spot_img
spot_img

ಎಚ್ಚರವಿರಲಿ, ಸಾಮಾಜಿಕ ಜಾಲತಾಣಗಳ ಬಳಸುವ ಮುನ್ನ!!

Must Read

- Advertisement -

ಇದೇನು ಹೊಸತಲ್ಲ ಬಿಡಿ. ಹಿಂದಿನಿಂದಲೂ ಬೆಳೆದು ಬಂದ ಪದ್ದತಿ. ಬಾಲ್ಯದಲ್ಲಿರುವಾಗಲೇ ಹೆಣ್ಣುಮಗುವಿಗೆ ಸಮಾಜದಲ್ಲಿ ಇತರರೊಂದಿಗೆ ನಡೆದುಕೊಳ್ಳುವುದರ ಬಗೆಗೆ ತಿಳಿವಳಿಕೆ ಮತ್ತು ತಾನು ಬಾಲಕರಂತೆ ನಡೆದುಕೊಳ್ಳಬಾರದೆಂಬ ಕಟ್ಟಳೆಯ ಕುರಿತು ಪೂರ್ಣವಾಗಿಯೇ ತಿಳಿಸಲಾಗಿರುತ್ತದೆ. ಹಾಗಾದರೆ ತಿಳಿವಳಿಕೆ ಬಂದ ಮೇಲೆ ಆಕೆ ಅನೇಕ ಅಪರಾಧಗಳಿಗೆ ಬಲಿಯಾಗುವುದೇಕೆ ಎಂಬುದನ್ನು ಯೋಚಿಸಬೇಕಿದೆ.

ಮನೆ ಪರಿಸರ ಸಮಾಜವನ್ನು ಆಧಾರವಾಗಿಟ್ಟುಕೊಂಡು ನೋಡಿದಾಗ ಆಯಾ ಸಂಗತಿಗಳ ಪ್ರಭಾವ ಹೆಣ್ಣುಮಕ್ಕಳ ಮೇಲೆ ಬಹಳಷ್ಟು ಎನ್ನುವಷ್ಟರ ಮಟ್ಟಿಗೆ ಆಗಿರುವುದು ಕಂಡು ಬರುತ್ತದೆ. ಆದಾಗ್ಯೂ ಅಪೇಕ್ಷಿತ ಕೆಲವು ಸಾಮರ್ಥ್ಯಗಳನ್ನು ಸಾಧಿಸುವಲ್ಲಿ ಎಲ್ಲೋ ಒಂದೆಡೆ ಎಡವಿದಂತೆ ಭಾಸವಾಗುತ್ತದೆ.

ಈ ತೆರನಾದ ಕಲಿಕೆ ಗಳಿಸುವಂತಹದ್ದು ಎಂದೆನಿಸಿದರೂ ಹಲವೊಮ್ಮೆ ಜೈವಿಕವಾಗಿಯೇ ಒಡಮೂಡುವಂಥದ್ದು ಎಂದೆನಿಸದಿರದು. ಹದಿಹರೆಯದ ವಯಸ್ಸಿಗೆ ಬರುವಷ್ಟೊತ್ತಿಗೆ ಸಮಾಜದ ಬಹುತೇಕ ಎಲ್ಲ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳಲಾಗದಿದ್ದರೂ ಅಪಾಯದಿಂದ ಬಚಾವಾಗಲು ಬೇಕಿರುವ ಕೆಲವು ಮಹತ್ವದ ರೀತಿ ರಿವಾಜುಗಳನ್ನು ತಿಳಿಸಿಕೊಡಲಾಗುತ್ತದೆ. ಆದರೆ ಇವುಗಳ ಬಳಕೆಯಲ್ಲಿ ಉನ್ನತಿ ಕಂಡುಕೊಳ್ಳುವ ವಿಚಾರಗಳನ್ನು ಕಲಿಯುವುದು ಕಡಿಮೆ.

