ಯುಗಾದಿ
ನೂತನ ವರುಷ ಬಂದಿದೆ
ಹೊಸ ಹರುಷವ ತಂದಿದೆ
ಯುಗದ ಆದಿ ಯುಗಾದಿ
ಹಸಿರಿನ ಇಳೆಯೊಳು ನವ ಮಂದಹಾಸ
ಕೋಗಿಲೆಗಳ ಇಂಪಾದ ಸ್ವರಮಿಡಿತ
ವಸಂತನ ಆಗಮನದ ಸೂಚಕ ಯುಗಾದಿ
ತೈಲ ಅಭ್ಯಂಜನ ಸ್ನಾನದ ಹೊಸ ಬಟ್ಟೆಯ ಧರಿಸಿ
ಬೇವು ಬೆಲ್ಲವ ಮೆಲ್ಲುತ ಒಳಿತಿನ ನಿರೀಕ್ಷೆ
ಚಾಂದ್ರಮಾನ ಸಂಧಿಸುವ ಪರ್ವಕಾಲ ಯುಗಾದಿ
ರತ್ನ ಪಕ್ಷಿಯ ನೋಡುತ ಶುಭವ ನೆನೆಸುತ
ಹೊನ್ನೆತ್ತು ಹಿಡಿಯುತ ಐದಣ ಪಡೆಯುತ
ಪ್ರಕೃತಿಯಲಿ ನವ ಪರ್ವ ಮೂಡಲೆನುವ ಯುಗಾದಿ
ವೈ.ಬಿ.ಕಡಕೋಳ
ಸಂಪನ್ಮೂಲ ವ್ಯಕ್ತಿಗಳು
ಮುನವಳ್ಳಿ
ಚೈತ್ರಕಾಲ – ಯುಗಾದಿ
ಬಂತು ಯುಗಾದಿ ಬನ್ನಿರಿ ಹಾಡಿ ಕುಣಿಯೋಣ
ಕುಣಿ-ಕುಣಿದು ಹೊಸ ವರ್ಷವ ಆಚರಿಸೋಣ
ಆಚರಿಸುತ್ತಾ ಬೇವು-ಬೆಲ್ಲವ ಸವಿಯೋಣ
ಸವಿದು ಕಷ್ಟ ಸು:ಖವ ಸಮವಾಗಿ ಕಾಣೋಣ
ಕಾಣೋಣ ರವಿಯ ಅಶ್ವಿನಿ ನಕ್ಷತ್ರದ ಪ್ರವೇಶವನು
ಪ್ರವೇಶದ ಗಳಿಗೆಯಲ್ಲಿ ಸೂರ್ಯನಮನ ಮಾಡೋಣ
ಮಾಡಬೇಕು ಅಂದು ಹೂರಣದ ಹೋಳಿಗೆಯನು
ಹೋಳಿಗೆಯನು ಸವಿದು ಚೈತನ್ಯದಿ ಚಿಗುರೋಣ
ಚಿಗುರಬೇಕು ಇದು ಚೈತ್ರ ಮಾಸದ ಮೊದಲ ದಿನ
ಈ ದಿನ ಗುಡಿ-ಗೋಪುರಗಳಿಗೆ ಹೋಗೊಣ
ಹೋಗಿ ಮಾಡೋಣ ನಮ್ಮೂರ ಜಾತ್ರೆಯನು
ಜಾತ್ರೆಯಲಿ ರಂಗು ರಂಗಿನ ಅಂಗಿಯ ಹಾಕೋಣ
ಹಾಕಬೇಕು ಯುಗಾದಿಗೆ ರಂಗಿನ ರಂಗೋಲಿಯನು
ರಂಗೋಲಿಯಂತೆ ಫಳಫಳ ಹೊಳೆಯೋಣ
ಹೊಳೆಯುವಂತೆ ತಳಿರು ತೋರಣ ಕಟ್ಟೊಣ
ಕಟ್ಟುತಾ ಯುಗಾದಿಯನು ಸಂಭ್ರಮಿಸೋಣ
ಮಂಜುನಾಥ ಸಿಂಗನ್ನವರ
ಆರೋಗ್ಯ ಇಲಾಖೆ, ಯರಗಟ್ಟಿ
ಪ್ರಕೃತಿ ಸೀಮಂತ
ಮರಗಿಡಗಳ ಎಲೆಯುದುರಿ
ಭೂ ತಾಯಿ ಮಡಿಲ ಸೇರಿ
ಋತು ಮಾನಗಳು ಉರುಳಿ
ನಗುತಿದೆ ಪ್ರಕೃತಿ ಮತ್ತೆ ಚಿಗುರಿ.
