ನವಯಾನ.
ಚಿಗುರಿನ ಮೊಳಕೆ ರಂಗೇರುವ ಪರ್ವ
ಕಾನನದ ಯೌವನ ಶೃಂಗಾರಗೊಳ್ಳುವ ಜಾವ
ಮಬ್ಬಿದ್ದ ಜಗವ ತಬ್ಬೇದ್ದೇಳಿಸಿ
ದ್ಯುಮಣಿಯ ಕಿರಣವ ಧರೆಗಿಳಿಸಿ
ನವಯಾನದ ಯುಗವು ಮೈದುಂಬಿ ಹಾಡಿತು.
ಕ್ಷೀರ ಸಾಗರವು ಕೇನೆಯಾಗಿ
ಬೇವು ಬೆಲ್ಲದ ಸಿಹಿಯು ಸವಿಯಾಗಿ,
ಗಿರಿವನದ ಸಿರಿ ಬೆಳಕು ಮೂಡಿತು
ಭುರಮೆಯ ತುಂಬೆಲ್ಲಾ ಹಸಿರ ಸೊಬಗು ಝೇಂಕಾರಿಸಿತು.
ಕಬ್ಬಿಗನ ಕಾವ್ಯ ಕುಸುಮ ಕಟ್ಟಿತ್ತು ತೋರಣ
ತಂಬುಳಿಯ ಹರುಷಕ್ಕೆ ಸಿಹಿಯ ಹೂರಣ
ನವಚೇತನದ ಗರಿಯ ಕೆನ್ನೆಯನ್ನು ಸಿಹಿ ಗಾಳಿ ಸವಿದು
ನೀಲಾಂಬರದ ವರ್ಷ ಧರೆಗಿಳಿತು.
ಗಿಳಿ ಕೋಗಿಲೆ ಗಾನ
ಹಳ್ಳಕೊಳ್ಳದ ಹೊಳೆಯ ಋತುಮಾನ,
ಪ್ರಕೃತಿ ಸೌಂದರ್ಯದ ಹರುಷ ತುಂಬಿದ ಮನ
ನವ ಯುಗಾದಿಯ ಯೌವ್ವನ
ಮರಳಿ ಮರಳಿ ಕೂಗಿತು.
ಭೋವಿ ರಾಮಚಂದ್ರ
ಹರಪನಹಳ್ಳಿ
“ಇದು ಪ್ರಸಕ್ತ ಕಾಲಮಾನದ ವಂಚಕ ವಿದ್ಯಮಾನಗಳ ಹಾಸ್ಯಗವಿತೆ. ಕಲಿಗಾಲದ ಕೆಲವು ತೀರ್ಥಕ್ಷೇತ್ರಗಳ ಕರ್ಮಕಾಂಡಗಳ ನಗೆಗವಿತೆ. ಇಲ್ಲಿನ ಹಾಸ್ಯದೊಳಗೆ ವ್ಯಂಗ್ಯವಿದೆ, ವಿಡಂಬನೆಯಿದೆ. ವಿನೋದವಿದೆ. ವಾಸ್ತವವೂ ಇದೆ. ಜನತೆಗೆ ಶಾಂತಿ, ನೆಮ್ಮದಿಗಳನ್ನು ನೀಡಿ ಬದುಕಿಗೆ ಬೆಳಕಿನ ದೀವಿಗೆಗಳಾಗಬೇಕಿದ್ದ ತೀರ್ಥಕ್ಷೇತ್ರಗಳು, ನಂಬಿದ ಜನರ ಭಕ್ತಿಯನ್ನೇ ಬಂಡವಾಳ ಮಾಡಿಕೊಂಡು ವಂಚನೆ, ದುರಾಸೆಯ ವ್ಯಾಪಾರಿ ಕೇಂದ್ರಗಳಾಗಿರುವುದು ಲೋಕದ ಅತಿದೊಡ್ಡ ದುರಂತ. ಏನಂತೀರಾ.?” –
ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.
ಗೋವಿಂದ.. ಗೋವಿಂದಾ..!
ತಲೆಕೂದಲು ಬೋಳಿಸೋದಕ್ಕಿಂತ
ಜೇಬಿನಕಾಸು ಬೋಳಿಸೋದಕ್ಕೇ
ನಿಂತಿರ್ತಾರೋ ತಿರುಮಲೇಸ್ವರಾ.!
ಹುಂಡಿಗೆ ಹಣ ಹಾಕೋದಕ್ಕಿಂತ
ಹುಂಡಿದುಡ್ಡು ಲಪಟಾಯಿಸೋಕೆ
ತುಂಬಿರ್ತಾರೋ ಓಂಕಾರೇಸ್ವರಾ.!
ದೇವರೆದುರು ಬತ್ತಿ ಇಡೋರಿಗಿಂತ
ಭಕ್ತರ ಬುಡಕ್ಕೆ ಬತ್ತಿ ಇಡೋದಕ್ಕೇ
ಕಾಯ್ಕೊಂಡಿರ್ತಾರೋ ಬಸವೇಸ್ವರಾ.!
ಬೂಂದಿಲಡ್ಡು ಕೈಗೆ ಕೊಡೊದಕಿಂತ
ಖಾಲಿಚೆಂಬು ಕೈಗೆ ಕೊಡೋದಕ್ಕೇ
ಹೊಂಚಾಕ್ತಿರ್ತಾರೋ ಎಂಕಟೇಸ್ವರಾ.!
ನಿತ್ಯದೀಪಕ್ಕೆ ಎಣ್ಣೆ ಬಿಡೋರಿಗಿಂತ
ಸದಾ ದೇಹಕ್ಕೆ ಎಣ್ಣೆ ಬಿಟ್ಕೊಳ್ಳೋರೇ
ಹೆಚ್ಚಾಗವರೋ ಮಹಾಕಾಲೇಸ್ವರಾ.!
ಕಷ್ಟಪಟ್ಟು ದುಡಿದು ತಿನ್ನೋರಿಗಿಂತ
ವರ್ಷಪೂರ್ತಿ ಬಡಿದು ತಿನ್ನೋರೇ
ಮೆರಿತಾವ್ರೋ ಮಂಜುನಾಥೇಸ್ವರಾ.!
ದೇವ್ರು ಅನ್ನೋದು ಯಾಪರವಾಯ್ತು
ನಂಬಿಕೆ ಅನ್ನೋದು ಬಂಡವಾಳವಾಯ್ತು
ಕಲಿಗಾಲವಿದೋ ಕಾಶಿ ಇಸ್ವೇಸ್ವರಾ.!
ಎ.ಎನ್.ರಮೇಶ್. ಗುಬ್ಬಿ.