- Advertisement -

ಈ ವಿಚಾರಗಳನ್ನು ವಿಸ್ತರಿಸಿ ನೋಡುವುದಾದರೆ ಹರೆಯದ ಹೆಣ್ಣುಮಗು ಸಮಾಜದ ವ್ಯವಸ್ಥೆಯ ಎಲ್ಲ ಆಯಾಮಗಳ ತಿಳಿವಳಿಕೆಯನ್ನು ಸಹಜವಾಗಿ ಸಿದ್ಧಿಸಿಕೊಂಡು ತನ್ನ ಗ್ರಹಿಕೆಯಲ್ಲಿ ಪಡೆದುಕೊಂಡಿರುತ್ತದೆ. ಆದರೂ ಮನೆಯಲ್ಲಿರುವ ತನ್ನ ಅಣ್ಣ ಅಥವಾ ತಮ್ಮನಿಗಿರುವ ಪ್ರಾಶಸ್ತ್ಯ ಸ್ವಾತಂತ್ರ್ಯ ತನಗೇಕಿಲ್ಲ? ನನ್ನನ್ನೇಕೆ ಹೀಗೆ ಕೀಳಾಗಿ ನೋಡಲಾಗುತ್ತಿದೆ ಎಂಬ ಪ್ರಶ್ನೆ ಮೇಲಿಂದ ಮೇಲೆ ತಲೆಯನ್ನು ಕೊರೆಯುತ್ತಲೇ ಬಂದಿರುತ್ತದೆ.

ಸಹಜ ಬೆಳವಣಿಗೆಯಲ್ಲಿರುವ ಯಾವ ಹೆಣ್ಣುಮಗುವೇ ಆಗಲಿ ತನ್ನ ದೋಷಗಳನ್ನು ತಿದ್ದಿಕೊಳ್ಳಲು ಪ್ರಯತ್ನಿಸುತ್ತದೆ. ಇದಲ್ಲದೆ ಪ್ರೌಢಾವಸ್ಥೆಗೆ ಬರುವ ಹೊತ್ತಿಗೆ ಸಾಮಾಜಿಕ ಅನಿಷ್ಟ ಪದ್ದತಿಗಳನ್ನು ಲಿಂಗ ತಾರತಮ್ಯ ವ್ಯವಸ್ಥೆಯನ್ನು ತಿಳಿದುಕೊಳ್ಳುವಷ್ಟರ ಮಟ್ಟಿಗೆ ಶಕ್ತವಾಗಿರುತ್ತದೆ. ಇದನ್ನೆಲ್ಲ ಸೂಕ್ಷ್ಮವಾಗಿ ನಮ್ಮ ಮನೆಯ ಹಾಗೂ ನೆರೆಯ ಹೆಣ್ಣುಮಕ್ಕಳನ್ನು ಗಮನಿಸಿದಾಗ ಅವರಲ್ಲಾದ ಒತ್ತಡದ ಬದಲಾವಣೆಗಳನ್ನು ಕಾಣಬಹುದಾಗಿದೆ.

ಸಾಮಾಜಿಕ ಜಾಲತಾಣಗಳು

ಹಿಂದಿನ ಕಾಲಕ್ಕೆ ಹೋಲಿಸಿದರೆ ಇಂದಿನ ಮಹಿಳೆಯರು ಸಮಾಜದಲ್ಲಿ ಹೆಚ್ಚು ಹೆಚ್ಚು ಹೊರಗೆ ಕಾಣಿಸಿಕೊಳ್ಳಲು, ಸಮಸ್ಯೆಗಳನ್ನು ಎದುರಿಸಲು ಸನ್ನದ್ದರಾಗಬೇಕಿದೆ. ಕುಟುಂಬ ಸ್ನೇಹಿತರು ಸಹೋದ್ಯೋಗಿಗಳೊಂದಿಗೆ ಬೆರೆಯಬೇಕಾದ ಸಂದರ್ಭಗಳು ಅನಿವಾರ್ಯವಾಗಿವೆ. ಈ ಹೊಸ ಸಂದರ್ಭಗಳಿಗೆ ಸಾಮಾಜಿಕ ಜಾಲತಾಣಗಳು ಹೇಳಿ ಮಾಡಿಸಿದಂತಹ ಮಾರ್ಗಗಳಂತೆ ತೋರುತ್ತಿವೆ.

