ಪತ್ರಕರ್ತನಾದವನು ಬರೆಯಬೇಕೆಂದರೆ ಸಾಕಷ್ಟು ಓದಬೇಕು. ಯಾವುದೇ ಉದ್ವೇಗವಿಲ್ಲದೆ ಬರೆಯಬೇಕು – ಉಮೇಶ ಬೆಳಕೂಡ

Must Read

ಮೂಡಲಗಿ – ಪತ್ರಕರ್ತ ಸುಧಾರಣೆಯ ಬಗ್ಗೆ ಬರೆದರೆ ಅದಕ್ಕೆ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಪಂದಿಸಬೇಕು. ತನ್ನ ಸುದ್ದಿಯಿಂದ ಸಮಾಜದಲ್ಲಿ ಬದಲಾವಣೆ, ಸುಧಾರಣೆಯಾದಾಗ ಅದರಿಂದ ಸಿಗುವ ಆನಂದ ಬಹಳ ದೊಡ್ಡದು ಎಂದು ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಅಧ್ಯಕ್ಷ ಉಮೇಶ ಬೆಳಕೂಡ ಹೇಳಿದರು.

ಅವರು ಪುರಸಭೆಯ ಎದುರಿಗೆ ಇರುವ ಸುರೇಶ ಪಾಟೀಲ ಅವರ ಕಟ್ಟಡದಲ್ಲಿ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

 

ಪತ್ರಕರ್ತ ಬರೆಯಬೇಕೆಂದರೆ ಓದಬೇಕು. ಖಾದ್ರಿ ಶಾಮಣ್ಣ, ಸಂತೋಷಕುಮಾರ ಗುಲ್ವಾಡಿ, ರವಿ ಬೆಳಗೆರೆ ಅವರಂಥ ಅನೇಕ ಮಹಾನ್ ಪತ್ರಕರ್ತರು ಆಗಿಹೋಗಿದ್ದಾರೆ. ಅವರ ಬಗ್ಗೆ ಓದಬೇಕು, ಸಮಾಜದ ಆಗುಹೋಗುಗಳ ಬಗ್ಗೆ ಉದ್ವೇಗಕ್ಕೆ ಒಳಗಾಗದೆ ಟೀಕೆ ಮಾಡಬೇಕು ಹಾಗೆಯೇ ಕನ್ನಡದ ಬಗ್ಗೆ, ಕನ್ನಡ ಪದಗಳ ಬಗ್ಗೆ ಸುದೀರ್ಘ ಅಧ್ಯಯನವನ್ನು ಪತ್ರಕರ್ತರಾದವರು ಮಾಡಬೇಕು ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪತ್ರಕರ್ತ ಬಾಲಶೇಖರ ಬಂದಿ, ಎಲ್ಲೋ ಒಂದು ಕಡೆ ತಪ್ಪಿದ್ದರೂ ಪತ್ರಕರ್ತ ತಪ್ಪಬಾರದು. ಪತ್ರಿಕಾ ರಂಗ ಒಂದು ಪ್ರಮುಖ ಅಂಗ ಇದು ಉಳಿದ ಅಂಗಗಳಿಗೆ ನ್ಯಾಯ ಒದಗಿಸುವ ನ್ಯಾಯಾಂಗ ಇದ್ದಂತೆ ಎಂದರು.

ಉಮೇಶ ಬೆಳಕೂಡ

ಪತ್ರಕರ್ತರ ಮೇಲೆ ವಿಶೇಷ ಅಭಿಮಾನ ಇರುವ ಶಾಸಕರೆಂದರೆ ಬಾಲಚಂದ್ರ ಜಾರಕಿಹೊಳಿಯವರು. ಮಾಧ್ಯಮದವರಿಗೆ ಅವರ ಯಾವಾಗಲೂ ಗೌರವ ಕೊಡುತ್ತ ಬಂದಿದ್ದಾರೆ ಎಂದರು.

ತಹಶೀಲ್ದಾರ ಡಿ ಜೆ ಮಹಾತ್ ಮಾತನಾಡಿ, ಮಾಧ್ಯಮದವರು ಇಲ್ಲದಿದ್ದರೆ ನಮಗೆ ಪ್ರಚಲಿತ ವಿದ್ಯಮಾನಗಳು ಗೊತ್ತಾಗುತ್ತ ಇರಲಿಲ್ಲ.

