃತಿ.  ಬನವಾಸಿಯ ಕದಂಬರನ್ನು ಕುರಿತದ್ದು.  ದೇವುಡು ಅವರು ತಮ್ಮ ಕಥನ ಕೌಶಲ ಮತ್ತು ಶೈಲಿಯಿಂದ ‘ಮಯೂರ’ದ ಕಥೆ ವಾಸ್ತವಿಕ ಎನ್ನುವಷ್ಟು ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ.  ‘ಮಯೂರ’ ಚಲನಚಿತ್ರವಾಗಿ ಯಶಸ್ವಿಯಾಗಲು ಈ ಕಾದಂಬರಿಯೇ ಸ್ಫೂರ್ತಿ.

ವಿಜಯನಗರದ ಇತಿಹಾಸದ ಅವಧಿಯಲ್ಲಿ ಆಯಿತೆನ್ನಲಾದ ಶೃಂಗಾರದ ಕಥೆ ‘ಅವಳ ಕಥೆ’.  ಕಾದಂಬರಿಯಲ್ಲಿ ಚಿನ್ನಾಸಾಯಿಯ ಪಾತ್ರವೇ ಪ್ರಮುಖವಾಗಿ, ಉಳಿದ ಪಾತ್ರಗಳು ಅವಳ ಸುತ್ತ ಚಿತ್ರಣವಾಗಿದೆ.  ಸಾರ್ವಕಾಲಿಕವಾದ ಮಾನವ ಬದುಕಿನ ಕಾಮದ ಸಮಸ್ಯೆಯ ಜಟಿಲತೆಯನ್ನು ದೇವುಡುರವರು ಈ ಕಾದಂಬರಿಯಲ್ಲಿ ವೈಚಾರಿಕವಾಗಿ ನೋಡಿದ್ದಾರೆ.

ಕನ್ನಡ ಸಾರಸ್ವತ ಲೋಕಕ್ಕೆ ದೇವುಡುರವರ ಪೌರಾಣಿಕ ಕಾದಂಬರೀತ್ರಯ – ‘ಮಹಾಬ್ರಾಹ್ಮಣ’, ‘ಮಹಾಕ್ಷತ್ರಿಯ’ ಮತ್ತು ‘ಮಹಾದರ್ಶನ’ – ಅಂದೂ, ಇಂದೂ ಹಾಗೂ ಮುಂದೂ ಮರೆಯಲಾಗದ ಮಹಾಕಾಣಿಕೆಯಾಗಿವೆ.    ತಮ್ಮ ಪ್ರತಿಭೆಗೆ ‘ದೈವ ಪ್ರೇರಣೆ’ ಎಂದು ದೇವುಡು ಅತ್ಯಂತ ನಿಷ್ಠೆಯಿಂದ ಹೇಳಿಕೊಂಡಿದ್ದಾರೆ.  

‘ಮಹಾಬ್ರಾಹ್ಮಣ’ ಕಾದಂಬರಿಯ ಕಥೆ ವೇದಕಾಲದ ಪ್ರಸಿದ್ಧವಾದ ವಸಿಷ್ಠ – ವಿಶ್ವಾಮಿತ್ರರದು. ಹತ್ತು ಹಲವು ಮೂಲಗಳಲ್ಲಿ ದೊರೆಯುವ ಕಥಾನಕವಾದರೂ ಮುಖ್ಯವಾಗಿ ರಾಮಾಯಣದ ಕಥೆಯನ್ನು ಆಧರಿಸಿ ಪ್ರಾಸಂಗಿಕವಾಗಿ ಉಳಿದ ಅಂಶಗಳನ್ನು ಹೊಂದಿಸಿ, ಕಲ್ಪನೆಯ ಮೂಸೆಯಲ್ಲಿ ಎರಕಹೊಯ್ದ ಮಹಾಕೃತಿ ‘ಮಹಾಬ್ರಾಹ್ಮಣ’.  ಮಹಾಕ್ಷತ್ರಿಯನಾಗಿ ಹುಟ್ಟಿ ಕಾಮಧೇನುವಿನ ಆಸೆಗೆ ಬಲಿಯಾಗಿ ವಸಿಷ್ಠರ ಬ್ರಹ್ಮ ತೇಜಸ್ಸಿನ ಮುಂದೆ ತಾನು ಏನೂ ಅಲ್ಲವೆಂದು ಅರಿವುಗಳಿಸಿ ಅದೇ ವಸಿಷ್ಠರಂತೆ ‘ಮಹಾಬ್ರಾಹ್ಮಣ’ನಾಗಲು ವಿಶ್ವಾಮಿತ್ರ ಕೈಗೊಳ್ಳುವ ಸಾಹಸಮಯ ಕಥೆ ಇಲ್ಲಿಯದು.  ಸಾರ್ವಕಾಲಿಕ ಅನುಭವ ಸಾಂದ್ರತೆಯಿಂದ ಕೂಡಿದ ವಿಶ್ವಾಮಿತ್ರನ ಜೀವನ ಹಾಗೂ ಅವನಿಗುಂಟಾದ ಗಾಯತ್ರೀ ಸಾಕ್ಷಾತ್ಕಾರ ನಮ್ಮ ಸಂಸ್ಕೃತಿಯ ಒಂದು ಪ್ರತೀಕ; ಪರಿಪಾಕ. ಸ್ವಾನುಭವ, ಕಲ್ಪನಾಶಕ್ತಿ, ಶಾಸ್ತ್ರ ಪರಿಚಯದಿಂದ ಆಸ್ತಿಕರಿಗೆ ಮಾತ್ರವಲ್ಲದೆ ಸಾಹಿತ್ಯಜಿಜ್ಞಾಸುಗಳಿಗೂ ಪ್ರಿಯವಾಗುವಂಥ ಮಹಾಕೃತಿಯನ್ನು ದೇವುಡು ನಿರ್ಮಿಸಿದ್ದಾರೆ.