- Advertisement -

ಹೊರ ಜಗತ್ತಿನೊಂದಿಗೆ ಸಂಪರ್ಕ ಸಾಧಿಸಲು ಅನುಭವ ಜ್ಞಾನ ಹಂಚಿಕೆಗೆ ಮತ್ತು ಉದ್ಯೋಗ ಬೇಟೆಗೆ ಸಹಾಯಕವಾಗಿದೆ. ತಮ್ಮ ಆಸಕ್ತಿಯನ್ನು ಹಂಚಿಕೊಳ್ಳಲು ಬೇರೆಯವರ ಆಸಕ್ತಿಯನ್ನು ಕಂಡುಕೊಳ್ಳಲು ಗುರಿ ಸಾಧನೆಗೆ ಪರಸ್ಪರ ಬೆಂಬಲಿಸಲು ಪ್ರೇರೇಪಿಸಲು ಉಪಯುಕ್ತ ಮಾಹಿತಿಯನ್ನು ಪಡೆದುಕೊಳ್ಳಲು ಇವು ಉತ್ತಮವಾಗಿವೆ.

ಇತರರ ಬದುಕಿಗೆ ನೆರವಾಗುವಂತಹ ಉತ್ತಮ ಆಲೋಚನೆಗಳನ್ನು ಚಿಂತನೆಗಳನ್ನು ಹಂಚಿಕೊಳ್ಳಲು ವಾಟ್ಸಪ್, ಫೇಸ್ ಬುಕ್, ಟ್ವಿಟರ್ ದೊಡ್ಡ ನೆಟ್ವರ್ಕ್‍ಗಳು.ಮಹಿಳೆಯರು ಗ್ರಹಕೈಗಾರಿಕೆಯ ಸಾಮಾನುಗಳನ್ನು ಇಲ್ಲವೇ ತಾವು ಮಾಡುವ ಸ್ವ ಉದ್ಯೋಗದ ಪರಿಕರಗಳನ್ನು ಜಾಹಿರಾತುಗೊಳಿಸುವ ಮೂಲಕ ಹೆಚ್ಚಿನ ಲಾಭ ಪಡೆಯಬಹುದು. ಸಾಕಷ್ಟು ಸಂಗತಿಗಳಿಗೆ ಲಾಭದಾಯಕವಾಗಿರುವ ಸಾಮಾಜಿಕ ಜಾಲತಾಣಗಳು ವರದಾನವೆನಿಸುತ್ತವೆ.

ಗೌಪ್ಯತೆಯ ವಿಚಾರ

ಸಾಮಾಜಿಕ ಜಾಲತಾಣಗಳು ಸಾಮಾಜಿಕ ಸಂಪರ್ಕಕ್ಕೆ ಮಾತ್ರ ಕೊಂಡಿಯಂತಿದ್ದರೆ ಒಳ್ಳೆಯದಿತ್ತು. ಆದರೆ ಎಲ್ಲಿಯಾದರೂ ಏನನ್ನಾದರೂ ಹಂಚಿಕೊಳ್ಳಲು ಮೋಜು ಮಸ್ತಿಗೂ ಉಪಯೋಗಿಸಿಕೊಳ್ಳಲಾಗುತ್ತಿದೆ ಎಂಬುದು ದುರಂತದ ವಿಚಾರ. ಮಹಿಳೆಯರು ಕೆಲವು ಗೌಪ್ಯತೆಯ ವಿಚಾರಗಳನ್ನು ನಿರ್ಲಕ್ಷಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ.

ಖಾಸಗಿ ಫೋಟೊಗಳನ್ನು ಮತ್ತು ಚಟುವಟಿಕೆಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವುದು ಪೋಸ್ಟ್‍ನಲ್ಲಿ ತಾವಿರುವ ಸ್ಥಾನವನ್ನು ಹಂಚಿಕೊಳ್ಳುವುದು ಗುರುತು ಪರಿಚಯವಿಲ್ಲದವರನ್ನು ಗೆಳೆಯರನ್ನಾಗಿ ಸೇರಿಸಿಕೊಳ್ಳುವುದು ಅಪಾಯಕಾರಿಯಾಗಿದೆ.