ವರ್ಷಕ್ಕೊಮ್ಮೆ ಬರುವ ಮೊಗ್ಗು
ತರುವುದು ಮನಕೆ ಹಿಗ್ಗು
ತಳಿರು ತೋರಣ ರಂಗೋಲಿ ಜೊತೆ
ನವ ಯುಗಕೆ ಮುನ್ನುಗ್ಗು.
ಚೈತ್ರ ಮಾಸದ ಸುಂದರಿ
ಹಸಿರುಟ್ಟ ಮನೋಹರಿ
ಫಲ ಪುಷ್ಪದಿಂದೊಡಗೂಡಿ
ಪ್ರಕೃತಿ ಮಾತೆ ಈಗ ಬಸುರಿ.
ಯುಗಾದಿ ದಿನವೇ ಮುಹೂರ್ತ
ಆಗ್ಬೇಕು ಸೀಮಂತ ತುರ್ತ
ಹೊಸ ಬಟ್ಟೆ ಧರಿಸಿರೆಲ್ಲ ಇವತ್ತ
ಮಂಗಳ ದ್ರವ್ಯಗಳ ತನ್ನಿ ಬರ್ತಾ.
ಹಸಿರು ಸೀರೆ ಬಳೆ ಕುಪ್ಪಸ
ಮುಡಿಗೆ ಮಲ್ಲಿಗೆ ಸೊಗಸ
ಮಾವು ಬೇವು ಬೆಲ್ಲದಚ್ಚ
ಮಾಡಿ ಹೋಳಿಗೆ ಸಿಹಿ ತಿನಿಸ.
ನೋವು ನಲಿವು ನೆಮ್ಮದಿ
ಜೀವಕ್ಕೆ ಬೆವು ಬೆಲ್ಲದಂತಿರಲಿ
ನವ ಚೈತ್ರದ ಈ ಯುಗಾದಿ
ಎಲ್ಲರ ಬಾಳಿಗೆ ಸುಖ ಶಾಂತಿ ತರಲಿ.
ಮಹೇಂದ್ರ ಕುರ್ಡಿ
ಯುಗದ ಆದಿ ಯುಗಾದಿ
ನವನವೀನ ನವಚೈತನ್ಯ ಹೊಸ ವರುಷದಲಿ ನವೋಲ್ಲಾಸದ ಹೊಂಬಣ್ಣದ ಹಬ್ಬವಿದು ಸುಂದರ ಯುಗಾದಿ
ವಸಂತ ಋತುವಿನ ಆಗಮನ
ಎಲ್ಲೆಡೆ ಚೆಲ್ಲುವದು ಸವಿಗಾನ
ಕಷ್ಟದ ಸಂಕೇತವಾಗಿಹುದು ಬೇವು
ಸುಖದ ಸಂಕೇತವಾಗಿಹುದು ಬೆಲ್ಲ
ಬೇವು ಬೆಲ್ಲಗಳ ಸಾಮರಸ್ಯದ ಸಂಸ್ಕೃತಿಯ ತೇರಿನ ಹಬ್ಬವಿದು ಯುಗಾದಿ
ತಳಿರು ತೋರಣಗಳ ಶೃಂಗಾರ
ಮನೆಮನದಂಗಳದಿ ಮೂಡುವದು ಸಂತಸದ ಚಿತ್ತಾರ
ದ್ವೇಷ ಅಸೂಯೆಗಳ ಮರೆಸುವ ಹಬ್ಬ
ನಾವೆಲ್ಲಾ ಒಂದೇ ಎಂದು ಸಾರುವ ಹಬ್ಬ
ನಾಡಿನ ಶುಭಮೂಹೂರ್ತಗಳಲಿ ಶ್ರೇಷ್ಠವಾಗಿಹುದು ಈ ಯುಗಾದಿ
ಮನ್ವಂತರ ಕಾಲದಲಿ ಅಳಿಯಲಿ ದ್ವೇಷ
ಮೊಳಗಲಿ ಎಲ್ಲರೆದೆಯಲಿ ಪ್ರೇಮ
ಯುಗದ ಆದಿಯಾದ ಈ ಹಬ್ಬ
ಹೊಸ ವರುಷದಲಿ ತರಲಿ ನಮ್ಮೆಲ್ಲರಲಿ ಸದಾ ಹರುಷ
ಶಿವಕುಮಾರ ಕೋಡಿಹಾಳ
ಕನ್ನಡ ಸಹಾಯಕ ಪ್ರಾಧ್ಯಾಪಕರು
ಮೂಡಲಗಿ