ಕವನ: ಮಳೆ.. ಮಳೆ.. ಮಳೆ..!

Must Read

“ಇಂದಿಗೆ ಸರಿಯಾಗಿ 12 ದಿನಗಳಾಯಿತು ನಾವು ಸೂರ್ಯನ ಮುಖ ನೋಡಿ..”

ಈ ತಿಂಗಳ 8 ನೇ ತಾರೀಖಿನಿಂದ ಈ ದಿನದವರೆಗೆ ನಿತ್ಯ ನಿರಂತರ ಸತತ ಸುರಿಯುತ್ತಿರುವ ವರ್ಷಧಾರೆಯ ಚಿತ್ರಣವೇ ಈ ಕವಿತೆ. ಕರಾವಳಿ ತೀರದಲ್ಲಿ, ಸಹ್ಯಾದ್ರಿ ಮಡಿಲಲ್ಲಿರುವ ನಮ್ಮ ಕೈಗಾ ಸುತ್ತಮುತ್ತ ಭೋರ್ಗರೆಯುತ್ತಿರುವ ಮಳೆಹನಿಗಳ ಭಾವಗೀತೆ. ಆರ್ಭಟಿಸಿ ಸುರಿಯುತ್ತಿರುವ ಈ ಮಳೆಯೊಳಗೆ ರಮ್ಯತೆಯಿದೆ, ರೋಚಕತೆಯಿದೆ, ರೌದ್ರತೆಯಿದೆ, ಆಸ್ವಾಧಿಸುವ ನಯನಗಳಿಗೆ ಸಕಲವೂ ಇದೆ. ಏನಂತೀರಾ..?” – ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.


ಮಳೆ.. ಮಳೆ.. ಮಳೆ..!

ಅದ್ಯಾರು ಬಾಣಬಿಟ್ಟು ಬಾನಂಗಳಕೆ
ರಂಧ್ರಗಳಾ ಕೊರೆದಿಹರೋ ಏನೋ.?
ಅದೆಷ್ಟು ಗುಂಡುಗಳಿಟ್ಟು ಅಂಬರಕೆ
ತೂತುಗಳ ಹೊಡೆದಿಹರೋ ಏನೋ.?

ಆ ಮುಗಿಲೇ ಬಿರುಕು ಬಿಟ್ಟಿರುವಂತೆ
ಸುರಿಯುತಿಹುದು ಸತತ ವರ್ಷಧಾರ
ಆಗಸದ ಛಾವಣಿಯೇ ಸೀಳಿರುವಂತೆ
ಧುಮ್ಮಿಕ್ಕುತಿದೆ ಜಲಧಾರೆ ಧಾರಾಕಾರ.!

ಜಿಟಿಜಿಟಿಯೆಂದು ನಿರಂತರ ಹನಿಯುತಿದೆ
ಘಳಿಗೆಮಾತ್ರವೂ ಬಿಡುವು ಕೊಡದಂತೆ
ಪಟಪಟನೆಂದು ಪ್ರತಿಕ್ಷಣ ಅಪ್ಪಳಿಸುತಿದೆ
ಊರು ಕೇರಿಗಳನೆಲ್ಲ ಮುಳುಗಿಸುವಂತೆ.!

ಭೂಮ್ಯಾಕಾಶ ಬೆಸೆದು ಒಂದಾಗಿಸುವಂತೆ
ಅವತರಿಸಿದೆ ಜಲಲ ಜಲಧಾರೆ ಸೇತುವೆ
ಭೋರ್ಗರೆದು ಸುರಿಯುತಿರುವ ಮಳೆಗೆ
ಮೈದುಂಬಿ ಹರಿದಿಹುದು ಕೆರೆಕಟ್ಟೆ ಕಾಲುವೆ.!

ಮೇಘಸ್ಫೋಟ ಆರ್ಭಟ ಅಬ್ಬರಕೆ ಬೆಚ್ಚಿ
ಮುಗಿಲೊಳಗೆ ಅಡಗಿ ಕುಳಿತಿಹನು ರವಿ
ಸೂರ್ಯನ ಬಿಸಿಯುಸಿರ ಸ್ಪರ್ಶವಿರದೆ
ನಡು-ನಡುಗಿ ನಲುಗಿ ನಿಂತಿಹಳು ಬುವಿ.!

ಧುಮ್ಮಿಕುತಿರುವ ವರ್ಷಧಾರೆ ರಬಸಕೆ
ಹೆದರಿ ಹೊನಲು ಓಡುತಿಹಳು ಕಡಲೆಡೆಗೆ
ವರುಣಾಲಿಂಗನದಿ ಉನ್ಮತ್ತಳಾದ ಶರಧಿ
ಭೋರ್ಗರೆದು ನರ್ತಿಸಿಹಳು ತೀರಮೀರಿ.!

ಬೊಬ್ಬಿರಿದು ಧರೆಗಿಳಿದಿದೆ ಮಳೆ.. ಮಳೆ..
ಬಸವಳಿದು ಕಂಪಿಸುತಿದೆ ಇಳೆ.. ಇಳೆ…
ಇದೇನು ಇಳೆಮಳೆ ಪ್ರಣಯ ಕೀರ್ತನವೋ.?
ನೆಲ-ಜಲ ರುದ್ರ ಪ್ರಳಯ ನರ್ತನವೋ.??

ಎ.ಎನ್.ರಮೇಶ್. ಗುಬ್ಬಿ.

Latest News

ಕವನ : ಪ್ರೀತಿಸಿದ ತಪ್ಪಿಗೆ

ಪ್ರೀತಿಸಿದ ತಪ್ಪಿಗೆ... ಇಂದು ಈ ಮುಸ್ಸಂಜೆಯಲಿ.... ಯಾರೋ ಎಲ್ಲೋ ಪ್ರೀತಿಸುವ ಹೃದಯಕೆ ನೋವುಣಿಸಿರಬೇಕು... ಅಕಾಲದಲ್ಲಿ ಆಕಾಶ ಆರ್ಭಟಿಸಿ ಭೋರ್ಗರೆದು ಹೀಗೆ ಸುರಿಯಬೇಕಾದರೆ... ಸದ್ದಿಲ್ಲದೇ ಒಡೆದ ಎದೆ ತುಣುಕುಗಳು ಮುಗಿಲಲಿ ಶೋಕಗೀತೆ ನುಡಿಸುತಿವೆ....ಯಾರೋ ಎಲ್ಲೋ ಹೂವಂತ ಮನಸನು ಮಾತಿನ ಮುಳ್ಳುಗಳಿಂದ ಚುಚ್ಚಿ ನೋಯಿಸಿರಬೇಕು... ಹೆಪ್ಪುಗಟ್ಟಿದ ದುಃಖ ಕಪ್ಪು ಮೋಡದ ಒಡಲ ಬಗೆದು...

More Articles Like This

error: Content is protected !!
Join WhatsApp Group