ವೈಯಕ್ತಿಕವಾಗಿ ಗೊತ್ತಿರದ ಅನಾಮಧೇಯ ವ್ಯಕ್ತಿಗಳನ್ನು ಸ್ನೇಹಿತರನ್ನು ಸೇರಿಸಿಕೊಂಡರೆ ಅವರು ಫೋಟೊಗಳನ್ನು ಕದಿಯಬಹುದು. ಫೋಟೋಗಳಲ್ಲಿ ಇಲ್ಲವೇ ಪೋಸ್ಟ್‍ಗಳಲ್ಲಿ ನಿಂದನೀಯ ಪದಗಳನ್ನು ಬಳಸಿ ದೂಷಿಸಬಹುದು.

ನಿಮ್ಮ ಗುರುತನ್ನು ಬಳಸಿ ನಿಮಗೆ ಪರಿಚಯದವರಿಂದ ಹಣವನ್ನು ಪಡೆಯಬಹುದು.ನಿಮ್ಮ ಹೆಸರಿನ ಮೇಲೆ ನಕಲಿ ಪ್ರೊಫೈಲ್‍ನ್ನು ತೆರೆಯಬಹುದು.ಸೂಕ್ಷ್ಮಮತ್ತು ವೈಯಕ್ತಿಕ ಮಾಹಿತಿಗಳನ್ನು ಕದಿಯಬಹುದು.

ಚಟುವಟಿಕೆಗಳನ್ನು ಗೂಢಚಾರ ಮಾಡಬಹುದು. ಆರಂಭದಲ್ಲಿ ಉತ್ತಮ ಗೆಳೆಯನಂತೆ ವರ್ತಿಸಿ ನಂತರ ಮಾನಸಿಕವಾಗಿ ಇಲ್ಲವೇ ಭಾವನಾತ್ಮಕವಾಗಿ ಬೆದರಿಕೆ ಹಾಕಬಹುದು. ಮನೆ ಇಲ್ಲವೇ ಕಚೇರಿ ವಿಳಾಸ ಮೊಬೈಲ್ ಸಂಖ್ಯೆಯನ್ನು ಹಂಚಿಕೊಳ್ಳುವುದರಿಂದ ಅವರು ನಿಮ್ಮನ್ನು ಅನುಸರಿಸಬಹುದು. ಇವೆಲ್ಲ ಅಂಶಗಳಿಂದ ಎಚ್ಚರವಾಗಿರುವುದು ಸೂಕ್ತ.

ದುರುದ್ದೇಶಪೂರಿತ ಲಿಂಕ್‍ಗಳು

‘ಮುಗ್ಧ ಮಹಿಳೆಯರ ಮತ್ತು ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಲು ಇ-ಮೇಲ್‍ಗೆ ಇಲ್ಲವೇ ಇ-ಮೇಲ್ ವಿಳಾಸಗಳ ಗುಂಪಿಗೆ ಕಳುಹಿಸುವ ಉತ್ಪನ್ನದ ಬಗೆಗಿನ ಅನಗತ್ಯವಾದ ಇ-ಮೇಲ್ ಜಾಹೀರಾತು ಸ್ಟ್ಯಾಮ್ ಇ-ಮೇಲ್ ಆಗಿದೆ.

‘ಇಂತಹ ಇ-ಮೇಲ್ ಗಳಲ್ಲಿ ನಕಲಿ ಉದ್ಯೋಗ ಸಂದರ್ಶನ, ಆರೋಗ್ಯ ವಿಮೆ, ಆನ್‍ಲೈನ್ ಶಾಪಿಂಗ್ ಉತ್ಪನ್ನಗಳ ಲಿಂಕ್‍ಗಳನ್ನು ಕಳುಹಿಸುತ್ತಾರೆ.ನಕಲಿ ಜಾಹೀರಾತುಗಳನ್ನು ಅಸಲಿ ಜಾಹೀರಾತಿನಂತೆ ಪ್ರತಿನಿಧಿಸುವ ಮೂಲಕ ಮೋಸ ಮಾಡಬಹುದು.