‘ಮಹಾಕ್ಷತ್ರಿಯ’ ಕಾದಂಬರಿಯ ನಾಯಕ ನಹುಷ ಮಹಾರಾಜ. ಪರಿಗ್ರಹಕ್ಕಿಂತ ತ್ಯಾಗವು ಹೆಚ್ಚೆಂದೂ,  ಭೋಗಕ್ಕೆ ಅಂಟಿಕೊಳ್ಳುವ ದೇವತ್ವಕ್ಕಿಂತಲೂ ತ್ಯಾಗವನ್ನಾರಾಧಿಸುವ ಮನುಷ್ಯತವವೇ ಅಧಿಕವೆಂದೂ ಲೋಕಕ್ಕೆ ಶ್ರುತಪಡಿಸಿದ ಮಹಾವ್ಯಕ್ತಿ ಈತ.  ಯಜ್ಞಯಾಗಾದಿಗಳಿಂದ, ದಾನ ಬುದ್ಧಿ, ವೀರಗುಣಗಳಿಂದ ಇಂದ್ರನ ದರ್ಪವನ್ನು ತುಳಿದು ಇಂದ್ರಪಟ್ಟ ಪಡೆದವನು.  ಉಪನಿಷತ್ತು, ಮಹಾಭಾರತ, ವಾಯುಪುರಾಣ ಮುಂತಾದ ಅನೇಕ ಮೂಲಗಳ ಕಥೆಯನ್ನು, ಪ್ರಸಂಗಗಳನ್ನು ಸ್ವೀಕರಿಸಿ, ಇದು ಹೀಗೇ ನಡೆಯಿತೋ ಎನ್ನುವಂತೆ ಸರ್ವಾಂಗ ಸುಂದರವನ್ನಾಗಿಸಿದ್ದಾರೆ ದೇವುಡು. ಬಹಳಷ್ಟು ಪುನರ್ಮುದ್ರಣಗೊಂಡಿರುವುದೇ ಈ ಕಾದಂಬರಿಯ ಜನಪ್ರಿಯತೆಗೆ ಸಾಕ್ಷಿ ಎನ್ನಬಹುದು.

ದೇವುಡರವರ ‘ಮಹಾದರ್ಶನ’ – ಅಲೌಕಿಕತೆಯನ್ನು ಅತಿಶಯವಾಗಿ ಸಾಕ್ಷಾತ್ಕರಿಸಿಕೊಂಡು ಅದ್ಭುತ ಶೈಲಿಯಲ್ಲಿ ಅರಳಿದ ಕಡೆಯ ಬೃಹತ್ಕಾದಂಬರಿ. ಋಷಿ ಯಾಜ್ಞವಲ್ಕ್ಯರು ಬ್ರಹ್ಮವಿದ್ಯೆ ಸಾಧಿಸಿದ ಮಹಾನ್ ಕಥೆ.  ‘ಮಹಾದರ್ಶನ’ ಎಂಬ ಹೆಸರು ಕಥಾವಸ್ತುವಿಗೆ ಪೂರಕವಾದ ಘಟನಾವಳಿಗಳಿಗೆ ತಕ್ಕಂತೆ ಅರ್ಥಸ್ವಾರಸ್ಯದಿಂದ ಬೆಳೆಯುತ್ತ ಹೋಗಿ ಯಜ್ಞವಲ್ಕ್ಯ ಹಾಗೂ ಯಾಜ್ಞವಲ್ಕ್ಯ ಇಬ್ಬರಿಗೂ ಅನ್ವಯಿಸುವಂತಿದೆ.  ಕನ್ನಡ-ಸಂಸ್ಕೃತ ಸಂಪನ್ನ ಭಾಷಾಸತ್ವವನ್ನು ಪುರಾಣಸಿದ್ಧ ನಿರೂಪಣೆಯಲ್ಲಿ ಕನ್ನಡದಲ್ಲಿ ದೇವುಡುರವರಂತೆ ಬೆಳಗಿದವರು ಯಾರು ಎನ್ನುವಷ್ಟು  ‘ಮಹಾದರ್ಶನ’ ಸಾಧಿಸಿ ತೋರಿಸಿದೆ.  

