ಕವನ: ಅಂತರ…!

Must Read

“ಮೊನ್ನೆ ಬೆಳಗಾವಿ ಸಾಹಿತ್ಯ ವೇದಿಕೆಯಿಂದ ವೆಬಿನಾರ್ ಮೂಲಕ ನನ್ನಿಂದ ಕವಿತೆ, ಕಾವ್ಯಗಳ ಉಪನ್ಯಾಸ ಏರ್ಪಡಿಸಿದ್ದರು. ಸುಮಾರು ಒಂದುವರೆ ಘಂಟೆಗಳ ಕಾಲ ನಿರರ್ಗಳವಾಗಿ ಹರಿದ ನನ್ನ ಭಾವಲಹರಿಯನ್ನು ಆಲಿಸಿ ಅತೀವ ಸಂತಸದಿಂದ ಅಭಿನಂದಿಸಿದ ಹಾಗೂ ನನ್ನ ಕವಿತೆಗಳಲ್ಲಿನ ಜೀವದ ತಲ್ಲಣಗಳು ಮತ್ತು ಬದುಕಿನ ಸಂವೇದನೆಗಳನ್ನು ಮೆಚ್ಚಿ ಹಾರೈಸಿದ ಹಿರಿಯ ಜಾನಪದ ಸಂಶೋಧಕರು, ವಿದ್ವಾಂಸರು, ಹೆಸರಾಂತ ಸಾಹಿತಿಗಳು ಆಗಿರುವ ಆತ್ಮೀಯ ಶ್ರೀ ಪ್ರಕಾಶ್ ಖಾಡೆಯವರು ’ಗ್ರಂಥಗಳಿಗಿಂತ ಹೆಚ್ಚಾಗಿ ಬದುಕನ್ನು ಓದಿದ ಕವಿಯ ಕಾವ್ಯ ಜನಪರವಾಗಿರುತ್ತದೆ ಮತ್ತು ಅತ್ಯಂತ ಜನಪ್ರಿಯವಾಗುತ್ತದೆ’ ಎಂದು ನುಡಿದರು. ಖಾಡೆಯವರ ಆ ನುಡಿಗಳೇ ನನ್ನೀ ಕವಿತೆಗೆ ಸ್ಫೂರ್ತಿ..” – ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.


ಅಂತರ.!

ಪದಾಲಂಕಾರ ಶಬ್ಧ ವೈಭವ
ಮೆರೆವ ಕವಿತೆಗಳು ಕೆಲಕಾಲ
ಓದುಗರ ಕಂಗಳ ಸೆಳೆಯುತ
ಮಿನುಗಿ ಮರೆಯಾಗುವವು.!

ಭಾವಸಂವೇದನೆ ಅನುಭಾವ
ತುಂಬಿದ ಕವಿತೆಗಳು ಅನುಗಾಲ
ಓದುವವರ ಮನ ತಣಿಸುತ
ಬದುಕಿನ ಭಾಗವಾಗುವವು.!

ಗ್ರಂಥಗಳ ಅಧ್ಯಯನ ಮಾಡಿ
ಸೃಷ್ಟಿಸಿದ ಪಾಂಡಿತ್ಯ ಕವಿತೆಗಳು
ಪಂಡಿತರ ಸ್ವತ್ತಾಗಿ ಬಿಡುವವು
ಕಪಾಟುಗಳ ಸಿಂಗರಿಸುವವು.!

ಬದುಕುಗಳ ಓದಿ ಅನುಭವಿಸಿ
ಸೃಜಿಸಿದ ನಿತ್ಯಸತ್ಯ ಕವಿತೆಗಳು
ಪಾಮರರಿಗೂ ಸನಿಹವಾಗುವವು
ಜನಮಾನಸದಿ ಅಚ್ಚಾಗುವವು.!

ಕಾವ್ಯಪರವಾಗುವ ಕವಿತೆಗಳು
ಬಾಳ ತತ್ವನೀತಿ ಬೋಧಿಸುವವು
ಜೀವಪರವಿರುವ ಕವಿತೆಗಳು
ಬದುಕಿನ ರೀತಿ ಬದಲಿಸುವವು.!

ಕಾವ್ಯಪರಿಭಾಷೆಯ ಕವಿತೆಗಳು
ಸಾಹಿತ್ಯಲೋಕ ತಾರೆಯಾಗುವವು.
ಜನರಾಡುಭಾಷೆಯ ಕವಿತೆಗಳು
ಸಕಲರ ಜೀವಧಾರೆಯಾಗುವವು.!

ಎ.ಎನ್.ರಮೇಶ್. ಗುಬ್ಬಿ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group