ಮನೆಯ ಉಪಕರಣಗಳ ವಿಶೇಷ ಕೊಡುಗೆಗೆಗಳನ್ನು ಕೊಡುಗೆಗಳಾಗಿ ಕೊಡುವುದನ್ನು ಕಂಡು ಮಹಿಳೆಯರು ಸಂತಸದಿಂದ ದುರುದ್ದೇಶಪೂರಿತ ಲಿಂಕ್‍ಗಳನ್ನು ಕ್ಲಿಕ್ ಮಾಡಿದರೆ ಮುಗಿಯಿತು. ನಿಮ್ಮ ಸೂಕ್ಷ್ಮ ಮಾಹಿತಿಯನ್ನು ಸಂಗ್ರಹಿಸಿ ದುರ್ಬಳಿಕೆ ಮಾಡಿಕೊಳ್ಳುವ ಸಂಭವನೀಯತೆ ಹೆಚ್ಚು.

ಮಹಿಳೆಯರು ಏನು ಮಾಡಬೇಕು?

ಸಾಮಾಜಿಕ ಜಾಲತಾಣಗಳನ್ನು ಬಳಸುವಾಗ ಮಹಿಳೆಯರು ಏನು ಮಾಡಬೇಕು ಎನ್ನುವದನ್ನು ತಿಳಿದುಕೊಂಡಿರಬೇಕು. ಫ್ರೆಂಡ್ ರಿಕ್ವಸ್ಟ್‍ಗಳನ್ನು ಸ್ವೀಕರಿಸುವ ಮೊದಲು ವ್ಯಕ್ತಿಯ ದೃಢೀಕರಣವನ್ನು ಯಾವಾಗಲೂ ಪರಿಶೀಲಿಸಿ.

ಕೆಲವು ಗೌಪ್ಯತೆ ಸೆಟ್ಟಿಂಗ್‍ಗಳನ್ನು ಇರಿಸಿಕೊಂಡು ನಿಮ್ಮ ಪೋಟೋಗಳನ್ನು ಮತ್ತು ಪೋಸ್ಟ್‍ಗಳನ್ನು ನಿಮ್ಮ ಸಂಬಂಧಿಗಳೊಂದಿಗೆ ಸ್ನೇಹಿತರೊಂದಿಗೆ ಆತ್ಮೀಯರೊಂದಿಗೆ ಮಾತ್ರ ಹಂಚಿಕೊಳ್ಳಿ. ನಿಮ್ಮ ನೆಟ್ವರ್ಕಿಂಗ್ ಸೆಟ್ನಲ್ಲಿ ಯಾವುದೇ ವ್ಯಕ್ತಿ ಭೇಟಿ ಮಾಡಲು ಇಚ್ಛಿಸಿದಲ್ಲಿ ಆಸಕ್ತಿ ತೋರಿದಲ್ಲಿ ನಿರಾಕರಿಸಿ.

ಒಂದು ವೇಳೆ ಭೇಟಿ ಮಾಡುವುದು ಸೂಕ್ತವೆನಿಸಿದರೆ ನಿಮ್ಮ ಮನೆ ಮಂದಿಯ ಸಲಹೆಗಳನ್ನು ಪಡೆಯಿರಿ. ನೀವು ಯಾರನ್ನು ಭೇಟಿಯಾಗುತ್ತಿದ್ದೀರಿ ಎಂಬುದು ಅವರಿಗೆ ತಿಳಿದಿರಲಿ. ಸಾಧ್ಯವಾದರೆ ಕುಟುಂಬದ ಸದಸ್ಯರನ್ನು ನಿಮ್ಮೊಂದಿಗೆ ಕರೆದೊಯ್ಯುವುದು ಒಳಿತು. ಪೋಸ್ಟ್ ಮಾಡುವ ಮೊದಲು, ಚಾಟ್, ಅಪ್ಲೋಡ್, ಡೌನ್ಲೋಡ್ ಮಾಡಬೇಕೇ ಬೇಡವೇ ಎಂಬುದನ್ನು ಮೊದಲೇ ಯೋಚಿಸಬೇಕು.