‘ಅಂತರಂಗ’, ‘ಮಲ್ಲಿ’, ‘ಎರಡನೆಯ ಜನ್ಮ’ ಮುಂತಾದ ಸಾಮಾಜಿಕ ವಸ್ತುಸಂವಿಧಾನವನ್ನೊಳಗೊಂಡ ಕಾದಂಬರಿಗಳನ್ನೂ ದೇವುಡು ಸೃಷ್ಟಿಸಿದ್ದಾರೆ. ಮನಸ್ಸಿನ ಸೂಕ್ಷ್ಮ ಪ್ರವೃತ್ತಿ, ದಾಂಪತ್ಯ ಜೀವನದ ಆಗು ಹೋಗುಗಳು, ಕಾಮಜೀವನದ ಸಮಸ್ಯೆಗಳನ್ನು ಈ ಕೃತಿಗಳಲ್ಲಿ ದೇವುಡು ಸಮೃದ್ಧವಾಗಿ ಪ್ರಸ್ತುತಪಡಿಸಿದ್ದಾರೆ. ‘ಅಂತರಂಗ’ ಕಾದಂಬರಿ ಕನ್ನಡದ ಮೊತ್ತಮೊದಲನೆಯ ಮನೋವೈಜ್ಞಾನಿಕ ಕಾದಂಬರಿಯೆಂದು ಹೆಸರುಗಳಿಸಿದೆ.  

ಆದಿಶಂಕರರನ್ನು ಕುರಿತ ’ಮಹಾಸಂನ್ಯಾಸಿ’ ಗ್ರಂಥವನ್ನು ದೇವುಡುರವರು ಪೂರ್ಣಗೊಳಿಸಲಾಗಿಲ್ಲವೆಂದು ತಿಳಿಯುತ್ತದೆ.  

ಹಲವು ವಿಷಗಳ ಕುರಿತ ಇನ್ನೂ ಹಲವು ಕಥೆ, ಪ್ರವಾಸ ಕಥನ, ವಿವಿಧ ಪ್ರಬಂಧ, ತಿಳುವಳಿಕೆ ಗ್ರಂಥಗಳನ್ನು ರಚಿಸಿದ ದೇವುಡು ಅಕ್ಟೋಬರ್ 24, 1962ರಲ್ಲಿ ಅವರ  ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟವಾಗುವ ಮೊದಲೇ, ಹಾಗೂ ಅವರ ಬಹಳಷ್ಟು ಕೃತಿಗಳು ಮುದ್ರಣಗೊಂಡು ಜನಸಾಗರ ಅವರನ್ನು ಕೊಂಡಾಡುತ್ತಿರುವುದನ್ನು ಕೇಳುವ ಮೊದಲೇ ಈ ಲೋಕವನ್ನು ಬಿಟ್ಟು ಅಗಲಿದರು. ಅವರ ಕೃತಿಗಳನ್ನು ಓದುವ ಸೌಭಾಗ್ಯವನ್ನು ನಮಗೆ ಈ ಮಹಾಚೇತನರು ಕೊಟ್ಟು ಹೋಗಿದ್ದಾರೆ.


ಎಮ್.ವೈ. ಮೆಣಸಿನಕಾಯಿ, ಬೆಳಗಾವಿ

- Advertisement -
- Advertisement -

Latest News

ಸಿಂದಗಿ ಅಧ್ಯಕ್ಷರಾಗಿ ಶಾಂತವೀರ, ಉಪಾಧ್ಯಕ್ಷರಾಗಿ ರಾಜಣ್ಣಿ ಆಯ್ಕೆ

ಸಿಂದಗಿ; ಪಟ್ಟಣದ ಪುರಸಭೆಯ ಅಧ್ಯಕ್ಷ, ಉಪಾದ್ಯಕ್ಷರ ಅವಧಿ ಮುಗಿದು ಹಲವು ವರ್ಷಗಳು ಕಳೆದಿತ್ತು ಅದು ಅ. ೨೮ ರಂದು ಚುನಾವಣೆ ಪ್ರಕ್ರಿಯೆ ಪ್ರಾರಂಭಿಸಿ ಸೆ.೯ ದಿನಾಂಕ...
- Advertisement -

More Articles Like This

- Advertisement -
close
error: Content is protected !!
Join WhatsApp Group