ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದಜೀ ಮುತಾಲಿಕರಿಗೆ “ಹಿಂದೂ ಭಾಸ್ಕರ” ಪ್ರಶಸ್ತಿ ಪ್ರದಾನ
ಮೂಡಲಗಿ: ಗುರುವನ್ನು ಗೌರವಿಸುವಂತಹ ಪರಂಪರೆ ನಮ್ಮ ನೆಲದ ಗುಣ, ಶಿಕ್ಷಣದಿಂದ ಸದೃಢ ಸಮಾಜ ನಿರ್ಮಾಣವಾಗಬೇಕಿದೆ. ಈ ನಿಟ್ಟಿನಲ್ಲಿ ನಿಜಗುಣ ದೇವರು ಗ್ರಾಮೀಣ ಪ್ರದೇಶದಲ್ಲಿ ಮಕ್ಕಳಿಗೆ ಆಧ್ಯಾತ್ಮಿಕತೆಯ ಜೊತೆಗೆ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ಶ್ರೀರಾಮ ಸೇನಾ ಸಂಸ್ಥಾಪಕರಾದ ಪ್ರಮೋದಜೀ ಮುತಾಲಿಕ ಹೇಳಿದರು.
ಅವರು ತಾಲೂಕಿನ ಹುಣಶ್ಯಾಳ ಪಿಜಿ ಗ್ರಾಮದ ಶ್ರೀ ಸಿದ್ಧಲಿಂಗ ಕೈವಲ್ಯಾಶ್ರಮದಲ್ಲಿ ಶ್ರೀ ನಿಜಗುಣ ದೇವರ ವಿದ್ಯಾಸಂಸ್ಥೆಯ 25ನೇ ವರ್ಷದ ಬೆಳ್ಳಿ ಹಬ್ಬದ ಸಮಾರಂಭ ಹಾಗೂ ಶ್ರೀ ಸಿದ್ಧಲಿಂಗೇಶ್ವರ ಪ್ರಾಥಮಿಕ ಶಾಲೆ ಹಾಗೂ ಶ್ರೀ ಶಿವಾನಂದ ಕೌಜಲಗಿ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣದ ಜೊತೆಗೆ ದೇಶ ಪ್ರೇಮವನ್ನು ಮಕ್ಕಳಲ್ಲಿ ಬೆಳೆಸಬೇಕು. ಗ್ರಾಮೀಣ ಪ್ರದೇಶದಲ್ಲಿ ಕಳೆದ 25 ವರ್ಷಗಳಿಂದ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ, ಬೆಳೆಸಿಕೊಂಡು ಬಂದಿದ್ದು ನಿಜಗುಣ ದೇವರ ಆಶೀರ್ವಾದ ಮತ್ತು ಗ್ರಾಮಸ್ಥರ ಸಹಕಾರ ಮುಖ್ಯವಾಗಿದೆ. ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಧಾರ್ಮಿಕ, ಸಂಗೀತ, ಕ್ರೀಡೆ ಹಲವಾರು ರೀತಿಯಲ್ಲಿ ಶಿಕ್ಷಣ ನೀಡುವುದರ ಮುಖಾಂತರ ಈ ಶಿಕ್ಷಣ ಸಂಸ್ಥೆಯು ಗುರುಕುಲವಾಗಿದೆ. ಶಿಕ್ಷಣದಿಂದ ಮಾತ್ರ ದೇಶದ ಭವಿಷ್ಯ ನಿರ್ಮಾಣ ಸಾಧ್ಯ. ಇಂದಿನ ದಿನಮಾನಗಳಲ್ಲಿ ಪ್ರತಿಯೊಬ್ಬರೂ ಶಿಕ್ಷಣವನ್ನು ಪಡೆದು ಮಕ್ಕಳನ್ನು ಅಕ್ಷರವಂತರನ್ನಾಗಿ ಮಾಡಿದಾಗ ಮಾತ್ರ ದೇಶದ ಹಾಗೂ ಸಮಾಜದ ಪ್ರಗತಿಗೆ ಸಾಧ್ಯವಾಗುತ್ತದೆ. ಈ ಸಂಸ್ಥೆಯಲ್ಲಿ ಕಲಿತ ಹಲವಾರು ವಿದ್ಯಾರ್ಥಿಗಳು ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವಿದ್ಯಾರ್ಥಿಗಳು ತಾವು ಉತ್ತಮ ಶಿಕ್ಷಣ ಪಡೆದು ತಾವು ಕಲಿತ ಶಾಲೆಗೆ ಮತ್ತು ಗ್ರಾಮಕ್ಕೆ ಕೀರ್ತಿ ತರುವಂತಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ನಿಜಗುಣ ದೇವರು ಮಾತನಾಡಿ ಶಿಕ್ಷಕ, ಸೈನಿಕ, ರೈತ ಇವರು ನಮ್ಮ ರಾಷ್ಟ್ರದ ನಿರ್ಮಾಪಕರು. ಶಿಕ್ಷಕರು ಮಕ್ಕಳಿಗೆ ಅಕ್ಷರ ಜ್ಞಾನದ ಜೊತೆಗೆ ಉತ್ತಮ ಸಂಸ್ಕಾರವನ್ನು ಕಲಿಸುವ ಮೂಲಕ ಸಮಾಜದ ಸ್ವಾಸ್ಥ್ಯಕ್ಕೆ ಶ್ರಮಿಸಬೇಕು. ಸಂಸ್ಥೆಯು ಬೆಳ್ಳಿ ಹಬ್ಬ ಆಚರಿಸುತ್ತಿರುವುದಕ್ಕೆ ಗ್ರಾಮದ ಹಿರಿಯರು ಹಾಗೂ ಪಾಲಕರು, ಗಣ್ಯರ ಪರಿಶ್ರಮ ಮುಖ್ಯವಾಗಿದೆ. ಗ್ರಾಮೀಣ ಭಾಗದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಸದುದ್ದೇಶದಿಂದ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಶಿಕ್ಷಣ ನೀಡಲಾಗುತ್ತದೆ. ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ಶಿಕ್ಷಕರ ಪಾತ್ರ ಮಹತ್ವದಾಗಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದರೆ ಸಾಕಷ್ಟು ಅವಕಾಶಗಳು ಸಿಗುತ್ತವೆ. ಪರೀಕ್ಷೆಗಳನ್ನು ಧೈರ್ಯದಿಂದ ಎದುರಿಸಿ ತಂದೆತಾಯಿ, ಗುರುಗಳು ಮೆಚ್ಚುವ ರೀತಿಯಲ್ಲಿ ಫಲಿತಾಂಶ ಪಡೆದು ಪ್ರತಿಭಾನ್ವಿತರಾಗಬೇಕೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದಜೀ ಮುತಾಲಿಕ ಅವರಿಗೆ ಶಿಕ್ಷಣ ಸಂಸ್ಥೆ ವತಿಯಿಂದ ನಿಜಗುಣ ದೇವರು “ ಹಿಂದೂ ಭಾಸ್ಕರ” ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.
ವೇದಿಕೆ ಮೇಲೆ ಮೂಡಲಗಿ ಕ್ಷೇತ್ರಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ, ಸಿಆರ್‍ಪಿ ಆನಂದ ಹಮ್ಮನವರ, ಗ್ರಾ.ಪಂ ಸದಸ್ಯ ಆರ್.ಬಿ.ನಾಯಕ ಸೇರಿದಂತೆ ಗ್ರಾಮದ ಹಿರಿಯರು ಹಾಗೂ ಪಾಲಕರು, ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಪಡೆದ ಹಳೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ನಂತರ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವು ಜನಮನಸೊರೆಗೊಂಡವು.