ನಿಮ್ಮ ಪ್ರೊಫೈಲ್‍ನಲ್ಲಿ ಮಾಡಿದ ಅಸಭ್ಯ ಇಲ್ಲವೇ ಕಿರುಕುಳ ಕೊಡುವ ಮೆಸೇಜ್‍ಗಳಿಗೆ ಕಾಮೆಂಟ್ಗಳಿಗೆ ಪ್ರತಿಕ್ರಿಯಿಸಬೇಡಿ. ನಿಮ್ಮ ಖಾತೆಯ ವಿವರಗಳನ್ನು ಕಳುವು ಮಾಡಲಾಗಿದೆ ಇಲ್ಲವೇ ರಾಜಿ ಮಾಡಲಾಗಿದೆ ಎಂಬ ಅನುಮಾನ ಬಂದರೆ ತಕ್ಷಣ ನೆಟ್ವರ್ಕಿಂಗ್ ಸೆಟ್ ಬೆಂಬಲ ತಂಡಕ್ಕೆ ವರದಿ ಮಾಡಿ.

ದೂರವಿಡಿ

ನಿಮ್ಮ ಮನೆ ಇಲ್ಲವೇ ಕಚೇರಿ ದೂರವಾಣಿ ಸಂಖ್ಯೆಗಳು ಲಿಂಗ, ವಯಸ್ಸು ಕ್ರೆಡಿಟ್ ಕಾರ್ಡ್‍ಗಳ ಪಾಸ್ ವರ್ಡ್ ವಿವರಗಳಂತಹ ಯಾವುದೇ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬೇಡಿ. ಗುರುತು ಪರಿಚಯವಿಲ್ಲದವರೊಂದಿಗೆ ವೆಬ್‍ಕ್ಯಾಮ್ ಬಳಸಬೇಡಿ.

ಸಲುಗೆಯಿಂದ ನಿಮ್ಮ ಗೆಳೆತಿಯರ ಮಾಹಿತಿಯನ್ನು ಜಾಲತಾಣಗಳಲ್ಲಿ ಪೋಸ್ಟ್ ಮಾಡಬೇಡಿ. ನೀವು ಅವರ ಮಾಹಿತಿಯನ್ನು ಪ್ರೀತಿಯ ಧ್ಯೋತಕವಾಗಿ ಪೋಸ್ಟ್ ಮಾಡಿದ್ದರೂ ಸಹ ಅವರನ್ನು ಅಪಾಯದಲ್ಲಿ ಸಿಕ್ಕಿಸುವ ಸಂಭವನೀಯತೆಗಳಿರುತ್ತವೆ.

ಬಳಸಿ ಗೌಪ್ಯತೆ ಸೆಟ್ಟಿಂಗ್

ಸಾಮಾಜಿಕ ನೆಟ್ ವರ್ಕಿಂಗ್ ಸೆಟ್‍ಗಳಲ್ಲಿ ಪೂರ್ವನಿಯೋಜಿತವಾಗಿ (ಡಿಫಾಲ್ಟ್)ರುತ್ತವೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿ ವಿಷಯವೂ ಸಾರ್ವಜನಿಕವಾಗಲಿದೆ. ನಿಮ್ಮ ಭದ್ರತೆಗಾಗಿ ಹೆಚ್ಚಿನ ಗೌಪ್ಯತೆ ಸೆಟ್ಟಿಂಗ್‍ಳನ್ನು ನೀಡಲಾಗಿದೆ. ಅವುಗಳನ್ನು ಬಳಸಿ ಆನ್‍ಲೈನ್‍ನಲ್ಲಿಯ ಹಲವಾರು ಸಮಸ್ಯೆಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಆ ಸೌಲಭ್ಯಗಳನ್ನು ಬಳಸಬಹುದು.