ಮಕ್ಕಳ ಸಾಹಿತಿ ಸಂಗಮೇಶ ಗುಜಗೊಂಡ ಮಾತನಾಡಿ, ಮೊದಲು ಸುದ್ದಿ ಸಂಗ್ರಹಣೆ ಬಹಳ ಕಷ್ಟದಾಯಕವಾಗಿತ್ತು. ಈಗ ಸುಲಭವಾಗಿದೆ ಆದರೆ ಒಮ್ಮೆ ಬರೆದ ಸುದ್ದಿಯನ್ನು ಮತ್ತೊಮ್ಮೆ ಪರಿಶೀಲಿಸಬೇಕು. ಪತ್ರಿಕೆಗಳಿಗೆ ದೊಡ್ಡ ಜವಾಬ್ದಾರಿ ಇದೆ ಎಂದರು.

ಪಿಎಸ್ ಐ ಬಾಲದಂಡಿ ಮಾತನಾಡಿದರು.

ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಶ್ರೀ ದತ್ತಾತ್ರಯ ಶ್ರೀಪಾದ ಬೋಧ ಸ್ವಾಮೀಜಿ ವಹಿಸಿದ್ದರು.

ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ ಆಪ್ತ ಕಾರ್ಯದರ್ಶಿ ನಾಗಪ್ಪ ಶೇಖರಗೋಳ ಕಚೇರಿಯ ಉದ್ಘಾಟನೆ ಮಾಡಿದರು.

ಈ ಸಂದರ್ಭದಲ್ಲಿ ಎಲ್ಲ ಮಹನೀಯರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

ವೇದಿಕೆಯ ಮೇಲೆ ಪುರಸಭೆ ಆರೋಗ್ಯಾಧಿಕಾರಿ ಸಿ ಎಸ್ ಮುಗಳಖೋಡ, ಮುಖ್ಯ ವೈದ್ಯಾಧಿಕಾರಿ ಡಾ. ಭಾರತಿ ಕೋಣಿ, ಪುರಸಭಾಧ್ಯಕ್ಷ ಹಣಮಂತ ಗುಡ್ಲಮನಿ, ಉಪಾಧ್ಯಕ್ಷೆ ಶ್ರೀಮತಿ ರೇಣುಕಾ ಹಾದಿಮನಿ, ಚಿಕ್ಕೋಡಿ ಡಿಡಿಪಿಐ ಕಚೇರಿಯ ಅರಿಹಂತ ಬಿರಾದಾರ ಪಾಟೀಲ, ಪತ್ರಕರ್ತ ಎಲ್ ವೈ ಅಡಿಹುಡಿ, ಅಕಬರ ಪೀರಜಾದೆ, ಹಣಮಂತ ತೇರದಾಳ, ಕಿತ್ತೂರ ಚನ್ನಮ್ಮಾ ಬ್ಯಾಂಕಿನ ಮ್ಯಾನೇಜರ್ ಸಂಜಯ ಪಾರ್ಶಿ, ಸಂತೋಷ ಸೋನವಾಲಕರ ಉಪಸ್ಥಿತರಿದ್ದರು.

ಸಂಘದ ಉಪಾಧ್ಯಕ್ಷ ಶಂಕರ ಹಾದಿಮನಿ ಎಲ್ಲರನ್ನೂ ಸ್ವಾಗತಿಸಿದರು. ಸಿದ್ದಣ್ಣ ದುರದುಂಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Latest News

ಕವನ : ಸಮಾನತೆಯ ಬೆಳದಿಂಗಳ ಪಲ್ಲವಿ

ಸಮಾನತೆಯ ಬೆಳದಿಂಗಳ ಪಲ್ಲವಿಭಾರತಾಂಬೆಗೆ ಹೊನ್ನ ಕಿರೀಟವಿದು ಸರಳ ಸಂವಿಧಾನ ನಮ್ಮ ಸಂವಿಧಾನಪೀಠಿಕೆಯ ಪರಿಧಿಯಲಿ ಜಾತ್ಯತೀತ,ಬ್ರಾತೃತ್ವ, ಸಮಾಜವಾದಿ ಸಾರ್ವಭೌಮತೆ,ಗಣತಂತ್ರ ನ್ಯಾಯ, ಸಮಾನತೆ ಸ್ವಾತಂತ್ರ್ಯದ ದುಂದುಭಿ ಜೀವದಾಯಿನಿ ಇದು ಭಾರತದ ಪಾಲಿಗೆ ಮುಕ್ತಿದಾಯಿನಿ ಇದು ದಾಸ್ಯದ ಸಂಕೋಲೆಗೆ ನಮ್ಮ ಸಂವಿಧಾನ ನಮಗೆ ಸುವಿಧಾನಲಿಖಿತವೂ ಧೀರ್ಘವೂ ಭಾರತಕ್ಕಿದು ಮಾರ್ಗವು ಅಸಮಾನತೆಯ...

More Articles Like This

error: Content is protected !!
Join WhatsApp Group