ನೀವು ವೈಯಕ್ತಿಕ ವೃತಿಪರ ಮಾಹಿತಿಯನ್ನು ಅಪರಿಚಿತರಿಂದ ನಿರ್ಬಂಧಿಸಬಹುದು. ಫ್ರೆಂಡ್ ರಿಕ್ವೆಸ್ಟ್ ಆಯ್ಕೆಯನ್ನು ನಿಷ್ಕ್ರಿಯೆಗೊಳಿಸಬಹುದು. ಇದರಿಂದ ನಿಮಗೆ ಯಾರ್ಯಾರಿಂದಲೋ ಬರುವ ಸ್ನೇಹಿತ ವಿನಂತಿಯನ್ನು ತಪ್ಪಿಸಬಹುದು. ನಿಮ್ಮ ವಿಡಿಯೋಗಳು ಪೋಸ್ಟ್‍ಗಳು ಇಲ್ಲವೇ ಚಟುವಟಿಕೆಗಳನ್ನು ಅಪರಿಚಿತರಿಂದ ನಿರ್ಬಂಧಿಸಬಹುದು.

ಮತ್ತು ನಿಮ್ಮ ಸಂಪರ್ಕದಲ್ಲಿನ ನಿಮ್ಮ ಸದಸ್ಯರಿಗೆ ಮಾತ್ರ ಗೌಪ್ಯತೆ ಸೆಟ್ಟಿಂಗ್‍ಗಳ ಮೇಲಿನ ಓನ್ಲಿ ಮೀ (ಕೇವಲ ನಾನು) ಆಯ್ಕೆಯನ್ನು ಮಾಡಿಕೊಳ್ಳಬಹುದು. ನೀವು ಸಾರ್ವಜನಿಕರಿಂದ ಕಾಮೆಂಟ್ ವಿಭಾಗವನ್ನು ನಿರ್ಬಂಧಿಸಬಹುದು. ಇದರಿಂದ ನಿಮ್ಮ ಸಂಪರ್ಕದಲ್ಲಿರುವ ಸದಸ್ಯರು ಮಾತ್ರ ನಿಮ್ಮ ಪೋಸ್ಟ್ ಗಳಿಗೆ ಕಾಮೆಂಟ್ ಮಾಡಬಹುದಾಗಿದೆ. ನೀವು ಆನ್‍ಲೈನ್‍ನಲ್ಲಿ ಎಷ್ಟು ಸಮಯದವರೆಗೆ ಇರುತ್ತೀರಿ ಎಂದು ತಿಳಿಯಬಾರದೆಂದರೆ ಆನ್‍ಲೈನ್ ಮೋಡ್ ಆಫ್ ಮಾಡಬಹುದು.

ವಿವೇಕಾನಂದರ ವಿದ್ಯುತ್ವಾಣಿ

ಸ್ವಾಮೀಜಿ 1897 ರಲ್ಲಿ ತಮ್ಮ ಪುತ್ರಿ ಮಾರ್ಗರೇಟ್ ನೋಬೆಲ್‍ಗೆ ಬರೆದ ಪತ್ರದಲ್ಲಿ ಭಾರತದಲ್ಲಿನ ತಮ್ಮ ಕಾರ್ಯಭಾರವನ್ನು ಎತ್ತಿ ಹೇಳುತ್ತಾರೆ. ‘ಭಾರತದಲ್ಲಿ ಮಾಡಬೇಕಾದ ಕಾರ್ಯದಲ್ಲಿ ನಿನಗೊಂದು ದೊಡ್ಡ ಭವಿಷ್ಯವಿದೆ ಎಂದು ನನಗೆ ಈಗ ಖಚಿತವಾಗಿದೆ. ನಮಗೆ ಅವಶ್ಯಕತೆಯಿರುವುದು ಪುರುಷನಲ್ಲ, ಸ್ತ್ರೀ- ಭಾರತೀಯರಿಗಾಗಿ ಭಾರತೀಯ ನಾರಿಯರಿಗಾಗಿ ದುಡಿಯಬಲ್ಲ ಒಬ್ಬ ಸಿಂಹಿಣಿ.

ಭಾರತ ಇನ್ನೂ ಶ್ರೇಷ್ಠ ಮಹಿಳೆಯರನ್ನು ನಿರ್ಮಾಣ ಮಾಡಲು ಸಮರ್ಥವಾಗಿಲ್ಲ. ಅವಳು ಇದನ್ನು ಇತರ ರಾಷ್ಟ್ರಗಳಿಂದ ಎರವಲು ಪಡೆಯಬೇಕಾಗಿದೆ. ನಿನ್ನ ವಿದ್ಯಾರ್ಹತೆ ಪ್ರಾಮಾಣಿಕತೆ ಪಾವಿತ್ರ್ಯ ಅಪಾರ ಮಾನವಪ್ರೇಮ ದೃಢ ನಿರ್ಧಾರ ಎಲ್ಲಕ್ಕಿಂತ ಮಿಗಿಲಾಗಿ ನಿನ್ನ ಧೀರ ಕೆಲ್ಟಿಕ್‍ರಕ್ತ – ನಿನ್ನನ್ನು ನಾನು ಬಯಸಿದ ಸ್ತ್ರೀ ರತ್ನವನ್ನಾಗಿಸಿದೆ.’

ವರದಿ ಏನು ಹೇಳುತ್ತದೆ?

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ವರದಿಯ ಪ್ರಕಾರ ಇಂಟರ್‍ನೆಟ್ ಬಳಸುವ 71 ಕೋಟಿ ಜನರ ಪೈಕಿ 25 ಕೋಟಿ ಮಹಿಳೆಯರು ಇದ್ದಾರೆ. ಆ 71 ಕೋಟ ಜನರಲ್ಲಿ ಶೇ 80 ರಷ್ಟು ಜನರು ಸೈಬರ್ ಅಪರಾಧಗಳಿಗೆ ಬಲಿಯಾಗುತ್ತಿದ್ದು ಅವರಲ್ಲಿ ಪ್ರಥಮ ಸ್ಥಾನದಲ್ಲಿರುವವರು ಮಹಿಳೆಯರು ಎಂಬ ಈ ಸಂಗತಿ ಅಚ್ಚರಿಗೊಳ್ಳಿಸುತ್ತದೆ. ಆದರೂ ನಂಬಲೇಬೇಕು.

ಸಾಮಾಜಿಕ ಜಾಲತಾಣಗಳನ್ನು ಬಳಸುವಾಗ ಎಚ್ಚರದಿಂದ ಇರದಿದ್ದರೆ ಸಮಾಜ ನಿಮ್ಮ ಮೇಲೆ ನಿಂದೆಯನ್ನು ಹೊರಿಸುವುದಲ್ಲದೆ ನಿಮಗೆ ನೆರವು ನೀಡದು. ಆದ್ದರಿಂದ ಎಚ್ಚರವಿರಲಿ, ಸಾಮಾಜಿಕ ಜಾಲತಾಣಗಳ ಬಳಸುವ ಮುನ್ನ!!


ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ 9449234142

- Advertisement -
- Advertisement -

Latest News

ವಚನ ವಿಶ್ಲೇಷಣೆ : ಕಾಯದ ಜೀವದ ಹೊಲಿಗೆ

*ಕಾಯದ ಜೀವದ ಹೊಲಿಗೆ* ----------------------------------- ದೇಹಭಾವವಳಿದಲ್ಲದೆ ಜೀವಭಾವವಳಿಯದು. ಜೀವಭಾವವಳಿದಲ್ಲದೆ ಭಕ್ತಿಭಾವವಳವಡದು. ಭಕ್ತಿಭಾವವಳವಟ್ಟಲ್ಲದೆ ಅರಿವು ತಲೆದೋರದು. ಅರಿವು ತಲೆದೋರಿದಲ್ಲದೆ ಕುರುಹು ನಷ್ಟವಾಗದು. ಕುರುಹು ನಷ್ಟವಾದಲ್ಲದೆ ಮಾಯೆ ಹಿಂಗದು. ಇದು ಕಾರಣ; ಕಾಯದ ಜೀವದ ಹೊಲಿಗೆಯ ಅಳಿವ ಭೇದವ ತಿಳಿಯಬಲ್ಲಡೆ ಗುಹೇಶ್ವರಲಿಂಗದ...
- Advertisement -

More Articles Like This

- Advertisement -
close
error: Content is protected !!
Join WhatsApp Group